More

    ಅಮರ ಗೀತೆಗಳ ಗಂಧರ್ವ ಜೋಡಿ ಶಂಕರ್-ಜೈಕಿಶನ್

    ಅಮರ ಗೀತೆಗಳ ಗಂಧರ್ವ ಜೋಡಿ ಶಂಕರ್-ಜೈಕಿಶನ್ರಾಜ್​ಕಪೂರ್, ದೇವಾನಂದ್, ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮಿ ಕಪೂರ್, ಶಶಿ ಕಪೂರ್, ಧರ್ವೆಂದ್ರ, ಜಾಯ್ ಮುಖರ್ಜಿ, ಸುನಿಲ್ ದತ್, ನರ್ಗಿಸ್, ಪದ್ಮಿನಿ, ವೈಜಯಂತಿ ಮಾಲಾ, ಮಾಲಾ ಸಿನ್ಹಾ, ಆಶಾ ಪಾರೆಖ್, ವಹೀದಾ ರೆಹಮಾನ್, ಶರ್ವಿುಳಾ ಟ್ಯಾಗೋರ್ ಮೊದಲಾದವರು ಜನಪ್ರಿಯತೆಯ ಉತ್ತುಂಗಕ್ಕೇರುವಲ್ಲಿ ಸಂಗೀತ ನಿರ್ದೇಶಕ ಜೋಡಿಯೊಂದರ ಕೊಡುಗೆಯೂ ಮಹತ್ವದ್ದಾಗಿತ್ತು. ಬಾಲಿವುಡ್ ಚಿತ್ರಗಳನ್ನು ಅತಿಮಧುರ ಹಾಡುಗಳಿಂದಲೇ ಯಶಸ್ವಿಗೊಳಿಸುವ ಸಾಮರ್ಥ್ಯ ಹೊಂದಿದ್ದ ಆ ದಿಗ್ಗಜ ಜೋಡಿ ಶಂಕರ್-ಜೈಕಿಶನ್. ಉತ್ತುಂಗದ ದಿನಗಳಲ್ಲಿ ಶಂಕರ್-ಜೈಕಿಶನ್ ಕೂಡ ರಾಜ್​ಕಪೂರ್, ದೇವಾನಂದ್, ದಿಲೀಪ್​ಕುಮಾರ್​ರಂತೆ ಪ್ರತೀ ಚಿತ್ರಕ್ಕೆ 10 ಲಕ್ಷ ರೂ.ಗೂ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದರು!

    ಹೌದು, ಶಂಕರ ಸಿಂಗ್ ರಘುವಂಶಿ ಮತ್ತು ಜೈಕಿಶನ್ ದಯಾಭಾಯ್ ಪಾಂಚಾಳ್ ಎಂಬ ತಬಲಾ -ಹಾರ್ವೆನಿಯಂ ವಾದಕರು ಬಾಲಿವುಡ್ ಇತಿಹಾಸದಲ್ಲಿ ಶಂಕರ-ಜೈಕಿಶನ್ ಹೆಸರಲ್ಲಿ ಅಜರಾಮರರಾಗಿದ್ದು ಇತಿಹಾಸ. ಸಂಗೀತವೆನ್ನುವುದು ಕಾಲಾತೀತ. ಅದರಲ್ಲೂ ಶಂಕರ್-ಜೈಕಿಶನ್ ಸಂಯೋಜಿಸಿದ್ದು ಸರ್ವಕಾಲಕ್ಕೂ ಅಚ್ಚಳಿಯದ ಅಮರಾದ್ಭುತ ಹಾಡುಗಳು.

    ಶಂಕರ್-ಜೈಕಿಶನ್ ಇಬ್ಬರಲ್ಲ ಒಬ್ಬರೇ ಎಂಬ ಭಾವನೆ ಅನೇಕರಲ್ಲಿತ್ತು. ವಾಸ್ತವದಲ್ಲೂ ಅವರು ಅದೇ ರೀತಿ, ಒಬ್ಬರನ್ನು ಬಿಟ್ಟು ಇನ್ನೊಬ್ಬರಿಗೆ ಅಸ್ತಿತ್ವವಿಲ್ಲ ಎಂಬಂತೆಯೇ ಬದುಕಿದರು. ಬದುಕಿನ ಅನಿರೀಕ್ಷಿತ ಸವಾಲುಗಳಿಂದ ಕವಲುಹಾದಿ ಎದುರಾದಾಗ ವ್ಯಾವಹಾರಿಕವಾಗಿ ಬೇರೆಯಾದರೂ, ಸಂಗೀತವಾಗಿ ಒಂದಾಗಿಯೇ ಉಳಿದರು. 1960ರ ದಶಕದ ಕೊನೆಯ ಭಾಗ, 70ರ ದಶಕದ ಆರಂಭದಲ್ಲಿ ಶಂಕರ್ ಮತ್ತು ಜೈಕಿಶನ್ ಇಬ್ಬರೂ ಪ್ರತ್ಯೇಕ ಹಾದಿ ಹಿಡಿದಿದ್ದರು. ಆದರೆ, ಚಿತ್ರದ ಸಂಗೀತವನ್ನು ಶಂಕರ್ ಅಥವಾ ಜೈಕಿಶನ್ ಯಾರೇ ನಿರ್ದೇಶಿಸಿದ್ದರೂ, ಟೈಟಲ್​ಕಾರ್ಡ್​ಲಿ್ಲ ಮಾತ್ರ ಶಂಕರ್-ಜೈಕಿಶನ್ ಎಂಬ ಯುಗಳ ಹೆಸರೇ ಇರುತ್ತಿತ್ತು. ಆ ಅಸ್ತಿತ್ವವನ್ನು ಅವರಿಬ್ಬರೂ ಕೊನೆಯವರೆಗೂ ಬಿಟ್ಟುಕೊಡಲಿಲ್ಲ.

    ಶಂಕರ್ ರಘುವಂಶಿ ಹುಟ್ಟಿದ್ದು ಹೈದರಾಬಾದ್​ನಲ್ಲಿ. ಬಾಲ್ಯದಿಂದಲೇ ಸಂಗೀತದ ಆಸಕ್ತಿ. ಏಳೆಂಟು ವರ್ಷದ ಬಾಲಕನಾಗಿದ್ದಾಗ ನಿತ್ಯ ಶಿವ ದೇಗುಲದಲ್ಲಿ ಭಜನೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಪುಟ್ಟ ವಯಸ್ಸಿನಲ್ಲೇ ಬಾಬಾ ನಾಸಿರ್​ಖಾನ್ ಅವರ ಬಳಿ ತಬಲಾ ಕಲಿತ ಅವರಿಗೆ ಸಂಗೀತದ ತುಡಿತ ಮುಂಬೈಗೆ ಸೆಳೆದುತಂದಿತ್ತು. ಮುಂಬೈನಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಲೇ ಸತ್ಯನಾರಾಯಣ ಅವರ ನೃತ್ಯತಂಡದಲ್ಲಿ ತಬಲಾವಾದಕರಾಗಿ ಸೇರಿಕೊಂಡರು. ಇದೇ ಸಂದರ್ಭದಲ್ಲಿ ಸುಪ್ರಸಿದ್ಧ ಕಥಕ್ಕಳಿ ಗುರು ಕೃಷ್ಣನ್ ಕುಟ್ಟಿ ಅವರ ಬಳಿ ನೃತ್ಯಾಭ್ಯಾಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಶಂಕರ್​ಗೆ ಪರಿಚಯವಾಗಿದ್ದು ಮಂಗಳೂರು ಮೂಲದ ಹೇಮಾವತಿ ಶೆಟ್ಟಿ! ಅವರು ಶಂಕರ್ ಸಿನಿಮಾ ಮಹತ್ವಾಕಾಂಕ್ಷೆ ಕಂಡು ಪೃಥ್ವಿರಾಜ್ ಕಪೂರ್ ಅವರಿಗೆ ಪರಿಚಯಿಸಿದರು. ಪೃಥ್ವಿ ಥಿಯೇಟರ್​ನಲ್ಲಿ ಮುಖ್ಯ ತಬಲಾ ವಾದಕರಾಗಿ ಕೆಲಸ ದೊರಕಿದ್ದು ಶಂಕರ್ ಬದುಕಿನ ಬಹುದೊಡ್ಡ ತಿರುವು. ಅಲ್ಲಿ ಕೆಲಸ ಮಾಡುವಾಗಲೇ ಶಂಕರ್ ತಬಲಾ ಜತೆಜತೆಗೆ ಪಿಯಾನೊ, ಸಿತಾರ್, ಎರ್ಕೆಡಿಯನ್, ಮ್ಯಾಂಡೊಲಿನ್, ವಯಲಿನ್ ಸಹಿತ 11 ವಾದ್ಯಗಳನ್ನು ನುಡಿಸುವುದನ್ನು ಕಲಿತು ಪ್ರೌಢಿಮೆ ಸಾಧಿಸಿದ್ದರು.

    ಪೃಥ್ವಿರಾಜ್ ಕಪೂರ್ ಜತೆ ಕೆಲಸ ಮಾಡುವಾಗಲೇ ಶಂಕರ್ ಆಗಾಗ ಕೆಲಸದ ನಿಮಿತ್ತ ಗುಜರಾತಿನ ಚಿತ್ರ ನಿರ್ವಪಕ ಚಂದ್ರವರ್ಧನ ಭಟ್ಟರ ಕಚೇರಿಗೆ ತೆರಳುತ್ತಿದ್ದರು. ಹಾಗೆ ಒಮ್ಮೆ ತೆರಳಿದ್ದಾಗ ಪರಿಚಯವಾದವರೇ ಹಾರ್ವೆನಿಯಂ ವಾದಕ ಜೈಕಿಶನ್. ಕೂಡಲೇ ಜೈಕಿಶನ್​ರನ್ನು ಪೃಥ್ವಿರಾಜ್ ಕಪೂರ್​ಗೆ ಪರಿಚಯಿಸಿ ಪೃಥ್ವಿ ಥಿಯೇಟರ್​ನಲ್ಲಿ ಹಾರ್ವೆನಿಯಂ ವಾದಕನ ಕೆಲಸ ಕೊಡಿಸಿದರು. ಸಾಮಾನ್ಯವಾಗಿ ಹೆಚ್ಚಿನ ಹಾರ್ವೆನಿಯಂ ವಾದಕರು ಬಲಗೈನಲ್ಲಿ ನುಡಿಸಿದರೆ, ಜೈಕಿಶನ್ ಎಡಗೈನಲ್ಲಿ ನುಡಿಸುತ್ತಿದ್ದರು. ಶಂಕರ್-ಜೈಕಿಶನ್​ರ ತಬಲಾ-ಹಾರ್ವೆನಿಯಂ ಜೋಡಿ ಪೃಥ್ವಿರಾಜ್ ಥಿಯೇಟರ್​ನಲ್ಲಿ ಜನಪ್ರಿಯವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ರಾಜ್​ಕಪೂರ್ ‘ಆಗ್’ ಚಿತ್ರ ನಿರ್ವಿುಸಿದಾಗ ಸಂಗೀತ ನಿರ್ದೇಶಕ ರಾಮ್ ಗಂಗೂಲಿಗೆ ಸಹಾಯಕರಾಗಿ ಶಂಕರ್-ಜೈಕಿಶನ್ ಕೆಲಸ ಮಾಡಿದರು. ಅದಾದ ಬಳಿಕ ರಾಜ್​ಕಪೂರ್ ‘ಬರಸಾತ್’ ಚಿತ್ರ ನಿರ್ವಿುಸಲು ಮುಂದಾದಾಗ ರಾಮ್ ಗಂಗೂಲಿ ವೈಯಕ್ತಿಕ ಕಾರಣದಿಂದ ಹಿಂದೆ ಸರಿದರು. ಆಗ ಶಂಕರ್-ಜೈಕಿಶನ್​ಗೆ ಚೊಚ್ಚಲ ಅವಕಾಶ ದೊರಕಿತು.‘ಬರಸಾತ್’ ಚಿತ್ರದ ಮೂಲಕ ಶಂಕರ್-ಜೈಕಿಶನ್, ಲತಾ ಮಂಗೇಶ್ಕರ್, ಶೈಲೇಂದ್ರ, ಹಸರತ್ ಜೈಪುರಿ, ಮುಕೇಶ್ ಹೀಗೆ ಹತ್ತುಹಲವರು ಪ್ರಸಿದ್ಧಿಗೆ ಬಂದರು.

    ಶಂಕರ್ ರಘುವಂಶಿ ಕಟ್ಟುಮಸ್ತಾದ ದೇಹ ಹೊಂದಿದ್ದರು. ಪೃಥ್ವಿರಾಜ ಥಿಯೇಟರ್​ನ ನಾಟಕಗಳಲ್ಲಿ ಪಠಾಣ ವೇಷದಲ್ಲಿ ಹೆಚ್ಚಾಗಿ ಮಿಂಚುತ್ತಿದ್ದರು. ‘ಆಗ್’ ಚಿತ್ರದಲ್ಲಿ ಅಂಬಿಗನ ಪಾತ್ರ ನಿರ್ವಹಿಸಿದ್ದರು. ಮುಂದೆ ಹಲವುಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದರು. ಜೈಕಿಶನ್ ಕೂಡ ಅತ್ಯಂತ ಸ್ಪುರದ್ರೂಪಿಯಾಗಿದ್ದರು. ಕಾಲೇಜು ಹುಡುಗಿಯರು ಜೈಕಿಶನ್ ರೂಪಕ್ಕೆ ಫಿದಾ ಆಗಿದ್ದರು. ಒಮ್ಮೆ ಫಿಲಂಫೇರ್ ಸಮಾರಂಭಕ್ಕೆ ಜೈಕಿಶನ್ ಆಗಮಿಸಿದ ಸಂದರ್ಭದಲ್ಲಿ ದೇವಾನಂದ, ರಾಜಕಪೂರ್, ದಿಲೀಪ್ ಕುಮಾರ್ ಬಳಿ ಹಸ್ತಾಕ್ಷರ ಪಡೆಯುತ್ತಿದ್ದವರೆಲ್ಲ ಜೈಕಿಶನ್​ರತ್ತ ಓಡಿ ಬಂದು ಹಸ್ತಾಕ್ಷರ ಪಡೆದಿದ್ದರು. ರಾಜಕಪೂರ್ ಅವರ ‘ಶ್ರೀ-420’ ಚಿತ್ರದಲ್ಲಿ ನಟಿ ನಾದಿರಾ ಪತಿಯಾಗಿ ಜೈಕಿಶನ್ ನಟಿಸಿದ್ದರು. ಜೈಕಿಶನ್​ರನ್ನು ನಾಯಕ ಹಾಗೂ ಲತಾ ಮಂಗೇಶ್ಕರ್​ರನ್ನು ನಾಯಕಿಯಾಗಿಸಿ ‘ಸತ್ಯಂ ಶಿವಂ ಸುಂದರಂ’ ಚಿತ್ರ ನಿರ್ವಿುಸಬೇಕೆಂದು ರಾಜ್​ಕಪೂರ್ ಆಸೆ ಪಟ್ಟಿದ್ದರು. ಆದರೆ, ಲತಾ ಮಂಗೇಶ್ಕರ್ ನಿರಾಕರಿಸಿದ್ದರಿಂದ ಜೈಶಂಕರ್ ನಾಯಕ ನಟ ಆಗುವ ಕನಸು ಕೈಗೂಡಲಿಲ್ಲ! ಮುಂದೆ ಆ ಚಿತ್ರದಲ್ಲಿ ಜೀನತ್ ಅಮಾನ್ -ಶಶಿಕಪೂರ್ ನಟಿಸಿದರು. ಕಿಶೋರ್ ಕುಮಾರ್-ಆಶಾ ಬೋಸ್ಲೆ ಕಂಠಸಿರಿಯಲ್ಲಿ ಜನಪ್ರಿಯವಾದ ‘ಜಿಂದಗಿ ಏಕ್ ಸಫರ್ ಹೈ ಸುಹಾನಾ, ಯಹಾಂ ಕಲ್ ಕ್ಯಾ ಹೋ ಕಿಸನೆ ಜಾನಾ’ ಹಾಡು 1971ರಲ್ಲಿ ಜೈಕಿಶನ್ ಅಕಾಲಮರಣಕ್ಕೆ ತುತ್ತಾಗುವ ಮುನ್ನ ಸ್ವರ ಸಂಯೋಜಿಸಿದ ಕೊನೆಯ ಹಾಡಾಗಿತ್ತು.

    ಶಂಕರ್ ಹಾಗೂ ಜೈಕಿಶನ್​ಗೆ ಭೈರವಿ ರಾಗವೆಂದರೆ ಪಂಚಪ್ರಾಣ. ಇದೇ ರಾಗದಲ್ಲಿ ಅವರಿಬ್ಬರು ಹಲವು ಅಮರಗೀತೆಗಳನ್ನು ಸೃಷ್ಟಿಸಿದ್ದಾರೆ. ‘ಆವಾರಾ’ ಚಿತ್ರದ ‘ಆವಾರಾ ಹೂ’, ‘ಶ್ರೀ 420’ ಚಿತ್ರದ ‘ಮೇರಾ ಜೂತಾ ಹೈ ಜಪಾನಿ’, ‘ಯಹೂದಿ’ ಚಿತ್ರದ ‘ಯೇ ಮೇರಾ ದೀವಾನಾಪನ್ ಹೈ’, ‘ಅನಾಡಿ’ ಚಿತ್ರದ ‘ಕಿಸೀ ಕಿ ಮುಸ್ಕುರಾಹಟೋ ಪೆ ಹೋ ನಿಸಾರ್’, ‘ಜಿಸ್ ದೇಶ್ ಮೈ ಗಂಗಾ ಬೆಹತೀ ಹೈ’ ಚಿತ್ರದ ‘ಹೋಂಟೋಪೆ ಸಚ್ಚಾಯಿ ರೆಹತೀ ಹೈ, ಜಹಾ ದಿಲ್ ಮೆ ಸಫಾಯಿ ರೆಹತೀ ಹೈ’, ‘ದೋಸ್ತ್ ದೋಸ್ತ್ ನಾ ರಹಾ, ಪ್ಯಾರ್ ಪ್ಯಾರ್ ನಾ ರಹಾ’ ಮೊದಲಾದ ಹಾಡುಗಳು ಭೈರವಿ ರಾಗದಲ್ಲೇ ಅಮರತ್ವ ಪಡೆದಿವೆ. 1971ರಲ್ಲಿ ಜೈಕಿಶನ್ ನಿಧನದ ಬಳಿಕ ಶಂಕರ್ ಸ್ವರಸಂಯೋಜಿಸಿದ ‘ಸನ್ಯಾಸಿ’ ಚಿತ್ರದ ಅಷ್ಟೂ ಹಾಡುಗಳನ್ನು ಭೈರವಿ ರಾಗದಲ್ಲೇ ಇವೆ.

    ಶಂಕರ್- ಜೈಕಿಶನ್ ಇಬ್ಬರಲ್ಲಿ ಯಾರ ಸಂಯೋಜನೆ ಚೆನ್ನಾಗಿರುತ್ತಿತ್ತು ಎಂದು ವಿಮಶಿಸುವುದು ಕಷ್ಟ. ಆದರೆ, ಅವರಿಬ್ಬರ ತಾಳಮೇಳದಲ್ಲಿ ಎಲ್ಲ ಹಾಡುಗಳು ಸೊಗಸಾಗಿರುತ್ತಿದ್ದವು. ಪ್ರಣಯಭರಿತ ಹಾಡುಗಳಿಗೆ ಜೈಕಿಶನ್ ಅದ್ಭುತವಾಗಿ ರಾಗ ಸಂಯೋಜಿಸಿದರೆ, ದುಃಖಭರಿತ ಹಾಗೂ ತಾತ್ವಿಕ ಹಾಡುಗಳಿಗೆ ಶಂಕರ್ ಜೀವತುಂಬುತ್ತಿದ್ದರು. ‘ಬರಸಾತ್’ ಚಿತ್ರದ ‘ಮೈ ಜಿಂದಗಿ ಮೆ ಹರದಮ್ ರೋತಾಹಿ ರಹಾ ಹೂ’, ಅದೇ ಚಿತ್ರದ ‘ರಾತ್ ಅಂಧೇರಿ ದೂರ ಸವೇರಾ ಬರಬಾದ್ ಹೈ ದಿಲ್ ಮೇರಾ’, ‘ಸಂಗಮ್ ಚಿತ್ರದ ‘ದೋಸ್ತ ದೋಸ್ತ ನಾ ರಹಾ’, ‘ಮೇರಾ ನಾಮ್ ಜೋಕರ್’ ಚಿತ್ರದ ‘ಜೀನಾ ಯಹಾ ಮರನಾ ಯಹಾ’, ‘ಲಾಲ್ ಪತ್ಥರ್’ ಚಿತ್ರದ ‘ಗೀತ್ ಗಾತಾ ಹೂ ಮೈ’, ‘ದಿಲ್ ಏಕ ಮಂದಿರ್’ ಚಿತ್ರದ ‘ಯಾದ್ ನ ಜಾಯೆ ಬೀತೆ ದಿನೋಂಕಿ’ ಮುಂತಾದ ಹಾಡುಗಳು ಹೃದಯ ಕರಗಿಸುವಂತೆ ಸೃಷ್ಟಿಸಿದ್ದು ಶಂಕರ್. ಸಂಯೋಜನೆಗೆ ಹಾಡುಗಳನ್ನು ಪರಸ್ಪರ ಹಂಚಿಕೊಂಡರೂ, ರೆಕಾರ್ಡಿಂಗ್ ಸಂದರ್ಭದಲ್ಲಿ ಇಬ್ಬರೂ ಹಾಜರಿರುತ್ತಿದ್ದರು.

    ಶಾರದಾ ಪ್ರಸಂಗ: ‘ಸಂಗಮ್ ಚಿತ್ರದ ಪ್ರೀಮಿಯರ್ ಷೋ ನಿಮಿತ್ತ ರಾಜ್​ಕಪೂರ್ ಟೆಹರಾನ್​ಗೆ ತೆರಳಿದ್ದಾಗ ಅಲ್ಲಿ ಓರ್ವ ಪಾಪ್ ಗಾಯಕಿಯ ಕಂಠಸಿರಿಗೆ ಮರುಳಾಗುತ್ತಾರೆ. ಆಕೆಯನ್ನು ಪರಿಚಯಿಸಿಕೊಂಡು ತಮ್ಮ ಚಿತ್ರದಲ್ಲಿ ಹಾಡುವಂತೆ ಆಹ್ವಾನಿಸುತ್ತಾರೆ. ನಂತರ ಆಕೆಯನ್ನು ಶಂಕರ್-ಜೈಕಿಶನ್​ರಿಗೆ ಪರಿಚಯಿಸುತ್ತಾರೆ. ಆ ಗಾಯಕಿಯೇ ಶಾರದಾ ರಾಜನ್ ಅಯ್ಯಂಗಾರ್. 1965ರಲ್ಲಿ ತೆರೆಕಂಡ ‘ಗುಮ್ಾಮ್ ಚಿತ್ರದಲ್ಲಿ ಮುಹಮ್ಮದ್ ರಫಿ ಜತೆ ಶಾರದಾ ಮೊದಲ ಬಾರಿ ಯುಗಳಗೀತೆ ಹಾಡಿದರು. ಶಂಕರ್-ಜೈಕಿಶನ್ ತಮ್ಮ ಬದಲು ಶಾರದಾಗೆ ಅವಕಾಶ ನೀಡಿದ್ದಕ್ಕೆ ಲತಾ ಮಂಗೇಶ್ಕರ್ ನೊಂದುಕೊಳ್ಳುತ್ತಾರೆ. ಕೆಲವು ಕಾಲ ರಾಜ್​ಕಪೂರ್ ಮತ್ತು ಶಂಕರ್-ಜೈಕಿಶನ್ ಚಿತ್ರಗಳಿಂದ ಲತಾ ದೂರ ಉಳಿಯುವುದಕ್ಕೂ ಇದೇ ಕಾರಣವಾಗುತ್ತದೆ. ಹೀಗಾಗಿಯೇ ರಾಜ್​ಕಪೂರ್​ರ ‘ಕಲ್ ಆಜ್ ಕಲ್’ ಮತ್ತು ‘ಮೇರಾ ನಾಮ್ ಜೋಕರ್’ ಚಿತ್ರಗಳಲ್ಲಿ ಲತಾ ಬದಲು ಅವರಂತೆಯೇ ಹಾಡುತ್ತಿದ್ದ ಕರ್ನಾಟಕದ ಗಾಯಕಿ ಸುಮನ್ ಕಲ್ಯಾಣಪುರ ಅವಕಾಶ ಪಡೆದರು. ಆಶಾ ಭೋಸ್ಲೆ ಕೂಡ ಇದೇ ಅವಧಿಯಲ್ಲಿ ಪ್ರವರ್ಧಮಾನಕ್ಕೆ ಬಂದರು. ಶಾರದಾ ಪ್ರಸಂಗ ಶಂಕರ್ ಮತ್ತು ಜೈಕಿಶನ್ ನಡುವೆ ಸಣ್ಣ ಬಿರುಕಿಗೂ ಕಾರಣವಾಗುತ್ತದೆ. ‘ಸೂರಜ್’ ಚಿತ್ರದ ‘ತಿತಿಲಿ ಉಡಿ’ ಹಾಡನ್ನು ಶಾರದಾ ಹಾಡಲಿ ಎಂದು ಶಂಕರ್ ಬಯಸಿದ್ದರೆ, ಲತಾ ಮಂಗೇಶ್ಕರ್ ಹಾಡಬೇಕೆಂಬುದು ಜೈಶಂಕರ್ ಇಚ್ಛೆಯಾಗಿತ್ತು. ಕೊನೆಗೆ ಆ ಹಾಡನ್ನು ಶಾರದಾ ಹಾಡಿದರು. ಅದಕ್ಕೆ ಅವರಿಗೆ ಪ್ರಶಸ್ತಿಯೂ ಬಂತು. ಅದೇ ರೀತಿ ತಮ್ಮಿಬ್ಬರಲ್ಲಿ ಯಾವ ಹಾಡಿಗೆ ಯಾರು ಸಂಗೀತ ಸಂಯೋಜಿಸಿದ್ದೇವೆಂದು ಇಬ್ಬರೂ ಬಹಿರಂಗ ಪಡಿಸಬಾರದೆಂದು ಶಂಕರ್-ಜೈಕಿಶನ್ ನಡುವೆ ಒಪ್ಪಂದವಾಗಿರುತ್ತದೆ. ‘ಸಂಗಮ್ ಚಿತ್ರದ ‘ಯೇ ಮೇರಾ ಪ್ರೇಮಪತ್ರ ಪಢಕರ್ ತುಮ್ ನಾರಾಜ ನಾ ಹೋನಾ’ ಹಾಡಿಗೆ ತಾವೇ ರಾಗ ಸಂಯೋಜಿಸಿದ್ದಾಗಿ ಜೈಕಿಶನ್ ಸಂದರ್ಶನವೊಂದರಲ್ಲಿ ಬಹಿರಂಗ ಹೇಳಿಕೆ ಕೊಟ್ಟಿದ್ದು ಶಂಕರ್​ಜಿ ಬೇಸರಕ್ಕೆ ಕಾರಣವಾಗುತ್ತದೆ. ಇದರಿಂದ ಇಬ್ಬರ ನಡುವೆ ಅಂತರ ಬೆಳೆಯುತ್ತದೆ.

    ನೃತ್ಯವಿಶೇಷ: ಶಂಕರ್​ಜಿ ಸ್ವತಃ ನೃತ್ಯಪಟುವಾಗಿದ್ದ ಕಾರಣಕ್ಕೋ ಏನೋ, ಅವರ ಎಲ್ಲ ಚಿತ್ರಗಳಲ್ಲಿ ನೃತ್ಯಸಂಗೀತದ ದೃಶ್ಯವೂ ಇರುತ್ತಿತ್ತು. ಒಮ್ಮೆ ಜೈಪುರದ ಅರಮನೆಯಲ್ಲಿ ‘ಪಟರಾಣಿ’ ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಖ್ಯಾತ ಅಭಿನೇತ್ರಿ ವೈಜಯಂತಿ ಮಾಲಾ ಆ ದಿನ ನೃತ್ಯದ ಸನ್ನಿವೇಶದಲ್ಲಿ ನೃತ್ಯದ ಹೆಜ್ಜೆಗಳನ್ನು ತಪ್ಪುತ್ತಿದ್ದರು. ಆಗ ಅಲ್ಲಿ ಉಪಸ್ಥಿತರಿದ್ದ ಶಂಕರ್​ಜಿ ಸ್ವತಃ ತಾವೇ ನರ್ತಿಸುವ ಮೂಲಕ ಆ ಕ್ಲಿಷ್ಟ ಹೆಜ್ಜೆಯನ್ನು ಯಾವ ರೀತಿ ನಿರ್ವಹಿಸಬೇಕೆಂದು ತೋರಿಸಿಕೊಟ್ಟಿದ್ದರು. ಮುಂದೆ ‘ಪ್ರಿನ್ಸ್’ ಚಿತ್ರದಲ್ಲಿ ಕಥಕ್ಕಳಿ ನೃತ್ಯ ಮಾಡುವಂತೆ ವೈಜಯಂತಿ ಮಾಲಾರಿಗೆ ಶಂಕರ್​ಜಿ ಪ್ರೇರಣೆ ತುಂಬಿದ್ದರು.

    ಜಾನೆ ಕಹಾ ಗಯೇ ವೊ ದಿನ್: ‘ಬರಸಾತ್ ಚಿತ್ರದಲ್ಲಿ ನಡುವೆ ಹಿನ್ನೆಲೆ ಸಂಗೀತವಾಗಿ ಬಂದ ಧಾಟಿಯೊಂದು 20 ವರ್ಷಗಳ ನಂತರ ಎರಡು ಪೂರ್ಣಪ್ರಮಾಣದ ಹಾಡುಗಳಾಗಿ ಜೀವತಳೆದಿದ್ದು ವಿಶೇಷ. ಆ ಹಾಡುಗಳೇ ‘ಜಾನೆ ಕಹಾ ಗಯೇ ವೊ ದಿನ್’ (ಸಾಹಿತ್ಯ ಹಸರತ್ ಜೈಪುರಿ) ಮತ್ತು ‘ಜೀನಾ ಯಹಾ ಮರನಾ ಯಹಾ’ (ಸಾಹಿತ್ಯ ಶೈಲೇಂದ್ರ). ಈ ಹಾಡುಗಳನ್ನು ‘ಸಂಗಮ್, ‘ಅನಾಡಿ’ ಮೊದಲಾದ ಚಿತ್ರಗಳಲ್ಲಿ ಬಳಸಲು ಶಂಕರ್-ಜೈಕಿಶನ್ ಪ್ರಯತ್ನಿಸಿದರೂ ರಾಜಕಪೂರ್ ಒಪ್ಪಿರಲಿಲ್ಲ. ‘ಮೇರಾ ನಾಮ್ ಜೋಕರ್’ ಚಿತ್ರದಲ್ಲಿ ರಾಜಕಪೂರ್ ಈ ಹಾಡುಗಳನ್ನು ವಿಶೇಷವಾಗಿ ಬಳಸಿದರು.

    ಮುಕೇಶ್ ಆವಾರಾ: ಶಂಕರ್ ಜೈಕಿಶನ್​ರ ‘ಆವಾರಾ’ ಚಿತ್ರದ ‘ಆವಾರಾ ಹೂಂ’ ಹಾಡು ಮುಕೇಶ್​ರನ್ನು ವಿಶ್ವವಿಖ್ಯಾತ ಗಾಯಕರನ್ನಾಗಿಸಿತು. ಈ ಚಿತ್ರ ಹಾಗೂ ‘ಆವಾರಾ ಹೂಂ’ ಹಾಡನ್ನು ಕಮ್ಯುನಿಸ್ಟ್ ಚೀನಾದ ಮಾವೊ ತ್ಸೆ ತುಂಗ್ ಮೆಚ್ಚಿಕೊಂಡಿದ್ದರಂತೆ! 1970ರಲ್ಲಿ ನೊಬೆಲ್ ಪ್ರಶಸ್ತಿಗೆ ಪಾತ್ರವಾದ ರಷ್ಯನ್ ಸಾಹಿತಿ ಅಲೆಕ್ಸಾಂಡರ್ ಸೊಲ್ಜೆನಿಟ್ಸಿನ್​ರ ಕ್ಯಾನ್ಸರ್ ವಾರ್ಡ್ ಕಾದಂಬರಿಯಲ್ಲಿ ‘ಆವಾರಾ ಹೂಂ’ ಗೀತೆಯ ಸಾಲುಗಳ ಉಲ್ಲೇಖವಿರುವುದು ಈ ಹಾಡಿನ ವಿಶ್ವವಿಖ್ಯಾತಿಗೆ ಸಾಕ್ಷಿ. ರಷ್ಯಾ, ಟರ್ಕಿ, ಥಾಯ್ಲೆಂಡ್, ಜಪಾನ್​ನಲ್ಲಿ ‘ಆವಾರಾ’ ಚಿತ್ರ ಜನಪ್ರಿಯವಾಗಿತ್ತು. ಟರ್ಕಿಯಲ್ಲಿ ಈ ಚಿತ್ರವನ್ನು ‘ಆವಾರೆ’ ಹೆಸರಲ್ಲಿ ರೀಮೇಕ್ ಕೂಡ ಮಾಡಲಾಗಿತ್ತು.

    ಈ ಸಾರಸ್ವತ ಜೋಡಿಯ ಜೀವನ-ಸಂಗೀತ ಪಯಣದ ಕುರಿತು ಸಿದ್ದಾಪುರ ಹಾಗೂ ಯಲ್ಲಾಪುರ ಪಿಎಲ್​ಡಿ ಬ್ಯಾಂಕ್​ನಲ್ಲಿ ಲೆಕ್ಕಾಧಿಕಾರಿ ಹಾಗೂ ವ್ಯವಸ್ಥಾಪಕರಾಗಿ ನಿವೃತ್ತರಾಗಿರುವ ಹೊನ್ನಾವರದ ವಿ.ಜಿ. ಭಟ್ (ಮೊ: 9482191276) ‘ಅಮರ ಸಂಗೀತಗಾರ ಜೋಡಿ ಶಂಕರ್-ಜೈಕಿಶನ್’ ಎಂಬ ಅಪರೂಪದ ಕೃತಿಯನ್ನೇ ರಚಿಸಿದ್ದಾರೆ. ಮೈಸೂರಿನ ಪ್ರೇಮ ಪ್ರಕಾಶನ ಈ ಕೃತಿ ಹೊರತಂದಿದೆ. ಮೊನ್ನೆ ಅ. 15ಕ್ಕೆ ಶಂಕರ್ ರಘುವಂಶಿ ಅವರ 100ನೇ ಜನ್ಮದಿನ ಬಂದುಹೋಯಿತು. ಅಂದರೆ, ಇದು ಅವರ ಜನ್ಮಶತಮಾನ ವರ್ಷ. ಈ ನೆಪದಲ್ಲಿ ಆ ಕೃತಿಯಲ್ಲಿರುವ ಸಂಗೀತ ದಿಗ್ಗಜರ ಬದುಕಿನ ಅಪರೂಪದ ಪ್ರಸಂಗಗಳನ್ನು ಪೋಣಿಸಿ ನೆನಪಿನ ಮಾಲಿಕೆ ರಚಿಸುವುದಕ್ಕೊಂದು ಸಂದರ್ಭ ಒದಗಿದಂತಾಯಿತು.

    ಶಂಕರ್-ಜೈಕಿಶನ್ ಸಂಗೀತ ಪಯಣದ ನೆನಪುಗಳು ಎಂದೆಂದೂ ಮುಗಿಯದ ಯಾನ.

    (ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

    ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts