More

    ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿಗೆ ವೇಗ

    -ಸಂದೀಪ್ ಸಾಲ್ಯಾನ್ ಬಂಟ್ವಾಳ
    ರಾಷ್ಟ್ರೀಯ ಹೆದ್ದಾರಿ 73ರ ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದ್ದು, ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆ ಕಂಡುಬಂದಿದೆ.

    ಬಿ.ಸಿ.ರೋಡ್-ಚಾರ್ಮಾಡಿ ನಡುವಿನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಭಾಗವಾಗಿ ಮೊದಲ ಹಂತದಲ್ಲಿ 157 ಕೋಟಿ ರೂ. ವೆಚ್ಚದಲ್ಲಿ ಬಿ.ಸಿ.ರೋಡ್‌ನಿಂದ ಪುಂಜಾಲಕಟ್ಟೆವರೆಗಿನ ಕಾಮಗಾರಿ ನಡೆಯುತ್ತಿದೆ.
    ಈ ಹಿಂದೆ ಪುಂಜಾಲಕಟ್ಟೆಯವರೆಗೆ ಸಾಕಷ್ಟು ತಿರುವು ಮುರುವು ರಸ್ತೆಗಳು ಎದುರುಗೊಳ್ಳುತ್ತಿತ್ತು. ಇದರಿಂದಾಗಿಯೇ ಆಗಾಗ ಸಣ್ಣಪುಟ್ಟ ಅಪಘಾತಗಳು ಈ ರಸ್ತೆಯಲ್ಲಿ ನಡೆಯುತ್ತಿತ್ತು. ಧರ್ಮಸ್ಥಳ, ಚಿಕ್ಕಮಗಳೂರಿಗೆ ಹೋಗುವ ಪ್ರವಾಸಿಗಳಿಗೂ ತಿರುವು ರಸ್ತೆಗಳಿಂದಾಗಿ ಪ್ರಯಾಣ ಕಷ್ಟವಾಗುತ್ತಿತ್ತು. ಸರಾಗ ಪ್ರಯಾಣಕ್ಕೆ ಅಡ್ಡಿ ಉಂಟು ಮಾಡುತ್ತಿದ್ದ ಈ ರಸ್ತೆಗಳಿಂದ ಪ್ರಯಾಣಿಕರಿಗೆ ಮುಕ್ತಿ ಸಿಗಲಿದೆ. ರಸ್ತೆಯನ್ನು 10ಮೀ.ಅಗಲಗೊಳಿಸುವ ಜತೆಗೆ, ಬಂಟ್ವಾಳದಿಂದ ವಗ್ಗದವರೆಗೆ 15ಕ್ಕಿಂತ ಹೆಚ್ಚು ತಿರುವುಗಳನ್ನು ನೇರಗೊಳಿಸಲಾಗುತ್ತಿದೆ. ವೇಗದ ಮಿತಿಯನ್ನು ನೇರ ರಸ್ತೆಯಲ್ಲಿ 55 ಕಿ.ಮೀ. ಹಾಗೂ ತಿರುವುಗಳಿರುವಲ್ಲಿ 40 ಕಿ.ಮೀ.ಗೆ ವೇಗಕ್ಕೆ ಅನುಗುಣವಾಗಿ ರಸ್ತೆ ನಿರ್ಮಾಣವಾಗಲಿದೆ.
    ಹಂಚಿಕಟ್ಟೆಯಿಂದ ವಗ್ಗದವರೆಗೆ ರಸ್ತೆಯ ಒಂದು ಪಾರ್ಶ್ವದಲ್ಲಿ ಕಡಿದಾದ ಇಳಿಜಾರು ಹಾಗೂ ಕಿರು ನದಿ ಇರುವುದರಿಂದ ಕೊಡ್ಯಮಲೆ ಅರಣ್ಯ ಪ್ರದೇಶದ ಬಳಿ ಗುಡ್ಡವನ್ನು ಸಮತಟ್ಟುಗೊಳಿಸಿ ರಸ್ತೆ ನಿರ್ಮಿಸಲಾಗುತ್ತಿದೆ. ಪುಂಜಾಲಕಟ್ಟೆಯಿಂದ ಬಾಂಬಿಲ ಮಸೀದಿವರೆಗೆ ಭಾಗಶಃ ಕಾಮಗಾರಿ ಪೂರ್ತಿಗೊಂಡಿದೆ. ಬಾಂಬಿಲ ಪೇಟೆ ರಸ್ತೆ ಬದಿ ಮನೆಗಳ ತೆರವು ಇನ್ನಷ್ಟೇ ಆಗಬೇಕಿದೆ. ಮೂರ್ಜೆ ಬಳಿ ತಿರುವಲ್ಲಿ ಭೂ ಸ್ವಾಧೀನವಾಗದೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

    ವೇಗದ ಕಾಮಗಾರಿ
    ರಸ್ತೆಯುದ್ದಕ್ಕೂ ಟಿಪ್ಪರ್, ಜೆಸಿಬಿ, ರೋಲರ್ ಯಂತ್ರಗಳು, ಕಾರ್ಮಿಕರ ದಂಡು ಕಂಡುಬರುತ್ತಿದೆ. ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆವರೆಗಿನ ಹಳೇ ಚಿತ್ರಣ ಬದಲಾಗಿದ್ದು, ಅಭಿವೃದ್ಧಿ ಕಾಮಗಾರಿಗಾಗಿ ರಸ್ತೆ ಪಕ್ಕದ ಮರಗಳು ನೆರಕ್ಕುರುಳಿವೆ. ಗುಡ್ಡಗಳು ನೆಲಸಮವಾಗಿದೆ. ಇಳಿಜಾರು ಹಾಗೂ ಗುಂಡಿ ಪ್ರದೇಶದಲ್ಲಿ ಮಣ್ಣು ತುಂಬುವುದು, ಕಿರು ಸೇತುವೆ ನಿರ್ಮಾಣ ಮೊದಲಾದ ಕಾರ್ಯ ಗಳು ವೇಗದಿಂದ ನಡೆಯುತ್ತಿದೆ.

    ವಗ್ಗ ಪೇಟೆ ವಿಸ್ತರಣೆ
    ಕಾವಳಪಡೂರು ಗ್ರಾಮದ ವಗ್ಗ ಸಣ್ಣ ಜಂಕ್ಷನ್, ವ್ಯಾಪಾರಿ ಮಳಿಗೆಗೆಳು, ಬ್ಯಾಂಕ್ ಹಾಗೂ ಸಹಕಾರಿ ಸಂಘಗಳ ಶಾಖೆಗಳಿರುವ ವಗ್ಗದ ಮೂಲಕವೇ ಭೂ ಕೈಲಾಸ ಕಾರಿಂಜೇಶ್ವರ ದೇವಸ್ಥಾನಕ್ಕೂ ಹೋಗಬೇಕು. ಕಿರಿದಾಗಿದ್ದ ವಗ್ಗ ಪ್ರಮುಖ ಪಟ್ಟಣವಾಗಿ ಅಭಿವೃದ್ಧಿಗೊಳ್ಳುತ್ತಿದ್ದರೂ ಇಕ್ಕಟಾದ ರಸ್ತೆಯಲ್ಲಿ ವಾಹನಗಳ ನಿಲುಗಡೆಯಿಂದ ಜನರು ತೊಂದರೆ ಪಡುವ ಸ್ಥಿತಿ ಇತ್ತು. ಈಗ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ರಸ್ತೆ ಪಕ್ಕ ಇದ್ದ ಅಂಗಡಿಗಳನ್ನು ತೆರವುಗೊಳಿಸಿ ರಸ್ತೆ ವಿಸ್ತರಣೆಗೊಳಿಸಿರುವುದರಿಂದ ವಗ್ಗದ ನೋಟವೇ ಬದಲಾಗಿದೆ.

    ಧೂಳಿನ ಅವಾಂತರ
    ರಸ್ತೆಯುದ್ದಕ್ಕೂ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಊರಿಡೀ ಧೂಳು ತುಂಬಿಕೊಂಡಿದೆ. ಈ ರಸ್ತೆಯ ಮೂಲಕ ಚಲಿಸುವ ಎಲ್ಲ ವಾಹನಗಳು ಧೂಳು ಹೊತ್ತು ಸಾಗಿದರೆ ರಸ್ತೆ ಪಕ್ಕದ ಅಂಗಡಿಗಳು, ಮಳಿಗೆಗಳು, ಮನೆಗಳು ಧೂಳು ಆವರಿಸಿಕೊಂಡು ಬಣ್ಣ ಬದಲಿಸಿವೆ.

    4 ದೊಡ್ಡ ಸೇತುವೆ, 65 ಕಿರು ಸೇತುವೆ
    ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆಯವರೆಗೆ 4 ದೊಡ್ಡ ಸೇತುವೆ ಹಾಗೂ 65 ಕಿರು ಸೇತುವೆ ನಿರ್ಮಾಣಗೊಳ್ಳಲಿದೆ. ಮಣ್ಣಿಹಳ್ಳದ ಬಳಿ ಸೇತುವೆ ನಿರ್ಮಾಣ ಪೂರ್ಣಗೊಂಡಿದ್ದರೆ, ಆಲಂಪುರಿ ಬಳಿ ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದೆ. 65 ಸಣ್ಣ ಸೇತುವೆಗಳು ನಿರ್ಮಾಣಗೊಳ್ಳಲಿದ್ದು ಬಹುತೇಕ ಪೂರ್ಣಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts