More

    ರಂಗಕರ್ಮಿ ಪ್ರಸನ್ನ, ಬನ್ನೇರುಘಟ್ಟ ಮೃಗಾಲಯ ಆಸ್ಪತ್ರೆಗೆ ರಾಜ್ಯಮಟ್ಟದ ಪ್ರಶಸ್ತಿ: ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಮಾಹಿತಿ

    ಮಂಡ್ಯ: ಪ್ರತಿಷ್ಠಿತ ಜನತಾ ಶಿಕ್ಷಣ ಟ್ರಸ್ಟ್‌ನಿಂದ ಕೊಡಮಾಡುವ ನಿತ್ಯಸಚಿವ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ಹೆಸರಿನ ರಾಜ್ಯಮಟ್ಟದ ರಂಗಭೂಮಿ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಶ್ರಮಜೀವಿ ಆಶ್ರಮದ ಖ್ಯಾತ ರಂಗಕರ್ಮಿ ಪ್ರಸನ್ನ ಹಾಗೂ ಸಮಾಜ ಸೇವಾ ಪ್ರಶಸ್ತಿಗೆ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನದ ಮೃಗಾಲಯ ಆಸ್ಪತ್ರೆಯ ಪ್ರಾಣಿ ಪಕ್ಷಿಗಳ ಆರೋಗ್ಯ ಮತ್ತು ಕಲ್ಯಾಣ ವಿಭಾಗ ಆಯ್ಕೆಯಾಗಿದೆ.
    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ, ಭಾರತೀಯ ಭಾಷೆಗಳಲ್ಲಿ ಹಲವಾರು ನಾಟಕದ ನಿರ್ದೇಶನ ಹಾಗೂ ರಚನೆಯೊಂದಿಗೆ ರಂಗಭೂಮಿ, ಸುಸ್ತಿರ ಜೀವನಕ್ಕೆ ಸಂಬಂಧಿಸಿದಂತೆ ಪುಸ್ತಕ ರಚನೆ ಮಾಡಿರುವ ಪ್ರಸನ್ನ ಅವರು 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಮಾನ ಮನಸ್ಕರ ತಂಡದೊಂದಿಗೆ ನಾಟಕಗಳಿಂದ ಜನರ ಮನಸ್ಸಿನ ಪರಿವರ್ತನೆ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ. ಅಂತೆಯೇ ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪಕ್ಷಿಗಳ ಆರೋಗ್ಯ ಮತ್ತು ಕಲ್ಯಾಣ ವಿಭಾಗ ವನ್ಯಜೀವಿಗಳಿಗೆ ಚಿಕಿತ್ಸೆ, ಉತ್ತಮ ಗುಣಮಟ್ಟದ ಆಹಾರದ ಜತೆಗೆ ಮರಿಗಳ ಪಾಲನೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
    ನಿತ್ಯಸಚಿವ ಕೆ.ವಿ.ಶಂಕರಗೌಡರ 108ನೇ ಜನ್ಮದಿನಾಚರಣೆ ಅಂಗವಾಗಿ ಜು.15ರಂದು ಬೆಳಗ್ಗೆ 11ಗಂಟೆಗೆ ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರದ ಸಭಾಂಗಣದಲ್ಲಿ ತಲಾ 25 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಶ್ರಾಂತ ಅಡ್ವೋಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡುವರು. ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅಧ್ಯಕ್ಷತೆ ವಹಿಸಲಿದ್ದಾರೆ. ಪಿಇಟಿ ಕಾರ್ಯದರ್ಶಿಯೂ ಆದ ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಎಲ್.ಶಿವಪ್ರಸಾದ್ ಭಾಗವಹಿಸುವರು ಎಂದು ತಿಳಿಸಿದರು.
    ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್, ಕಾರ್ಯಾಧ್ಯಕ್ಷ ಎಂ.ಬಿ.ಶ್ರೀಧರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts