More

    ಮನುಜಕುಲ ಪಾವನಗೊಂಡ ಶುಭ ಶುಕ್ರವಾರ

    ಮನುಜಕುಲ ಪಾವನಗೊಂಡ ಶುಭ ಶುಕ್ರವಾರ| ಫಾದರ್ ಚೇತನ್

    ಪಾಪಮಯ ಜೀವನಕ್ಕಾಗಿ ಇಡೀ ಜನಾಂಗವೇ ನಾಶಹೊಂದುವುದರ ಬದಲಾಗಿ, ಮಾನವಕುಲದ ರಕ್ಷಣೆಗಾಗಿ ದೇವಪುತ್ರ ಯೇಸುಕ್ರಿಸ್ತ ತನ್ನ ಪ್ರಾಣತ್ಯಾಗ ಮಾಡಿದ ಪವಿತ್ರದಿನವೇ ಶುಭ ಶುಕ್ರವಾರ. ಯೇಸುಸ್ವಾಮಿಯ ಯಾತನೆ, ಪಾಡು ಹಾಗೂ ಮರಣವನ್ನು ವಿಶ್ವವೇ ಸ್ಮರಿಸಿ ಧ್ಯಾನಿಸುವ ಈ ಶುಭದಿನವನ್ನು ‘ಗುಡ್ ಫೈ›ಡೆ’ ಎಂದು ಕರೆಯುವುದು ನಿಜಕ್ಕೂ ಅರ್ಥಪೂರ್ಣ. ಏಕೆಂದರೆ ಕರುಣಾಮಯಿ ದೇವರು ಮನುಜಕುಲದ ಸಕಲ ಪಾಪಗಳನ್ನು ಕ್ಷಮಿಸಿ ಮನುಷ್ಯನನ್ನು ಪಾವನಗೊಳಿಸಿದ ದಿನವಿದು. ‘ಬೂದಿ ಬುಧವಾರ’ದಂದು ಆರಂಭವಾದ ‘ತಪಸ್ಸು ಕಾಲ’ವು (ಈ ವರ್ಷ ಫೆ.17ರಂದು) ವಿಶ್ವದಾದ್ಯಂತ ಸಕಲ ಕ್ರೖೆಸ್ತರಿಗೆ ವರ್ಷದ ಪವಿತ್ರ ಕಾಲ. ಇದು ‘ಪವಿತ್ರ ವಾರ’ದ ಆಚರಣೆಯೊಂದಿಗೆ ಪುನರುತ್ಥಾನ ಅಥವಾ ಈಸ್ಟರ್ ಹಬ್ಬದಂದು (ಈ ವರ್ಷ ಏ.4ರಂದು) ಸಂಪನ್ನಗೊಳ್ಳುತ್ತದೆ. ಈ ಕಾಲದಲ್ಲಿ ಸಂಭ್ರಮ, ಆಚರಣೆಗಳನ್ನು ಬದಿಗಿಟ್ಟು, ಪ್ರಾರ್ಥನೆ, ಉಪವಾಸ ಹಾಗೂ ದಾನ-ಧರ್ಮ ಎಂಬ ಮೂರು ಸಾಧನಗಳ ಮೂಲಕ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ‘ಶುಭ ಶುಕ್ರವಾರ’ ಪವಿತ್ರ ವಾರದ ಪ್ರಮುಖ ಆಚರಣೆಯಾಗಿದ್ದು, ಈ ವರ್ಷ ಏಪ್ರಿಲ್ 2ರಂದು ಆಚರಿಸಲ್ಪಡುತ್ತಿದೆ.

    ಯೇಸು ಕ್ರಿಸ್ತರು ಮೂಲತಃ ಯೆಹೂದ್ಯ ಜನಾಂಗದವರು. ಆದರೆ, ಯೆಹೂದ್ಯ ಧರ್ಮದಲ್ಲಿದ್ದ ಮೂಢನಂಬಿಕೆ, ಧಾರ್ವಿುಕ ಆಷಾಢಭೂತಿತನ, ಅರ್ಥವಿಲ್ಲದ ಕಟ್ಟುಪಾಡುಗಳನ್ನು ಕಟುವಾಗಿ ಟೀಕಿಸಿ, ವಿರೋಧಿಸಿದರು. ‘ಪರಪ್ರೀತಿಯೇ ಸರ್ವಶ್ರೇಷ್ಠ ನಿಯಮ’ ಎಂದು ಬೋಧಿಸಿದರು. ಇದರಿಂದ ಸಿಟ್ಟಿಗೆದ್ದ ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಬಂಧಿಸಿ, ಚಿತ್ರಹಿಂಸೆಗೆ ಒಳಪಡಿಸಿ ಅವರಿಗೆ ಶಿಲುಬೆಯ ಮರಣದ ಶಿಕ್ಷೆಯನ್ನು ನೀಡಿದರು. ಯೇಸುಸ್ವಾಮಿಯ ಕಾಲದಲ್ಲಿ ಶಿಲುಬೆ ಪವಿತ್ರ ಹಾಗೂ ಗೌರವಯುತ ಲಾಂಛನವಾಗಿರದೆ ನೇಣುಗಂಬದಂತೆ ಅಪಮಾನದ ಲಾಂಛನವಾಗಿತ್ತು. ಕುಖ್ಯಾತ ಪಾತಕಿಗಳನ್ನು ಗಲ್ಲಿಗೇರಿಸುವ ಶಿಲುಬೆ ಅಮಂಗಳದ ಸಂಕೇತವೆನಿಸಿತ್ತು. ಯೇಸುಸ್ವಾಮಿ ಮೃತಪಟ್ಟ ಶಿಲುಬೆ ಮನುಜಕುಲಕ್ಕೆ ವಿಮೋಚನೆ ನೀಡುವ ಹಾಗೂ ಶಾಂತಿಯ ಜೀವನಕ್ಕೆ ಆಹ್ವಾನವೀಯುವ ದಿವ್ಯಸಾಧನ. ಯೇಸುಕ್ರಿಸ್ತರು ಮನುಷ್ಯನ ರಕ್ಷಣೆಗಾಗಿ, ಸ್ವಂತ ಇಚ್ಛೆಯಿಂದ ಅದನ್ನು ಆಲಂಗಿಸಿದ ನಂತರ ಅದು ವಿಮೋಚನೆಯ ಹೆಗ್ಗುರುತಾಗಿ ಮಾರ್ಪಟ್ಟಿತು.

    ‘ಯಾರಾದರೂ ನನ್ನ ಹಿಂಬಾಲಕರಾಗಲು ಬಯಸುವುದಾದರೆ ನಿಮ್ಮ ಶಿಲುಬೆಯನ್ನು ಹೊತ್ತು ನನ್ನನ್ನು ಹಿಂಬಾಲಿಸಿ’ ಎಂಬ ಕರೆಯನ್ನು ಯೇಸುಸ್ವಾಮಿ ಬೋಧನೆಯಲ್ಲಿ ನೀಡಿದರು. ಶಿಲುಬೆಯೆಂದರೆ ಜೀವನದಲ್ಲಿ ಎದುರಾಗುವ ಕಷ್ಟಗಳು, ದುಃಖ-ದುಗುಡಗಳು, ಸಾವು, ನೋವು, ಸಂಕಟಗಳು. ತನ್ನ ಶಿಲುಬೆಯನ್ನು ಹೊತ್ತು ಯೇಸುಸ್ವಾಮಿ ಗೊಲ್ಗೊಥಾದ ತುದಿಗೆ ಸಾಗಿದಂತೆ, ಪ್ರತಿಯೊಬ್ಬರೂ ಜೀವನದಲ್ಲಿ ಎದುರಾಗುವ ವಿವಿಧ ಶಿಲುಬೆಗಳನ್ನು ಹೊತ್ತು ನಡೆದರೆ ಪುನರುತ್ಥಾನದ ಆನಂದವನ್ನು ಪಡೆಯಬಹುದು ಎಂಬ ಭರವಸೆಯನ್ನು ಅವರು ನೀಡುತ್ತಾರೆ.

    ‘ಅವರು ಜೆರುಜಲೆಮಿಗೆ ಅಭಿಮುಖವಾಗಿ ನಡೆದರು’ ಎನ್ನುತ್ತದೆ ಪವಿತ್ರ ಬೈಬಲ್ ಗ್ರಂಥ. ಜೆರುಜಲೆಮ್ ಯೇಸುಸ್ವಾಮಿ ಶಿಲುಬೆ ಮರಣಕ್ಕೆ ಬಲಿಯಾಗಲು ಸ್ಥಳ. ಆದರೆ ಮರಣಕ್ಕೆ ತಮ್ಮನ್ನೇ ಒಡ್ಡಿಕೊಂಡ ಯೇಸುಸ್ವಾಮಿಯನ್ನು ಸೋಲಿಸಲು ಮರಣವು ಅಶಕ್ತವಾಯಿತು. ಅವರು ಮರಣದ ಮೇಲೆ ವಿಜಯವನ್ನು ಸಾಧಿಸಿದರು. ಮಾನವ ಜೀವನದ ಕಷ್ಟ, ಸಾವು, ನೋವುಗಳು ಅರ್ಥರಹಿತವಲ್ಲ, ಬದಲಾಗಿ ದೇವರು ತನ್ನ ಯೋಜನೆಗಳನ್ನು ಮನುಷ್ಯನಲ್ಲಿ ಕಾರ್ಯಗತಗೊಳಿಸುವ ಗಾಢಾರ್ಥವನ್ನು ಒಳ ಗೊಂಡಿವೆ. ಆ ಸಂದರ್ಭಗಳಲ್ಲಿ ಕ್ಷಣಕಾಲ ವಿಚಲಿತರಾದರೂ, ದೇವರಲ್ಲಿ ವಿಶ್ವಾಸವಿಟ್ಟರೆ ನಮ್ಮ ಜೀವನದಲ್ಲೂ ಕಷ್ಟಗಳ ಕತ್ತಲೆ ಕಳೆದು, ಬೆಳಕು ಮೂಡುವುದು ನಿಶ್ಚಿತ.

    ಶಿಲುಬೆಯ ಮೇಲೆ ನೇತಾಡುತ್ತಿದ್ದ ಯೇಸುಸ್ವಾಮಿ, ‘ನನ್ನ ದೇವರೇ, ನನ್ನ ದೇವರೇ, ನೀನೇಕೆ ನನ್ನನ್ನು ಕೈಬಿಟ್ಟಿದ್ದೀ?’ ಎಂಬ ಆರ್ತನಾದಗೈದರು. ಅವರ ಹನ್ನೆರಡು ಜನ ಶಿಷ್ಯರಲ್ಲಿ ಒಬ್ಬಾತ ಇಸ್ಕರಿಯೋತ ಯೂದ ಅವರನ್ನು ಮೂವತ್ತು ಬೆಳ್ಳಿನಾಣ್ಯಗಳಿಗೆ ಪಟ್ಟಭದ್ರರಿಗೆ ಮಾರಿದ. ಶಿಷ್ಯರ ನಾಯಕ ಎನಿಸಿಕೊಂಡ ಪೇತ್ರ ತನ್ನ ಪ್ರಾಣಕ್ಕೆ ಹೆದರಿ ಮೂರು ಸಲ ಅವರನ್ನು ಗುರುತಿಸಲು ನಿರಾಕರಿಸಿದ. ಯೇಸುಸ್ವಾಮಿಯನ್ನು ಗೆತ್ಸೆಮನಿ ತೋಟದಲ್ಲಿ ಬಂಧಿಸಿದಾಗ, ಅವರೊಡನೆ ಇದ್ದ ಶಿಷ್ಯರೆಲ್ಲರೂ ಪ್ರಾಣಭಯದಿಂದ ಪಲಾಯನಗೈದರು. ಅಂತಿಮವಾಗಿ ಯೇಸುಸ್ವಾಮಿಯೊಬ್ಬರೇ ಉಳಿದರು. ದೇವಪುತ್ರರಾದರೂ, ಅಶಕ್ತ ಮಾನವನು ಅನುಭವಿಸುವ ಭಯ-ಭೀತಿಗಳನ್ನು ಸಂಪೂರ್ಣ ಮಾನವರಾದ ಯೇಸುಸ್ವಾಮಿಯೂ ಅನುಭವಿಸಿದರು. ಆದರೆ ಈ ಆರ್ತನಾದಕ್ಕೆ ಸಂಪೂರ್ಣ ವಿಶ್ವಾಸದ ಉತ್ತರವನ್ನು ಅವರು ದೇವಪಿತನಿಗೆ ಗೆತ್ಸೆಮನೆ ತೋಟದಲ್ಲೇ ನೀಡಿದ್ದರು: ‘ನನ್ನ ಚಿತ್ತವಲ್ಲ, ನಿಮ್ಮ ಚಿತ್ತವು ನೆರವೇರಲಿ’.

    ಕ್ರೖೆಸ್ತರ ಜೀವನದಲ್ಲಿ ಶಿಲುಬೆಗೆ ವಿಶೇಷವಾದ ಸ್ಥಾನವಿದೆ. ಕ್ರೖೆಸ್ತರನ್ನು ಶಿಲುಬೆಯಿಂದ ಗುರುತಿಸಲಾಗುತ್ತದೆ. ಯಾವುದೇ ಕ್ರೖೆಸ್ತ ವಿಶ್ವಾಸಿಯ ದಿನವು ಶಿಲುಬೆಯ ಗುರುತಿಲ್ಲದೆ ಆರಂಭಗೊಳ್ಳುವುದಿಲ್ಲ, ಕೊನೆಗೊಳ್ಳುವುದೂ ಇಲ್ಲ. ತಪಸ್ಸುಕಾಲದ ಪ್ರಮುಖ ಭಕ್ತಿಕಾರ್ಯಗಳಲ್ಲಿ ಶಿಲುಬೆಯ ಹಾದಿ ಹಾಗೂ ಶಿಲುಬೆಯ ಆರಾಧನೆ ಬಹುಮುಖ್ಯವಾಗಿವೆೆ. ಕೆಳದರ್ಜೆಯ ಪಾತಕಿಗಳನ್ನು ಗಲ್ಲಿಗೇರಿಸುವುದಕ್ಕಾಗಿ ಬಳಕೆಯಾಗುತ್ತಿದ್ದ ಶಿಲುಬೆಯನ್ನು ಯೇಸುಕ್ರಿಸ್ತರು ಮನುಷ್ಯನ ರಕ್ಷಣೆಗಾಗಿ, ಸ್ವಂತ ಇಚ್ಛೆಯಿಂದ ಅದನ್ನು ಆಲಂಗಿಸಿ ಅದರಲ್ಲಿ ತೂಗಾಡಿ ಮೃತಪಟ್ಟ ನಂತರ ಅದು ವಿಮೋಚನೆಯ ಪವಿತ್ರ ಲಾಂಛನವಾಗಿ ಮಾರ್ಪಟ್ಟಿದೆ. ಲಂಬ ಭುಜವನ್ನು, ಸಮಾನಾಂತರ ಭುಜವು ತುಂಡರಿಸುವಂತಿರುವ ಶಿಲುಬೆ ಮಾನವನ ಅಹಂಕಾರ, ಸ್ವಾರ್ಥಗಳಿಗೊಂದು ಸವಾಲು. ಮನುಷ್ಯ ತನ್ನ ಸ್ವಾರ್ಥವನ್ನು ತ್ಯಜಿಸಿ ಪರಪ್ರೀತಿಯಲ್ಲಿ ಬಾಳಲು ದೇವರು ತೋರುವ ದಾರಿಯೇ ಶಿಲುಬೆಯ ಹಾದಿ.

    ಈ ಲೋಕದ ಬದುಕು ಕಷ್ಟ, ನೋವು, ಅಪಜಯಗಳನ್ನೊಳಗೊಂಡದ್ದು. ಯೇಸುಸ್ವಾಮಿ ಪುನರುತ್ಥಾನರಾಗಿ ಅಮರ ಬದುಕಿನ ಭರವಸೆಯನ್ನು ನೀಡಿದ್ದಾರೆ. ಮನುಷ್ಯ ಯಾವುದೇ ಕೆಟ್ಟ ಪರಿಸ್ಥಿತಿಯಲ್ಲಿದ್ದರೂ ನಿರಾಶನಾಗಬೇಕಿಲ್ಲ. ‘ಕತ್ತಲು ಕಳೆದು ಬೆಳಕು ಹರಿಯುವ’ ಖಚಿತ ಭರವಸೆಯಿಂದ ಭಗವಂತನೆಡೆಗೆ ತಿರುಗಿದರೆ ನಿತ್ಯಜೀವ ಅವನದಾಗುವುದು ಎಂದು ಸಾರುವ ಈಸ್ಟರ್ ‘ಶುಭ ಶುಕ್ರವಾರ’ ಕಳೆದು ಮೂರನೇ ದಿನವೇ ಆಗಮಿಸುತ್ತದೆ. ಕೆಟ್ಟತನ ಎಂಬ ಕತ್ತಲೆಯನ್ನು ದಾಟಿ ಒಳ್ಳೆಯತನವೆಂಬ ಬೆಳಕಿಗೆ ಬರುವುದೇ ನಿಜವಾದ ಪುನರುತ್ಥಾನ.

    (ಲೇಖಕರು ಸಾರ್ವಜನಿಕ ಸಂಪರ್ಕಾಧಿಕಾರಿ, ಉಡುಪಿ ಧರ್ಮಪ್ರಾಂತ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts