More

    ಹೀಗಿರುತ್ತೆ ನಾಮ್ ಕೆ ವಾಸ್ತೆ ಸಂಘಟನೆಗಳ ಹೊಂದಾಣಿಕೆಯ ಹೋರಾಟ…

    | ಮೋಹನದಾಸ ಕಿಣಿ ಕಾಪು

    ನಾಡು-ನುಡಿ, ನೆಲ-ಜಲ, ಕಾರ್ಮಿಕ-ಧಾರ್ಮಿಕ, ಚಾಲಕ-ಮಾಲಕ ಹೀಗೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಂಘಟನೆಗಳಿವೆ, ದಿನಬೆಳಗಾದರೆ ಇನ್ನಷ್ಟು ಮತ್ತಷ್ಟು ಹುಟ್ಟಿಕೊಳ್ಳುತ್ತವೆ. ಆದರೆ ನಿಜವಾಗಿಯೂ ತಮ್ಮ ಸದಸ್ಯರ ನೋವು-ಸಂಕಟಗಳಿಗೆ ಧ್ವನಿಯಾಗುವ ಪ್ರಾಮಾಣಿಕ ನಾಯಕತ್ವದ ಸಂಘಟನೆಗಳು ಎಷ್ಟು? ಹಾಗೆ ಹುಟ್ಟಿಕೊಳ್ಳುವ ಸಂಘಟನೆಗಳು ಯಾವ ಉದ್ದೇಶದಿಂದ ಅಸ್ಥಿತ್ವಕ್ಕೆ ಬಂದಿವೆಯೋ ಅದೇ ಉದ್ದೇಶಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತವೆಯೇ ಎಂದು ಪ್ರಶ್ನಿಸಿದರೆ ಬಹುತೇಕ ಪ್ರಕರಣಗಳಲ್ಲಿ ಉತ್ತರ- “ಇಲ್ಲ” ಎಂದೇ ಇರುತ್ತದೆ. ಆದರೆ ಪ್ರಾಮಾಣಿಕವಾಗಿ ದುಡಿದು ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಿದ ಸಂಘಟನೆಗಳೂ ಇವೆ. ಕಾಳಿಗಿಂತ ಜೊಳ್ಳು ಹೆಚ್ಚು ಎಂಬಂತೆ ಕೇವಲ ಸ್ವಾರ್ಥ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ಉದ್ದೇಶದಿಂದ ಅಸ್ಥಿತ್ವಕ್ಕೆ ಬಂದು ಆರಂಭದಲ್ಲಿ ಪ್ರಾಮಾಣಿಕವಾಗಿದ್ದರೂ ಕಾಲಾಂತರದಲ್ಲಿ ಪರಿವರ್ತನೆ ಹೊಂದಿದ “ಲೆಟರ್ ಹೆಡ್” ಅಥವಾ “ನಾಮಕೇವಾಸ್ತೆ” ಸಂಘಟನೆಗಳ ಕುರಿತಂತೆ ನಾನು ಸ್ವತಃ ಅನುಭವಿಸಿದ ಬವಣೆ, ಕೇಳಿದ, ನೋಡಿದ ಘಟನೆಗಳನ್ನಾಧರಿಸಿ ಚಿಕ್ಕದೊಂದು ಪ್ರಸ್ತುತಿ ಇಲ್ಲಿದೆ.

    ●ಮೊದ ಮೊದಲು ಭಾಷೆಯ ಏಳಿಗೆಯನ್ನು ಮುಖ್ಯ ಕಾರ್ಯಸೂಚಿಯಾಗಿಟ್ಟುಕೊಂಡ ಸಂಘಟನೆಗಳು ರಾಜ್ಯಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಕ್ರಮೇಣ ಸಂಘಟನೆಯ ಶಾಖೆಗಳು ಜಿಲ್ಲಾ ಮಟ್ಟದಲ್ಲಿ ಆರಂಭವಾದವು. ಬಳಿಕ ಅದರ ಪದಾಧಿಕಾರಿಗಳು ಸಂಘಟನೆಯ ಮೂಲ ಉದ್ದೇಶದಿಂದ ವಿಮುಖವಾಗಿ ಸ್ವ-ಹಿತಾಸಕ್ತಿಯ ಚಟುವಟಿಕೆಗಳತ್ತ ಹೊರಳಿದರು. ತದನಂತರ ಅಂತಹ ಸಂಘಟನೆಗಳ ಪದಾಧಿಕಾರಿಗಳ ಕಾರ್ಯಾಚರಣೆ ವಿಧಾನವೇ ಬದಲಾಯಿತು. ಸರಕಾರಿ ಅಧಿಕಾರಿಗಳನ್ನು/ನೌಕರರನ್ನು ಗುರಿಯಾಗಿಸಿಕೊಂಡು ಪೀತ ಪತ್ರಿಕೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕಪೋಲಕಲ್ಪಿತ ಸುದ್ದಿಗಳನ್ನು ಪ್ರಕಟಿಸುವುದು, ಇಲಾಖೆಯ ಮೇಲಧಿಕಾರಿಗಳಿಗೆ, ಜಾಗೃತ ದಳಕ್ಕೆ ದೂರು ಬರೆದಂತೆ ದಾಖಲೆ ಸೃಷ್ಟಿಸಿ, ಅದು ಸಂಬಂಧಿಸಿದ ಅಧಿಕಾರಿಯ/ನೌಕರರ ಗಮನಕ್ಕೆ ಬರುವಂತೆ ಮಾಡುವುದು. ಬಳಿಕ ಸಂಘಟನೆಯ ಪದಾಧಿಕಾರಿಯ ಹೆಸರಿನಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿ, “ನಿಮ್ಮ ಮೇಲೆ ದೂರು ಬಂದಿದೆ ಎನ್ನುತ್ತಾ, “ಇಂತವರನ್ನು ಭೇಟಿಯಾಗಲು” ಸೂಚಿಸುವುದು. ನಿಜವಾಗಿಯೂ ಅಂತಹ ನೌಕರರು/ ಅಧಿಕಾರಿ ಭ್ರಷ್ಟರಾಗಿದ್ದರೆ, ಅಂತಹ ದೂರವಾಣಿಗೆ ಸ್ಪಂದಿಸಿ “ಹೊಂದಾಣಿಕೆ”ಗೆ ಮುಂದಾಗುತ್ತಾರೆ. ಅಥವಾ ಮರ್ಯಾದೆಗೆ ಅಂಜಿ ರಾಜಿಗೆ ಸಿದ್ಧರಾಗುತ್ತಾರೆ. ಹೀಗಾದರೆ ಸಂಘಟನೆಯ ಮೂಲ ಉದ್ದೇಶ ಎಲ್ಲಿಗೆ ಹೋಯಿತು?

    ●ಆಸ್ಪತ್ರೆಗಳಲ್ಲಿ ಯಾವುದಾದರೂ ರೋಗಿ ಹೆರಿಗೆಯಲ್ಲಿ ಅಥವಾ ಇನ್ಯಾವುದೋ ಕಾರಣಕ್ಕೆ ಮೃತಪಟ್ಟರೆ ಅದಕ್ಕೆ ವೈದ್ಯಕೀಯ ನಿರ್ಲಕ್ಷದ ಹಣೆಪಟ್ಟಿ ಕಟ್ಟಿ ಗದ್ದಲವೆಬ್ಬಿಸಲಾಗುತ್ತದೆ. ಅದು ನಿಜವಿರಲಿ, ಸುಳ್ಳಿರಲಿ‌. ವೈದ್ಯಕೀಯ ನಿರ್ಲಕ್ಷ್ಯಕ್ಕೆ ಸಾಕಷ್ಟು ಕಾನೂನುಗಳಿವೆ. ಆಸ್ಪತ್ರೆಯ ಆಸ್ತಿ ಪಾಸ್ತಿಗೆ, ವೈದ್ಯರಿಗೆ ಅಥವಾ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಇತ್ಯಾದಿಗಳ ನಿಯಂತ್ರಣಕ್ಕೆ ಕಠಿಣವಾದ ಕಾಯಿದೆಯೂ ಇದೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಶಿಸ್ತು ಕ್ರಮಕ್ಕೆ, ಖಾಸಗಿ ಆಸ್ಪತ್ರೆಯ ಆಡಳಿತ ವರ್ಗ ಆಸ್ಪತ್ರೆಯ ಹೆಸರು ಹಾಳಾಗುತ್ತದೆಂಬ ಕಾರಣಕ್ಕೆ ಹೆದರಿ “ಸೂಕ್ತ ಹೊಂದಾಣಿಕೆಗೆ” ಮುಂದಾಗುತ್ತಾರೆ. “ಸಂಘಟನೆಯ ಪದಾಧಿಕಾರಿಗಳ” ಉದ್ದೇಶ ಈಡೇರುತ್ತದೆ. ಇಂತಹ ಬಹಳಷ್ಟು ಘಟನೆಗಳನ್ನು ಸ್ವತಃ ನೋಡಿದ್ದೇನೆ. ಹೊರನೋಟಕ್ಕೆ ಇದು ಕಾಣಿಸುವುದಿಲ್ಲ.

    ●ಸಾರ್ವಜನಿಕ ಹಿತಾಸಕ್ತಿಯ ಕೆಲವು ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವುದು ಅಗತ್ಯವಾದಾಗ, ಟೆಂಡರ್ ಪ್ರಕ್ರಿಯೆ ಪೂರ್ಣವಾಗುವ ಮೊದಲೇ ಸರಕಾರಿ ವೆಚ್ಚದಲ್ಲಿ ಅಥವಾ ದಾನಿಗಳ ನೆರವಿನಿಂದ ಮಾಡಿಸಲಾಗುತ್ತದೆ. ಒಂದು ಪ್ರಕರಣದಲ್ಲಿ, ಮಳೆಗಾಲ ಆರಂಭವಾಗುವ ಮೊದಲು ಕಾಮಗಾರಿ ಮುಗಿಸ ಬೇಕಾಗಿರುವುದರಿಂದ ಒಳ್ಳೆಯ ಉದ್ದೇಶದಿಂದ ಬಸ್ಸು ನಿಲ್ದಾಣದ ನವೀಕರಣ ಆರಂಭಿಸಲಾಯಿತು. ಕಾಮಗಾರಿ ಆರಂಭಿಸುವ ಪೂರ್ವದಲ್ಲಿ ಹಿಂದಿನ ನಿಲ್ದಾಣವನ್ನು ಕೆಡವಿ, ನೆಲವನ್ನು ಅಗೆದು ಸಮತಟ್ಟು ಮಾಡಲಾಯಿತು. ಅಲ್ಲಿನ ತನಕ ಸುಮ್ಮನಿದ್ದ, ಓರ್ವ “ಸಾಮಾಜಿಕ ಕಾರ್ಯಕರ್ತರು” (ಇದರಿಂದ ಆಗುವ ಸಮಾಜಸೇವೆ ಯಾವುದೋ, ದೇವರೇ ಬಲ್ಲ) ನಿಯಮಪಾಲನೆ ಆಗಿಲ್ಲವೆಂದು ಗದ್ದಲವೆಬ್ಬಿಸಿದರು. ಗುತ್ತಿಗೆದಾರರು “ಹೊಂದಾಣಿಕೆ” ಮಾಡಿಕೊಂಡ ಕೂಡಲೇ ಹೋರಾಟ ಮುಕ್ತಾಯ! ನಿಜಕ್ಕೂ ಅವರದು ಪ್ರಾಮಾಣಿಕ ಕಾಳಜಿ ಎಂದಾದರೆ, ಹೋರಾಟ ನಿಂತುಹೋಗುವುದಾದರೂ ಹೇಗೆ?

    ●ದೊಡ್ಡ ಕಚೇರಿಗಳನ್ನು ಗುರಿಯಾಗಿಸಿಕೊಂಡು, ಕೆಲವೊಮ್ಮೆ ಅಧಿಕಾರಿಗಳ ಅಥವಾ ನೌಕರರ ಖಾಸಗಿ ವಿಚಾರಗಳನ್ನು ಗುರಿಯಾಗಿಸಿ, ಕಪೋಲಕಲ್ಪಿತ, ವರ್ಣರಂಜಿತ ಲೇಖನಗಳನ್ನು ಮುದ್ರಿಸಿ ಅವರು ಕೆಲಸ ಮಾಡುವ ಕಚೇರಿಗೆ, ಅಕ್ಕಪಕ್ಕದ ಕಚೇರಿಗಳಿಗೆ ಹಂಚುತ್ತಾರೆ. ಅವರ ಮೇಲೆ ಕಹಿಯಿರುವ ಕೆಲವರು ಇದನ್ನು ಉಪ್ಪು ಖಾರ ಹಚ್ಚಿ ಹರಡುತ್ತಾರೆ. ಹುಳುಕು ಇರುವವರು ಇಂಗು ತಿಂದ ಮಂಗನಂತೆ, ಇತರರು ಮರ್ಯಾದೆಗೆ ಅಂಜಿ “ಹೊಂದಾಣಿಕೆಗೆ” ಮುಂದಾಗುತ್ತಾರೆ. ಇಂತಹ ಪ್ರಕರಣದಲ್ಲಿ ಕಾನೂನು ಹೋರಾಟಕ್ಕೆ ಮೇಲಧಿಕಾರಿಗಳ ಅನುಮತಿಯ ಅಗತ್ಯವಿದೆ. ವಿಪರ್ಯಾಸವೆಂದರೆ ಇಂತಹ ಅನುಮತಿ ಪಡೆಯಲಿಕ್ಕೂ ಲಂಚ ಕೊಡಬೇಕು! ಈ ಎಲ್ಲಾ ರಗಳೆಯೇಕೆಂದು ಪ್ರಾಮಾಣಿಕರೂ ಸುಮ್ಮನಿರುತ್ತಾರೆ. ಈ ಎಲ್ಲಾ ಗುಟ್ಟು ಗೊತ್ತಿರುವ “ಸಮಾಜ (ಸ್ವ-ಮಜ) ಸೇವಕರು” ಒಮ್ಮೊಮ್ಮೆ ಒಂದೊಂದು ಕಚೇರಿಯನ್ನು ಗುರಿಯಾಗಿಸಿ ಕಾರ್ಯ ಸಾಧಿಸಿಕೊಳ್ಳುತ್ತಾರೆ.

    ●ಇನ್ನು ‘ನಾಗರಿಕ ವೇದಿಕೆ’, ‘ಭ್ರಷ್ಟಾಚಾರ ನಿಗ್ರಹ ವೇದಿಕೆ’, ಜಾತಿಯ ಹೆಸರಿನಲ್ಲಿ, ಮಹಿಳಾ ಸಂಘಟನೆ ಹೆಸರಿನಲ್ಲಿ, ಮಾಹಿತಿ ಹಕ್ಕು ಕಾರ್ಯಕರ್ತರ ಸೋಗಿನಲ್ಲಿ, ಮಳೆಗಾಲದ ಅಣಬೆಯಂತೆ ಹುಟ್ಟಿಕೊಳ್ಳುವ ಸಂಘಟನೆಗಳಿವೆ. ಇಂತಹ ಸಂಘಟನೆಗಳು ಒಂದು ಅಥವಾ ಹೆಚ್ಚೆಂದರೆ ಎರಡಂಕಿಷ್ಟು ಸದಸ್ಯರನ್ನು ಹೊಂದಿರುತ್ತವೆ. ಬಣ್ಣ ಬಣ್ಣದ, ದೊಡ್ಡ ದೊಡ್ಡ ಘೋಷಣೆಗಳನ್ನೊಳಗೊಂಡ ಲೆಟರ್ ಹೆಡ್ ಇಷ್ಟೇ ಇವರ ಜೀವಾಳ. ನಂತರದ್ದೆಲ್ಲಾ ಸಂಘಟನೆಗಳ ಸ್ವಯಂಘೋಷಿತ ಪದಾಧಿಕಾರಿಗಳ ಕಾರ್ಯತಂತ್ರವನ್ನು ಅವಲಂಬಿಸಿದೆ. ಅವರ ಸ್ವರ ದೊಡ್ಡದಾದಷ್ಟೂ, ಬೆದರಿಸುವ ತಾಕತ್ತು ಹೆಚ್ಚಿದ್ದಷ್ಟೂ ಸಂಪಾದನೆ ಜಾಸ್ತಿ. ಆದರೆ ಇಂತಹ ಸಂಘಟನೆಗಳ ಆಯಸ್ಸು ಮಾತ್ರ ಕಡಿಮೆ. ಬೆರಳೆಣಿಕೆಯಷ್ಟು ಮಂದಿ (ಕೆಲವೊಮ್ಮೆ ಏಕ ವ್ಯಕ್ತಿ) ಸೇರಿ ರಚಿಸಿದ ಸಂಘಟನೆಯ ನಿರ್ಮಾತೃ ಆರ್ಥಿಕವಾಗಿ ಅಥವಾ ದೈಹಿಕವಾಗಿ ದುರ್ಬಲವಾದರೆ ಸಂಘಟನೆಯೇ ಕಣ್ಮರೆಯಾಗುತ್ತದೆ.

    ●ಭ್ರಷ್ಟಾಚಾರ ವಿರೋಧಿ ಸಂಘಟನೆಯ ಪದಾಧಿಕಾರಿ, ಪತ್ರಕರ್ತ ಎಂದೆಲ್ಲಾ ಹೇಳಿ, ಪಿ.ಡಿ.ಓ. ಒಬ್ಬರಿಗೆ ದೂರವಾಣಿ ಕರೆ ಮಾಡಿ “ಸ್ವಲ್ಪ ನೋಡಿಕೊಳ್ಳಿ” ಎಂದು ಸಾಂಕೇತಿಕವಾಗಿ ಲಂಚ ಕೇಳಿದ್ದನ್ನು ರೆಕಾರ್ಡ್ ಮಾಡಿ ಜಾಲತಾಣಗಳಲ್ಲಿ ಬಿತ್ತರಗೊಳಿಸಿದ್ದು ಇತ್ತೀಚಿನ ಸುದ್ದಿ. ಹೆಸರಿಗೆ “ಭ್ರಷ್ಟಾಚಾರ ವಿರೋಧಿ ವೇದಿಕೆ”!

    ●ನೌಕರರ ಸಂಘಟನೆಗಳು, ಅದು ಕೆಳಸ್ತರದ ಕಾರ್ಮಿಕರಿರಲಿ, ಸರಕಾರಿ ನೌಕರರಿರಲಿ, ವೈದ್ಯಕೀಯ ಅಥವಾ ಇನ್ಯಾವುದೇ ವರ್ಗದ ಸಿಬ್ಬಂದಿ ಸಂಘಟನೆಯಿರಲಿ, ನೌಕರರ ಹಿತಾಸಕ್ತಿ ಪರವಾಗಿ ಅವರಿಗೆ ಸಿಗಬೇಕಾದ ಸೌಲಭ್ಯಕ್ಕಾಗಿ ಹೋರಾಟ ಮಾಡಬೇಕು, ಯಾರಿಗಾದರೂ ಅನ್ಯಾಯವಾದರೆ ಒಗ್ಗಟ್ಟು ಪ್ರದರ್ಶಿಸಬೇಕು. ಅಗತ್ಯವಾದರೆ ಸೋಮಾರಿ ಸದಸ್ಯರಿಗೆ ಚಾಟಿ ಬೀಸುವ ಕೆಲಸ ಕೂಡಾ ಮಾಡಬೇಕು. ವಾಸ್ತವ ಸ್ಥಿತಿ ಹೀಗಿಲ್ಲ. ವ್ಯಕ್ತಿಗತ ದ್ವೇಷ ಸಾಧನೆ, ಕೆಲವೊಮ್ಮೆ ಅನ್ಯಾಯವೆಂದು ಗೊತ್ತಿದ್ದರೂ ದುಡ್ಡು, ಅಧಿಕಾರವಿರುವವರ ಪರವಾಗಿ ಹೋರಾಟಕ್ಕೆ ಮುಂದಾಗುತ್ತಾರೆ. ವರ್ಗಾವಣೆ, ಪದೋನ್ನತಿಯಲ್ಲಿ ಅನ್ಯಾಯವಾದರೂ ಪ್ರಾಮಾಣಿಕ ಕೆಲಸಗಾರರ ಬೆಂಬಲಕ್ಕೆ ಬರುವವರು ಕಡಿಮೆ. ಏಕೆಂದರೆ ಅವರಿಂದ ಏನೂ “ಗಿಟ್ಟುವುದಿಲ್ಲವಲ್ಲ”? ಅದೇ ಸಂಘಟನೆಯ ಪದಾಧಿಕಾರಿಗಳು ತಮ್ಮ ಕೆಲಸ ಮಾಡಿಕೊಳ್ಳಲು ಸಂಘಟನೆಯ ಬಲವನ್ನು ಸದ್ದಿಲ್ಲದೇ ಉಪಯೋಗಿಸುತ್ತಾರೆ. ಅದೆಷ್ಟೋ ಕಾಲದಿಂದ ಅನ್ಯಾಯಕ್ಕೆ ಒಳಗಾದವರು ಪಡಿಪಾಟಲು ಪಡುತ್ತಿದ್ದರೂ ತೆಪ್ಪಗಿದ್ದವರು ಮೊನ್ನೆ ಪದೋನ್ನತಿ ಕೌನ್ಸೆಲಿಂಗ್ ನಡೆದಾಗ ನಾಯಕರೆನಿಸಿಕೊಂಡವರಿಗೆ ಸೂಕ್ತ ಸ್ಥಳ ಸಿಗದಿದ್ದಾಗ ಗದ್ದಲವೆಬ್ಬಿಸಿ ಕಾರ್ಯ ಸಾಧಿಸಿಕೊಂಡಿದ್ದರು.

    ●ತಮ್ಮ ಜಾತಿಯವರಿಗೆ ಅಧಿಕಾರ ಕೊಡಿಸಲು ಹೋರಾಡುವ ಸಂಘಟನೆಗಳು ಸ್ವಜಾತಿಯವರ ಮೇಲೆ ಅನ್ಯ ಧರ್ಮದವರು ಹಲ್ಲೆ ಮಾಡಿದರೆ ತೆಪ್ಪಗಿರುತ್ತಾರೆ. ಜೈನರ ಅಂಗಡಿಯಲ್ಲಿ ಕನ್ನಡದ ಜತೆಗೆ ಹಿಂದಿ ಅಥವಾ ಬೇರೆ ಭಾಷೆ ಇದ್ದರೂ ಪ್ರತಿಭಟಿಸುವವರು, ರೈಲುಗಳ ಫಲಕಕ್ಕೂ ಕಪ್ಪು ಬಳಿಯುವವರು, ಅನ್ಯ ಧರ್ಮದ ಪ್ರಾರ್ಥನಾ ಮಂದಿರದ ಫಲಕದಲ್ಲಿ ಕನ್ನಡ ಇಲ್ಲದಿದ್ದರೂ ಸುಮ್ಮನಿರುತ್ತಾರೆ. ತುಳು, ಕೊಂಕಣಿ, ಕೊಡವ ಭಾಷೆಗಳ ಬಗ್ಗೆ ಅಸಹನೆ ತೋರುವವರು, ತಮಿಳು, ತೆಲುಗು,ಅಥವಾ ಮಲೆಯಾಳಿ ಭಾಷಿಗರ ಪ್ರಾಬಲ್ಯದ ಬಗ್ಗೆ ಜಾಣ ಮೌನ ತೋರಿಸುತ್ತಾರೆ.

    ●ಯಾವುದೇ ವರ್ಗದ ಕಾರ್ಮಿಕರಿಗೆ ಸಂಬಂಧಿಸಿದ ಯಾವುದಾದರೂ ಕಾಯಿದೆ ಅನುಷ್ಠಾನಕ್ಕೆ ಬಂದರೆ, ಆಯಾ ವರ್ಗದ ನೇತಾರರೆನಿಸಿಕೊಂಡವರರು, ಕಾನೂನಿನ ಯುಕ್ತಾಯುಕ್ತ ಪರಾಮರ್ಶೆಗೆ ಹೋಗದೆ (ಇದು ಉದ್ದೇಶ ಪೂರ್ವಕ ಇರಲೂ ಬಹುದು) ಪ್ರತಿಭಟನೆಗೆ ಮುಂದಾಗುತ್ತಾರೆ. ಪ್ರತಿಭಟನೆ ಸರಿಯೋ ತಪ್ಪೋ ಅದು ಒತ್ತಟ್ಟಿಗಿರಲಿ, ಯಾವುದೇ ಸಂದರ್ಭದಲ್ಲಿ ರೈತರಿಗೆ, ಕಾರ್ಮಿಕರಿಗೆ ಅತಿವೃಷ್ಟಿ, ಅನಾವೃಷ್ಟಿ, ದೊಂಬಿ ಅಥವಾ ಮೊನ್ನೆಯಷ್ಟೇ ಕೊರೋನಾ ಲಾಕ್ ಡೌನ್ ಅವಧಿಯಲ್ಲಿ ಸಂಘಟನೆಗಳು ಎಷ್ಟು ಸಹಾಯ ಮಾಡಿದ್ದಾರೆ, ಸಾಲದ ಶೂಲಕ್ಕೆ ಸಿಕ್ಕಿ ಆತ್ಮಹತ್ಯೆಗೆ ಶರಣಾದ, ಸರಿಯಾದ ಬೆಲೆ ಬರಲಿಲ್ಲವೆಂಬ ಕಾರಣಕ್ಕೆ ಬೆಳೆಯನ್ನು ರಸ್ತೆಯಲ್ಲಿ ಹರಡುವ ಮೂಲಕ ಪ್ರತಿಭಟನೆ ಮಾಡಿದಂತಹ ರೈತರ ಬವಣೆಗಳ ಪರಿಹಾರಕ್ಕೆ ಘಟನೆಯ ಮೊದಲು ಅಥವಾ ನಂತರ ಏನು ಮಾಡಿದ್ದಾರೆ? ಸರಕಾರ ಜ್ಯಾರಿಗೊಳಿಸುವ ಯೋಜನೆಗಳ ಲಾಭವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಎಷ್ಟು ಶ್ರಮ-ಕ್ರಮ ವಹಿಸಿದ್ದಾರೆಂದು ನೋಡುವುದು ಬೇಡವೇ?

    ●ಇತ್ತೀಚೆಗಂತೂ ರೈತ ಸಂಘಟನೆಯ ನೇತಾರರೆಂಬ ಹಣೆಪಟ್ಟಿ ಕಟ್ಟಿಕೊಂಡು ಸಾರಿಗೆ ಮುಷ್ಕರಕ್ಕೆ, ಭಾಷೆಯ ಹೆಸರಿನ ನೇತಾರರು ರೈತರು ನಡೆಸುವ ಮುಷ್ಕರಕ್ಕೆ-ಹೀಗೆ ಒಂದಕ್ಕೊಂದು ಸಂಬಂಧವಿಲ್ಲದ ಕ್ಷೇತ್ರದಲ್ಲಿ, ಕೆಲವೊಮ್ಮೆ ಯಾವ ವಿಷಯದಲ್ಲಿ ಹೋರಾಟ ಮಾಡಬೇಕೋ ಅದನ್ನು ಮಾಡದೆ ಎಡೆಬಿಡಂಗಿತನ ತೋರುವ ಪ್ರಕರಣಗಳೂ ಹೆಚ್ಚುತ್ತಿದೆ.

    ●ಭಾಷಾ ಸಂಘಟನೆಯ ಪದಾಧಿಕಾರಿಗಳು ಭಾಷೆ, ಸಾಹಿತ್ಯ, ಅಥವಾ ಕಲಾಪ್ರಾಕಾರದಲ್ಲಿ ನೈಪುಣ್ಯತೆ ಇದ್ದವರಾದರೆ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ತಳಮಟ್ಟದ ಕಾರ್ಮಿಕರಾದರೆ, ಅಥವಾ ಕನಿಷ್ಟ ಎಂದಾದರೂ ಕಾರ್ಮಿಕರಾಗಿ ಅವರ ಶ್ರಮದ ಅರಿವಿದ್ದವರಾದರೆ, ರೈತ ಸಂಘಟನೆ ಪ್ರತಿನಿಧಿಗಳು ಹೊಲದಲ್ಲಿ ದುಡಿಯುವವರಾದರೆ, ಅಂತಹ ಸಂಘಟನೆಗಳನ್ನು ಮಾತ್ರ ಪ್ರಾತಿನಿಧಿಕ ಎನ್ನಬಹುದು.

    ಕೊನೆಯದಾಗಿ: ಎಲ್ಲರೂ ಒಂದೇ ರೀತಿ ಇರುತ್ತಾರೆಂದಲ್ಲ. ವ್ಯಕ್ತಿಗತವಾಗಿ ಸದ್ದಿಲ್ಲದೇ ಕಿಸೆಯಿಂದ ಖರ್ಚು ಮಾಡಿ ಸೇವೆ ಮಾಡುವವರೂ ಇರುತ್ತಾರೆ. ಇವರು ಎಂದಿಗೂ ಎಡವಟ್ಟು ವ್ಯವಹಾರ ಮಾಡುವುದಿಲ್ಲ. ಆದರೆ ಅಂತವರು ಎಂದೆಂದೂ ಎಲೆಮರೆಯ ಕಾಯಿಯಾಗಿಯೇ ಉಳಿದುಬಿಡುತ್ತಾರೆ. ಆದ್ದರಿಂದ ಸಂಘಟನೆಗಳನ್ನು ಯಾವ ಉದ್ದೇಶಕ್ಕಾಗಿ ಸ್ಥಾಪಿಸಲಾಗಿದೆಯೋ, ಆಯಾ ಉದ್ದೇಶದ ಕೆಲಸಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ವರದಿಯನ್ನು ನಿಗದಿಪಡಿಸಿದ ಪ್ರಾಧಿಕಾರದಲ್ಲಿ ದಾಖಲೆಯೊಂದಿಗೆ ಸಲ್ಲಿಸುವುದನ್ನು ಕಡ್ಡಾಯವಾಗಿಸುವ ಕಾನೂನನ್ನು ತಂದು ಕಟ್ಟುನಿಟ್ಟಾಗಿ ಪಾಲಿಸಿದರೆ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ನಿಯಂತ್ರಿಸಬಹುದು.

    (ಲೇಖಕರು, ನಿವೃತ್ತ ಕಚೇರಿ ಅಧೀಕ್ಷಕರು, ಆರೋಗ್ಯ ಇಲಾಖೆ; [email protected])

    ‘ರಾಮ ಮಂದಿರಕ್ಕೆ ನನ್ನೆಲ್ಲ ಆಭರಣ ಅರ್ಪಿಸಿ’ ಹೆಂಡತಿಯ ಕೊನೆಯಾಸೆ ನೆರವೇರಿಸಿದ ಗಂಡ

    ರಾಮ ಮಂದಿರಕ್ಕೆ ಹಣ ಕೊಡದವರ ಮನೆ ಗುರುತು: ಎಚ್.​ಡಿ. ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ವಿಎಚ್​ಪಿ

    VIDEO| ಜಲ್ಲಿಕಟ್ಟು ನೋಡಲು ಬಂದವನಿಗೆ ಗುದ್ದಿದ ಎತ್ತು! ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts