More

    ವೇತನ ತಾರತಮ್ಯ ನಿವಾರಿಸದಿದ್ದರೆ ಚುನಾವಣೆ ವೇಳೆ ಆಡಳಿತ ಪಕ್ಷದ ವಿರುದ್ಧ ಪ್ರಚಾರ: ಆಯುಷ್ ವೈದ್ಯರ ಎಚ್ಚರಿಕೆ

    ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್‌ಎಚ್‌ಎಂ) ಹಾಗೂ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (ಆರ್‌ಬಿಎಸ್‌ಕೆ) ಅಡಿಯಲ್ಲಿ ಆರೋಗ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯರ ವೇತನ ತಾರತಮ್ಯ ಸರಿಪಡಿಸದಿದ್ದರೆ ಮುಂಬರುವ ಚುನಾವಣೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಚುನಾವಣಾ ಪ್ರಚಾರ ಹಾಗೂ ಮತ ಚಲಾವಣೆ ಮಾಡುವುದಾಗಿ ಆಯುಷ್ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

    ರಾಜ್ಯ ಸರ್ಕಾರವೇ ಈ ಹಿಂದೆ ಆಯುಷ್ (ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ) ವೈದ್ಯರಿಗೆ ಕನಿಷ್ಠ ವೇತನ 46,894.76 ನಿಗದಿ ಪಡಿಸಿ ಆದೇಶ ಹೊರಡಿಸಿತ್ತು. ಆದರೆ ಇದೀಗ ಆ ಆದೇಶಕ್ಕೆ ವಿರುದ್ಧವಾಗಿ ಆಯುಷ್ ವೈದ್ಯರಿಗೆ ಅತಿ ಕಡಿಮೆ (ಬಿಎಎಂಎಸ್ ಹಾಗೂ ಬಿಎಎಂಎಸ್, ಎಂಡಿ,ಎಂಎಸ್ ) 25 ಸಾವಿರ ರೂ. ನಿಗದಿ ಪಡಿಸಿ ಗುತ್ತಿಗೆ ಆಧಾರದಲ್ಲಿ ಹೊಸ ನೇಮಕಾತಿ ಆದೇಶ ಹೊರಡಿಸಿದೆ. ಅದೇ ಅಲೋಪಥಿ ವೈದ್ಯರಿಗೆ (ಎಂಬಿಬಿಎಸ್ ಮತ್ತು ಎಂಬಿಬಿಎಸ್, ಎಂಡಿ, ಎಂಎಸ್) ಕ್ರಮವಾಗಿ 45 ಸಾವಿರ ಹಾಗೂ 1.10 ಲಕ್ಷ ವೇತನ ನಿಗದಿಪಡಿಸಿದೆ. ಆ ಮೂಲಕ ಅಲೋಪಥಿ ಮತ್ತು ಆಯುಷ್ ವೈದ್ಯರ ನಡುವೆ ಮತ್ತೆ ವೇತನ ತಾರತಮ್ಯ ಮಾಡುತ್ತಿದೆ.

    ಈಗಾಗಲೇ 1,300ಕ್ಕೂ ಹೆಚ್ಚು ಆಯುಷ್ ವೈದ್ಯರು ಎನ್‌ಎಚ್‌ಎಂ ಹಾಗೂ ಆರ್‌ಬಿಎಸ್‌ಕೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, 10 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸುತ್ತಿರುವ ಆಯುಷ್ ವೈದ್ಯರಿಗೆ ಕೇವಲ 37 ಸಾವಿರ ವೇತನ ಪಡೆಯುತ್ತಿದ್ದರೆ, ಇತ್ತೀಚೆಗೆ ಗ್ರಾಮೀಣ ಸೇವೆಯ ನೆಪದಲ್ಲಿ ಅದೇ ಸ್ಥಳಕ್ಕೆ ನಿಯೋಜಿಸಿರುವ ಎಂಬಿಬಿಎಸ್ ವೈದ್ಯರಿಗೆ 60 ಸಾವಿರ ವೇತನ ನೀಡಲಾಗುತ್ತಿದೆ. ಆ ಮೂಲಕ ಸಮಾನ ಕೆಲಸಕ್ಕೆ ಸಮಾನ ವೇತನ ನಿಯಮವನ್ನು ಸರ್ಕಾರವೇ ಉಲ್ಲಂಘಿಸಿದೆ ಎಂದು ಆಯುಷ್ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಯುರ್ವೇದಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು ಪ್ರಯತ್ನಿಸುತ್ತಿದ್ದರೆ, ರಾಜ್ಯ ಸರ್ಕಾರ ಆಯುಷ್ ವೈದ್ಯರನ್ನು ನಿರ್ಲಕ್ಷ ಮಾಡುತ್ತಿದೆ. ಅತ್ತ ಆಯುರ್ವೇದ ಮತ್ತು ಯೋಗದ ಹೆಸರಿನಲ್ಲಿ ಪ್ರಚಾರಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿರುವ ಸರ್ಕಾರ ಅದೇ ಪದ್ಧತಿಯಲ್ಲಿ ಚಿಕಿತ್ಸೆ ನೀಡುವ ಆಯುಷ್ ವೈದ್ಯರಿಗೆ ಸೂಕ್ತ ವೇತನ ನೀಡದೆ ಕಡೆಗಣಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಲೋಪಥಿ ವೈದ್ಯರಿಲ್ಲದ ಸಂದರ್ಭದಲ್ಲಿ ಆಯುಷ್ ವೈದ್ಯರ ಸೇವೆ ಪಡೆದುಕೊಂಡ ಸರ್ಕಾರ ಗೌರವಯುತ ವೇತನ ನೀಡಲು ಹಿಂದೇಟು ಹಾಕುತ್ತಿದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಈ ಬಗ್ಗೆ ಕ್ರಮ ವಹಿಸದಿದ್ದರೆ 40 ಸಾವಿರಕ್ಕೂ ಹೆಚ್ಚು ಆಯುಷ್ ವೈದ್ಯರು ಹಾಗೂ 25 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಡಳಿತ ಪಕ್ಷದ ವಿರುದ್ಧ ನಿಲ್ಲಬೇಕಾಗುತ್ತದೆ ಎಂದು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ವಿದ್ಯಾರ್ಥಿ ವಿಭಾಗದ ಸಂಚಾಲಕ ಆಯುರ್ವೇದ ತಜ್ಞ ಡಾ. ಕಿರಣ್ ಕುಮಾರ್ ಕೆಂಪೇಗೌಡ ಎಚ್ಚರಿಕೆ ನೀಡಿದ್ದಾರೆ.

    ಭೀಕರ ಅಪಘಾತ: ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬುಲೆಟ್ ಡಿಕ್ಕಿ, ಯುವಕ-ಯುವತಿ ಸ್ಥಳದಲ್ಲೇ ಸಾವು

    ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts