More

    ಲೈಂಗಿಕ ದಮನಿತರ ಪುನರ್ವಸತಿ ಎಂದು?; ಇಂದು ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ

    ಲೈಂಗಿಕ ದಮನಿತರ ಪುನರ್ವಸತಿ ಎಂದು?; ಇಂದು ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನವೇಶ್ಯಾವಾಟಿಕೆಯನ್ನು ತುಚ್ಛವಾಗಿ ಕಾಣುವ ನಮ್ಮ ಭಾರತೀಯ ಸಭ್ಯ ಲೋಕಕ್ಕೆ, ಅದರಲ್ಲಿ ತೊಡಗಿರುವವರ ಹಕ್ಕುಗಳಿಗಾಗಿ ಒಂದು ದಿನವೆಂದರೆ ಹೌಹಾರುತ್ತಾರೆ! ಆದರೆ 2001ರಿಂದ ವಿಶ್ವದಾದ್ಯಂತ ಪ್ರತಿ ವರ್ಷ ಮಾರ್ಚ್ 3ರಂದು ‘ಅಂತರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ’ವೆಂದು ಆಚರಿಸಲಾಗುತ್ತಿದೆ. ವಿಭಿನ್ನ ಕಾರಣಗಳಿಗಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆ, ಪುರುಷ ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಸಂಕಷ್ಟಗಳ ಹಿನ್ನೆಲೆಯಲ್ಲಿ ಅವರ ಹಕ್ಕುಗಳನ್ನು ಮಾನವ ಹಕ್ಕುಗಳೆಂದು ಪರಿಗಣಿಸಬೇಕೆಂಬುದು ಮುಖ್ಯವಾದ ಬೇಡಿಕೆಯಾಗಿದೆ.

    ವೇಶ್ಯಾವಾಟಿಕೆ ನಮ್ಮ ಬರಿಕಣ್ಣಿಗೆ ಕಾಣದ, ಒಂದು ಕರಾಳ ನಿಗೂಢಲೋಕ. ಭಾರತದಂತಹ ದೇಶದಲ್ಲಿ ಬಡತನ, ಅನಕ್ಷರತೆ, ಸಾಮಾಜಿಕ ಅಸಮಾನತೆ, ಜಾತಿ ತಾರತಮ್ಯ, ನಿರುದ್ಯೋಗ, ಅಪಹರಣ, ಅತ್ಯಾಚಾರ, ಬಾಲ್ಯವಿವಾಹ, ವೈಧವ್ಯ, ಕುಡುಕ ಗಂಡ… ಮೊದಲಾದ ವಿಷಮ ಕಾರಣಗಳಿಗೆ ಸಿಕ್ಕು, ಬದುಕು ನಡೆಸುವ ಅನಿವಾರ್ಯತೆಯಿಂದಾಗಿ ವೇಶ್ಯಾವಾಟಿಕೆ ಜಾಲಕ್ಕೆ ಬಿದ್ದವರೇ ಹೆಚ್ಚಿದ್ದಾರೆ. ಇವರ್ಯಾರಿಗೂ ಹಕ್ಕು ಪ್ರತಿಪಾದಿಸಲೂ ದನಿಯಿಲ್ಲ! ಹೀಗೆಂದೆ ನಮ್ಮ ನ್ಯಾಯಸ್ಥಾನಗಳು ಇದನ್ನು ‘ಲೈಂಗಿಕ ಜೀತ’ವೆಂದು ಪ್ರತಿಪಾದಿಸಿವೆ. ಇದೆಲ್ಲವನ್ನೂ ಪರಿಗಣಿಸಿಯೇ ದೇಶದಲ್ಲಿಯೇ ಮೊದಲ ಬಾರಿಗೆ, ನಾಲ್ಕು ವರ್ಷಗಳ ಹಿಂದೆ, ಕರ್ನಾಟಕ ಸರ್ಕಾರದಿಂದ ರಚಿಸಲಾದ ‘ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿ’ಯು ಇವರನ್ನು ‘ಲೈಂಗಿಕ ದಮನಿತ’ರೆಂದು ಸಂಬೋಧಿಸಬೇಕೆಂದು ಹೇಳುತ್ತದೆ. ಊಹೆಗೂ ಸಿಗದಂತಹ ದಮನ ಮತ್ತು ದೌರ್ಜನ್ಯಗಳು ಅವ್ಯಾಹತವಾಗಿ ಈ ಸಮುದಾಯದ ಮೇಲೆ ನಡೆಯುತ್ತದೆ. ಈ ಹಿಂದೆ ವೇಶ್ಯಾವಾಟಿಕೆ ನೀತಿ ನಿಯಮಗಳಿಗೆ ಒಳಪಟ್ಟು, ಸೀಮಿತವಲಯದಲ್ಲಿ ಗೌಪ್ಯವಾಗಿತ್ತು. ಆದರೆ ಜಾಗತೀಕರಣದ ಪ್ರವೇಶದೊಂದಿಗೆ ಹೆಣ್ಣು ಮಾರಾಟದ ವಸ್ತುವಾಗಿಬಿಟ್ಟಿದ್ದಾಳೆ! ಇಂದು ಅಶ್ಲೀಲತೆಗೆ ನಿರ್ಬಂಧವಿರದ ಸಮೂಹ ಮಾಧ್ಯಮಗಳು ಮತ್ತು ಅರೆನಗ್ನತೆಯ ಪ್ರದರ್ಶನದ ಮೂಲಕ, ಕಾಮುಕ ಭಾವನೆಗಳನ್ನು ಉದ್ದೀಪನೆಗೊಳಿಸಿ, ಪ್ರಚೋದಿಸುವ, ವೈಭವೀಕರಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಇದರಿಂದಾಗಿ ಪ್ರಾಪ್ತ/ಅಪ್ರಾಪ್ತ ಹೆಣ್ಣುಮಕ್ಕಳ ವ್ಯಾಪಕ ಅಪಹರಣ, ಕಳ್ಳಸಾಗಣೆ, ದೇಶವಿದೇಶಗಳಿಗೆ ಮಾರಾಟ… ಇವೆಲ್ಲವೂ ನೂರಾರು ಪಟ್ಟು ಹೆಚ್ಚಾಗಿದೆ. ಇದುವರೆಗೆ ದೇಶ-ವಿದೇಶಗಳಿಗೆ ಭಾರತದ 25 ಲಕ್ಷಕ್ಕೂ ಹೆಚ್ಚು ಹೆಣ್ಣುಮಕ್ಕಳು ಕಳ್ಳಸಾಗಾಣಿಕೆ ಮತ್ತು ಮಾರಾಟಕ್ಕೆ ಒಳಗಾಗಿ ವೇಶ್ಯಾವಾಟಿಕೆಯ ದಂಧೆಯೊಳಗೆ ನೂಕಲ್ಪಟ್ಟಿದ್ದಾರೆ ಎಂದು ಸರ್ಕಾರಿ ವರದಿಗಳೇ ದಾಖಲಿಸಿರುವುದು ಸಂಕಟದಾಯಕವಾಗಿದೆ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏಡ್ಸ್ ನಿಯಂತ್ರಣಕ್ಕಾಗಿ ರಾಷ್ಟ್ರಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಹುಟ್ಟಿಕೊಂಡ ನ್ಯಾಕೋ- ‘ನ್ಯಾಷನಲ್ ಏಡ್ಸ್ ನಿಯಂತ್ರಣ ಮಂಡಳಿ’ ಎಂಬ ಬೃಹತ್ ಎನ್​ಜಿಓ, ತನ್ನ ಉದ್ದೇಶ ಸಾಧನೆಗಾಗಿ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಂಡೇ ದೇಶದಾದ್ಯಂತ ಜಾಲವನ್ನು ವ್ಯಾಪಕವಾಗಿ ಹರಡಿದೆ. ಪ್ರತಿಯೊಂದು ರಾಜ್ಯ ಶಾಖೆಗೆ ಆಯಾ ರಾಜ್ಯದ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುತ್ತಾರೆ! ಆರೋಗ್ಯಮಂತ್ರಿಯೇ ಮುಖ್ಯ ಕಾರ್ಯದರ್ಶಿಯಾಗಿರುತ್ತಾರೆ. ಸರ್ಕಾರ ಮತ್ತು ವಿದೇಶಗಳಿಂದ ಕೋಟ್ಯಂತರ ರೂಪಾಯಿಗಳ ಅನುದಾನಗಳು ಇದಕ್ಕಾಗಿಯೇ ಹರಿದುಬರುತ್ತದೆ. ಸಾವಿರಾರು ಜನರನ್ನು ಈ ನೆಟ್ವರ್ಕ್​ಗಾಗಿ ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ದೇಶದಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿರುವ ಲಕ್ಷಾಂತರ ಮಂದಿಯನ್ನು ಕಾಂಡಮ್ ವಿತರಣೆಯ ಜಾಲದಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಹೀಗಾಗಿ ಭಾರತದಲ್ಲಿ ವೇಶ್ಯಾವಾಟಿಕೆ ಭಾಗಶಃ ಕಾನೂನುಬದ್ಧವೇ ಆಗಿಹೋಗಿದೆ! ‘ಸರ್ಕಾರಿ ಪ್ರಾಯೋಜಿತ ವೇಶ್ಯಾವಾಟಿಕೆ’ಯೂ ಆಗಿರುವುದು ದುರಂತ.

    ಆರೋಗ್ಯ ಇಲಾಖೆಯಡಿ ನೋಂದಣಿಯಾದವರಲ್ಲಿ ನಾಯಕತ್ವ ಇರುವವರನ್ನು ಗುರುತಿಸಿ ಪೀರ್ ವರ್ಕರ್ಸ್ ಗಳನ್ನಾಗಿ ನೇಮಿಸಿ, ಕಾಂಡಮ್ ಹಂಚಲು ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದಕ್ಕಾಗಿ ಟಾರ್ಗೆಟ್​ಗಳನ್ನೂ ನೀಡಿ, ಅದನ್ನು ತಲುಪಿದವರಿಗೆ ಹೆಚ್ಚಿನ ಇನ್ಸೆಂಟಿವ್​ನ ಆಮಿಷವನ್ನೊಡ್ಡಲಾಗುತ್ತದೆ. ಇದರಿಂದ ವೇಶ್ಯಾವಾಟಿಕೆ ಜಾಲದೊಳಗೆ ಹೆಚ್ಚೆಚ್ಚು ಹೆಣ್ಣುಮಕ್ಕಳು ಮತ್ತು ಗ್ರಾಹಕರು ಬರುತ್ತಿದ್ದಾರೆ! ಇದು ಅಪರೋಕ್ಷವಾಗಿ ಸರ್ಕಾರವೇ ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡಿದಂತಾಗಿದೆ! ಈ ಕಾಂಡಮ್ ಹಂಚಿಕೆಯ ನೆಟ್ವರ್ಕ್ ಒಳಗೆ ಅಪ್ರಾಪ್ತ ಬಾಲಕಿಯರು, ಅಂಗವಿಕಲೆಯರು, ಸ್ವತಃ ಎಚ್​ಐವಿ ಸೋಂಕಿತರೂ ಇರುವುದು, ಇವರಲ್ಲಿ ಶೇಕಡ 72 ಮಂದಿ ‘ವೇಶ್ಯಾವಾಟಿಕೆಯಿಂದ ಹೊರಬರುತ್ತೇವೆ ಪುನರ್ವಸತಿ ನೀಡಿ’ ಎಂದು ಗೋಗರೆದಿರುವುದು ವರದಿಯಲ್ಲಿ ದಾಖಲಾಗಿದೆ! ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿ ನಾಲ್ಕು ವರ್ಷವೇ ಕಳೆದು ಹೋದರೂ, ಈ ಅಸಹಾಯಕರನ್ನು ಜಾಲದಿಂದ ಹೊರತೆಗೆಯಲು ಯಾವ ಕನಿಷ್ಠ ಪ್ರಯತ್ನವೂ ಆಗಿಲ್ಲ! ಏಡ್ಸ್ ನಿಯಂತ್ರಣ ಮಂಡಳಿ, ಈ ವ್ಯವಸ್ಥೆ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಜಾಲ ಹೆಣೆದಿದೆ ಮತ್ತು ಈ ವ್ಯವಸ್ಥೆ ನಿರ್ವಹಿಸುತ್ತಿರುವ ಲೈಂಗಿಕ ಕಾರ್ಯಕರ್ತೆಯರ ಕೋಟಿಗಟ್ಟಲೆ ಹಣವನ್ನು ನಿರ್ಲಜ್ಜವಾಗಿ ತಾನೇ ಬಾಕಿ ಇಟ್ಟುಕೊಂಡುಬಿಟ್ಟಿದೆ! ಇರುವ ದಳ್ಳುರಿ ಸಾಲದೆಂಬಂತೆ, ಇದೂ ಅವರ ಒಡಲು ಸುಡುತ್ತಿದೆ. ಅಸಹಾಯಕ, ರೋಗಿಷ್ಠ, ವಯಸ್ಸಾದ, ಲೈಂಗಿಕ ದಮನಿತರ ಪರಿಸ್ಥಿತಿ ಶೋಚನೀಯವಾಗಿ, ಬೀದಿಗೆ ಬೀಳುತ್ತಿದ್ದಾರೆ. ಇವೆಲ್ಲವೂ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯೇ ಆಗಿದೆ. ಆದರೆ ಇವರನ್ನು ರಕ್ಷಿಸಬೇಕಾದ, ವೇಶ್ಯಾವಾಟಿಕೆಯಿಂದ ಹೊರಬರಲು ಬಯಸುತ್ತಿರುವ ಲೈಂಗಿಕ ದಮನಿತರಿಗೆ ಬದುಕಲು ಬೇಕಾದ ಪರ್ಯಾಯ ವ್ಯವಸ್ಥೆ ರೂಪಿಸಬೇಕಾದ ಸರ್ಕಾರ ಮತ್ತು ಸಮಾಜ, ವೇಶ್ಯಾವಾಟಿಕೆ ಜೀವಂತವಿರಿಸಲು ಬೆಂಬಲವಾಗಿರುವುದು ನೋವಿನ ಸಂಗತಿಯಾಗಿದೆ.

    ‘ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ರಕ್ಷಣೆಗಾಗಿ’ ಎಂಬ ಘೊಷಣೆಯೊಂದಿಗೆ ಹುಟ್ಟಿಕೊಂಡ ಕೆಲ ನಗರ ಕೇಂದ್ರಿತವಾದ ಎನ್​ಜಿಓಗಳಿಂದಾಗಿ ಕೂಡ ವೇಶ್ಯಾವಾಟಿಕೆ ವ್ಯಾಪಕಗೊಂಡಿದೆ. ‘ನನ್ನ ದೇಹ ನನ್ನ ಹಕ್ಕು’ ಎಂಬ ಪರಿಕಲ್ಪನೆಯ ಮೂಲಕ ಇವರನ್ನು ಕಾರ್ವಿುಕರೆಂದು ಪ್ರಚೋದಿಸಲಾಗುತ್ತಿದೆ! ಕೇಂದ್ರ ಸಮಸ್ಯೆಯನ್ನು ಜೀವಂತವಾಗಿರಿಸಿ ಅದರ ನೆಪದಲ್ಲಿ ತಮ್ಮ ಉದರಪೋಷಣೆ ಮಾಡಿಕೊಳ್ಳುವಂತಹ ಬೃಹತ್ ನೆಟ್ವರ್ಕ್ ಬೆಳೆಯುತ್ತಿದೆ. ವೇಶ್ಯಾವಾಟಿಕೆಯಲ್ಲೇ ಇರಬಯಸುವ ಕೆಲವರ ಸಮಸ್ಯೆಗೆ ಬೇರೆಯದೇ ಆಯಾಮವಿದೆ. ಅದಕ್ಕೆ ಕಾನೂನಿನ ಬೆಂಬಲವೂ ಇದೆ. ಆದರೆ ಅನಿವಾರ್ಯತೆಯಿಂದ ಇದರೊಳಗೆ ಬಿದ್ದು, ಅದರಿಂದ ಹೊರಬರಲು ಹಾತೊರೆಯುತ್ತಿರುವ ‘ದಮನಿತರು’ ಬಹುಸಂಖ್ಯಾತರಿದ್ದಾರೆ. ‘ಮುಂದೆ ನಮ್ಮ ಮಕ್ಕಳಿಗೆ ಈ ಸ್ಥಿತಿ ಬರದಿರಲಿ’ ಎಂದು ಹಾತೊರೆಯುತ್ತಿದ್ದಾರೆ. ಇವರ ಈ ಪರಿಸ್ಥಿತಿಗೆ ಹೆಚ್ಚಾಗಿ ಸರ್ಕಾರದ ಮತ್ತು ವ್ಯವಸ್ಥೆಯ ಲೋಪವೇ ಕಾರಣವಾಗಿರುವುದು ನಿರ್ವಿವಾದ. ಆದ್ದರಿಂದ, ಕಂಗೆಟ್ಟಿರುವ ದಮನಿತರನ್ನು ಸಶಕ್ತವಾಗಿ ಪುನರ್ವಸತಿಗೊಳಿಸಲು ಸರ್ಕಾರ ತಕ್ಷಣವೇ ಕಾರ್ಯಯೋಜನೆ ರೂಪಿಸಬೇಕು. ಮತ್ತು ಅಸಹಾಯಕ ಜೀವಗಳು ವೇಶ್ಯಾವಾಟಿಕೆಯೊಳಗೆ ಬಲವಂತದಿಂದ ತಳ್ಳಲ್ಪಡುವ ಸ್ಥಿತಿಯನ್ನು ನಿಯಂತ್ರಿಸಬೇಕು. ಇದು ಮಾತ್ರ, ಅಂತಃಕರಣವುಳ್ಳ ಯಾವುದೇ ಸರ್ಕಾರದ ಘನತೆಯುತ ಆಡಳಿತಕ್ಕೆ ಮಾದರಿಯಾಗುತ್ತದೆ.

    (ಲೇಖಕರು ಕರ್ನಾಟಕ ರಾಜ್ಯ ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನ ಸಮಿತಿಯ ಸದಸ್ಯರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts