More

    ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ…

    ಗಂಡು-ಹೆಣ್ಣು ಎಂಬ ಭೇದವಿಲ್ಲದೇ ಎಲ್ಲರೂ ತಮ್ಮ ಶಾರೀರಿಕ ಗುಣಲಕ್ಷಣಗಳ ಬಗ್ಗೆ ತಲೆಕೆಡಿಸಿ ಕೊಳ್ಳುವವರೇ. ಆದರೆ ಇವರಿಬ್ಬರ ಪೈಕಿ ಸ್ವಲ್ಪ ಜಾಸ್ತಿ ಯೋಚನೆ ಮಾಡುವವರು ಮಹಿಳೆಯರು ಎನ್ನುವುದು ಬಹಿರಂಗ ಸತ್ಯ. ಆದರೆ ತಮ್ಮ ದೇಹದ ಬಗ್ಗೆ ತಮಗೇ ಅಸಹ್ಯ ಎನಿಸುವಷ್ಟು ಅವರಿಗೆ ಫೀಲ್ ಆಗುವುದು ಬೇರೆಯವರು ಅವರ ಬಗ್ಗೆ ಆಡಿಕೊಂಡಾಗ. ಇದೇ ಬಾಡಿ ಶೇಮಿಂಗ್!

    | ರಾಜೇಶ್ವರಿ ಹಿರೇಮಠ

    ಥೂ ಅವಳೆಷ್ಟು ತೆಳ್ಳಗಿದ್ದಾಳೆ ನೋಡು… ಮನೆಯಲ್ಲಿ ಊಟನೇ ಹಾಕಲ್ಲ ಅನ್ಸುತ್ತೆ…. ಛೀ ಅವಳನ್ನು ನೋಡು ಎಷ್ಟು ಡುಮ್ಮಿಯಾಗಿದ್ದಾಳೆ, ಮನೆಯವರ ಊಟವೆಲ್ಲಾ ಇವಳೊಬ್ಬಳೇ ತಿಂತಾಳೇನೋ… ಅವಳನ್ನು ನೋಡಿ… ಮೈ ಕೈಗೆ ಹೋಲಿಸಿದ್ರೆ ಕಾಲು ಎಷ್ಟು ದಪ್ಪ ಇದೆ… ಅರೆರೆ ಅವಳ ಹೊಟ್ಟೆ ನೋಡಿದ್ರೆ ಪ್ರೆಗ್ನೆಂಟ್ ಇದ್ದಂತಿದ್ದಾಳೆ…

    ಅಬ್ಬಬ್ಬಾ… ಒಂದೇ… ಎರಡೇ… ಇಂಥವರನ್ನು ನೋಡಿಯೇ ಬಹುಶಃ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ ಎಂದು ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಬರೆದಂತಿದೆ. ಒಬ್ಬರ ದೇಹದ ಗಾತ್ರವನ್ನು ಅಣಕಿಸಿ ಅವರಿಗೆ ಹಿಂಸೆ ಎನಿಸುವಂತೆ ಹೀಯಾಳಿಕೆ ಮಾಡುವುದೇ ಬಾಡಿ ಶೇಮಿಂಗ್. ತಮ್ಮ ದೇಹದ ಬಗ್ಗೆ ಮಾತನಾಡುತ್ತ ಬೇಜಾರು ಮಾಡಿಕೊಳ್ಳುವ, ಅದನ್ನೇ ಒಂದು ಶಾಪವೆಂದು ಭಾವಿಸಿರುವ ಅನೇಕ ಮಂದಿ ನಮ್ಮ ಸುತ್ತಮುತ್ತ ಇದ್ದಾರೆ. ತಮ್ಮ ದೇಹ ರಚನೆ ಬಗ್ಗೆ ಅವರಿಗೆ ಅರಿವು ಇದ್ದರೂ ಇತರರು ಆಡಿಕೊಳ್ಳುವ ಮಾತಿನಿಂದ ಅವರು ತುಂಬಾ ಪ್ರಭಾವಿತರಾಗಿ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ.

    ಇದಕ್ಕೆ ಮನರಂಜನಾ ಮಾಧ್ಯಮಗಳೂ ಒಂದು ರೀತಿಯಲ್ಲಿ ಕಾರಣ. ತೆಳ್ಳಗೆ ಬೆಳ್ಳಗೆ ಇರುವವರನ್ನು ಹಿರೋಯಿನ್ ಪಾತ್ರದಲ್ಲಿ ತೋರಿಸಿ ದಪ್ಪ ಇರುವವರನ್ನು ಹಾಸ್ಯನಟರಾಗಿ ತೋರಿಸುತ್ತವೆ, ಇದರಿಂದ ಸಮಾಜದ ಮೇಲೆ ತುಂಬಾ ಪರಿಣಾಮವಾಗುತ್ತಿದೆ.

    ಪಾಲಕರು ಮತ್ತು ಶಿಕ್ಷಕರು ಸಮಾಜದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾರೆ. ಪಾಲಕರು ಅಕ್ಕ ಪಕ್ಕದವರೊಂದಿಗೆ, ಮಕ್ಕಳ ಸ್ನೇಹಿತರ ಜತೆಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಪ್ರಯತ್ನ ಮಾಡಬೇಕು. ಶಿಕ್ಷಕರು ಅಂತಹ ಮಕ್ಕಳನ್ನು ಎಲ್ಲಾ ಚಟುವಟಿಕೆಗಳಲ್ಲಿ ಸೇರಿಸಿಕೊಂಡು ಇತರ ಮಕ್ಕಳು ಕೀಟಲೆ ಮಾಡದಂತೆ ನೋಡಿಕೊಳ್ಳಬೇಕು. ಬಾಡಿ ಶೇಮಿಂಗ್ ಯಾಕೆ ಮಾಡಬಾರದು ಮತ್ತು ಅದರ ಪರಿಣಾಮ ಏನು ಎಂದು ಚಿಕ್ಕವರಿದ್ದಾಗಿನಿಂದಲೇ ಹೇಳಿಕೊಡಬೇಕು.

    ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಬಾಡಿ ಶೇಮಿಂಗ್ ಮಾಡುವುದು ಗಮನಕ್ಕೆ ಬಂದರೆ ಅಂಥವರ ವಿರುದ್ಧ ರಿಪೋರ್ಟ್ ಮಾಡಬಹುದು. National Eating Disorder Association (NEDA) ಮತ್ತು https://www.nationaleatingdisorders. ಈ ಬಗ್ಗೆ ಹೋರಾಟ ನಡೆಸುತ್ತಿದೆ.

    ಆಗಿನಂತೆ ಈಗಿಲ್ಲ

    ಪಾಲಕರು, ಒಡಹುಟ್ಟಿದವರು, ಸ್ನೇಹಿತರು ಮತ್ತು ಶಾಲಾ ಸಹಪಾಠಿಗಳು ಬಾಡಿಶೇಮಿಂಗ್ ಮಾಡುತ್ತಿರುತ್ತಾರೆ. ಆದರೆ ಸುಮಾರು 20-25 ವರ್ಷಗಳ ಹಿಂದೆ ಹೀಗೆ ಎಲ್ಲರೂ ನಮ್ಮ ದೇಹ ರಚನೆಯ ಬಗ್ಗೆ ಚೇಷ್ಟೆ ಮಾಡುವುದಕ್ಕೂ, ಈಗ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಆಗ ಯಾರೂ ಇದನ್ನು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಹಾಸ್ಯವೆಂದು ಭಾವಿಸಿ ಸುಮ್ಮನಾಗುತ್ತಿದ್ದರು. ಆದರೆ ತಮಾಷೆಗೆ ಹೇಳುವುದಕ್ಕೂ ಹೀಯಾಳಿಸುವುದಕ್ಕೂ ವ್ಯತ್ಯಾಸವಿದೆ. ಜತೆಗೆ ಅದನ್ನು ಸ್ವೀಕರಿಸುವ ಮನಸ್ಸುಗಳೂ ಬದಲಾಗಿವೆ.

    ಅತಿಯಾದರೆ…

    ಬಾಡಿ ಶೇಮಿಂಗ್ ಅತಿಯಾದರೆ ಭಾವನೆಗಳಿಗೆ ಆಘಾತವಾಗುತ್ತದೆ. ಸೂಕ್ಷ್ಮ ಮನಸ್ಸಿನವರಾಗಿದ್ದರೆ ಆತ್ಮವಿಶ್ವಾಸ ಕುಗ್ಗಿ ಹತಾಶೆ, ಕೋಪ, ಸ್ವಯಂಹಾನಿ ಮತ್ತು ಮಾನಸಿಕ ಅಸ್ವಸ್ಥತೆಗೆ ಕಾರಣವಾಗಬಹುದು. ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಕೆಲವರು ತೂಕ ಹೆಚ್ಚಿಸಿಕೊಳ್ಳಲು ಶರೀರ ಬಯಸುವುದಕ್ಕಿಂತ ಅತಿ ಹೆಚ್ಚು ಪ್ರಮಾಣದಲ್ಲಿ ತಿನ್ನುವುದು, ತೂಕ ಕಡಿಮೆ ಮಾಡಲು ಉಪವಾಸ ಮಾಡುವುದು, ಅತಿ ಔಷಧಿಯ ಸೇವನೆ, ಅತಿ ವ್ಯಾಯಾಮ ಮಾಡಿಕೊಂಡು ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದಾರೆ.

    ಏನಿದು ಬಾಡಿ ಶೇಮಿಂಗ್?

    ಇದು ದೈಹಿಕ ಅವಹೇಳನ ಮಾಡುವ ಕ್ರಿಯೆ. ಹೆೆಚ್ಚಾಗಿ ದೇಹದ ತೂಕ, ಎತ್ತರ, ಚರ್ಮದ ಬಣ್ಣ, ಬೋಳಾದ ತಲೆ, ಸ್ತನಗಳ ಗಾತ್ರ, ದೇಹದ ಆಕಾರದ ಬಗ್ಗೆ ಕುಚೇಷ್ಟೆ ಮಾಡುವ ಪರಿ. ಕೆಲವರು ಇದನ್ನು ಮಾತಿನಲ್ಲಿ ಹೇಳಿದರೆ, ಇನ್ನು ಕೆಲವರು ಸಂಜ್ಞೆಗಳ ಮೂಲಕ ವ್ಯಕ್ತಪಡಿಸುತ್ತಾರೆ. ಇದರಿಂದ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ದುರದೃಷ್ಟವಶಾತ್ ಬಾಡಿ ಶೇಮಿಂಗ್ ತುಂಬ ಸಹಜ ಎಂದೇ ಬಹಳಷ್ಟು ಜನ ಭಾವಿಸಿದ್ದಾರೆ. ಇದರ ಫಲಿತಾಂಶ ಎಷ್ಟು ಭೀಕರ ಆಗಿರುತ್ತದೆ ಎನ್ನುವುದು ಅವರಿಗೆ ತಿಳಿಯುತ್ತಿಲ್ಲ.

    ಅಮ್ಮ ಸಾಯ್ತಿದಾರೆ ಎಂದು ಬೇಡ್ಕೊಂಡ್ರೂ ಒಂದ್ ಹಾಸಿಗೆ ಅರೇಂಜ್​ ಮಾಡೋಕ್​ ಆಗ್ತಿಲ್ಲ; ಪ್ಲೀಸ್​.. ಹೊರಗೆ ಹೋಗೋ ಮುಂಚೆ 100 ಸಲ ಯೋಚ್ನೆ ಮಾಡಿ..

    ನಟಿ ಸಂಜನಾ ಗಲ್ರಾಣಿಗೂ ಕೋವಿಡ್ ಪಾಸಿಟಿವ್: ಎರಡೂ ಡೋಸ್ ​ಲಸಿಕೆ ಪಡೆದಿದ್ದ ಅವರ ಪತಿಗೂ ಸೋಂಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts