More

  ಬೆಂಗಳೂರು ಬ್ರದರ್ಸ್‌ ಗಾನ ಲಹರಿ ಸೊಬಗು

  ರುದ್ರಪಟ್ಟಣದಲ್ಲಿ 21ನೇ ವರ್ಷದ ಸಂಗೀತೋತ್ಸವ

  ಅರಕಲಗೂಡು: ತಾಲೂಕಿನ ರುದ್ರಪಟ್ಟಣದಲ್ಲಿ ಹಮ್ಮಿಕೊಂಡಿರುವ 21ನೇ ವರ್ಷದ ಸಂಗೀತೋತ್ಸವದ
  ಮೂರನೇ ದಿನವಾದ ಶುಕ್ರವಾರ ವಿದುಷಿ ಜಯಂತಿ ಕಮರೇಶ್ ನಿರಂತರವಾಗಿ ಎರಡು ತಾಸು ನುಡಿಸಿದ ವೀಣಾ ವಾದನ ಸಂಗೀತಾಸಕ್ತರನ್ನು ಮೂಕವಿಸ್ಮಿತರನ್ನಾಗಿಸಿತು. ಪ್ರಸಿದ್ಧ ವರ್ಣ ‘ಮಾತೆ ಮಲಯಾಧ್ವಜ’ ಪ್ರಸ್ತುತಿಯಿಂದ ಪ್ರಾರಂಭಿಸಿ ಅಪರೂಪದ (ಕರ್ನಾಟಕ ಶುದ್ಧ ಸಾವೇರಿ ರಾಗದ) ಮುತ್ತುಸ್ವಾಮಿ ದೀಕ್ಷಿತರ ‘ಏಕಮ್ರೇಶ ನಾಯಿಕೆ’ ಕೃತಿಯನ್ನು ಬಹಳ ಭಾವಪೂರ್ಣವಾಗಿ ನುಡಿಸಿದರು. ನಳಿನಿಕಾಂತಿ ರಾಗದ ‘ನೀ ಪಾದಮೆ ಕೃತಿ’ ಗೆ ಸ್ವರ ಕಲ್ಪನೆ ಮಾಡಿ ಮುಖ್ಯ ಪ್ರಸ್ತುತಿಗೆ, ಪಂತುವರಾಳಿ ರಾಗದ ತ್ಯಾಗರಾಜರ ರಚನೆ ‘ರಘುವರ ನನ್ನು’ ಕೃತಿಗೆ ರಾಗ, ನೆರವಲ್, ಸ್ವರ ವಿನಿಕೆ ಮಾಡಿ ನಾದಸುಧೆ ಹರಿಸಿದರು. ವಿದ್ವಾನ್ ತುಮಕೂರು ಬಿ. ರವಿಶಂಕರ್ ನುಡಿಸಿದ ಮೃದಂಗ ಜನರ ಮನಸ್ಸಿಗೆ ಮುದ ನೀಡಿತು. ವಿದ್ವಾನ್ ತ್ರಿಚಿ ಕೃಷ್ಣ ಘಟ ನುಡಿಸಿ ರಂಜಿಸಿದರು.
  ಮನೋಜ್ಞ ಗಾಯನ: ಬೆಂಗಳೂರು ಬ್ರದರ್ಸ್‌ ಎಂದೇ ಖ್ಯಾತರಾದ ವಿದ್ವಾನ್ ಎಂ.ಬಿ. ಹರಿಹರನ್ ಮತ್ತು ವಿದ್ವಾನ್ ಸಿ. ಅಶೋಕ್ ಅವರ ಯುಗಳ ಗಾಯನ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸಿತು. ವಿದ್ವಾನ್ ಬಿ.ಕೆ. ರಘು ವಯಲಿನ್, ವಿದ್ವಾನ್ ಬಿ.ಆರ್. ಶ್ರೀನಿವಾಸ್ ಮೃದಂಗ, ವಿದ್ವಾನ್ ಎ.ಎಸ್.ಎನ್. ಸ್ವಾಮಿ ಖಂಜರಿ ಪಕ್ಕವಾದ್ಯ ಸಹಕಾರ ಕಛೇರಿಯ ರಂಗನ್ನು ನೂರ್ಮಡಿಸಿತು.
  ವಿದ್ವಾನ್ ಚೆನ್ನೈ ಅಶ್ವತ್ಥ ನಾರಾಯಣ್ ಗಾಯನಕ್ಕೆ ತಕ್ಕಂತೆ ವಿದ್ವಾನ್ ಮತ್ತೂರ್ ಶ್ರೀನಿಧಿ ವಯಯಲಿನ್, ವಿದ್ವಾನ್ ಕೆ.ಯು. ಜಯಚಂದ್ರರಾವ್ ಮೃದಂಗ, ವಿದ್ವಾನ್ ಜಿ. ಗುರುಪ್ರಸನ್ನ ಖಜಂರಿ ನುಡಿಸಿ ಸಂಗೀತಾಭಿಮಾನಿಗಳ ಮನ ಗೆದ್ದರು. ಉತ್ಸವದ ಮುಖ್ಯ ಆಯೋಜಕ ವಿದ್ವಾನ್ ಆರ್.ಕೆ. ಪದ್ಮನಾಭ, ನೂರಾರು ಕಲಾಭಿಮಾನಿಗಳು ಹಾಜರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts