ನೀರಿನ ಮಹತ್ವ ಅರಿಯೋಣ; ಜಲಸಾಕ್ಷರತೆ ಪ್ರಮಾಣ ಹೆಚ್ಚಬೇಕಿದೆ…

blank

ಜಗತ್ತಿನ ಎಲ್ಲ ನಾಗರಿಕತೆಗಳ ಹುಟ್ಟು-ಬೆಳವಣಿಗೆಗೆ ನದಿಗಳು ಕಾರಣ. ಈಜಿಪ್ತ್, ಬೆಬಿಲೋನ್, ಸುಮರ್, ಚೀನಾ ಮುಂತಾದ ಸಂಸ್ಕೃತಿಗಳು ರೂಪುಗೊಂಡಿರುವುದು ನದಿ ಮುಖಜ ಭೂಮಿಗಳಲ್ಲಿ. ಹಾಗಾಗಿಯೇ ಜಗತ್ತಿನ ಸಂಸ್ಕೃತಿಗಳಲ್ಲಿ ನೀರಿನ ಬಹುರೂಪಗಳಾದ ನದಿ, ಸಮುದ್ರ, ಮಳೆ ಮುಂತಾದವು ಪ್ರಧಾನವಾಗಿವೆ. ಆದರೆ, ಮನುಷ್ಯನ ಸ್ವಾರ್ಥಕ್ಕೆ ನೀರು ಅತಿಯಾಗಿ ಬಳಕೆಯಾಗುತ್ತಿದ್ದು, ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ. ಜಲಸಾಕ್ಷರತೆಯ ಕೊರತೆಯಿಂದ ಮಳೆನೀರನ್ನು ಸಂಗ್ರಹಿಸುವ ಪ್ರಮಾಣವೂ ತುಂಬ ಕಡಿಮೆ. ಇದೇ ಸ್ಥಿತಿಯಲ್ಲಿ ಮುಂದುವರಿದರೆ, ಜಗತ್ತು ನೀರಿಗಾಗಿ ಯುದ್ಧಗಳನ್ನು ಮಾಡಬೇಕಾಗುತ್ತದೆ ಎಂದು ದಾರ್ಶನಿಕರು, ಪರಿಸರ ತಜ್ಞರು ಅಭಿಪ್ರಾಯಪಟ್ಟಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನೂರಾರು ಅಣೆಕಟ್ಟುಗಳು ಮತ್ತು ಸಾವಿರಾರು ನದಿಗಳಿರುವ ಭಾರತದಲ್ಲಿಯೇ ಕೋಟ್ಯಂತರ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ಈ ಕಾರಣದಿಂದಲೇ ಅನೇಕ ರೋಗಗಳು ಉಂಟಾಗುತ್ತಿವೆ. ಬೃಹದಾಕಾರವಾಗಿ ಬೆಳೆಯುತ್ತಿರುವ ನಗರಗಳಿಗೆ ನೀರು ಒದಗಿಸುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಪ್ರಪಂಚದ ಪ್ರತಿ ಖಂಡದ ಮೂವರಲ್ಲಿ ಒಬ್ಬನಿಗೆ ನೀರಿನ ಕೊರತೆ ಕಾಡುತ್ತದೆ. ಜನಸಂಖ್ಯಾ ಹೆಚ್ಚಳ, ನಗರೀಕರಣ ಹಾಗೂ ಗೃಹಬಳಕೆ-ಕೈಗಾರಿಕಾ ಬಳಕೆಗಳಲ್ಲಿನ ಹೆಚ್ಚಳದಿಂದಾಗಿ ನೀರಿನ ಅಗತ್ಯವೂ ಹೆಚ್ಚುತ್ತಿದ್ದು ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ನೀರಿನ ಅಭಾವದಿಂದಾಗಿ ಜನ ಕುಡಿಯುವ ನೀರಿಗೆ ಅಸುರಕ್ಷಿತ ಜಲಮೂಲಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ. ನೀರಿನ ಕೊರತೆಯಿಂದಾಗಿ ಕೃಷಿ ಉತ್ಪಾದನೆಗೆ ತ್ಯಾಜ್ಯನೀರಿನ ಮರುಬಳಕೆ ಅನಿವಾರ್ಯವಾಗುವುದರಿಂದ, ವಿಶ್ವದ ಶೇಕಡ 10ಕ್ಕೂ ಹೆಚ್ಚು ಜನರು ತ್ಯಾಜ್ಯನೀರಿನಿಂದ ಬೆಳೆದ ಆಹಾರವನ್ನೇ ತಿನ್ನಬೇಕಾಗಿ ಬರುತ್ತದೆ; ರಾಸಾಯನಿಕಗಳು ಅಥವಾ ರೋಗಕಾರಕ ಸೂಕ್ಷ್ಮಜೀವಿಗಳು ದೇಹದೊಳಕ್ಕೆ ಪ್ರವೇಶಿಸಲು ಇದು ಸುಲಭಮಾರ್ಗ. ಯುದ್ಧ, ಮಲೇರಿಯಾ, ಎಚ್​ಐವಿ/ಏಡ್ಸ್ ಹಾಗೂ ಸಂಚಾರಿ ಅಪಘಾತಗಳಿಂದಾಗುವ ಒಟ್ಟು ಸಾವಿಗಿಂತ ಕೊಳಕು ನೀರಿನ ಸೇವನೆಯಿಂದಲೇ ಮಕ್ಕಳು ಸಾಯುವುದು ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಸಮಸ್ಯೆ ಗಂಭೀರವಾಗಿದ್ದರೂ, ಪರಿಹಾರದ ದಾರಿಯೂ ನಮ್ಮೆಲ್ಲರ ಬಳಿ ಇದೆ ಎಂಬುದನ್ನು ಅರಿಯಬೇಕಿದೆ. ನೀರಿನ ಮಿತ ಬಳಕೆ ಮೊದಲ ಮಾರ್ಗವಾದರೆ, ಮಳೆನೀರಿನ ಸಂಗ್ರಹ, ಮರುಬಳಕೆ ಮಹತ್ವದ ಹೆಜ್ಜೆಗಳು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ‘ಕ್ಯಾಚ್ ದಿ ರೈನ್’ (ಮಳೆ ನೀರು ಸಂಗ್ರಹಿಸಿ) ಅಭಿಯಾನ ಹಮ್ಮಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಲಿದ್ದಾರೆ. ಮಳೆ ನೀರು ಸಂಗ್ರಹವು ಜನಾಂದೋಲನವಾಗಬೇಕು ಎಂಬ ಪ್ರಧಾನಿ ಆಶಯ ಕಾರ್ಯರೂಪಕ್ಕೆ ಬರಬೇಕಿದೆ. ಜಲಮೂಲಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವ, ಹೂಳು ತುಂಬಿದ ಕೆರೆ, ನದಿಗಳಿಗೆ ಕಾಯಕಲ್ಪ ನೀಡುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ನೀರಿನ ಪ್ರತಿ ಹನಿಯ ಮಹತ್ವವನ್ನು ಅರಿತುಕೊಂಡಾಗಲೇ, ಮನುಕುಲ ನೆಮ್ಮದಿಯಾಗಿ ಇರಬಲ್ಲದು.

Share This Article

ಹುಡುಗಿಯರೇ.. ಬೇಸಿಗೆಯಲ್ಲಿ ಸುಂದರವಾಗಿ ಕಾಣಬೇಕಾದರೆ ಈ ತಪ್ಪುಗಳನ್ನು ಮಾಡಬೇಡಿ! Beauty Tips

Beauty Tips: ಬೇಸಿಗೆ ಸಮೀಪಿಸುತ್ತಿರುವುದರಿಂದ, ಅನೇಕ ಜನರು ತಮ್ಮ ಚರ್ಮವನ್ನು ರಕ್ಷಿಸಲು ಹೆಣಗಾಡುತ್ತಿದ್ದಾರೆ. ಹುಡುಗಿಯರು ಹೊರಗೆ…

ನಿಮಗೆ ಕೂದಲು ಉದುರುವ ಸಮಸ್ಯೆ ಇದೆಯೇ? ಹಾಗಲಕಾಯಿ ರಸವನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ…bitter gourd

bitter gourd : ನಮ್ಮಲ್ಲಿ ಹಲವರಿಗೆ ಹಾಗಲಕಾಯಿ ತಿನ್ನುವುದು ಇಷ್ಟವಾಗುವುದಿಲ್ಲ. ಹಾಗಲಕಾಯಿ ತಿನ್ನಲು ಸ್ವಲ್ಪ ಕಹಿಯಾಗಿದ್ದರೂ,…

ಸುರಕ್ಷಿತ ಪ್ರಯಾಣಕ್ಕಾಗಿ ನಿಮ್ಮ ಕಾರಿನಲ್ಲಿ ಇರಲೇಬೇಕಾದ 6 ವಸ್ತುಗಳು ಯಾವವು ಗೊತ್ತಾ? Vastu Tips

Vastu Tips: ನಮ್ಮ ಮನೆಗಳು ಮತ್ತು ಕಚೇರಿಗಳಿಗೆ ಮಾತ್ರವಲ್ಲದೆ, ನಮ್ಮ ವಾಹನಗಳಿಗೂ ಕೆಲವು ವಾಸ್ತು ನಂಬಿಕೆಗಳಿವೆ.…