More

    ವಾರಸುದಾರರು ಪತ್ತೆಯಾಗದ ವಾಹನಗಳ ಹರಾಜು ; ಕಾಲಮಿತಿ ನಿಗದಿಪಡಿಸಿದ ಹೈಕೋರ್ಟ್

    ಬೆಂಗಳೂರು : ನಗರದ ರಸ್ತೆ, ಪಾದಚಾರಿ ಮಾರ್ಗಗಳಲ್ಲಿ ದೀರ್ಘ ಕಾಲದಿಂದ ನಿಲುಗಡೆ ಮಾಡಿರುವ ಅಪರಿಚಿತ ಹಾಗೂ ವಾರಸುದಾರರು ಪತ್ತೆಯಾಗದ ವಾಹನಗಳನ್ನು ಹರಾಜು ಹಾಕಲು ಹೈಕೋರ್ಟ್ ಕಾಲಮಿತಿ ನಿಗದಿಪಡಿಸಿದೆ.

    ತ್ಯಾಗರಾಜನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವಂತೆ ಕೋರಿ ಸ್ಥಳೀಯ ನಿವಾಸಿ ಪ್ರಶಾಂತ್ ರಾವ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಹಾಗೂ ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಕಾಲಮಿತಿ ನಿಗದಿಪಡಿಸಿದೆ.

    ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ ಶೆಟ್ಟಿ, ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಹಾಗೂ ರಸ್ತೆಗಳಲ್ಲಿ ಬಿಟ್ಟುಹೋಗಿರುವ ಅಪರಿಚಿತ ಮತ್ತು ವಾರಸುದಾರರು ಪತ್ತೆಯಾಗದ ವಾಹಗಳ ಸ್ಥಳಾಂತರ, ಅವುಗಳ ಹರಾಜು ಹಾಕುವ ಸಂಬಂಧ 2024ರ ಜ.31ರಂದು ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳ ಜಂಟಿ ಸಭೆಯ ನಿರ್ಣಯಗಳ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಜಂಟಿ ಪೊಲಿಸ್ ಆಯುಕ್ತ (ಸಂಚಾರ) ಅನುಚೇತ್ ಅವರ ಅಫಿಡವಿಟ್‌ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

    ರಸ್ತೆಗಳಲ್ಲಿ ಬಿಟ್ಟುಹೋಗಿರುವ ವಾಹನಗಳನ್ನು ಸ್ಥಳಾಂತರ ಮಾಡಲು ನಾಲ್ಕು ಸ್ಥಳಗಳನ್ನು ಗುರುತಿಸಲಾಗಿದೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಮೂಲಕ ವಾಹನದ ಮಾಲೀಕರನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ರಸ್ತೆ ಬದಿ ನಿಂತಲ್ಲೇ ನಿಂತಿರುವ ವಾಹನಗಳನ್ನು ತೆಗೆಯುವಂತೆ ಸ್ಟಿಕರ್ ಅಳವಡಿಸಲಾಗುವುದು. 15 ದಿನಗಳ ನಂತರ ಆರ್‌ಟಿಒ ಕಚೇರಿಗೆ ತಂದು ಮಾಲೀಕರನ್ನು ಸಂಪರ್ಕಿಸಲಾಗುವುದು. ಮಾಲೀಕರು ಸಿಗದಿದ್ದರೆ ಕೋರ್ಟ್ ಅನುಮತಿ ಪಡೆದು ಹರಾಜು ಹಾಕಲಾಗುವುದು. ಆ ರೀತಿ ವಾಹನಗಳನ್ನು ಹರಾಜು ಹಾಕುವ ಮುನ್ನ ಪತ್ರಿಕಾ ಪ್ರಕಟಣೆ ನೀಡಲಾಗುವುದು ಎಂದು ವಿವರಿಸಿದರು.

    ತ್ವರಿತವಾಗಿ ವಿಲೇ ಮಾಡದಿದ್ದರೆ ಸಮಸ್ಯೆ
    ವಾರಸುದಾರರು ಪತ್ತೆಯಾಗದ ಸಂದರ್ಭದಲ್ಲಿ ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್ ನ್ಯಾಯಾಲದಿಂದ ಅನುಮತಿ ಪಡೆದು ಅಂತಹ ವಾಹನಗಳನ್ನು ಹರಾಜು ಹಾಕಲಾಗುತ್ತದೆ. ಗೆಜೆಟ್ ಪ್ರಕಟಣೆಯ ದಿನಾಂಕದಿಂದ ಆರು ತಿಂಗಳಲ್ಲಿ ವಾಹನಗಳನ್ನು ಹರಾಜು ಹಾಕಲು 2023ರ ಜು.11ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ. ರಸ್ತೆಗಳಲ್ಲಿ ಬಿಟ್ಟುಹೋಗಿರುವ ವಾಹನಗಳನ್ನು ತ್ವರಿತವಾಗಿ ವಿಲೇವಾರಿ ಮಾಡದಿದ್ದರೆ ಆಡಳಿತಾತ್ಮಕ ಅಪಾಯಗಳನ್ನು ಸೃಷ್ಟಿಸುತ್ತದೆ. ಹಾಗಾಗಿ, ಅವಧಿಯನ್ನು 15 ದಿನಕ್ಕೆ ಇಳಿಕೆ ಮಾಡಿದರೆ ಅನುಕೂಲವಾಗಲಿದೆ.

    ಅಲ್ಲದೆ ಕಡಿಮೆ ಅವಧಿ ನಿಗದಿಪಡಿಸಿದರೆ ಅನುಕೂಲವಾಗುತ್ತದೆ. ಜತೆಗೆ ಅಂತಹ ವಾಹನಗಳ ಸ್ಥಳಾಂತರಕ್ಕೆ ಬೆಂಗಳೂರು ಉತ್ತರ ತಾಲೂಕಿನ ಮಲ್ಲಸಂದ್ರದಲ್ಲಿ 2 ಎಕರೆ ಜಾಗ ಗುರುತಿಸಲಾಗಿದೆ ಎಂಬ ಪ್ರಮಾಣ ಪತ್ರದ ಅಂಶವನ್ನು ಇದೇ ವೇಳೆ ಅಡ್ವೋಕೇಟ್ ಜನರಲ್ ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಒಪ್ಪಿದ ನ್ಯಾಯಪೀಠ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿ ಅವಧಿಯನ್ನು ಕಡಿತಗೊಳಿಸಿತು.

    ಅದರಂತೆ, 15 ವರ್ಷ ಮೇಲ್ಪಟ್ಟ ವಾಹನಗಳನ್ನು ಎಲ್ಲ ಕಾನೂನು ಪ್ರಕ್ರಿಯೆ ಮುಗಿಸಿದ 30 ದಿನಗಳಲ್ಲಿ ಹರಾಜು ಹಾಕಬೇಕು. 1ರಿಂದ 5 ವರ್ಷದ ವಾಹನಗಳನ್ನು ಮೂರು ತಿಂಗಳಲ್ಲಿ ಹಾಗೂ 5ರಿಂದ 15 ವರ್ಷದ ವಾಹನಗಳನ್ನು ಹರಾಜು ಹಾಕಬೇಕು. ಅದರ ಪ್ರಗತಿ ಆಧರಿಸಿ ಪೊಲೀಸರು ನ್ಯಾಯಾಲಯದಿಂದ ಮುಂದಿನ ನಿರ್ದೇಶನಗಳನ್ನು ಕೋರಬಹುದು ಎಂದು ಹೇಳಿ ವಿಚಾರಣೆಯನ್ನು ಮಾ.14ಕ್ಕೆ ಮುಂದೂಡಿತು.

    ಪ್ರಮಾಣಪತ್ರದಲ್ಲಿ ಏನಿದೆ?
    ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ ಸಂಬಂಧ ಕ್ರಮವಾಗಿ 2021ರಲ್ಲಿ 74,851; 2022ರಲ್ಲಿ 1,53,983; 2023ರಲ್ಲಿ 78,238 ಮತ್ತು 20214ರಲ್ಲಿ 479 ವಾಹನಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಪಾದಚಾರಿ ಮಾರ್ಗದ ಮೇಲೆ ವಾಹನ ಚಾಲನೆ ಸಂಬಂಧ 2021ರಲ್ಲಿ 8,422; 2022ರಲ್ಲಿ 18144; 2023ರಲ್ಲಿ 9547; 2024ರಲ್ಲಿ 113 ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

    ತೆರವಿಗೆ ವಿಶೇಷ ಕಾರ್ಯಾಚರಣೆ
    ಬಿಬಿಎಂಪಿ ವ್ಯಾಪ್ತಿಯ 609.89 ಕಿಮೀ ಮತ್ತು 734.45 ಕಿಮೀ ಉಪ ಮುಖ್ಯರಸ್ತೆಗಳ ಪಾದಚಾರಿ ಮಾರ್ಗದ ಮೇಲೆ ಶಾಶ್ವತ ಹಾಗೂ ಉಪ ಶಾಶ್ವತದ ನಿರ್ಮಾಣಗಳನ್ನು ಅನುಮತಿಸುವುದಿಲ್ಲ. ಪಾದಚಾರಿ ಮಾರ್ಗಗಳ ಒತ್ತುವರಿ ಗುರುತಿಸಿ, ತೆರವುಗೊಳಿಸಲು ಕಾಲಕಾಲಕ್ಕೆ ವಿಶೇಷ ಕಾರ್ಯಚರಣೆ ಮಾಡಲಾಗುವುದು. ಈ ಕಾರ್ಯಚರಣೆಗೆ ಭದ್ರತೆ ಕಲ್ಪಿಸಲು ಪೊಲೀಸ್ ಇಲಾಖೆ ಸಮ್ಮತಿಸಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts