More

    ಆಕಾಂಕ್ಷಿಗಳ ಪಟ್ಟು, ಕೈ ಇಕ್ಕಟ್ಟು: ದತ್ತ ಸವಾಲ್, ಜೆಡಿಎಸ್​ನತ್ತ ಆಚಾರ್, ತಹಸೀಲ್ದಾರ್…

    ಬೆಂಗಳೂರು: ವಿಧಾನಸಭೆ ಚುನಾವಣೆಗೆ ಎರಡು ಹಂತದಲ್ಲಿ ಟಿಕೆಟ್ ಹಂಚಿಕೆ ಮಾಡಿದ ಕಾಂಗ್ರೆಸ್​ನಲ್ಲೀಗ ಅಸಮಾಧಾನದ ಬುಗ್ಗೆ ಎದ್ದಿದೆ. ಟಿಕೆಟ್ ವಂಚಿತರು ರಾಜಕೀಯ ಅಸ್ತಿತ್ವಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್​ನತ್ತ ಮುಖಮಾಡಿದ್ದು, ಕೈ ಪಾಳಯಕ್ಕೆ ಹೊಸ ಸವಾಲು ಎದುರಾಗಿದೆ.

    ಮೊದಲ ಪಟ್ಟಿ ಬಿಡುಗಡೆಗೊಂಡ ಬಳಿಕ ಅಷ್ಟಾಗಿ ಅಪಸ್ವರ ಕೇಳಿಬಂದಿರಲಿಲ್ಲ. ಸಣ್ಣ ಪ್ರಮಾಣದ ಅಸಮಾಧಾನ ಅಲ್ಲೇ ಬೂದಿಮುಚ್ಚಿದ ಕೆಂಡದಂತಿತ್ತು. ಆದರೆ, ಎರಡನೇ ಪಟ್ಟಿಯ 42ರ ಪೈಕಿ 10ಕ್ಕೂ ಹೆಚ್ಚು ಕಡೆಗಳಲ್ಲಿ ಅಸಮಾಧಾನದ ಕಾವು ತಟ್ಟಿದೆ.

    ಟಿಕೆಟ್ ವಂಚಿತರು ಹಾಗೂ ಮೂರನೇ ಪಟ್ಟಿಯಲ್ಲಿ ಎಲ್ಲಿ ತಮ್ಮ ಹೆಸರು ಕೈಬಿಟ್ಟು ಹೋಗುತ್ತದೋ ಎಂಬ ಆತಂಕದಲ್ಲಿರುವವರು ಪಕ್ಷದ ರಾಜ್ಯ ನಾಯಕರು ಹಾಗೂ ಕೇಂದ್ರನಾಯಕರ ಮೇಲೆ ಒತ್ತಡ ಹೇರಲಾಂಭಿಸಿದ್ದಾರೆ. ಹಾಲಿ ಶಾಸಕರಿದ್ದವರಲ್ಲೂ ಕೆಲವರಿಗೆ ಟಿಕೆಟ್ ಖಾತ್ರಿಯಾಗದಿರುವುದು ಆಕಾಂಕ್ಷಿಗಳ ಆತಂಕ ಹೆಚ್ಚಿಸಿದೆ. ಟಿಕೆಟ್ ಗ್ಯಾರಂಟಿ ವಿಶ್ವಾಸದಲ್ಲಿದ್ದ ಕೆಲವರು ಕಾಂಗ್ರೆಸ್ ನಡೆಯಿಂದ ಬೇಸತ್ತು ಅನ್ಯಮಾರ್ಗದ ಹುಡುಕಾಟದಲ್ಲಿದ್ದಾರೆ.

    ಸ್ವಾಭಿಮಾನಕ್ಕೆ ಧಕ್ಕೆ: ಕಾಂಗ್ರೆಸ್ ಸೇರಿ ಕಡೂರು ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ವೈಎಸ್​ವಿ ದತ್ತ್ತ ಅಸಮಾಧಾನ ಹೊರಹಾಕಿದ್ದಾರೆ. ‘ದತ್ತ್ತ ಶಕ್ತಿ ಗೌಣ, ಏನೂ ತೊಂದರೆ ಆಗುವುದಿಲ್ಲ ಎಂದು ಭಾವಿಸಿರಬಹುದು. ಆದರೆ, ನನ್ನ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ನನ್ನನ್ನು ವರಿಷ್ಠರು ಸಂಪರ್ಕ ಮಾಡಬಹುದಿತ್ತು, ನಿಮ್ಮನ್ನು ಕರೆಸಿ ಮಾತನಾಡದ ಕಾರಣ ಇದು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ, ಕಣ್ಣೀರು ಹಾಕುತ್ತಿದ್ದಾರೆ. ನನ್ನ ಕುಟುಂಬದಲ್ಲಿ ಸೂತಕ ಆವರಿಸಿದ ವಾತಾವರಣ ಇದೆ. ನನ್ನನ್ನು ನಂಬಿದವರಿಗೆ ಅನ್ಯಾಯ ಮಾಡಲು ನಾನು ತಯಾರಿಲ್ಲ. ನನ್ನ ನಿರ್ಧಾರ ಭಾನುವಾರ ಕಾರ್ಯಕರ್ತರ ಸಮ್ಮುಖದಲ್ಲಿ ಮಾಡುತ್ತೇನೆ’ ಎಂದು ದತ್ತ್ತ ಘೋಷಿಸಿದ್ದಾರೆ. ಈ ನಡುವೆ ಟಿಕೆಟ್ ಪಡೆದ ಆನಂದ್ ಅವರು ದತ್ತ್ತನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿದ್ದಾರೆ.

    ತಹಸೀಲ್ದಾರ್ ಜೆಡಿಎಸ್​ಗೆ: ಮೊದಲ ಪಟ್ಟಿಯಲ್ಲಿ ಹಾನಗಲ್ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಟಿಕೆಟ್ ಕೈತಪ್ಪಿದ್ದರ ಹಿನ್ನೆಲೆಯಲ್ಲಿ ಕಣ್ಣೀರು ಹಾಕಿದ್ದು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ‘ಐದು ದಶಕದಿಂದ ಕಾಂಗ್ರೆಸ್​ಗೆ ದುಡಿದೆ, ಪಕ್ಷದ ನಾಯಕರು ದ್ರೋಹ ಮಾಡಿದರು. ಪಕ್ಷ ಶ್ರೀನಿವಾಸ ಮಾನೆಯವರಿಗೆ ಟಿಕೆಟ್ ನೀಡಿತು, ಸೌಜನ್ಯಕ್ಕೂ ನನ್ನನ್ನು ಸಂಪರ್ಕ ಮಾಡಲಿಲ್ಲ. ನಾಯಕರ ನಡೆಯಿಂದ ನನಗೆ ಅಪಮಾನವಾಗಿದೆ. ಕಾಂಗ್ರೆಸ್ ಸಹವಾಸವೇ ಬೇಡವೆಂದು ಜೆಡಿಎಸ್ ಸೇರುತ್ತಿದ್ದೇನೆ’ ಎಂದಿದ್ದಾರೆ.

    ಅಭ್ಯರ್ಥಿಗೆ ಆಚಾರ್ಯ ಸೆಡ್ಡು: ಉಡುಪಿಯ ಟಿಕೆಟ್ ಆಕಾಂಕ್ಷಿ ಕೃಷ್ಣಮೂರ್ತಿ ಆಚಾರ್ಯ ಶುಕ್ರವಾರ ಆಪ್ತರ ಸಭೆ ನಡೆಸಿ ಬಂಡಾಯವಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಉಡುಪಿಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗೆ ಸೆಡ್ಡು ಹೊಡೆಯುವ ಎಲ್ಲ ಲಕ್ಷಣ ಕಾಣಿಸಿದೆ.

    ಮೂರನೇ ಪಟ್ಟಿಗೆ ಮುನ್ನ ಉದ್ವೇಗ, ಸಿದ್ದರಾಮಯ್ಯ ಮೇಲೆ ಒತ್ತಡ

    ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ತಡವಾಗಿ ಬಿಡುಗಡೆ ಮಾಡಲು ಪಕ್ಷ ನಿರ್ಧರಿಸಿದೆ. ಇದು ಆಕಾಂಕ್ಷಿಗಳ ಎದೆಬಡಿತ ಹೆಚ್ಚಿಸಿದೆ. ಮೂವರು ಶಾಸಕರಿಗೆ ಇನ್ನೂ ಟಿಕೆಟ್ ಖಾತ್ರಿಯಾಗದ ಕಾರಣ ಅವರೆಲ್ಲರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲೆ ಒತ್ತಡ ತಂದಿದ್ದಾರೆ. ರಾಯಚೂರು ಜಿಲ್ಲೆ ಲಿಂಗಸೂಗೂರು ಶಾಸಕ ಡಿ.ಎಸ್. ಹೂಲಗೇರಿಗೆ ಟಿಕೆಟ್ ಕೈತಪ್ಪುವ ಸುಳಿವು ಸಿಕ್ಕಿದ್ದರಿಂದ ಭೋವಿ ಸಮಾಜದ ಕಡೆಯಿಂದ ಕಾಂಗ್ರೆಸ್​ಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ. ಹಾಗೆಯೇ ಸಿದ್ದರಾಮಯ್ಯ ಮನೆಗೆ ಆಗಮಿಸಿದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೂಲಗೇರಿಗೆ ಟಿಕೆಟ್ ನೀಡಲೇಬೇಕೆಂದು ಒತ್ತಡ ಹೇರಿದ್ದಾರೆ. ಟಿಕೆಟ್ ಕೈತಪ್ಪಿದರೆ ಭೋವಿ ಸಮಾಜ ಪ್ರಾಬಲ್ಯವಿರುವ ಬೇರೆ ಕ್ಷೇತ್ರದ ಪಕ್ಷದ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ ಎಂಬ ಬಗ್ಗೆಯೂ ಚರ್ಚೆಯಾಗಿದೆ.

    ಹರಿಹರ ಶಾಸಕ ರಾಮಪ್ಪ ಕೂಡ ಸಿದ್ದರಾಮಯ್ಯ ಮೇಲೆ ಒತ್ತಡ ತಂದು ಟಿಕೆಟ್ ನೀಡಬೇಕೆಂದು ಕೋರಿದ್ದಾರೆ. ಎರಡನೇ ಪಟ್ಟಿಯಲ್ಲಿಯೂ ಹೆಸರು ಇರದ್ದರಿಂದ ಕಳವಳಗೊಂಡ ಬೆಂಗಳೂರಿನ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕೂಡ ಸಿದ್ದರಾಮಯ್ಯ ಮನೆಗೆ ಧಾವಿಸಿದ್ದರು. ‘ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಯಾವುದೇ ಅಸಮಾಧಾನವಿಲ್ಲ. ನಾನು ನಿಮ್ಮನ್ನು ನಂಬಿ ನಿಮ್ಮ ಜತೆಗೆ ನಿಂತಿದ್ದೇನೆ. ಕಳೆದ ಬಾರಿ ಅತಿದೊಡ್ಡ ಅಂತರದಲ್ಲಿ ಗೆದ್ದಿದ್ದೇನೆ, ಈ ರೀತಿ ನಡೆಸಿಕೊಳ್ಳುವುದು ಸರಿಯಲ್ಲ’ ಎಂದು ಅಖಂಡ ಅಸಮಾಧಾನ ಹೊರಹಾಕಿದ್ದಾರೆಂದು ಗೊತ್ತಾಗಿದೆ.

    ಶಿಕಾರಿಪುರ ಕ್ಷೇತ್ರಕ್ಕೆ ಗೋಣಿ ಮಾಲತೇಶ್ ಟಿಕೆಟ್ ಸಿಕ್ಕಿದೆ ಎಂಬ ಸುಳಿವಿನ ಮೇರೆಗೆ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ ನಾಗರಾಜ ಗೌಡ ಸಿದ್ದರಾಮಯ್ಯ ಮನೆಗೆ ಆಗಮಿಸಿ ಅಸಮಾಧಾನ ಹೊರಹಾಕಿದರು.

    ಮೂರೂ ಪಕ್ಷದಲ್ಲಿ ಬಿರುಸು

    ದೆಹಲಿಯಲ್ಲಿ ಬಿಡಾರ: ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ದೆಹಲಿಗೆ ಶಿಫ್ಟ್ ಆಗಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದಿಗೆ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ದೆಹಲಿಗೆ ತೆರಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್. ಯಡಿಯೂರಪ್ಪ ಕೂಡ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಏಪ್ರಿಲ್ 8-9ರಂದು ಅಭ್ಯರ್ಥಿ ಆಯ್ಕೆಗೆ ಸಭೆ ನಡೆಯುವುದು. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ಮುಗಿದು ವಾಪಸ್ ತೆರಳಿದ ಬಳಿಕವೇ ಅಭ್ಯರ್ಥಿಗಳ ಪಟ್ಟಿಗೆ ಅಂತಿಮ ರೂಪ ಸಿಗಲಿದೆ.

    ಬಿಜೆಪಿ ಪಟ್ಟಿಗೆ ಕೈ ನಿರೀಕ್ಷೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗದ ಹೊರತು ಕಾಂಗ್ರೆಸ್ ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡದಿರಲು ನಿರ್ಧರಿಸಿದೆ. ಏ.13ರಿಂದ ನಾಮಪತ್ರ ಸಲ್ಲಿಕೆ ನಡೆಯಲಿದ್ದು ಹೀಗಾಗಿ ಸಾಕಷ್ಟು ಕಾಲಾವಕಾಶ ಇರುವುದರಿಂದ ಕಾದು ನೋಡಲಿದೆ. ಈಗಾಗಲೇ ಎಲ್ಲ ಕ್ಷೇತ್ರಗಳ ಪರಿಶೀಲನೆ ನಡೆದಿದ್ದು, ಸಂಭಾವ್ಯ ಪಟ್ಟಿಯನ್ನೂ ಸಿದ್ಧಮಾಡಿಕೊಟ್ಟುಕೊಂಡಿದೆ. ಒಂದು ವೇಳೆ ಮೂರನೇ ಪಟ್ಟಿ ಬಿಡುಗಡೆ ಬಳಿಕ ಪಕ್ಷಾಂತರ ಉಂಟಾದರೆ ತಡೆಯಲು ಈ ನಿರ್ಧಾರ.

    ಜೆಡಿಎಸ್ ಆಕಾಂಕ್ಷೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಹಾಗೂ ಕಾಂಗ್ರೆಸ್​ನ ಮೂರನೇ ಪಟ್ಟಿ ಆಧರಿಸಿ ತನ್ನ ಹುರಿಯಾಳುಗಳನ್ನು ಅಂತಿಮಗೊಳಿಸಲು ಜೆಡಿಎಸ್ ಮುಂದಾಗಿದೆ. ಕಳೆದ ಒಂದು ವಾರದಿಂದಲೂ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳುತ್ತಲೇ ಬಂದಿರುವ ಜೆಡಿಎಸ್, ಎರಡು ರಾಷ್ಟ್ರೀಯ ಪಕ್ಷಗಳ ಬಂಡಾಯಗಾರರನ್ನು ಸೆಳೆಯಲು ಕಾಯ್ದಿದೆ. ಸದ್ಯ 93 ಕ್ಷೇತ್ರಕ್ಕೆ ಅಭ್ಯರ್ಥಿಗಳು ಅಂತಿಮವಾಗಿದೆ.

    ಕಾಂಗ್ರೆಸ್​ಗೆ ಯಾರನ್ನೇ ಸೇರಿಸಿಕೊಳ್ಳಬೇಕಾದರೂ ಟಿಕೆಟ್ ಭರವಸೆ ನೀಡುವುದಿಲ್ಲ. ಬೇಷರತ್ ಬೆಂಬಲದಿಂದ ಸೇರಿಸಿಕೊಳ್ಳುತ್ತೇವೆ. ಕೆಲವರಿಗೆ ಆಕ್ರೋಶ ಸಹಜ, ಅದನ್ನು ಸರಿಪಡಿಸುತ್ತೇವೆ.

    | ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

    ಜೆಡಿಎಸ್​ಗೆ ಅವಕಾಶ: ಕಾಂಗ್ರೆಸ್​ನ ಟಿಕೆಟ್ ವಂಚಿತರು ಜೆಡಿಎಸ್​ನತ್ತ ಮುಖ ಮಾಡುತ್ತಿದ್ದು, ಪಕ್ಷದ ನೆಲೆ ಇಲ್ಲದ ಕಡೆ ಆ ಪಕ್ಷಕ್ಕೆ ಹೊಸ ನೇತೃತ್ವ ಸಿಕ್ಕಂತಾಗಿದೆ. ಚಿತ್ರದುರ್ಗದಲ್ಲಿ ರಘು ಆಚಾರ್ ಅವರನ್ನು ಜೆಡಿಎಸ್ ನಾಯಕರು ಸಂರ್ಪಸಿದ್ದು, ಅವಕಾಶ ನೀಡುವ ಭರವಸೆಯನ್ನೂ ನೀಡಿದ್ದಾರೆ.

    ಗೆಲ್ಲುವ ಕಡೆ ದಿಗಿಲು: ಈ ಬಾರಿ ತಾನು ಗೆಲ್ಲಬಹುದಾದ ಕ್ಷೇತ್ರಗಳನ್ನು ಕಾಂಗ್ರೆಸ್ ಪಟ್ಟಿಮಾಡಿಕೊಂಡಿದ್ದು, ಆ ಪಟ್ಟಿಯಲ್ಲಿರುವ ಏಳಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಅಸಮಾಧಾನ ಕಾಣಿಸಿದೆ. ಇದು ಚುನಾವಣೆ ವರೆಗೆ ಮುಂದುವರಿದರೆ ಪಕ್ಷದ ಅಧಿಕೃತ ಅಭ್ಯರ್ಥಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ.

    ಅಖಾಡಕ್ಕೆ ಸುರ್ಜೆವಾಲ: ಪ್ರಮುಖ ನಾಯಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಆದ್ಯತೆ ಕೊಟ್ಟಿದ್ದ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಇದೀಗ ಬಂಡಾಯ ತಣಿಸಲು ಅಖಾಡಕ್ಕಿಳಿದಿದ್ದಾರೆ. ಎಐಸಿಸಿ ತಂಡದೊಂದಿಗೆ ನೇರವಾಗಿ ಕಾರ್ಯಾಚರಣೆ ಆರಂಭಿಸಿದ್ದಾರೆ.

    ಇನ್ನೂ ಆಸೆ ಜೀವಂತ: ಸ್ವಸಾಮರ್ಥ್ಯದಿಂದ ಗೆಲ್ಲಬಹುದಾದ ಕೆಲವರಿಗೆ ಕೊನೆಯ ಹಂತದಲ್ಲಿ ಗಾಳ ಹಾಕಿ ಲಾಭ ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಈ ಪಟ್ಟಿಯಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್ ಹೆಸರೂ ಇದೆ.

    ನಾಳೆ ಬೆಂಬಲಿಗರ ಸಭೆ

    ಕಿತ್ತೂರು ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿದ್ದಕ್ಕೆ ಇನಾಂದಾರ್ ಕುಟುಂಬ ಭಾವುಕಗೊಂಡಿದ್ದು, ಭಾನುವಾರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಪ್ರಕಟಿಸಿದೆ. ನಾಲ್ಕು ದಶಕಗಳಿಂದ ಡಿ.ಬಿ ಇನಾಂದಾರ್ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಟಿಕೆಟ್ ಕೈತಪ್ಪಿದ್ದು, ಕೆಟ್ಟ ಅನುಭವವಾಗಿದೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಇನಾಂದಾರ್ ಕುಟುಂಬ ತೀರ್ವನಿಸಿದೆ ಎಂದು ಇನಾಂದಾರ್ ಸೊಸೆ ಲಕ್ಷ್ಮೀ ಪ್ರಕಟಿಸಿದ್ದಾರೆ. ಇನಾಂದಾರ್ ಅವರಿಗೆ ಆರೋಗ್ಯ ಸರಿಯಿಲ್ಲ. ಇಂತಹ ಕಷ್ಟದ ಸಮಯದಲ್ಲಿ ಕಾಂಗ್ರೆಸ್ ನಮ್ಮನ್ನು ಕೈ ಬಿಟ್ಟಿದೆ ಎಂದು ಲಕ್ಷ್ಮೀ ಕಣ್ಣೀರಿಟ್ಟಿದ್ದಾರೆ. ತೀರ್ಥಹಳ್ಳಿ, ಹೊಳಲ್ಕೆರೆ, ಗೋಕಾಕ್, ಮೊಳಕಾಲ್ಮೂರು, ನರಗುಂದದಲ್ಲಿ ಕೂಡ ಟಿಕೆಟ್ ಆಕಾಂಕ್ಷಿಗಳು ಬೇಸರ ಹೊರಹಾಕಿದ್ದು, ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಮುಳ್ಳಾಗುವ ಸಾಧ್ಯತೆ ಇದೆ. ಶಿರಸಿ- ಸಿದ್ದಾಪುರ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಭೀಮಣ್ಣ ನಾಯ್್ಕ ವಿರುದ್ಧ ಸ್ಪರ್ಧಿಸುವುದಾಗಿ ಟಿಕೆಟ್ ಆಕಾಂಕ್ಷಿ ವೆಂಕಟೇಶ ಹೆಗಡೆ ಹೊಸಬಾಳೆ ಘೋಷಿಸಿದ್ದಾರೆ.

    ಮಾವನ ಮುನಿಸು: ತುಮಕೂರು ನಗರ ಕ್ಷೇತ್ರದ ಕಾಂಗ್ರೆಸ್​ನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅಳಿಯ ಎಸ್. ರಫೀಕ್ ಅಹ್ಮದ್​ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾವ, ಮಾಜಿ ಶಾಸಕ ಎಸ್. ಷಫಿ ಅಹ್ಮದ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀ ನಾಮೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾ ರ್ಜುನ ಖರ್ಗೆಗೆ ರಾಜೀನಾಮೆ ಪತ್ರ ರವಾನೆ ಮಾಡಿದ್ದು, 40 ವರ್ಷದ ದೀರ್ಘಕಾಲದ ಕಾಂಗ್ರೆಸ್ ನಂಟು ಕಳಚಿಕೊಂಡಿದ್ದಾರೆ.

    ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿಗೆ ಸಿಕ್ತು ವಿಶೇಷ ಆಶೀರ್ವಾದ!

    ನೂರಕ್ಕೂ ಅಧಿಕ ಹೆಂಡಿರ ಗಂಡ; ಈತನಿಗೆ ಜಗತ್ತಿನಾದ್ಯಂತ ಹೆಂಡತಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts