More

    ಕೆಸರುಮಯ ರಸ್ತೆಯಲ್ಲಿ ಪರದಾಟ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ರಸ್ತೆಯಲ್ಲಿ ಹೋಗುವ ವಾಹನಗಳ ದಯಾನೀಯ ಸ್ಥಿತಿ ಮರುಕ ಹುಟ್ಟಿಸುತ್ತಿದೆ. ಕೆಸರುಗದ್ದೆಯಲ್ಲಿ ಬಸವನಹುಳು ತೆವಳುತ್ತಾ ಸಾಗುವಂತೆ ಕೆಸರು ರಸ್ತೆಯಲ್ಲಿ ವಾಹನಗಳು ತೆವಳುತ್ತಾ ಸಂಚರಿಸುವ ಸ್ಥಿತಿ ನಿರ್ಮಾಣಗೊಂಡಿದೆ.

    ಸಂಪೂರ್ಣ ಕೆಸರು ತುಂಬಿಕೊಂಡ ಈ ರಸ್ತೆಯಲ್ಲಿ ಹೇಗೆ ಸಾಗಬೇಕು, ಎಲ್ಲಿಂದ ಸಾಗಬೇಕು ಎನ್ನುವ ಅರಿವಿಲ್ಲದೆ ವಾಹನಗಳು ಎಲ್ಲೆಂದರಲ್ಲಿ ಚಲಿಸಿ ಕೆಸರಲ್ಲಿ ಹೂತು ಹೋಗುವ ದೃಶ್ಯ ಸಾಮಾನ್ಯವಾಗುತ್ತಿದೆ. ಬಿ.ಸಿ.ರೋಡು ಸರ್ಕಲ್‌ನಿಂದ ಬಂಟ್ವಾಳ ಬೈಪಾಸ್ ಜಂಕ್ಷನ್‌ವರೆಗೆ ವಾಹನದಲ್ಲಿ ಸಾಗುವಷ್ಟರಲ್ಲಿ ಪ್ರಾಣ ಕೈಗೆ ಬಂದಿರುತ್ತದೆ.

    ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ರಸ್ತೆ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ. ಮಳೆಗಾಲಕ್ಕಿಂತ ಮುಂಚೆಯೇ ಪೂರ್ತಿಗೊಳ್ಳಬೇಕಾಗಿದ್ದ ರಸ್ತೆ ನಿರ್ಮಾಣ ಕಾಮಾಗಾರಿ ಕರೊನಾ ಲಾಕ್‌ಡೌನ್‌ನಿಂದಾಗಿ ಒಂದು ತಿಂಗಳ ಕಾಲ ಕೆಲಸ ಸ್ಥಗಿತಗೊಂಡಿತ್ತು. ಈಗ ಒಂದು ಭಾಗದ ರಸ್ತೆ ಕಾಂಕ್ರೀಟ್ ಪೂರ್ಣಗೊಂಡಿದ್ದರೂ ಇನ್ನೊಂದು ಭಾಗದ ಹಳೇ ರಸ್ತೆಯಲ್ಲಿ ವಾಹನ ಸಂಚಾರ ಇದೆ.
    ಬೇಸಿಗೆಯಲ್ಲಿ ಅಲ್ಲಲ್ಲಿ ಮಣ್ಣು ಅಗೆದು, ಚರಂಡಿ, ಮೋರಿ ಕಾಮಗಾರಿ ನಡೆಸಲಾಗಿತ್ತು. ಅಗತ್ಯವಿದ್ದೆಡೆ ಮಣು ಹಾಕಿ ಸಮತಟ್ಟುಗೊಳಿಸಲಾಗಿತ್ತು. ಆದರೆ ಮಳೆಗೆ ಮಣ್ಣೆಲ್ಲಾ ರಾಡಿಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಭಾಗದ ಅಂಗಡಿಗಳಿಗೆ ಹೋಗಲು ಗ್ರಾಹಕರು ಕೆಸರಲ್ಲಿ ಹೆಜ್ಜೆ ಹಾಕಬೇಕಿದೆ. ಅಭಿವೃದ್ಧಿ ಬೇಕು, ಆದರೆ ಈ ನರಕ ಯಾತನೆ ಸಾಕು. ಒಮ್ಮೆ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿ ಎನ್ನುವ ಒತ್ತಾಯ ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರದ್ದು.

    ಕೆಸರಲ್ಲಿ ಹೂತು ಹೋದ ಕಾರು
    ಕೆಂಪು ಗುಡ್ಡೆ ಕ್ರಾಸ್‌ಗಿಂತ ಸ್ವಲ್ಪ ಮುಂದೆ ಶನಿವಾರ ಬೆಳಗ್ಗೆ ಐದು ಮಂದಿ ಪ್ರಯಾಣಿಕರಿದ್ದ ಕಾರೊಂದು ಚಾಲಕನಿಗೆ ರಸ್ತೆ ಯಾವುದು, ಕೆಸರು ಯಾವುದು ಎನ್ನುವುದು ಗೊತ್ತಾಗದೆ ಕೆಸರಿನಲ್ಲಿ ಹೂತು ಹೋಯಿತು. ಎಷ್ಟೇ ಪ್ರಯತ್ನಪಟ್ಟರೂ ಕಾರು ಕೆಸರಿನಿಂದ ಮೇಲೆಳದೆ ಇದ್ದಾಗ ಕಾರನಲ್ಲಿದ್ದವರು ಕೆಸರಿಗೆ ಇಳಿದು ಕಾರು ದೂಡ ಬೇಕಾಯಿತು. ಇಂತಹ ಘಟನೆ ಪ್ರತಿದಿನ ಇಲ್ಲಿ ನಡೆಯುತ್ತಿರುತ್ತದೆ ಎನ್ನುತ್ತಾರೆ ಸ್ಥಳೀಯರು.

    ಲಾಕ್‌ಡೌನ್‌ನಿಂದ ಕಾಮಗಾರಿಗೆ ಹಿನ್ನಡೆ
    ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗಿನ 3.85 ಕಿ.ಮೀ. ಅಂತರದಲ್ಲಿ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ ನಿರ್ಮಾಣಗೊಳ್ಳಲಿದ್ದು, 14 ಮೀ. ಅಗಲವಿದೆ. ಹೆದ್ದಾರಿ ಇಲಾಖೆಯು ಮಳೆಗಾಲಕ್ಕೆ ಮುಂಚಿತವಾಗಿ 7 ಮೀ. ಹೆದ್ದಾರಿ ಕಾಮಗಾರಿಯನ್ನು ಮುಗಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಕುರಿತು ಗುತ್ತಿಗೆದಾರರಿಗೆ ಸೂಚನೆಯನ್ನೂ ನೀಡಿತ್ತು. ಆದರೆ ಲಾಕ್‌ಡೌನ್ ಪರಿಣಾಮದಿಂದ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ಸಾಗದೆ, ಮತ್ತೊಂದೆಡೆ ಜೂನ್ ಪ್ರಾರಂಭದಲ್ಲೇ ಮುಂಗಾರು ಕೂಡ ಆಗಮಿಸಿದೆ. ಹೀಗಾಗಿ ಜೂನ್ ಅಂತ್ಯದೊಳಗೆ 7 ಮೀ. ಅಗಲದ ಕಾಂಕ್ರೀಟ್ ಕಾಮಗಾರಿಯನ್ನು ಮುಗಿಸುವ ನಿಟ್ಟಿನಲ್ಲಿ ಕಾಮಗಾರಿ ಸಾಗುತ್ತಿದೆ ಎಂದು ರಾ.ಹೆ.ಅಧಿಕಾರಿಗಳು ಹೇಳುತ್ತಾರೆ.

    ಮುಚ್ಚಿ ಹೋಗಿದೆ ಚರಂಡಿ
    ಹೆದ್ದಾರಿಯ ಹಿಂದಿನ ಚಿತ್ರಣವನ್ನೇ ಬದಲಿಸಿ ಕಾಮಗಾರಿ ಸಾಗುತ್ತಿರುವುದರಿಂದ ಹಿಂದಿನ ಚರಂಡಿಗಳು ಮುಚ್ಚಿ ನೀರು ಹರಿಯುವುದಕ್ಕೂ ತೊಂದರೆಯುಂಟಾಗುತ್ತಿದೆ. ಹೆದ್ದಾರಿಯ ಕೆಸರಿನಿಂದಾಗಿ ಕೆಲವೊಂದೆಡೆ ಮನೆಗೆ ತೆರಳುವುದಕ್ಕೂ ಅಡ್ಡಿಯಾಗಿದೆ. ವಾಹನಗಳನ್ನು ಮನೆಗೆ ಕೊಂಡು ಹೋಗಲಾಗದೆ ಬೇರೆಡೆ ನಿಲ್ಲಿಸುತ್ತಿದ್ದಾರೆ. ಹೀಗಾಗಿ ಒಂದು ಹಂತದ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಜತೆಗೆ ಸ್ಥಳೀಯರ ಸಮಸ್ಯೆಗಳಿಗೂ ಮುಕ್ತಿ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಕರೊನಾ ಲಾಕ್‌ಡೌನ್‌ನಿಂದ ಒಂದಷ್ಟು ಸಮಯಗಳ ಕಾಲ ಕಾಮಗಾರಿ ನಿಂತು ಹೋದ ಪರಿಣಾಮ ತೊಂದರೆಯುಂಟಾಗಿದೆ. ಜಕ್ರಿಬೆಟ್ಟುವರೆಗಿನ ಚತುಷ್ಪಥ ಹೆದ್ದಾರಿಯ ಒಂದು ಬದಿಯ 7 ಮೀ. ರಸ್ತೆಯನ್ನು ಈ ತಿಂಗಳ ಅಂತ್ಯದೊಳಗೆ ಮುಗಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಿದ್ದೇವೆ. ಬಳಿಕ ಮತ್ತೊಂದು ಬದಿಯ ಕಾಮಗಾರಿ ಮುಂದುವರಿಸುತ್ತೇವೆ.
    ರಮೇಶ್, ಎಇಇ, ರಾಷ್ಟ್ರೀಯ ಹೆದ್ದಾರಿ ಇಲಾಖೆ, ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts