More

    ಕನ್ನಡ ಭಾಷೆಯ ಪ್ರಾಚೀನತೆ, ಅನನ್ಯತೆ: ನರಹಳ್ಳಿ ಬಾಲಸುಬ್ರಹ್ಮಣ್ಯ

    ಕನ್ನಡ ಭಾಷೆಯ ಪ್ರಾಚೀನತೆ, ಅನನ್ಯತೆ: ನರಹಳ್ಳಿ ಬಾಲಸುಬ್ರಹ್ಮಣ್ಯ| ನರಹಳ್ಳಿ ಬಾಲಸುಬ್ರಹ್ಮಣ್ಯ

    ಒಂದು ಭಾಷೆಯ ಚರಿತ್ರೆಯೆಂದರೆ ಅದು ಭಾಷೆಯ ಬೆಳವಣಿಗೆಯನ್ನು ಮಾತ್ರ ಗುರ್ತಿಸುವುದಲ್ಲ; ಆ ಭಾಷೆಯನ್ನಾಡುವ ಜನರ ಸಾಮಾಜಿಕ, ಸಾಂಸ್ಕೃತಿಕ ಕಥನವೂ ಹೌದು.

    ಮನುಷ್ಯನ ವೈಜ್ಞಾನಿಕ ಸಂಶೋಧನೆಗಳ ಸಾಧನೆಗಳಲ್ಲಿ ಭಾಷೆಯನ್ನು ಅವನು ಕಂಡುಕೊಂಡದ್ದು ಅತ್ಯಂತ ಮಹತ್ವದ್ದು. ಮನುಷ್ಯನಿಗೆ ಭಾಷೆ ನಿಸರ್ಗದತ್ತ ಕೊಡುಗೆಯಲ್ಲ; ಸ್ವಾಭಾವಿಕ ಸಹಜ ಕ್ರಿಯೆಯಲ್ಲ. ಇದು ಕಲಿಕೆಯಿಂದ ಬರುವಂಥದು. ಚಾಮ್್ಕ ಹೇಳುವಂತೆ ಮನುಷ್ಯನಲ್ಲಿ ಪರಿಸರದ ಭಾಷೆಯನ್ನು ಕಲಿಯುವ ಶಕ್ತಿ ಸಹಜವಾಗಿರುತ್ತದೆ. ವ್ಯಾಕರಣದ ಜ್ಞಾನವಿಲ್ಲದೆಯೂ ಅನುಕರಣೆಯಿಂದ ನಾವು ಭಾಷೆಯನ್ನು ಕಲಿಯಬಲ್ಲೆವು. ಜಗತ್ತಿನ ಭಾಷೆಗಳನ್ನು ಹಲವು ಭಾಷಾ ಪರಿವಾರಗಳನ್ನಾಗಿ ವಿಭಾಗಿಸಿದ್ದಾರೆ. ಅವುಗಳಲ್ಲಿ ದ್ರಾವಿಡ ಭಾಷಾ ಪರಿವಾರವೂ ಒಂದು. ಕನ್ನಡ ದ್ರಾವಿಡ ಭಾಷಾ ಪರಿವಾರಕ್ಕೆ ಸೇರಿದೆ.

    ಕನ್ನಡ ಭಾಷೆಗೆ ಸುಮಾರು ಎರಡು ಸಾವಿರ ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ನಮ್ಮ ಭಾಷೆಯ ಪ್ರಾಚೀನತೆಯನ್ನು ಗುರ್ತಿಸಲು ಇರುವ ಪ್ರಮುಖ ಆಧಾರವೆಂದರೆ ಶಾಸನಗಳು. ಕ್ರಿಪೂ ಮೂರನೆಯ ಶತಮಾನದ್ದೆಂದು ಹೇಳುವ ಅಶೋಕನ ಒಂದು ಶಾಸನ ಬ್ರಹ್ಮಗಿರಿಯಲ್ಲಿಯೂ, ಮತ್ತೊಂದು ಶಾಸನ ಸನಿಹದ ಸಿದ್ಧಾಪುರದಲ್ಲಿಯೂ ಸಿಗುತ್ತವೆ. ಅಶೋಕನ ಶಾಸನದಲ್ಲಿ ಬರುವ ‘ಇಸಿಲ’ ಎಂಬ ಪದ ಕನ್ನಡ ಪದವೆಂದು ಡಿ.ಎಲ್.ನರಸಿಂಹಾಚಾರ್ ಅಭಿಪ್ರಾಯಪಡುತ್ತಾರೆ. ಅಂದರೆ ಕ್ರಿಪೂ ಮೂರನೆಯ ಶತಮಾನದ ವೇಳೆಗೇ ಕನ್ನಡ ಬಳಕೆಯಲ್ಲಿತ್ತೆಂದು ಹೇಳಬಹುದು. ಇತ್ತೀಚೆಗೆ ಷ. ಶೆಟ್ಟರ್ ಈ ವಾದವನ್ನು ಒಪ್ಪದೆ, ‘ಇಸಿಲ’ಕನ್ನಡ ಪದವಲ್ಲ, ಪ್ರಾಕೃತ ಪದ ಎಂದು ವಾದಿಸುತ್ತಾರೆ. ಆದರೆ ಅದೇ ಕಾಲಮಾನದ ಪ್ರಾಕೃತ ಶಾಸನಗಳಲ್ಲಿ ‘ಕೂಪಣ’(ಕೊಪ್ಪಳ), ‘ವನವಾಸಿಕ’(ಬನವಾಸಿ) ಎಂಬ ಸ್ಥಳನಾಮಗಳ ಕನ್ನಡ ಪದಗಳು ಸಿಗುವುದನ್ನು ಅವರು ಗುರ್ತಿಸಿ, ಕನ್ನಡ ಭಾಷೆ ಕ್ರಿಪೂ ಮೂರನೆಯ ಶತಮಾನದಲ್ಲಿಯೇ ಬಳಕೆಯಲ್ಲಿತ್ತೆಂದು ಹೇಳುತ್ತಾರೆ. ಕ್ರಿಶ ಎರಡನೆಯ ಶತಮಾನದ ಶಾತವಾಹನ ವಂಶದ ಹಾಲರಾಜನ ಪ್ರಾಕೃತ ಭಾಷೆಯಲ್ಲಿರುವ ‘ಗಾಥಾಸಪ್ತಶತಿ’ಯಲ್ಲಿ ಸಿಗುವ ಕನ್ನಡ ಪದಗಳ ಬಳಕೆ; ಕ್ರಿಶ ಐದನೆಯ ಶತಮಾನದ ಹಲ್ಮಿಡಿ ಶಾಸನ ಹಾಗೂ ಅದಕ್ಕೂ ಮೊದಲು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ತಾಗರ್ತಿಯಲ್ಲಿ ಸಿಗುವ ತಾಮ್ರಪಟ ಶಾಸನಗಳಲ್ಲಿ ನಾವು ಸ್ಪಷ್ಟವಾಗಿ ಕನ್ನಡ ಭಾಷೆಯ ಬಳಕೆಯನ್ನು ಕಾಣುತ್ತೇವೆ. ನಂತರದ ಬಾದಾಮಿ ಶಾಸನವಂತೂ ಕನ್ನಡ ಹೇಗೆ ಸಾಹಿತ್ಯಭಾಷೆಯಾಗಿ ರೂಪುಗೊಂಡಿತ್ತು ಎಂಬುದನ್ನು ತೋರಿಸುತ್ತದೆ.

    ಮೊದಲ ಸಹಸ್ರಮಾನದಲ್ಲಿ ಸುಮಾರು 2020 ಕನ್ನಡ ಶಾಸನಗಳು ಸಿಗುತ್ತವೆ. ಇಷ್ಟೊಂದು ಸಂಖ್ಯೆಯ ಶಾಸನಗಳು ಭಾರತದ ಬೇರೆ ಯಾವ ಪ್ರಾಂತೀಯ ಭಾಷೆಯಲ್ಲಿಯೂ ಸಿಗುವುದಿಲ್ಲ. ಕನ್ನಡದ ಬಳಕೆ ಅಷ್ಟು ವ್ಯಾಪಕವಾಗಿತ್ತು. ಇದು ಆರಂಭ ಕಾಲದ ಅಕ್ಷರ ಇತಿಹಾಸದಲ್ಲಿ ಕನ್ನಡಕ್ಕೆ ಎಷ್ಟು ಮಹತ್ವದ ಸ್ಥಾನವಿತ್ತು ಎಂಬುದನ್ನು ಸೂಚಿಸುತ್ತದೆ. ಹಾಗೆ ನೋಡಿದರೆ ದ್ರಾವಿಡ ಪರಿವಾರದ ಲಿಪಿ ಇತಿಹಾಸದಲ್ಲಿಯೂ ಪ್ರಾಚೀನವೆಂದು ಹೇಳುವ ತಮಿಳಿಗಿಂತ ಮೊದಲು ಕನ್ನಡ ತನ್ನ ಲಿಪಿಯನ್ನು ರೂಪಿಸಿಕೊಂಡಿತು. ಸಾಮಾನ್ಯವಾಗಿ ಕನ್ನಡ ಸಂಸ್ಕೃತದಿಂದ ಪ್ರಭಾವಿತವಾಗಿದೆ ಎಂಬುದು ರೂಢಿಯ ಮಾತು. ಅದು ಸರಿಯೆ. ಆದರೆ ಸಂಸ್ಕೃತವೂ ಕನ್ನಡದಿಂದ ಪ್ರಭಾವಿತವಾಗಿದೆ ಎಂಬುದು ನಾವು ಗಮನಿಸಬೇಕಾದ ಸಂಗತಿ.

    ಒಂದು ರಾಜ್ಯ ಅಥವಾ ಸಾಮ್ರಾಜ್ಯದ ನಿರ್ವಣಕ್ಕೆ ಮೊದಲು ಭಾಷೆಯ ನಿರ್ವಣವಾಗಬೇಕು ಹಾಗೂ ಭಾವೀ ರಾಜ್ಯದ ಅಸ್ತಿವಾರ ನಕ್ಷೆಯನ್ನು ಭಾಷೆಯಲ್ಲಿ ಸಿದ್ಧಪಡಿಸಿಕೊಳ್ಳಬೇಕು ಎಂಬ ತಾತ್ವಿಕ ಹಿನ್ನೆಲೆಯಲ್ಲಿ ರೂಪುಗೊಂಡ ಕನ್ನಡದ ಮೊದಲ ಕೃತಿ ‘ಕವಿರಾಜಮಾರ್ಗ’ ಒಂದು ಲಕ್ಷಣಗ್ರಂಥವಾಗಿ ಮಾತ್ರವಲ್ಲ, ಜಗತ್ತಿನ ಪ್ರಮುಖ ರಾಜಕೀಯ ಚಿಂತನೆಯ ಕೃತಿಗಳಲ್ಲಿ ಒಂದು ಎಂಬ ಮಾನ್ಯತೆ ಪಡೆದಿದೆ. ಭಾರತದ ರಾಜಕೀಯ ಇತಿಹಾಸದಲ್ಲಿ ಜನಪದರಾಜ್ಯ-ಗ್ರಾಮರಾಜ್ಯ ನಂದರ ಕಾಲದಲ್ಲಿ ಸಾಮ್ರಾಜ್ಯಯುಗಕ್ಕೆ ಪರಿವರ್ತನೆಯಾದರೆ ನೃಪತುಂಗನ ಕಾಲದಲ್ಲಿ ಈ ಸಾಮ್ರಾಜ್ಯಯುಗವು ಭಾಷಾರಾಜ್ಯಗಳ- ಪ್ರದೇಶರಾಜ್ಯಗಳ ಯುಗಕ್ಕೆ ಪರಿವರ್ತನೆಗೊಳ್ಳಲು ‘ಕವಿರಾಜಮಾರ್ಗ’ದಂತಹ ಕೃತಿ ಕಾರಣವಾಯಿತು. ಕೆ.ವಿ.ಸುಬ್ಬಣ್ಣನವರು ಹೇಳುವಂತೆ ಕೌಟಿಲ್ಯನು ರಚಿಸಿದ ‘ಮಂತ್ರಿ-ಪ್ರಭು-ವೀರಶಕ್ತಿ’ ಎಂಬ ರಾಜ್ಯಸೂತ್ರಕ್ಕೆ ಪರ್ಯಾಯವಾಗಿ ‘ಕವಿರಾಜಮಾರ್ಗ’ ‘ಭಾಷಾಶಕ್ತಿ-ಜನಶಕ್ತಿ-ರಾಜಶಕ್ತಿ’ ಎಂಬ ಹೊಸ ರಾಜ್ಯಸೂತ್ರವನ್ನು ಮಂಡಿಸುತ್ತದೆ. ಪರಾಕ್ರಮ ರಾಜಕಾರಣಕ್ಕೆ ಬದಲಾಗಿ ಒಂದು ಭಾಷಾಚಹರೆಯುಳ್ಳ ಜನಪದವೇ ಕೇಂದ್ರವಾಗಿರುವ ಸಂಯಮ ರಾಜಕಾರಣದ ಭಾಷಾರಾಜ್ಯವನ್ನು ‘ಕವಿರಾಜಮಾರ್ಗ’ ಪ್ರತಿಪಾದಿಸುತ್ತದೆ. ಇದು ಭಾರತದ ರಾಜಕಾರಣಕ್ಕೆ ಮಾತ್ರವಲ್ಲ, ಜಾಗತಿಕ ರಾಜಕಾರಣಕ್ಕೂ ಕನ್ನಡ ಚಿಂತನೆ ಕೊಟ್ಟ ಮಹತ್ವದ ಕೊಡುಗೆ. ಇದರಲ್ಲಿ ಬರುವ ‘ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ, ಧರ್ಮಮುಮಂ’ (ನಿಜವಾದ ಸಂಪತ್ತೆಂದರೆ ಅನ್ಯವಿಚಾರಗಳನ್ನು ಪರಧರ್ಮವನ್ನು ತಾಳಿಕೊಳ್ಳುವುದು) ಎಂಬ ಮಾತುಗಳಂತೂ ಕನ್ನಡ ಮನಸ್ಸು ಎಷ್ಟು ಉದಾತ್ತವಾಗಿ ಚಿಂತಿಸುತ್ತಿತ್ತು ಎಂಬುದಕ್ಕೆ ನಿದರ್ಶನ.

    ವಚನಸಾಹಿತ್ಯವಂತೂ ಜಾಗತಿಕ ಸಾಹಿತ್ಯದಲ್ಲಿ ವಿಶಿಷ್ಟವೆಂದು ಗುರ್ತಿಸಲ್ಪಟ್ಟಿದೆ. ದೈವದೊಡನೆ ಸಂಸ್ಕೃತದಲ್ಲಿ ಮಾತ್ರ ಮಾತನಾಡಬಹುದು ಎಂಬ ವಾತಾವರಣದ ಸಂದರ್ಭದಲ್ಲಿ ದೈವದೊಡನೆ ಕನ್ನಡದಲ್ಲಿಯೂ ಮಾತನಾಡಬಹುದು ಎಂದು ತೋರಿಸಿಕೊಟ್ಟವರು ವಚನಕಾರರು. ಶ್ರೇಣೀಕರಣ ಸಾಮಾಜಿಕ ವ್ಯವಸ್ಥೆಯನ್ನು ಧಿಕ್ಕರಿಸಿ, ಸಾಮಾಜಿಕ ಮೌಲ್ಯಗಳನ್ನೇ ಧಾರ್ವಿುಕ ಮೌಲ್ಯಗಳನ್ನಾಗಿ ರೂಪಾಂತರಿಸಿ ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರು ಎಂಬ ನಿಲವಿನಲ್ಲಿ ಧರ್ಮದ ವ್ಯಾಖ್ಯಾನ ಮಾಡಿದ ವಚನಸಾಹಿತ್ಯ ವಿಶಿಷ್ಟವಾದುದು. ದಯವೇ ಧರ್ಮದ ಮೂಲವಯ್ಯಾ!- ಬಹುಶಃ ಜಗತ್ತಿನ ಯಾವ ಭಾಷೆಯಲ್ಲಿಯೂ ಧರ್ಮದ ಸಾರವನ್ನು ಇಷ್ಟು ಸರಳವಾಗಿ, ಇಷ್ಟು ಪರಿಣಾಮಕಾರಿಯಾಗಿ ಹೇಳಿದ ನಿದರ್ಶನ ವಿರಳ.

    ಕವಿರಾಜಮಾರ್ಗ, ವಚನಸಾಹಿತ್ಯ ಇವು ಒಂದೆರಡು ನಿದರ್ಶನಗಳು ಮಾತ್ರ. ಕನ್ನಡ ಪರಂಪರೆಯನ್ನು ಅಧ್ಯಯನ ಮಾಡಿದವರಿಗೆ ಕನ್ನಡ ಭಾಷೆಯ ಸಂಸ್ಕೃತಿ ಸಂಪದದ ಅರಿವಾಗದಿರದು. ಆಧುನಿಕ ಸಂದರ್ಭದಲ್ಲಿಯೂ ಅತ್ಯಂತ ಎತ್ತರದ, ವೈವಿಧ್ಯಮಯವಾದ ಅನೇಕ ಪ್ರತಿಭೆಗಳನ್ನು ನಾವು ಕಾಣುತ್ತೇವೆ.

    ಜಗತ್ತಿನ ಪ್ರಮುಖ ಭಾಷೆಗಳ ಸಾಲಿನಲ್ಲಿ ಪ್ರಾಚೀನತೆ ಹಾಗೂ ಪ್ರತಿಭೆ ಎರಡೂ ನೆಲೆಯಲ್ಲಿ ನಿಸ್ಸಂದೇಹವಾಗಿ ಕನ್ನಡಕ್ಕೆ ಮಹತ್ವದ ಸ್ಥಾನವಿದೆ.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts