More

    ಆಗಸ್ಟ್ 1ರಿಂದ ಎಟಿಎಂ ಸೇವಾ ಶುಲ್ಕ ದುಬಾರಿ: 9 ವರ್ಷದ ನಂತರ ಫೀ ಹೆಚ್ಚಳ; ಹಣಕಾಸು, ಇತರೆ ಕ್ಷೇತ್ರಗಳಲ್ಲಿ ಕೆಲ ನಿಯಮಗಳ ಬದಲಾವಣೆ

    ಎಟಿಎಂ ಶುಲ್ಕ ಹೆಚ್ಚಳ, ಹಣಕಾಸು ಮತ್ತು ಇತರೆ ಕ್ಷೇತ್ರಗಳಲ್ಲಿ ಆಗುತ್ತಿರುವ ನಿಯಮ ಬದಲಾವಣೆ ಸೇರಿ ಐದು ಅಂಶಗಳು ಜನಸಾಮಾನ್ಯರ ಬದುಕಿನ ಮೇಲೆ ಆಗಸ್ಟ್ 1ರಿಂದ ಪರಿಣಾಮ ಬೀರಲಿವೆ. ಅವುಗಳ ವಿವರ ಇಲ್ಲಿದೆ.

    1. ಎಟಿಎಂ ಸೇವಾ ಶುಲ್ಕ ಹೆಚ್ಚಳ

    ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಒಂಬತ್ತು ವರ್ಷಗಳ ನಂತರ ಎಟಿಎಂ ಇಂಟರ್​ಚೇಂಜ್ ಶುಲ್ಕವನ್ನು ಹೆಚ್ಚಳ ಮಾಡುವುದಕ್ಕೆ ಅವಕಾಶ ನೀಡಿದೆ. ಎಟಿಎಂ (ಆಟೋಮ್ಯಾಟೆಡ್ ಟೆಲ್ಲರ್ ಮೆಷಿನ್)ನ ಸ್ಥಾಪನೆ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವುದನ್ನು ಗಮನಿಸಿ ಈ ಶುಲ್ಕ ಹೆಚ್ಚಳಕ್ಕೆ ಆರ್​ಬಿಐ ಸಮ್ಮತಿ ಸೂಚಿಸಿದೆ. ಎಟಿಎಂ ಇಂಟರ್​ಚೇಂಜ್ ಶುಲ್ಕ ಪ್ರತಿ ವಹಿವಾಟಿಗೆ ಈಗ 15 ರೂಪಾಯಿಯಿಂದ 17 ರೂಪಾಯಿಗೆ ಏರಿಕೆಯಾಗಲಿದೆ. ಹಣಕಾಸೇತರ ವಹಿವಾಟಿನ ಶುಲ್ಕ 5 ರೂಪಾಯಿಯಿಂದ 6 ರೂಪಾಯಿಗೆ ಏರಿಕೆಯಾಗಲಿದೆ. ಇಂಟರ್​ಚೇಂಜ್ ಶುಲ್ಕ ಎಂದರೆ ಗ್ರಾಹಕರು ಒಂದು ಬ್ಯಾಂಕಿನ ಕಾರ್ಡನ್ನು ಇನ್ನೊಂದು ಬ್ಯಾಂಕಿನ ಎಟಿಎಂನಲ್ಲಿ ಬಳಸಿದಾಗ ವಿಧಿಸುವಂಥ ಶುಲ್ಕವಾಗಿದೆ. ಇದನ್ನು ಬ್ಯಾಂಕುಗಳು ಪಾವತಿಸುತ್ತವೆ. ಗ್ರಾಹಕರಿಗೆ ನಿಶ್ಚಿತ ಸಂಖ್ಯೆಯ ಉಚಿತ ವಹಿವಾಟಿಗೆ ಅವಕಾಶ ಇದ್ದು, ಇದಾದ ಬಳಿಕ ಗ್ರಾಹಕರು ಪ್ರತಿವಹಿವಾಟಿಗೆ 20 ರೂಪಾಯಿಯಂತೆ ಬ್ಯಾಂಕಿಗೆ ಪಾವತಿಸ ಬೇಕು. ಇದು ಕೂಡ 1 ರೂಪಾಯಿ ಹೆಚ್ಚಾಗಿದ್ದು 2022ರ ಜನವರಿ 1ರಿಂದ ಚಾಲ್ತಿಗೆ ಬರಲಿದೆ ಎಂದು ಆರ್​ಬಿಐ ತಿಳಿಸಿದೆ.

    2. ವೇತನ, ಪಿಂಚಣಿ, ಇಎಂಐ ಪಾವತಿ

    ನ್ಯಾಷನಲ್ ಆಟೋಮ್ಯಾಟೆಡ್ ಕ್ಲಿಯರಿಂಗ್ ಹೌಸ್ (ಎನ್​ಎಸಿಎಚ್)ನ ಸೇವೆ ಆಗಸ್ಟ್ 1ರಿಂದ ನಿರಂತರವಾಗಿ ವಾರದ ಎಲ್ಲ ದಿನವೂ ಎಲ್ಲ ಸಮಯದಲ್ಲೂ ಲಭ್ಯವಿರಲಿದೆ. ಒಂದೇ ಸಲ ಎಲ್ಲರಿಗೂ ಹಣ ವರ್ಗಾವಣೆ ಮಾಡುವ ವ್ಯವಸ್ಥೆ ಇದಾಗಿದೆ. ಡಿವಿಡೆಂಡ್ ಹಂಚಿಕೆ, ಬಡ್ಡಿ ಹಂಚಿಕೆ, ವೇತನ, ಪಿಂಚಣಿ ಇತ್ಯಾದಿ ಸಗಟು ಪಾವತಿಗೆ ಈ ವ್ಯವಸ್ಥೆ ಸಹಕಾರಿಯಾಗಿರಲಿದೆ. ಇದರಲ್ಲೇ, ವಿದ್ಯುತ್, ಗ್ಯಾಸ್, ಟೆಲಿಫೋನ್, ನೀರು ಮತ್ತು ಇಎಂಐ ಪಾವತಿ, ಮ್ಯೂಚುವಲ್ ಫಂಡ್, ಇನ್ಶೂರೆನ್ಸ್ ಪ್ರೀಮಿಯಂ ಪಾವತಿಗೂ ಅನುಕೂಲ ಕಲ್ಪಿಸಲಾಗುತ್ತಿದೆ.

    3. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಶುಲ್ಕ

    ಮನೆಬಾಗಿಲಿಗೆ ಒದಗಿಸುವ ಸೇವೆಗೆ ಗ್ರಾಹಕರು 20 ರೂಪಾಯಿ ಮತ್ತು ಜಿಎಸ್​ಟಿ ಪಾವತಿಸಬೇಕಾಗುತ್ತದೆ. ಮನೆ ಬಾಗಿಲಿನಲ್ಲಿ ನಗದು ವಹಿವಾಟು (ನಗದೀಕರಣ ಅಥವಾ ನಗದು ಜಮೆ) ನಡೆಸಿದರೆ ಪ್ರತಿವಹಿವಾಟಿಗೆ ಶೇಕಡ 20ರಷ್ಟು ಹೆಚ್ಚುವರಿಯಾಗಿ ಪಾವತಿಸಬೇಕು. ಇದಕ್ಕೆ ಜಿಎಸ್​ಟಿ ಕೂಡ ಅನ್ವಯವಾಗುತ್ತದೆ ಎಂದು ಐಪಿಪಿಬಿ ತಿಳಿಸಿದೆ.

    4. ಐಸಿಐಸಿಐ ಬ್ಯಾಂಕ್ ಸೇವಾ ಶುಲ್ಕ ಏರಿಕೆ

    ಐಸಿಐಸಿಐ ಬ್ಯಾಂಕ್ ಕೂಡ ನಿಯತ ಉಳಿತಾಯ/ವೇತನ ಖಾತೆ ಮತ್ತು ಇತರೆ ಖಾತೆಗಳ ನಗದುವಹಿವಾಟಿನ ನಿಯಮಗಳನ್ನು ಪರಿಷ್ಕರಿಸಿದೆ. ಇದು ಆಗಸ್ಟ್ 1ರಿಂದ ಚಾಲ್ತಿಗೆ ಬರುತ್ತಿದೆ. ಇದರಂತೆ, ಒಂದು ತಿಂಗಳಲ್ಲಿ ನಾಲ್ಕು ಬಾರಿ ಮಾತ್ರ ಉಚಿತ ವಹಿವಾಟು ನಡೆಸಬಹುದು. ಇದಾದ ಬಳಿಕ ಪ್ರತಿ ವಹಿವಾಟಿಗೆ 150 ರೂ. ಶುಲ್ಕ ಪಾವತಿಸಬೇಕು. ಮೌಲ್ಯ ಮಿತಿ ಅಂದರೆ ಠೇವಣಿ ಮತ್ತು ನಗದೀಕರಣದ ಒಟ್ಟು ಮೊತ್ತಕ್ಕೂ ಮಿತಿ ನಿಗದಿ ಮಾಡಿದೆ. ಹೋಮ್ ಬ್ರಾಂಚ್​ನಲ್ಲಿ ಇದು ಒಂದು ಲಕ್ಷ ರೂಪಾಯಿ ಮಿತಿ ಹೊಂದಿದ್ದು, ತಿಂಗಳಿಗೆ ಮತ್ತು ಖಾತೆಗೆ ಮಿತಿ ಹಾಕಿದೆ. ಇದು ಮೀರಿದ ವಹಿವಾಟಿಗೆ ಪ್ರತಿ 1,000 ರೂಪಾಯಿಗೆ 5 ರೂಪಾಯಿಯಂತೆ ಅಥವಾ ಕನಿಷ್ಠ 150 ರೂಪಾಯಿ ಶುಲ್ಕ, ಹೋಮ್ ಬ್ರಾಂಚ್ ಅಲ್ಲದೆ ಇದ್ದರೆ, ನಗದು ವಹಿವಾಟು ಮಿತಿ ದಿನಕ್ಕೆ 25,000 ರೂಪಾಯಿ. ಇದಕ್ಕೂ ಮೀರಿದ ವಹಿವಾಟಿಗೆ ಪ್ರತಿ 1,000 ರೂಪಾಯಿಗೆ 5 ರೂಪಾಯಿ ಅಥವಾ ಕನಿಷ್ಠ 150 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಥರ್ಡ್ ಪಾರ್ಟಿ ನಗದು ವಹಿವಾಟಿನಲ್ಲಿ ದೈನಿಕ ಮಿತಿ 25,000 ರೂಪಾಯಿ ಮಿತಿ, 150 ರೂ. ಶುಲ್ಕ ನಿಗದಿ ಮಾಡಿದೆ. ಹಿರಿಯ ನಾಗರಿಕ ಗ್ರಾಹಕರು/ಯಂಗ್ ಸ್ಟಾರ್/ಸ್ಮಾರ್ಟ್ ಸ್ಟಾರ್ ಖಾತೆಗಳಿಗೆ ದಿನದ ಮಿತಿ 25,000 ರೂ. ಅನ್ವಯವಾಗುತ್ತಿದ್ದು, ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

    5. ಇ-ಫೈಲಿಂಗ್ ಗಡುವು ವಿಸ್ತರಣೆ

    ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 15 ಸಿಎ, 15 ಸಿಬಿ ಫಾಮರ್್​ಗಳ ಇ ಸಲ್ಲಿಕೆಗೆ ವಿಧಿಸಿದ್ದ ಜು.15ರ ಗಡುವನ್ನು ಆಗಸ್ಟ್ 15ರ ತನಕ ವಿಸ್ತರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts