More

    ತಿಂಗಳಲ್ಲಿಯೇ ಕಿತ್ತು ಬಂದ ಡಾಂಬರ್

    ಮುಳಗುಂದ: ಪಟ್ಟಣದಲ್ಲಿ ರಸ್ತೆ ನಿರ್ಮಿಸಿದ ಗುತ್ತಿಗೆದಾರರ ವಿರುದ್ಧ ಗುಣಮಟ್ಟದ ಕಾಮಗಾರಿ ನಡೆಸದ ಆರೋಪ ಕೇಳಿಬಂದಿದೆ.
    ಪಟ್ಟಣದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಾಚ್‌ಮನ್ ಶೆಡ್ ನಿರ್ಮಾಣ, ಡಾಂಬರ್ ರಸ್ತೆ ನಿರ್ಮಾಣ, ನೀರಿನ ಟ್ಯಾಂಕ್ ನಿರ್ಮಾಣ ಹಾಗೂ ಅದಕ್ಕೆ ಕೊರಮ್ಮ ದೇವಸ್ಥಾನದಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗೆ 2022- 23ನೇ ಸಾಲಿನ 15ನೇ ಹಣಕಾಸು ಯೋಜನೆಯಲ್ಲಿ 35.10 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಾಮಗಾರಿ ಕಳಪೆಯಾಗಿ ನಡೆಸಿದ್ದು, ಈ ಬಗ್ಗೆ ಚುನಾಯಿತ ಜನಪ್ರತಿನಿಧಿ, ಅಧಿಕಾರಿಗಳು ಪ್ರಶ್ನೆ ಮಾಡಿಲ್ಲ ಎಂದು ಆರೋಪಿಸಲಾಗಿದೆ.
    ರಸ್ತೆ ಕಾಮಗಾರಿ ಮುಗಿದು ತಿಂಗಳಾಗಿಲ್ಲ. ರಸ್ತೆಗೆ ಹಾಕಿದ ಡಾಂಬರ್, ಜಲ್ಲಿ ಕಲ್ಲು ಕಿತ್ತು ಹೋಗಿವೆ. ಡಾಂಬರೀಕರಣ ಮಾಡುವಾಗ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿ ನಿರ್ವಹಿಸಿದ್ದರಿಂದ ಸಮಸ್ಯೆಯಾಗಿದೆ. ಕ್ರಿಯಾಯೋಜನೆಯಂತೆ ರಸ್ತೆ ಅಭಿವೃದ್ಧಿಪಡಿಸಿಲ್ಲ. ಮೆಟ್ಲಿಂಗ್ ಸರಿಯಾಗಿಲ್ಲ. ಡಾಂಬರೀಕರಣದ ನಂತರ ರೋಡ್ ರೋಲರ್ ಬಳಸಿಲ್ಲ. ಡಾಂಬರು ಸರಿಯಾಗಿ ಕಾಯಿಸದೆ ಸುರಿಯಲಾಗಿದೆ. ಅದು ಕೈಯಿಂದ ತೆಗೆದರೆ ಕಿತ್ತು ಹೋಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ವಾಚ್‌ಮನ್ ಶೆಡ್‌ಗೆ ಬಳಸಿರುವ ಇಟ್ಟಿಗೆ ಮುಟ್ಟಿದರೆ ಪುಡಿಯಾಗುತ್ತ್ತಿವೆ. ಕಾಮಗಾರಿಗೆ ಬಳಸುವ ಕಟ್ಟಡ ಸಾಮಗ್ರಿಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿಲ್ಲ. ಕಾಮಗಾರಿ ಪ್ರಗತಿಯಲ್ಲಿರುವಾಗ ಪರಿಶೀಲನೆ ಮಾಡದೆ ನಿರ್ಲಕ್ಷೃ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಮರು ಡಾಂಬರೀಕರಣ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
    ಮಂಜುನಾಥ ಗುಳೇದ, ಪಪಂ ಮುಖ್ಯಾಧಿಕಾರಿ ಮುಳಗುಂದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts