ಮಗುವಿನ ಗುಲ್ಲಕ ಒಡೆದು ದಂಡ ಕಟ್ಟಲು ಮುಂದಾದ ಆಟೋ ಚಾಲಕ! ಪೊಲೀಸರು ಮಾಡಿದ್ದೇನು..?!

piggy
Published on

ನಾಗಪುರ: ತನ್ನ ದುಡಿಮೆಗೆ ಆಧಾರವಾಗಿದ್ದ ಆಟೋವನ್ನು ಬಿಡಿಸಿಕೊಳ್ಳಲು ಬಡ ಆಟೋ ಚಾಲಕನೊಬ್ಬ ತನ್ನ ಮಗನ ಪಿಗ್ಗಿ ಬ್ಯಾಂಕಿನ ನಾಣ್ಯಗಳನ್ನು ತಂದೊಪ್ಪಿಸಿದ ಮನ ಕಲಕುವ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಈ ದೃಶ್ಯವನ್ನು ನೋಡಿದ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಆತನ ಮೇಲಿದ್ದ ದಂಡದ ಮೊತ್ತವನ್ನು ತಾವೇ ಕಟ್ಟಿ ಮಾನವೀಯತೆ ಮೆರೆದಿದ್ದಾರೆ.

ನಾಗಪುರ ನಗರದ ಆಟೋ ಚಾಲಕ ರೋಹಿತ್​ ಖಡ್ಸೆ ಆಗಸ್ಟ್​ 8 ರಂದು ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಆಟೋ ಮೇಲೆ 200 ರೂ.ಗಳ ಚಲನ್​ ಇಶ್ಯೂ ಮಾಡಲಾಗಿತ್ತು. ನಂತರ ಆತನ ಆಟೋದ ಮೇಲೆ ಹಿಂದಿನ ದಂಡಗಳ ಮೊತ್ತಗಳು ಸೇರಿ 2000 ರೂ.ಗಳ ದಂಡ ಬಾಕಿ ಇದ್ದ ಕಾರಣ, ವಾಹನವನ್ನು ಜಪ್ತಿ ಮಾಡಲಾಗಿತ್ತು.

ವಾಹನವಿಲ್ಲದೆ ದುಡಿಮೆ ನಿಲ್ಲುವ ಭಯಕ್ಕೆ ಖಡ್ಸೆ, ಮಗನ ಹಣದ ಗುಲ್ಲಕವನ್ನು ಒಡೆದು ನಾಣ್ಯಗಳನ್ನು ಕವರಿನಲ್ಲಿ ತುಂಬಿಕೊಂಡು ದಂಡ ಕಟ್ಟಲು ಸೀತಾಬರ್ದಿ ಸಾರಿಗೆ ಕಛೇರಿಗೆ ಹೋಗಿದ್ದಾನೆ. ಇದನ್ನು ಕಂಡ ವಪೋನಿಯ ಹಿರಿಯ ಇನ್ಸ್​ಪೆಕ್ಟರ್​ ಅಜಯ್​ ಕುಮಾರ್​ ಮಾಳವೀಯ ಅವರು ತಮ್ಮ ಜೇಬಿನಿಂದ ದುಡ್ಡು ಕಟ್ಟಿ ಚಲನ್​ ತೀರಿಸಿದ್ದಾರೆ. ಹೀಗೆ ವಾಹನವನ್ನು ಬಿಡುಗಡೆ ಮಾಡಿಸಿದ್ದಲ್ಲದೆ, ಮಗುವಿನ ಗುಲ್ಲಕದ ದುಡ್ಡನ್ನು ವಾಪಸ್​ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net