More

    ಅಂಗೈಯಲ್ಲೇ ಲಭ್ಯವಾಗಲಿದೆ ಔಷಧ, ದಿನಸಿ ಅಂಗಡಿಗಳ ಮಾಹಿತಿ

    ಬೆಳಗಾವಿ: ಲಾಕ್‌ಡೌನ್‌ನಿಂದಾಗಿ ಜನರು ಅಗತ್ಯ ವಸ್ತುಗಳ ಖರೀದಿಗೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿ ನಿಭಾಯಿಸುವುದಕ್ಕೆ ಪಾಲಿಕೆ ಸದ್ಯ ವಿನೂತನ ಕ್ರಮಕ್ಕೆ ಮುಂದಾಗಿದೆ.

    ಪಾಲಿಕೆ ಅಧಿಕಾರಿಗಳು ನಗರದಾದ್ಯಂತ ಯಾವ ವಾರ್ಡ್‌ನಲ್ಲಿ ಎಷ್ಟು ಕಿರಾಣಿ ಅಂಗಡಿ, ಔಷಧ ಅಂಗಡಿಗಳಿವೆ ಎಂಬ ಮಾಹಿತಿಯುಳ್ಳ ವೆಬ್‌ಪೇಜ್, ಮೊಬೈಲ್ ಆ್ಯಪ್ ಹೊರತಂದಿದ್ದಾರೆ.

    ಪಾಲಿಕೆಯ 58 ವಾರ್ಡ್ ವ್ಯಾಪ್ತಿಯ ಪ್ರದೇಶದಲ್ಲಿನ ಅಗತ್ಯ ವಸ್ತುಗಳ ಮಾರಾಟದ ಅಂಗಡಿಗಳು, ಮಾರಾಟ ಗಾರರ ದೂರವಾಣಿ ಸಂಖ್ಯೆಗಳ ವಿವರಗಳು ಈ ಆ್ಯಪ್‌ನಲ್ಲಿ ಸಿಗಲಿದೆ. ಶೀಘ್ರವೇ ಜನತೆಗೆ ಆ್ಯಪ್‌ನ ಸೌಲಭ್ಯ ಸಿಗಲಿದೆ. ಇವುಗಳ ಸಹಾಯದಿಂದ ನಿವಾಸಿಗಳಿಗೆ ವಾರ್ಡ್‌ನ ಯಾವ ಪ್ರದೇಶದಲ್ಲಿ ಅಗತ್ಯ ವಸ್ತುಗಳು ಲಭ್ಯವಿರುವ ಅಂಗಡಿಗಳಿವೆ ಎಂಬ ಮಾಹಿತಿ ಲಭ್ಯವಾಗುತ್ತದೆ.

    ಅಂಗಡಿ ಪತ್ತೆ ಹೇಗೆ?: ಮೊಬೈಲ್ ಆ್ಯಪ್‌ನಲ್ಲಿ ವಾರ್ಡ್ ಗಳನ್ನು ನಮೂದಿಸಬೇಕು. ಬಳಿಕ ಕಿರಾಣಿ ಬೇಕೋ ಅಥವಾ ಔಷಧ ಬೇಕೋ ಎನ್ನುವುದನ್ನು ನಮೂದಿಸಬೇಕು. ನಂತರ ವಾರ್ಡ್‌ನ ಯಾವ ಪ್ರದೇಶದಲ್ಲಿ ಔಷಧ ಅಂಗಡಿ ಇದೆ, ಕಿರಾಣಿ ಅಂಗಡಿ ಇದೆ ಎನ್ನುವ ಮಾಹಿತಿಯ ಪೇಜ್ ತೆರೆದುಕೊಳ್ಳುತ್ತದೆ. ಜತೆಗೆ ಆ ಅಂಗಡಿಯ ಸಂಪರ್ಕದ ದೂರವಾಣಿ ಅಥವಾ ಮೊಬೈಲ್ ಸಂಖ್ಯೆಗಳು ಆ್ಯಪ್‌ನಲ್ಲಿ ಲಭ್ಯವಾಗುತ್ತದೆ. ಸಾರ್ವಜನಿಕರು ಆ ನಂಬರ್‌ಗೆ ಕರೆ ಮಾಡಿ ತಮಗೆ ಬೇಕಾದ ವಸ್ತುಗಳನ್ನು ಕೇಳಿ ತರಬಹುದು.

    ಜನರಿಗೆ ಅನುಕೂಲ: ಲಾಕ್‌ಡೌನ್‌ನಿಂದಾಗಿ ಯಾವ ಪ್ರದೇಶದಲ್ಲಿ ಯಾವ ಅಂಗಡಿ ತೆರೆದಿದೆ? ಅವರಲ್ಲಿ ಯಾವ ಪದಾರ್ಥಗಳು ಲಭ್ಯವಿದೆ ಎನ್ನುವ ಮಾಹಿತಿ ಸಿಗುತ್ತಿಲ್ಲ. ಇಂತಹ ಕಠಿಣ ಪರಿಸ್ಥಿತಿ ಎದುರಿಸುತ್ತಿರುವ ಜನರಿಗೆ ಅನುಕೂಲಕ್ಕಾಗಿ ಮಹಾನಗರ ಪಾಲಿಕೆಯು http://belagavishops.ttssl.com ವೆಬ್‌ಸೈಟ್ ತಯಾರಿಸಿದೆ. ಸಾರ್ವಜನಿಕರು ತಾವು ವಾಸಿಸುತ್ತಿರುವ ಪ್ರದೇಶಗಳಲ್ಲಿನ ಕಿರಾಣಿ ಅಂಗಡಿ ಮತ್ತು ಔಷಧ ಅಂಗಡಿಗಳ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಅಂಗಡಿಗಳ ಮಾಲೀಕರು ಹೋಂ ಡೆಲಿವರಿ ಕೊಡುವ ಮಾಹಿತಿಯೂ ಸಹ ಈ ವೆಬ್‌ನಲ್ಲಿ ಸಿಗಲಿದೆ.

    423 ಕಿರಾಣಿ, 68 ಔಷಧ ಅಂಗಡಿ

    ಆ್ಯಪ್ ಹಾಗೂ ವೆಬ್‌ಪೇಜ್‌ನಲ್ಲಿ ಇದುವರೆಗೆ 423 ಕಿರಾಣಿ ಅಂಗಡಿ ಹಾಗೂ 68 ಔಷಧ ಅಂಗಡಿಗಳ ಮಾಹಿತಿಯನ್ನು ಪಾಲಿಕೆ ಅಧಿಕಾರಿಗಳು ಅಪ್‌ಲೋಡ್ ಮಾಡಿದ್ದಾರೆ. ಟ್ರಿನಿಟಿ ಕಂಪನಿಯವರು ಆ್ಯಪ್, ವೆಬ್‌ಪೇಜ್ ಸಿದ್ಧಪಡಿಸಿದ್ದಾರೆ. ನಗರದ ಯಾವುದಾದರೂ ಅಗತ್ಯ ವಸ್ತುಗಳ ಪೂರೈಕೆಯ ಅಂಗಡಿ, ಶಾಪ್‌ಗಳ ಮಾಹಿತಿ ಬಿಟ್ಟು ಹೋಗಿದ್ದರೆ, ಅವುಗಳ ಮಾಹಿತಿಯನ್ನೂ ಅಪ್‌ಲೋಡ್ ಮಾಡಲಿದ್ದೇವೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

    ಲಾಕ್‌ಡೌನ್ ವೇಳೆ ಈ ವೆಬ್‌ಸೈಟ್, ಮೊಬೈಲ್ ಆ್ಯಪ್ ಅಗತ್ಯವಾಗಿತ್ತು. ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಇಂತಹ ವ್ಯವಸ್ಥೆ ಜಾರಿಯಲ್ಲಿದೆ. ಹೀಗಾಗಿ ಬೆಳಗಾವಿಯಲ್ಲಿ ವೆಬ್‌ಸೈಟ್ ಅಭಿವೃದ್ಧಿ ಪಡಿಸಿದ್ದೇವೆ. ಮೂರು ದಿನದ ಹಿಂದೆಯೇ ವೆಬ್‌ಸೈಟ್ ಹೊರತರುವ ಯೋಜನೆ ರೂಪಿಸಲಾಗಿತ್ತು. ಆದರೆ, ಕೆಲವು ಔಷಧ ಅಂಗಡಿಗಳ ಮಾಹಿತಿ ಅಪ್‌ಲೋಡ್ ಮಾಡುವ ಕಾರ್ಯ ಬಾಕಿ ಇದ್ದು, ಒಂದೆರಡು ದಿನದಲ್ಲಿ ಪೂರ್ಣಗೊಳಿಸುತ್ತೇವೆ.
    | ಕೆ.ಎಚ್.ಜಗದೀಶ ಪಾಲಿಕೆ ಆಯುಕ್ತ, ಬೆಳಗಾವಿ

    | ಜಗದೀಶ ಹೊಂಬಳಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts