More

    ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ಮೂಲವ್ಯಾಧಿ ದೂರ; ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಕ್ಯಾನ್ಸರ್ ಅಪಾಯ

    ಬೆಂಗಳೂರು: ಬದಲಾದ ಜೀವನಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಬರುವ ಅನೇಕ ರೋಗಗಳಲ್ಲಿ ಮೂಲವ್ಯಾಧಿಯೂ ಒಂದಾಗಿದ್ದು, ಇತ್ತೀಚಿನ ದಿನಗಳಲ್ಲಿ ಇದು ವ್ಯಾಪಕವಾಗುತ್ತಿದೆ. ಬಹಳಷ್ಟು ಮಂದಿ ಸಂಕೋಚ, ಮುಜುಗರದಿಂದ ಇದಕ್ಕೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ. ಆದರೆ ಆರಂಭದಲ್ಲೇ ಚಿಕಿತ್ಸೆ ಪಡೆದರೆ ಒಳ್ಳೆಯದು. ವಿಳಂಬವಾದಲ್ಲಿ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಮೂಲವ್ಯಾಧಿಯಲ್ಲಿ ಹಲವು ವಿಧ. ಪೈಲ್ಸ್, ಫಿಶರ್ ಹಾಗೂ ಫಿಸ್ಟುಲಾ ಎಂದು. ಶೇ.90 ಮಂದಿಗೆ ಜೀವನಶೈಲಿಯಿಂದ ಬರಲಿದ್ದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದಲ್ಲಿ ಜೀವನಕ್ರಮ ಹಾಗೂ ಆಹಾರ ಪದ್ಧತಿಯಿಂದಲೇ ಗುಣ ಹೊಂದಬಹುದು. ಉಳಿದ ಶೇ. 10 ಮಂದಿಗೆ ಕರುಳಿನ ಉರಿಯೂತ (ಇನ್​ಫ್ಲಮೇಟರಿ ಬೌವಲ್ ಡಿಸಾರ್ಡರ್ – ಐಬಿಡಿ) ಕಂಡು ಬರುತ್ತದೆ. ಇವರಿಗೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಿದ್ದು, ಗುಣ ಹೊಂದುವ ಸಾಧ್ಯತೆಗಳು ಕಡಿಮೆ ಎನ್ನುತ್ತಾರೆ ಸ್ಮೈಲ್ ಆಸ್ಪತ್ರೆ ಸಿಇಒ ಹಾಗೂ ಕೊಲೊ ರೆಕ್ಟಲ್ ಸರ್ಜನ್ ಡಾ. ಸಿ.ಎಂ. ಪರಮೇಶ್ವರ.

    ಅರಿವಿನ ಕೊರತೆ: ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. 36 ಮಂದಿ ಮೂಲವ್ಯಾಧಿ ಸಮಸ್ಯೆ ಹೊಂದಿದ್ದಾರೆ. ಅರಿವಿನ ಕೊರತೆಯಿಂದಾಗಿ ಇದಕ್ಕೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲಾಗದೆ ಬಹಳಷ್ಟು ಮಂದಿ ದೊಡ್ಡ ಕರುಳಿನ ಕ್ಯಾನ್ಸರ್ (ಕೊಲೊ ಕ್ಯಾನ್ಸರ್)ಗೆ ಒಳಗಾಗುತ್ತಿದ್ದಾರೆ. ಐಬಿಡಿ ರೋಗಿಗಳಿಗೆ ಚಿಕಿತ್ಸೆ ದುಬಾರಿಯಾಗಿದ್ದು, ಜೀವನ ಪರ್ಯಂತ ಪ್ರತಿವಾರ ಇನ್​ಜೆಕ್ಷನ್ ತೆಗೆದುಕೊಳ್ಳಬೇಕು. ಪ್ರತಿ ಇನ್​ಜೆಕ್ಷನ್​ಗೆ 40 ಸಾವಿರ ರೂ. ಆಗಲಿದೆ. ಎಲ್ಲರಿಂದಲೂ ಈ ವೆಚ್ಚ ಭರಿಸಲು ಸಾಧ್ಯವಿಲ್ಲ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಲ್ಲಿ ಮೂಲವ್ಯಾಧಿಯನ್ನು ಸೇರಿಸಬೇಕು ಎನ್ನುತ್ತಾರೆ ಡಾ. ಪರಮೇಶ್ವರ.

    ನಕಲಿ ವೈದ್ಯರಿಂದ ತಪ್ಪು ಚಿಕಿತ್ಸೆ: ಬಹಳಷ್ಟು ಮಂದಿ ಮೂಲವ್ಯಾಧಿಗೆ ಚಿಕಿತ್ಸೆ ನೀಡುವುದಾಗಿ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಮೂಲವ್ಯಾಧಿ ಎಂದರೆ ಮೊದಲೇ ನಾಚಿಕೆ ಪಡುವ ಜನರು ಇಂತಹ ನಕಲಿ ವೈದ್ಯರಿಂದ ಚಿಕಿತ್ಸೆ ಪಡೆದು ಸಮಸ್ಯೆ ತಂದುಕೊಳ್ಳುತ್ತಾರೆ. ಇವರು ನೀಡುವ ತಪು್ಪ ಚಿಕಿತ್ಸೆಯಿಂದಾಗಿ ರೋಗಿಗಳು ಕರುಳು ಕ್ಯಾನ್ಸರ್​ಗೆ ಒಳಗಾಗುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ನಕಲಿ ವೈದ್ಯರಿಗೆ ತಡೆ ಹಾಕಲು ಅಗತ್ಯ ಕ್ರಮ ಕೈಗೊಳ್ಳಬೇಕು.

    ಯಾರಲ್ಲಿ ಮೂಲವ್ಯಾಧಿ ಹೆಚ್ಚು: ಐಟಿ ಉದ್ಯಮಿಗಳು, ವಾಹನ ಚಾಲಕರು, ಟೈಲರ್​ಗಳು, ಗಾರ್ವೆಂಟ್ಸ್ ನೌಕರರು ಸೇರಿ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವವರಲ್ಲಿ ಮೂಲವ್ಯಾಧಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ಅದರಲ್ಲೂ ಗರ್ಭಿಣಿಯರಲ್ಲಿ ಮೂಲವ್ಯಾಧಿ ಹೆಚ್ಚು ಕಾಣಿಸಿಕೊಳ್ಳುತ್ತದೆ.

    ರೋಗ ಲಕ್ಷಣಗಳು: ಮಲವಿಸರ್ಜನೆ ವೇಳೆ ತೀವ್ರ ನೋವು, ಉರಿ ಹಾಗೂ ರಕ್ತಸ್ರಾವ ಆಗುವುದು, ತೂಕ ಕಡಿಮೆ ಆಗುವುದು, ಗುದದ್ವಾರದಲ್ಲಿ ಗಂಟು ಕಾಣಿಸಿಕೊಳ್ಳುವುದು, ಹಸಿವು ಕಡಿಮೆ ಆಗುವುದು, ಮಲಬದ್ಧತೆ ಈ ರೀತಿಯ ಲಕ್ಷಣಗಳು ಕಂಡು ಬಂದ ಕೂಡಲೇ ನಿರ್ಲಕ್ಷ್ಯ ಮಾಡದೆ ವೈದ್ಯರಲ್ಲಿ ಚಿಕಿತ್ಸೆ ಪಡೆಯಿರಿ.

    ಆಹಾರ ಕ್ರಮ: ಹಣ್ಣು, ತರಕಾರಿ, ಸೊಪ್ಪು ಸೇವನೆ, ಉತ್ತಮ ನಿದ್ರೆ, ವ್ಯಾಯಮಗಳಿಂದಾಗಿ ಉತ್ತಮ ಆರೋಗ್ಯ ಹೊಂದಿ ಮೂಲವ್ಯಾಧಿ ದೂರ ಇಡಬಹುದಾಗಿದೆ. ಆದರೆ ಕೆಲವರಲ್ಲಿ ಹಂದಿ ಮಾಂಸ ಸೇವನೆಯಿಂದ ಮೂಲವ್ಯಾಧಿ ನಿವಾರಣೆ ಆಗುತ್ತದೆ ಎಂಬ ತಪ್ಪು ಅಭಿಪ್ರಾಯ ಇದೆ. ಮೂಲವ್ಯಾಧಿಯಿಂದ ದೂರ ಇರಲು ಮಾಂಸಾಹಾರ ಸೇವನೆಯಲ್ಲಿ ಮಿತಿ ಇರಲಿ. ಬದಲಿಗೆ ನೀರು, ಎಳನೀರು, ಮಜ್ಜಿಗೆಯಂತಹ ಪಾನೀಯ ಹೆಚ್ಚು ಸೇವಿಸಿ, ತಾಜಾ ಹಾಗೂ ಮನೆಯಲ್ಲಿ ತಯಾರಿಸಿದ ರುಚಿ ಶುಚಿ ಆಹಾರ ಸೇವಿಸಿ ಎಂಬುದು ಡಾ.ಪರಮೇಶ್ವರ ಸಲಹೆ.

    ಚಿಕಿತ್ಸಾ ವಿಧಾನ: ಮೂಲವ್ಯಾಧಿಯನ್ನು ನಾಲ್ಕು ಹಂತಗಳಲ್ಲಿ ಗುರುತಿಸಲಾಗುವುದು. ಮೊದಲ 2 ಹಂತಗಳಲ್ಲೇ ಚಿಕಿತ್ಸೆ ಪಡೆದರೆ ಔಷಧದ ಜತೆಗೆ ಜೀವನ ಶೈಲಿ, ಆಹಾರ ಪದ್ಧತಿಯಿಂದಲೇ ಗುಣಹೊಂದಬಹುದು. 3- 4 ಹಂತದಲ್ಲಿ ಚಿಕಿತ್ಸೆಗೆ ಬಂದಲ್ಲಿ ಶಸ್ತ್ರಚಿಕಿತ್ಸೆ (ಲೇಸರ್ ಟ್ರೀಟ್​ವೆುಂಟ್) ಮಾಡಲೇಬೇಕು. ಆಧುನಿಕ ಚಿಕಿತ್ಸಾ ವಿಧಾನದಲ್ಲಿ ನೋವು ರಹಿತವಾಗಿ ಶಸ್ತ್ರಚಿಕಿತ್ಸೆ ಮಾಡಬಹುದಾಗಿದ್ದು, ಬೆಳಗ್ಗೆ ಚಿಕಿತ್ಸೆ ಪಡೆದು ಸಂಜೆ ಮನೆಗೆ ತೆರಳಬಹುದಾಗಿದೆ ಎನ್ನುತ್ತಾರೆ ವೈದ್ಯರು.

    ಆಸ್ಟ್ರೇಲಿಯನ್‌ ಸಿನಿಮಾಗೆ ಕನ್ನಡಿಗನ ಸಂಗೀತ; ಮೊದಲ ಪ್ರಯತ್ನದಲ್ಲೇ ಶ್ರೇಷ್ಠ ಸಂಗೀತ ಪ್ರಶಸ್ತಿ

    ನಿದ್ರೆ ಬರುತ್ತಿಲ್ಲ ಅಂತ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತುರ್ತು ಕರೆ; ಪಕ್ಕದಮನೆಯಾತನ ಗೊರಕೆ ನಿಲ್ಲಿಸುವಂತೆ ದೂರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts