More

    ಅಶೋಕ ಶಿಲಾಶಾಸನ ಅನಾಥ, ಪ್ರವಾಸೋದ್ಯಮ ಇಲಾಖೆ ತಾತ್ಸಾರ

    ಮಸ್ಕಿ: ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ಹಾಗೂ ಶಾಸನದ ಮಹತ್ವ ಅರಿಯದ ಜನಪ್ರತಿನಿಧಿಗಳಿಂದಾಗಿ ಇತಿಹಾಸ ಪ್ರಸಿದ್ಧ ಅಶೋಕನ ಶಿಲಾಶಾಸನ ಸ್ಥಳ ಅಭಿವೃದ್ಧಿ ಕಾಣದೇ ಬೀಕೋ ಎನ್ನುತ್ತಿದೆ.

    ಶಾಸನ ಸ್ಥಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಗೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲರು ಐದು ವರ್ಷದ ಹಿಂದೆ 50 ಲಕ್ಷ ರೂ. ಬಿಡುಗಡೆ ಮಾಡಿಸಿದ್ದರು. ಅದರಲ್ಲಿ 25 ಲಕ್ಷರೂ ವೆಚ್ಚದಲ್ಲಿ ಎರಡು ಕೊಠಡಿಗಳನ್ನು ಕಟ್ಟಿದ್ದು ಬಿಟ್ಟರೆ ಬೇರೆ ಏನೂ ಮಾಡದೆ ಇಲಾಖೆಯ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ.

    ಇದನ್ನೂ ಓದಿ: ಅನಾಥವಾದ ಪುರಾತನ ಶಿಲಾಶಾಸನಗಳು!

    ಕಟ್ಟಡ ಕಟ್ಟಿ ಬರೋಬ್ಬರಿ ಇಷ್ಟು ವರ್ಷ ಕಳೆದರೂ ಶಾಸನ ಸ್ಥಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿ ಹೊಳಿ ಅವರು ಶಾಸನ ಸ್ಥಳದಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರೂ ಲೆಕ್ಕಕ್ಕೆ ಇಲ್ಲದಂತಾಗಿದೆ.

    ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ, ಬಾಲಚಂದ್ರ ಜಾರಕಿ ಹೊಳಿ ನೆರವೇರಿಸಿದ ಶಿಲಾನ್ಯಾಸ ಅನಾಥವಾಗಿ ನಿಂತಿದೆ. ಶಾಸನ ಇರುವ ಪ್ರದೇಶ ಸುರಕ್ಷಿತವಾಗಿದ್ದರೂ, ಮ್ಯೂಜಿಯಂ ನಿರ್ಮಾಣಕ್ಕಾಗಿ ಕಟ್ಟಿದ ಕೊಠಡಿಗಳು ಬಳಕೆ ಇಲ್ಲದೆ ಅನೈತಿಕ ಚಟುವಟಿಕೆ ನಡೆಸುವ ತಾಣವಾಗಿದೆ. ಶಾಸನ ಸ್ಥಳ ಅಭಿವೃದ್ಧಿಗೆ ಖರೀದಿಸಿರುವ ಮೂರು ಎಕರೆ ಜಮೀನಿನಲ್ಲಿ ಪ್ರವಾಸಿಗರಿಗಾಗಿ ಉದ್ಯಾನ, ಮಕ್ಕಳ ಆಟಿಕೆ ವಸ್ತುಗಳ ನಿರ್ಮಾಣ ಮಾಡದೆ ಹೊಲದ ಮಾಲೀಕರು ಬೆಳೆ ಬೆಳೆಯಲು ಅನುಕೂಲ ಕೊಟ್ಟಾಂತಾಗಿದೆ.

    ಶಾಸನ ಸ್ಥಳ ಬಳಿ ಅಂದಾಜು 25 ಲಕ್ಷ ರೂ. ವೆಚ್ಚ ಮಾಡಿ ವಸ್ತು ಸಂಗ್ರಹಾಲಯ, ಶೌಚಗೃಹ ಕಟ್ಟಡ ನಿರ್ಮಾಣ ಮಾಡಿ ನಾಲ್ಕು ವರ್ಷ ಕಳೆದರೂ ಕಟ್ಟಡಗಳಿಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಎರಡು ಕಟ್ಟಡಗಳು ಅನಾಥವಾಗಿವೆ. ಶಿಲಾಶಾಸನಕ್ಕೆ ಹೋಗುವ ರಸ್ತೆ ಸಂಪೂರ್ಣ ಹಾಳಾಗಿದೆ. ಶಾಸನ ಸ್ಥಳ ಬಳಿಯ ಕೊಳವೆ ಬಾವಿ ಕಾಣದಾಗಿದೆ.

    ಶಾಸನ ಸ್ಥಳ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಸೌಕರ್ಯಗಳಿಲ್ಲ. ಕುಡಿವ ನೀರಿಗಾಗಿ ಅಲೆದಾಡಬೇಕಾಗಿದೆ. ಶಾಸನ ಸ್ಥಳ ಅಭಿವೃದ್ಧಿಗಾಗಿ ಈಗಿರುವ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು. ಶಾಸನ ಸ್ಥಳ ಅವಸಾನಕ್ಕೆ ತಲುಪುವ ಮುಂಚೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಸಾರ್ವಜನಿಕರು ಇತಿಹಾಸ ಪ್ರಿಯರು ಒತ್ತಾಯಿಸಿದ್ದಾರೆ.

    ನಾನು ಶಾಸಕನಾಗಿದ್ದಾಗ ಶಿಲಾಶಾಸನ ಅಭಿವೃದ್ಧಿಗಾಗಿ 50 ಲಕ್ಷ ರೂ.ಗಳನ್ನು ಪ್ರಾಚ್ಯವಸ್ತು ಇಲಾಖೆಗೆ ವರ್ಗಾಯಿಸಿದ್ದೆ. ಅಧಿಕಾರಿಗಳು ಕೇವಲ ಕಾಟಚಾರಕ್ಕೆ ಎಂಬಂತೆ 25 ಲಕ್ಷ ರೂ ವೆಚ್ಚದಲ್ಲಿ ಎರಡು ಕೊಠಡಿ ಕಟ್ಟಿ ಕೈ ಚೆಲ್ಲಿದ್ದಾರೆ. ಉಳಿದ ಹಣ ಇಲಾಖೆಯುಲ್ಲಿ ಕೊಳೆಯುತ್ತಿದೆ. ಶಾಸನ ಸ್ಥಳ ಅಭಿವೃದ್ಧಿ ಪಡಿಸುವ ಇಚ್ಛೆ ಇಲಾಖೆಗೆ ಇದ್ದಂತಿಲ್ಲ. ಈ ಕುರಿತು ಪಕ್ಷದ ವತಿಯಿಂದ ಹೋರಾಟ ನಡೆಸಲು ಚಿಂತನೆ ನಡೆಸಿರುವೆ.
    | ಪ್ರತಾಪಗೌಡ ಪಾಟೀಲ, ಮಾಜಿ ಶಾಸಕ, ಮಸ್ಕಿ

    ಅಶೋಕನ ಶಾಸನ ಇರುವ ಪ್ರದೇಶದ ಅಭಿವೃದ್ಧಿಗಾಗಿ ಇಷ್ಟರಲ್ಲೆ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸುವೆ. ಸರ್ಕಾರದ ಮಟ್ಟದಲ್ಲಿ ವಿಶೇಷ ಅನುದಾನ ತಂದು ಅಭಿವೃದ್ಧಿಗಾಗಿ ಪ್ರಯತ್ನಿಸುವೆ.
    | ಆರ್.ಬಸನಗೌಡ ತುರ್ವಿಹಾಳ, ಮಸ್ಕಿ ಶಾಸಕ

    ಅಶೋಕ ಶಿಲಾ ಶಾಸನ ಸ್ಥಳದ ಅಭಿವೃದ್ಧಿಗಾಗಿ ಯಾರೂ ಕಾಳಜಿ ವಹಿಸುತ್ತಿಲ್ಲ. ಇಲ್ಲಿಗೆ ಬರುವ ಪ್ರವಾಸಿಗರು ಬಹಳ ಉತ್ಸುಕತೆಯಿಂದ ಬರುತ್ತಾರೆ. ಬಂದ ಮೇಲೆ ನಿರಾಸೆುಂದ ಮರುಳುತ್ತಾರೆ.
    | ಮಹಾಂತೇಶ ಬ್ಯಾಳಿ, ಕಸಾಪ ತಾಲೂಕು ಅಧ್ಯಕ್ಷ, ಮಸ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts