More

    ಭಾವಿ ಅಮ್ಮನಿಗೆ ಕೋವಿಡ್ ಗುಮ್ಮ!

    ಕರೊನಾದ ಈ ಬಿಕ್ಕಟ್ಟಿನ ದಿನಗಳಲ್ಲಿ ಗರ್ಭ ಧರಿಸುವ ಬಗ್ಗೆ ಭಾವಿ ಅಮ್ಮಂದಿರ ಮನಸ್ಸಿನಲ್ಲಿ ನೂರೆಂಟು ಪ್ರಶ್ನೆಗಳು ಉದ್ಭವವಾಗುತ್ತಿವೆ. ಕರೊನಾ ತೀವ್ರತೆ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಹೀಗಿರುವಾಗ ಗರ್ಭಧಾರಣೆ ಮುಂದೂ ಡುತ್ತಾ ಹೋಗುವುದು ಸರಿಯೇ? ಅಮ್ಮ ನಾಗುವ ಕನಸು ಕಾಣುತ್ತಿ ರುವವರು ಈ ಹಂತದಲ್ಲಿ ಏನು ಮಾಡಬೇಕು? ತಜ್ಞ ವೈದ್ಯರು ನೀಡಿರುವ ಸಲಹೆ ಇಲ್ಲಿದೆ ನೋಡಿ…

    | ಕೆ.ಬಿ.ಶುಭ

    ಕರೊನಾ ಶುರುವಾದ ಮೇಲೆ ಬಹುತೇಕ ಕಂಪನಿಗಳು ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿವೆ. ಮನೆಯಲ್ಲಿ ಇರುವ ಅವಕಾಶ ಸಿಕ್ಕಾಗಲೇ ಮಗುವನ್ನು ಮಾಡಿಕೊಂಡು ಬಿಡುವುದು ಒಳ್ಳೆಯದು ಎಂಬ ಆಲೋಚನೆ ಹಲವರದು. ಕಚೇರಿಗೆ ಓಡಾಟ ಇರದ ಕಾರಣ, ಗರ್ಭವತಿಯಾಗಿದ್ದಾಗ ಆರಾಮ ತೆಗೆದುಕೊಳ್ಳಲು, ಮಗುವಾದ ಮೇಲೆ ಅದರ ಆರೈಕೆಗೆ, ಎದೆಹಾಲು ಉಣಿಸುವುದಕ್ಕೆ ಎಲ್ಲವೂ ಇದು ಸೂಕ್ತ ಸಮಯ ಎಂದುಕೊಳ್ಳುವುದು ಸಹಜ.

    ಆದರೆ ಅದೇ ಇನ್ನೊಂದೆಡೆ, ಕ್ಷಣ ಕ್ಷಣಕ್ಕೂ ಕರೊನಾ ಆತಂಕ ಸೃಷ್ಟಿಸುತ್ತಿರುವಾಗ, ಆಸ್ಪತ್ರೆಗೆ ಹೋಗುವಂತಿಲ್ಲ, ಕರೊನಾ ಬಂದರೆ ಎಂಬ ಭಯ, ಕರೊನಾದ ಭೀತಿಯಲ್ಲಿಯೇ ಇದ್ದರೆ ಹೊಟ್ಟೆಯಲ್ಲಿರುವ ಮಗುವಿಗೆ ಏನಾಗುವುದೋ ಎಂಬ ಆತಂಕ. ಇದರ ನಡುವೆಯೇ ಕೆಲ ಕರೊನಾ ಲಸಿಕೆಗಳು ಗರ್ಭಿಣಿಯರಿಗೆ ಸುರಕ್ಷಿತವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಭಾರತದಲ್ಲೂ ಕರೊನಾ ಲಸಿಕೆ ಪಡೆದ ಮಹಿಳೆಯರು ಗರ್ಭಧಾರಣೆಯನ್ನು ಕನಿಷ್ಠ 2 ತಿಂಗಳಾದರೂ ಮುಂದೂಡಿ ಎಂದು ಸ್ತ್ರೀ ರೋಗ ತಜ್ಞರು ಹೇಳುತ್ತಿದ್ದಾರೆ.

    ಬ್ರೆಜಿಲ್​ನಲ್ಲಿ ಕರೊನಾ ಹಾವಳಿ ಹೆಚ್ಚಿರುವುದರಿಂದ ಗರ್ಭಧಾರಣೆಯನ್ನು ಸ್ವಲ್ಪ ಮುಂದೂಡಿ ಎಂದು ಸರ್ಕಾರ ಮನವಿ ಮಾಡಿದೆ. ಆರೋಗ್ಯ ವ್ಯವಸ್ಥೆ ಮರಳಿ ಹಳಿಗೆ ಬರುವವರೆಗೆ ಈ ಮನವಿ ಪರಿಗಣಿಸಿ ಎಂದು ಹೇಳಿದೆ. ಇನ್ನು ಕೆಲ ದೇಶಗಳಲ್ಲಿ ಕರೊನಾ ಇದ್ದರೂ ಪರವಾಗಿಲ್ಲ, ಗರ್ಭಿಣಿಯರಿಗಾಗಿಯೇ ನಾವು ಬೇರೆ ವಿಧದ ಔಷಧಿ ನೀಡುತ್ತೇವೆ ಎಂದೂ ವೈದ್ಯರು ಹೇಳಿದ್ದಾರೆ. ಅಮೆರಿಕದ ಸ್ತ್ರೀರೋಗ ತಜ್ಞರ ಸಂಘದ ಪ್ರಕಾರ ಗರ್ಭಿಣಿಯರು ವ್ಯಾಕ್ಸಿನೇಷನ್ ತೆಗೆದುಕೊಳ್ಳಬಹುದು. ಇನ್ನೊಂದೆಡೆ, ಭಾರತದಲ್ಲಿ ‘ಕರೊನಾ ಹಬ್ಬುತ್ತಿರುವ ವೇಳೆ ಗರ್ಭಧಾರಣೆ’ ಕುರಿತು ಸ್ಪಷ್ಟ ಅಧ್ಯಯನ ಆಗಿಲ್ಲ. ಹಾಗಿದ್ದರೆ ಮಾಡುವುದೇನು?

    ಇಂಗ್ಲೆಂಡ್ ಸೇರಿದಂತೆ ಕೆಲವು ದೇಶಗಳಲ್ಲಿ ನಡೆದಿರುವಂತೆ ನಮ್ಮಲ್ಲಿ ಅಧ್ಯಯನ ನಡೆದಿಲ್ಲ. ಗರ್ಭಧಾರಣೆ ಮತ್ತು ಕರೊನಾದ ಕುರಿತು ಇನ್ನೂ ಸ್ಪಷ್ಟತೆ ಇಲ್ಲ. ಹಾಗಾಗಿ ಗರ್ಭವತಿಯಾಗುವುದನ್ನು ಸ್ವಲ್ಪ ಮುಂದೂಡುವುದೇ ವಿಹಿತ ಎಂದೇ ಬಹುತೇಕ ವೈದ್ಯರು ಅಭಿಪ್ರಾಯ ಪಡುತ್ತಿದ್ದಾರೆ.

    ಏಕೆಂದರೆ ಭಾರತದ ಸದ್ಯದ ಸಂದರ್ಭವನ್ನು ಪರಿಗಣಿಸಿದರೆ ಬಹಳಷ್ಟು ರಾಜ್ಯಗಳಲ್ಲಿ ಕರೊನಾ ಅಬ್ಬರ ದಿನೇ ದಿನೇ ಏರುತ್ತಲೇ ಇದೆ. ಗರ್ಭ ಧರಿಸಿದ ಆರಂಭದ 3 ತಿಂಗಳು ಸ್ವಲ್ಪ ಜಾಗರೂಕರಾಗಿ ಇರಬೇಕಾದ್ದರಿಂದ ಉದ್ವೇಗದ ಸುದ್ದಿ, ಒತ್ತಡ ತರುವಂತಹ ವಿಷಯಗಳತ್ತ ಗಮನ ಹರಿಸಬಾರದು. ಒಂದು ವೇಳೆ ತಾಯಿ ಒತ್ತಡಕ್ಕೆ ಒಳಗಾದರೆ ಅದು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಕರೊನಾದ ಒತ್ತಡ ಮನಸ್ಸಿನಲ್ಲಿ ಇಟ್ಟುಕೊಂಡು ಗರ್ಭ ಧರಿಸುವುದು ಒಳ್ಳೆಯದಲ್ಲ ಎನ್ನುವುದು ಬಹುತೇಕ ತಜ್ಞರ ಅಭಿಮತ.

    ಆದರೆ ವಯಸ್ಸು ಮೀರುತ್ತಿದೆ, ಕರೊನಾ ಹಾವಳಿ ನಿಲ್ಲುವವರೆಗೆ ಗರ್ಭಧಾರಣೆ ಮುಂದೂಡುತ್ತಾ ಹೋಗುವ ಸಮಯವೂ ಇದಲ್ಲ ಎನ್ನುವುದೂ ನಿಜವಲ್ಲವೆ? ಈಗ ಗರ್ಭಿಣಿಯರು ಸ್ಕಾ್ಯನಿಂಗ್, ಎಕ್ಸ್​ರೇ, ಆ ಪರೀಕ್ಷೆ, ಈ ಪರೀಕ್ಷೆ ಎಂದೆಲ್ಲಾ ಪದೇ ಪದೇ ಆಸ್ಪತ್ರೆಗೆ ಹೋಗುವಂತೆ ಹಿಂದೆ ಯಾರೂ ಹೋಗುತ್ತಿರಲಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಹೋಗುವುದಿಲ್ಲ. ಮನೆಯಲ್ಲಿದ್ದ ಹಿರಿಯರೇ ಗರ್ಭವತಿಯರ ಆರೈಕೆ ಮಾಡುತ್ತಾರೆ. ಅಂಥ ಅವಕಾಶ ಇದ್ದರೆ ಗರ್ಭಧಾರಣೆಗೆ ಏನೂ ತೊಂದರೆ ಇಲ್ಲ ಎನ್ನುತ್ತಾರೆ ವೈದ್ಯರು. ಇದೆ ವೇಳೆ ಕೃತಕ ಗರ್ಭಧಾರಣೆಗೆ ಒಳಗಾಗುವವರಿಗೆ ಸ್ವಲ್ಪ ಆತಂಕ ಎದುರಾಗಬಹುದು. ಏಕೆಂದರೆ ಅವರು ಪದೇಪದೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಓಡಾಡಬೇಕಿರುತ್ತದೆ. ಈ ಸಂದರ್ಭದಲ್ಲಿ ಅದು ಸೂಕ್ತವಲ್ಲ ಎನ್ನುವುದು ಅವರ ಸ್ಪಷ್ಟ ಅಭಿಮತ.

    ಮನೋಬಲವಿದ್ದರೆ ಗರ್ಭ ಧರಿಸಿ

    ಸಾಮಾನ್ಯವಾಗಿ ಗರ್ಭ ಧರಿಸಲು ಬೇಸಿಗೆ ಕಾಲ ಒಳ್ಳೆದಲ್ಲ. ಈಗ ಕರೊನಾ ಲೆಕ್ಕ ತೆಗೆದುಕೊಂಡರೆ ಅವರವರ ಪರಿಸ್ಥಿತಿ ಹಾಗೂ ಮನೋಬಲದ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಒತ್ತಡಕ್ಕೆ ಒಳಗಾಗುವವರು ಗರ್ಭಧಾರಣೆ ಮುಂದೂಡಿದರೆ ಒಳ್ಳೆಯದು. ಒಂದು ವೇಳೆ ತಾಯಿಗೇ ಕರೊನಾ ಬಂದರೆ ಆಕೆಯಲ್ಲಿ ದುಗುಡ, ಭಯ, ಆತಂಕ ಇದ್ದೇ ಇರುತ್ತದೆ. ಇದರ ಜತೆಗೆ ಔಷಧಗಳನ್ನು ತೆಗೆದುಕೊಳ್ಳುತ್ತಾರೆ. ಇವೆಲ್ಲವೂ ಮಗುವಿನ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಖಾಸಗಿ ಆಯುರ್ವೆದ ಅಕಾಡೆಮಿಯ ಕಾರ್ಯದರ್ಶಿ ಡಾ. ಸಾವಿತ್ರಿ. ಆದ್ದರಿಂದ ನಿಮ್ಮ ಮನೋಬಲ ಪರೀಕ್ಷಿಸಿಕೊಂಡು ಗರ್ಭಧರಿಸುವುದು ಒಳ್ಳೆಯದು. ಒಂದು ವೇಳೆ ಸಾಮಾನ್ಯ ಜ್ವರ ಬಂದರೂ ಮಗುವಿನ ಮೇಲೆ ಪರಿಣಾಮವಾಗುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ಎಚ್ಚರಿಕೆಯಿಂದ ಇರುವುದು ಒಳಿತು. ಕೋವಿಡ್ ಪಾಸಿಟಿವ್ ಆಗಿದೆ ಎಂದ ಕೂಡಲೆ ಐಸೋಲೇಟ್ ಆಗುವುದು ಮೊದಲ ಕೆಲಸ. ದೇಶಾದ್ಯಂತ ಸಾಕಷ್ಟು ಆಯುರ್ವೆದ ವೈದ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿದಿನ ವೈದ್ಯರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಮನೆಯಿಂದಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್​ಗೆ ಈ ಔಷಧ ಅಂತ ಆಯುರ್ವೆದದಲ್ಲಿ ಇಲ್ಲ. ಪ್ರಿನ್ಸಿಪಲ್ ಓರಿಯೆಂಟೆಡ್ ಆಗಿ ಒಂದು ವಿಧಿ-ವಿಧಾನ ಇದೆ. ಅದು ರೋಗಿಯ ದೇಹ ಪ್ರಕೃತಿ, ಮಾನಸಿಕ ಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ. ಕಳೆದ ಮಾರ್ಚ್​ನಿಂದಲೂ ನಿರಂತರವಾಗಿ ಅಕಾಡೆಮಿಯಿಂದ ಸಲಹೆ ನೀಡಲಾಗುತ್ತಿದೆ. ‘ಆಯುರ್ವೆದ ಅಮೃತ’ ಅಂತ ಕೋವಿಡ್ ಕೇಸ್ ಸೆಲ್ ತೆರೆಯಲಾಗಿದ್ದು, ದೇಶ-ವಿದೇಶದ ರೋಗಿಗಳು ಸಲಹೆ ಪಡೆಯುತ್ತಿದ್ದಾರೆ. ಸಂಪರ್ಕಕ್ಕೆ 080-22420547.

    ಎದೆಹಾಲಿನ ಮೂಲಕ ಕರೊನಾ ವೈರಸ್ ಬರದು

    ತಾಯಿ ಮೂಲಕ ಗರ್ಭದಲ್ಲಿರುವ ಮಗುವಿಗೆ ವೈರಸ್ ಹರಡುತ್ತದೆ ಎಂಬ ಮಾತು ಎಲ್ಲೂ ಇಲ್ಲ. ಅದೇ ರೀತಿ ತಾಯಿಯ ಎದೆಹಾಲಿನ ಮೂಲಕವೂ ವೈರಸ್ ಪಸರಿಸುವುದಿಲ್ಲ. ಆದರೆ ತಾಯಿ ಎದೆ ಹಾಲು ಕುಡಿಸುವ ಪ್ರಕ್ರಿಯೆಯಲ್ಲಿ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದ್ದರಿಂದ ಎದೆ ಹಾಲು ಕುಡಿಸುವಾಗ ಮಾಸ್ಕ್ ಧರಿಸುವುದು, ಮುಖದಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಒಳಿತು. ಒಂದು ವೇಳೆ ತಾಯಿಗೆ ಸೋಂಕು ದೃಢವಾದಲ್ಲಿ ಎದೆ ಹಾಲನ್ನು ಹಿಂಡಿ ಕುಡಿಸುವ ಕ್ರಿಯೆಯನ್ನು ಅನುಸರಿಸಬಹುದು ಎನ್ನುತ್ತಾರೆ ಡಾ. ವೀಣಾ ಭಟ್.

    ಆಯುರ್ವೆದದಲ್ಲಿ ಕರೊನಾ ನಿರ್ವಹಣೆ ಹೇಗೆ?

    • ಪ್ರತಿದಿನ ಎಣ್ಣೆ ಅಥವಾ ತುಪ್ಪ ಹಚ್ಚಿ ಸ್ನಾನ ಮಾಡಿ.
    • ಕೊಬ್ಬರಿ ಎಣ್ಣೆಯಲ್ಲಿ ಬಾಯಿ ಮುಕ್ಕಳಿಸಿ.
    • ಆದಷ್ಟು ಹೊರಗಿನ ಆಹಾರ ವರ್ಜಿಸುವುದು.
    • ಫ್ರಿಜ್​ನಲ್ಲಿದ್ದ ಆಹಾರ ಬೇಡ.
    • ಮೂಗಿಗೆ ಎಣ್ಣೆ ಬಿಟ್ಟುಕೊಳ್ಳಬಹುದು.
    • ಪೌಷ್ಟಿಕ ಆಹಾರ ಸೇವನೆಯ ಜತೆಗೆ ಸರಳ ವ್ಯಾಯಾಮಗಳನ್ನು ಮಾಡಬೇಕು.
    • ಉಸಿರಾಟದ ಅಭ್ಯಾಸ ಎಂದರೆ ಪ್ರಾಣಾಯಾಮವನ್ನು
    • ನಿಯಮಿತವಾಗಿ ಮಾಡಬೇಕು.

    ಭಾವಿ ಅಮ್ಮನಿಗೆ ಕೋವಿಡ್ ಗುಮ್ಮ!ಅಗ್ನಿಯಲ್ಲಿ ಸಮಸ್ಯೆಯಾದರೆ ದೇಹದ ಹೊರಗೂ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಜೀರ್ಣಶಕ್ತಿ ಸರಿ ಇರಬೇಕು, ಮನಸ್ಸು ಪ್ರಫುಲ್ಲವಾಗಿರಬೇಕು, ಸರಿಯಾದ ಸಮಯಕ್ಕೆ ಮೋಷನ್ ಆಗುವಂತೆ ಸಮಯಕ್ಕೆ ಸರಿಯಾಗಿ ನಿದ್ದೆ, ಬಿಸಿ ಬಿಸಿ ಊಟ, ನಿತ್ಯ ತುಪ್ಪ ಸೇವಿಸಬೇಕು. ಗರ್ಭಿಣಿ ಕೊಠಡಿಯಲ್ಲಿ ತುಪ್ಪದ ದೀಪ ಹಚ್ಚಿ ಇಡುವುದು ಸಹಕಾರಿ.

    | ಡಾ. ಸಾವಿತ್ರಿ ಆಯುರ್ವೆದ ವೈದ್ಯರು, ಬೆಂಗಳೂರು

     

     

    ಭಾವಿ ಅಮ್ಮನಿಗೆ ಕೋವಿಡ್ ಗುಮ್ಮ!ಸಾಂಕ್ರಾಮಿಕ ರೋಗ ಇಂದಿನದಲ್ಲ. ಕರೊನಾ ಇನ್ನೊಂದು ತಿಂಗಳಿಗೆ ಮುಗಿಯುತ್ತದೆ ಎನ್ನುವಂತಿಲ್ಲ. ಇದು ನಮ್ಮ ಜತೆ ಬಹುಕಾಲ ಇರಬಹುದು. ಇದರ ಪರಿಣಾಮ ನಮ್ಮ ಮೇಲೆ ಆಗದಂತೆ ಸಹಜ ಬದುಕನ್ನು ಹೇಗೆ ರೂಪಿಸಿ ಕೊಳ್ಳಬೇಕು ಎಂಬುದರತ್ತ ಗಮನ ಕೊಡಬೇಕು.

    | ಡಾ. ವೀಣಾ ಭಟ್ ಸ್ತ್ರೀರೋಗ ತಜ್ಞೆ, ಭದ್ರಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts