More

    ಯಾರು ಹಿತವರು ನಮಗೆ ಡೇರ್ ಡೆವಿಲ್ ಮತ್ತು ಮಾತಿನ ಮಲ್ಲರ ನಡುವೆ?: ಭಾರತದ ನಿಲುವು-ಒಲವು ವಿಶ್ಲೇಷಣೆ

    ಯಾರು ಹಿತವರು ನಮಗೆ ಡೇರ್ ಡೆವಿಲ್ ಮತ್ತು ಮಾತಿನ ಮಲ್ಲರ ನಡುವೆ?: ಭಾರತದ ನಿಲುವು-ಒಲವು ವಿಶ್ಲೇಷಣೆ| ಪ್ರೇಮಶೇಖರ

    ಬರುತ್ತದೆ, ಬಂತು, ಬಂದೇಬಿಟ್ಟಿತು ಎಂದು ಕಳೆದ ಮೂರು ತಿಂಗಳಿನಿಂದಲೂ ಯೂಕ್ರೇನ್ (ಉಕ್ರೈನ್) ಮತ್ತು ಅಮೆರಿಕಾ ಗಟ್ಟಿಗಂಟಲಿನಲ್ಲಿ ಕೂಗುತ್ತಿದ್ದ ತೋಳ ಕೊನೆಗೂ ಬಂದೇಬಿಟ್ಟಿದೆ. ಮೂರೂವರೆ ತಿಂಗಳ ತಯಾರಿಯ ನಂತರ ರಷಿಯನ್ ಅಧ್ಯಕ್ಷ ವ್ಲಾದಿಮೀರ್ ಪೂತಿನ್ ಯೂಕ್ರೇನ್ ವಿರುದ್ಧ ಸೇನಾಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಸಂಘರ್ಷದಿಂದಾಗಿ ಜಗತ್ತು ಏಕಾಏಕಿ ಶೀತಲ ಸಮರದ ಕಾಲಕ್ಕೆ ಒಗೆಯಲ್ಪಟ್ಟಿದೆ. ಸೇನಾಶಕ್ತಿಯಲ್ಲಿ ಇಂದಿನ ರಷಿಯಾವನ್ನು ಅಂದಿನ ಸೋವಿಯೆತ್ ಯೂನಿಯನ್​ಗೆ ಹೋಲಿಸಲಾಗದೇನೋ ನಿಜ. ಆದರೆ ಅಂದಿನ ಕಮ್ಯೂನಿಸ್ಟ್ ದೈತ್ಯನಿಗೆ ಇಲ್ಲದ್ದು ರಷಿಯಾಗೆ ಇಂದು ಇದೆ, ಕ್ರೆಮ್ಲಿನ್​ನಲ್ಲೊಬ್ಬ ಡೇರ್ ಡೆವಿಲ್ ಅಧ್ಯಕ್ಷನಿದ್ದಾನೆ! ಆತ ದೃಢನಿಶ್ಚಯಕ್ಕೆ ಜಾಗತಿಕವಾಗಿ ಹೆಸರಾದ ಉಗ್ರ ರಷಿಯನ್ ರಾಷ್ಟ್ರೀಯವಾದಿ. ಹೀಗಾಗಿ ಈಗ ಆರಂಭವಾಗಿರುವ ಸಂಘರ್ಷ ಸದ್ಯಕ್ಕೆ ತಣ್ಣಗಾಗುವಂತಹದಲ್ಲ. ಅಂತಿಮ ತೀರ್ಮಾನ ಪೂರ್ಣವಾಗಿ ರಷಿಯಾದ ಪರ ಅಥವಾ ಪೂರ್ಣವಾಗಿ ವಿರುದ್ಧ ಆಗುವವರೆಗೆ ಈ ಸಂಘರ್ಷ ಮುಂದುವರಿಯುತ್ತದೆ. ಅದಕ್ಕೆಷ್ಟು ಸಮಯ ತಗುಲಬಹುದು ಎಂದು ಸ್ಪಷ್ಟವಾಗಿ ಅಂದಾಜಿಸಲಾಗದ ಈ ಅನಿರ್ದಿಷ್ಟ ಸನ್ನಿವೇಶದಲ್ಲಿ ನಮ್ಮಿಂದ ನಾಲ್ಕು ಸಾವಿರ ಕಿಲೋಮೀಟರ್ ದೂರದಲ್ಲಿ ಆರಂಭವಾಗಿರುವ ಈ ಸಂಘರ್ಷದ ಪರಿಣಾಮ ಭಾರತದ ಮೇಲೆ ಏನಾಗಬಹುದು?

    ಶೀತಲಸಮರದ ಕಾಲದಲ್ಲಿ ಭಾರತ ತಾನು ಅಲಿಪ್ತ ನೀತಿಯನ್ನು ಅನುಸರಿಸುತ್ತಿರುವುದಾಗಿ ಹೇಳಿಕೊಳ್ಳುತ್ತಲೇ ಸೋವಿಯೆತ್ ಯೂನಿಯನ್ ಪರವಾಗಿ, ಅಮೆರಿಕಾದ ವಿರುದ್ಧವಾಗಿ ನಿಂತದ್ದು ಅದೆಷ್ಟೋ ಬಾರಿ. ಆದರೆ ಅಂತಹ ನೀತಿಯನ್ನು ಅನುಸರಿಸಲು ಸೂಕ್ತವಾದ ಸಮಯ ಇದಲ್ಲ. ಕಳೆದ ಮೂರು ದಶಕಗಳಲ್ಲಿ ಜಗತ್ತು ಬದಲಾಗಿದೆ, ಅದಕ್ಕಿಂತಲೂ ಹೆಚ್ಚಾಗಿ ಭಾರತದ ವಿದೇಶನೀತಿ ಮತ್ತು ರಕ್ಷಣಾನೀತಿಗಳು ಬದಲಾಗಿವೆ.

    1991ರ ನಂತರ ಭಾರತ ಹಂತಹಂತವಾಗಿ ಅಮೆರಿಕಾಗೆ ಹತ್ತಿರವಾಗುತ್ತಿದೆ, ಹಾಗೆಯೇ ಅಮೆರಿಕಾ ವೇಗವಾಗಿ ಪಾಕಿಸ್ತಾನದಿಂದ ದೂರ ಸರಿಯುತ್ತಿದೆ. ಅಮೆರಿಕಾ ಮತ್ತು ಭಾರತಗಳು ಜಪಾನ್ ಹಾಗೂ ಆಸ್ಟ್ರೇಲಿಯಾ ಜತೆಗೂಡಿ ಕ್ವಾಡ್ ಸಂಘಟನೆ ಸೃಷ್ಟಿಸಿಕೊಂಡಿವೆ. ಮೊದಲ ಒಂದೂವರೆ ದಶಕದಲ್ಲಿ ಪಾರಿಸಾರಿಕ ಮತ್ತು ಆರ್ಥಿಕ ಕ್ಷೇತ್ರಗಳಿಗಷ್ಟೇ ಸೀಮಿತವಾಗಿದ್ದ ಕ್ವಾಡ್ ಸಹಯೋಗ ಈಗ ಸೇನಾಕ್ಷೇತ್ರಕ್ಕೂ ವಿಸ್ತರಿಸುತ್ತಿದೆ. ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಆಟಾಟೋಪವನ್ನು ನಿಯಂತ್ರಿಸುವ ಉದ್ದೇಶದಿಂದ ನಾಲ್ಕೂ ದೇಶಗಳು ಆರ್ಥಿಕ ಹಾಗೂ ಸೇನಾ ಕಾರ್ಯಯೋಜನೆಗಳನ್ನು ರೂಪಿಸಿ ಪರಸ್ಪರರ ಬೆನ್ನಿಗೆ ನಿಂತಿವೆ. ನಮ್ಮ ಗಡಿಯಲ್ಲಿ ಚೀನಾ ಒಡ್ಡುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಅಮೆರಿಕಾದ ಬೆಂಬಲ ನಮಗೆ ಬಹಳ ಮುಖ್ಯವಾಗುತ್ತದೆ.

    ಆದರೆ ಆ ಕಾರಣದಿಂದಾಗಿ ರಷ್ಯಾವನ್ನು ದೂರ ಮಾಡಿಕೊಳ್ಳುವ ಸ್ಥಿತಿಯಲ್ಲಿ ಭಾರತ ಇಲ್ಲ. ಇಂದಿಗೂ ನಮ್ಮ ರಕ್ಷಣಾ ಅಗತ್ಯಗಳಲ್ಲಿ ಅರ್ಧದಷ್ಟನ್ನು ಪೂರೈಸುತ್ತಿರುವುದು ರಷ್ಯಾ. ಆ ದೇಶದಿಂದ ಸಿಗುವಷ್ಟು ಸುಲಭದಲ್ಲಿ, ಶೀಘ್ರದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ನಮಗೆ ಬೇರೆಲ್ಲಿಂದಲೂ ಸಿಗುವುದಿಲ್ಲ. ರಷ್ಯಾವನ್ನು ದೂರಮಾಡಿಕೊಳ್ಳದಿರಲು ನಮಗೆ ಇನ್ನೂ ಒಂದು ಬಹುಮುಖ್ಯ ಕಾರಣವಿದೆ. ರಷ್ಯಾವೀಗ ಚೀನಾಗೆ ಹತ್ತಿರ. ಆದಾಗ್ಯೂ ಅದು ನಮ್ಮ ವಿರುದ್ಧ ಚೀನಾದ ವಿಸ್ತರಣಾವಾದಿ ಚಟುವಟಿಕೆಗಳನ್ನು ಸಮ್ಮತಿಸುವುದಿಲ್ಲ. ಜತೆಗೆ ಪಾಕಿಸ್ತಾನ ಸಹ ಮಾಸ್ಕೋವನ್ನು ತನ್ನತ್ತ ತಿರುಗಿಸಿಕೊಳ್ಳಲು ಹೆಣಗುತ್ತಿದೆ. ಅದಕ್ಕೆ ಅಧ್ಯಕ್ಷ ಪೂತಿನ್​ರದು ತಣ್ಣನೆಯ ಪ್ರತಿಕ್ರಿಯೆ. ಇಂತಹ ಸನ್ನಿವೇಶದಲ್ಲಿ ನಾವೇನಾದರೂ ರಷ್ಯಾದಿಂದ ದೂರ ಸರಿದರೆ ಚೀನಾ ಮತ್ತು ಪಾಕಿಸ್ತಾನಗಳ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುತ್ತದೆ. ಅದು ನಮಗೆ ಕಂಟಕಕಾರಿ. ಹೀಗಾಗಿ ಚೀನಾವನ್ನು ಹದ್ದುಬಸ್ತಿನಲ್ಲಿಡಲು ಮತ್ತು ಅದರೊಂದಿಗೆ ಪಾಕಿಸ್ತಾನವನ್ನು ಒಂದು ಮಿತಿಯೊಳಗೇ ಕಟ್ಟಿ ಕೂರಿಸಲು ನಮಗೆ ಅಮೆರಿಕಾ ಮತ್ತು ರಷ್ಯಾಗಳೆರಡೂ ಅಗತ್ಯ. ಇಂದು ಯೂಕ್ರೇನ್ ಪರ ನಿಂತರೆ ಅಮೆರಿಕಾ ಪರವಾಗಿ ನಿಂತಂತೆ ಅಂದರೆ ರಷ್ಯಾದ ವಿರುದ್ಧ ಹೋದಂತೆ ಎನ್ನುವ ಸ್ಥಿತಿಯಿರುವ ಈ ಸನ್ನಿವೇಶದಲ್ಲಿ ನಾವು ನಮ್ಮ ಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯ ಹೆಜ್ಜೆಯಿಡಬೇಕಾಗಿದೆ. ಕಳೆದ ಎಂಟು ವರ್ಷಗಳಿಂದ ಭಾರತ ಮಾಡುತ್ತಿರುವುದು ಅದೇ.

    ಯೂಕ್ರೇನ್​ಗೆ ಸೇರಿದ ಕ್ರಿಮಿಯಾ ಪರ್ಯಾಯದ್ವೀಪವನ್ನು 2014ರಲ್ಲಿ ರಷ್ಯಾ ಆಕ್ರಮಿಸಿಕೊಂಡಾಗ ಆ ಕುರಿತಾಗಿ ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆ ಮತ್ತು ಮತದಾನದಲ್ಲಿ ಭಾರತ ಗೈರುಹಾಜರಿಯ ನಿಲುವು ತಳೆಯಿತು. ರಷ್ಯಾ ವಿರುದ್ಧ ದೊಡ್ಡದಾಗಿ ಕೂಗಾಡಿದ ಅಮೆರಿಕಾ ಮತ್ತದರ ಯಾವ ಮಿತ್ರದೇಶವೂ ಕ್ರಿಮಿಯಾವನ್ನು ಮರಳಿ ಪಡೆಯಲು ಯೂಕ್ರೇನ್​ಗೆ ಸ್ಪಷ್ಟ ಹಾಗೂ ನಿರ್ಣಾಯಕ ಸಹಕಾರ ನೀಡದ ಹಿನ್ನೆಲೆಯಲ್ಲಿ ಭಾರತ ತಳೆದ ನಿಲುವು ಅರ್ಥಪೂರ್ಣವಷ್ಟೇ ಅಲ್ಲ ಅತ್ಯಂತ ವ್ಯಾವಹಾರಿಕವೂ ಆಗಿತ್ತು. ಮಾತಿನ ಮಲ್ಲರ ಜತೆಗೂಡುವುದು ಅರ್ಥಹೀನವಷ್ಟೇ ಅಲ್ಲ, ಸ್ವಹಿತಘಾತಕ ಸಹ. ಭಾರತ ಇಂದೂ ಅದೇ ನೀತಿ ಅನುಸರಿಸುತ್ತಿದೆ. ಮೂರು ವಾರಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ನಡೆದ ಚರ್ಚೆ ಮತ್ತು ಮತದಾನದಲ್ಲೂ ಭಾರತ ಗೈರುಹಾಜರಿಯ ನೀತಿಗೆ ಅಂಟಿಕೊಂಡಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಭಾರತದ ಅಲಿಪ್ತತೆ ಅಂದರೆ ನಿರ್ಲಿಪ್ತತೆಯಲ್ಲ. ಅಮೆರಿಕಾ ಒತ್ತುನೀಡುವ ಯೂಕ್ರೇನ್​ನ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತಲೇ ರಷ್ಯಾದ ಸ್ವಸುರಕ್ಷಾ ಕಾಳಜಿಗಳನ್ನು ಪಶ್ಚಿಮ ಜಗತ್ತು ಅರ್ಥಮಾಡಿಕೊಂಡು ಸ್ಪಂದಿಸಬೇಕೆಂಬ ಅರ್ಥಪೂರ್ಣ ನಿಲುವನ್ನು ಭಾರತ ತಳೆದಿದೆ.

    ಇಲ್ಲಿ ಭಾರತಕ್ಕೆ ಆರ್ಥಿಕ ಹಿತಾಸಕ್ತಿಗಳೂ ಮುಖ್ಯವೆನಿಸುತ್ತವೆ. ಕಳೆದ ವರ್ಷ ಭಾರತ-ರಷ್ಯಾ ವ್ಯಾಪಾರ 8 ಬಿಲಿಯನ್ ಡಾಲರ್​ಗಳಷ್ಟಿದ್ದರೆ ಭಾರತ-ಯೂಕ್ರೇನ್ ವಹಿವಾಟು ಕೇವಲ 2.7 ಬಿಲಿಯನ್ ಡಾಲರ್​ಗಳಷ್ಟಿತ್ತು. ಅಲ್ಲದೇ ಕಳೆದ ವರ್ಷವಷ್ಟೇ 25 ಬಿಲಿಯನ್ ಡಾಲರ್​ಗಳ ಭಾರಿ ಮೊತ್ತದಲ್ಲಿ ರಷ್ಯಾದಿಂದ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಭಾರತ ಸಹಿಹಾಕಿದೆ. ಆ ಪ್ರಮಾಣದ ಅನಿಲ ನಮ್ಮ ಕೈತಪ್ಪಿಹೋದರೆ ನಮ್ಮ ಮುಂದಿನ ಹತ್ತು ವರ್ಷಗಳ ಅನಿಲಯೋಜನೆಗೆ ಭಾರಿ ಪೆಟ್ಟುಬೀಳುತ್ತದೆ.

    ನೈಸರ್ಗಿಕ ಅನಿಲದ ಜತೆಗೆ ಇಲ್ಲಿ ಅಡುಗೆ ಅನಿಲದ ಪ್ರಶ್ನೆಯೂ ಏಳುತ್ತದೆ. ಕಳೆದವರ್ಷ ಯೂಕ್ರೇನ್​ನಿಂದ ಭಾರತ 1.7 ಮಿಲಿಯನ್ ಟನ್ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಂಡಿತು. ಈ ವರ್ಷ ಅದಕ್ಕೆ ಹೊಡೆತ ಬೀಳುತ್ತಿದೆ. ಆದರೆ ಪರಿಸ್ಥಿತಿಯನ್ನು ಮನಗಂಡ ಭಾರತ ಅಡುಗೆ ಎಣ್ಣೆಗಾಗಿ ಬ್ರೆಜಿಲ್ ಮತ್ತು ಅರ್ಜೆಂಟೀನಾಗಳತ್ತ ಮುಖಮಾಡಿದೆ. ಇದೆಲ್ಲದರ ಅರ್ಥ ಪ್ರಸಕ್ತ ಸಂಘರ್ಷ ತನ್ನ ರಕ್ಷಣಾ ಹಾಗೂ ಆರ್ಥಿಕ ಹಿತಾಸಕ್ತಿಗಳಿಗೆ ಹಾನಿಕರವಾಗಿ ಪರಿಣಮಿಸದಂತೆ ನೋಡಿಕೊಳ್ಳುವ ವ್ಯಾವಹಾರಿಕ ಜಾಣತನವನ್ನು ಭಾರತ ಪ್ರದರ್ಶಿಸುತ್ತಿದೆ.

    (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts