More

    ಆಯುರ್ವೇದ ಪದ್ಧತಿಯಲ್ಲಿ ಸಂಶೋಧನೆಯ ಅಗತ್ಯವಿದೆ: ಸಚಿವ ದಿನೇಶ್ ಗುಂಡೂರಾವ್

    ಬೆಂಗಳೂರು: ಭಾರತೀಯ ಪರಂಪರೆಯ ಪ್ರತೀಕವಾಗಿರುವ ಆಯುರ್ವೇದ ಪದ್ಧತಿ ಆರೋಗ್ಯ ರಕ್ಷಣೆ ಹಾಗೂ ಶಿಸ್ತುಬದ್ಧ ಜೀವನಕ್ಕೆ ಉಪಯುಕ್ತವಾಗಿದ್ದು, ಇದರಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

    ಆಯುಷ್ ಇಲಾಖೆ ವತಿಯಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡ ಧನ್ವಂತರಿ ಜಯಂತಿ ಹಾಗೂ 8ನೇ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದಲ್ಲಿ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ವಿಶಿಷ್ಟ ಸ್ಥಾನವಿದ್ದು, ಈ ಚಿಕಿತ್ಸೆ ಪಡೆಯಲು ವಿದೇಶಿಗರೂ ಭಾರತಕ್ಕೆ ಬರುತ್ತಿದ್ದಾರೆ. ಹಾಗಾಗಿ ವಿಶ್ವದ ಜನರ ಗಮನವನ್ನು ಆಯುರ್ವೇದದ ಕಡೆ ಸೆಳೆಯುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಆದ್ದರಿಂದ ಈ ಪದ್ಧತಿಯಲ್ಲಿ ಸಂಶೋಧನೆ ನಡೆಸಿ, ಪುರಾವೆ ಸಹಿತ ದಾಖಲೆ ಒದಗಿಸಿದರೆ ಜನರಿಗೆ ಆಯುರ್ವೇದ ಚಿಕಿತ್ಸೆಯ ಬಗ್ಗೆ ವಿಶ್ವಾಸ ಮೂಡಲಿದೆ ಎಂದರು. ಸಹಸ್ರಾರು ವರ್ಷಗಳ ಇತಿಹಾಸ ಹೊಂದಿರುವ ಆಯುರ್ವೇದದಲ್ಲಿ ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದಷ್ಟೇ ಅಲ್ಲದೆ, ಕಾಯಿಲೆ ಬಾರದಂತೆ ತಡೆಯುವ ಹಾಗೂ ಉತ್ತಮ ಆರೋಗ್ಯ ಮತ್ತು ಜೀವನ ಶೈಲಿಯ ಕುರಿತಾಗಿಯೂ ಮಾಹಿತಿ ಇದೆ. ಇದಕ್ಕೆ ವಿಜ್ಞಾನದ ತತ್ವಗಳು ಪ್ರಸ್ತುತವಾಗಿದ್ದು, ಇನ್ನಷ್ಟು ಜನಪ್ರಿಯಗೊಳಿಸಲು ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಹೇಳಿದರು.

    ಗ್ರಂಥಗಳಲ್ಲಿ ಉಲ್ಲೇಖ: ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಬಿ.ಗುರುಬಸವರಾಜ್ ಅವರು ‘ಪ್ರಸ್ತುತ ವೈದ್ಯಕೀಯ ಸನ್ನಿವೇಶದಲ್ಲಿ ಆಯುರ್ವೇದದ ಮಹತ’್ವದ ಬಗ್ಗೆ ಉಪನ್ಯಾಸ ನೀಡುತ್ತ, ಸೂಪರ್ ಸ್ಪೆಷಾಲಿಟಿ ಯುಗದಲ್ಲಿ ಜೀವನಶೈಲಿ ಆಧಾರಿತ ಕಾಯಿಲೆಗಳು ಹೆಚ್ಚಾಗುತ್ತಿವೆ. ಮಧುಮೇಹ ಸೇರಿ ವಿವಿಧ ಕಾಯಿಲೆಗಳ ಬಗ್ಗೆ ಋಷಿಮುನಿಗಳು ವಿವಿಧ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ಆಹಾರ ಪದ್ಧತಿ ಕುರಿತು ಚರಕ ಸಂಹಿತೆ ಸೇರಿ ವಿವಿಧೆಡೆ ಹೇಳಲಾಗಿದೆ. ಕೋವಿಡ್ ಸಂದರ್ಭದಲ್ಲಿ ಈ ಪದ್ಧತಿಯ ಮಹತ್ವ ಜನರ ಅರಿವಿಗೆ ಬಂದಿದ್ದು, ಇಂದು ಬಹಳಷ್ಟು ಜನರು ಆಯುರ್ವೇದ ಚಿಕಿತ್ಸೆಯತ್ತ ಮುಖ ಮಾಡುತ್ತಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಆಯುರ್ವೇದ ಚಿಕಿತ್ಸೆ ಬಳಸುವ ಗಿಡಮೂಲಿಕೆಗಳನ್ನು ಪ್ರದರ್ಶಿಸಲಾಯಿತು. ಆಯುಷ್ ಇಲಾಖೆ ಮುಖ್ಯ ಯೋಜನೆ ಮತ್ತು ಅಭಿವೃದ್ಧಿ ಅಧಿಕಾರಿ ಡಾ. ಮಹ್ಮದ್ ರಫೀ ಎಚ್. ಹಕೀಂ, ಆಯುಕ್ತೆ ಲೀಲಾವತಿ, ಉಪ ನಿರ್ದೇಶಕಿ ಡಾ. ಅನುರಾಧ ಚಂಚಲಕರ, ಡಾ. ಬಿ.ಎಸ್. ಶ್ರೀಧರ್, ಆಯುರ್ವೇದ ವೈದ್ಯರು, ಸಿಬ್ಬಂದಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts