More

    ಅರ್ಕಾವತಿ ನದಿ ರಕ್ಷಣೆಗೆ ಜನಜಾಗೃತಿ: ತ್ಯಾಜ್ಯ ಹರಿಸುತ್ತಿರುವವರಿಗೆ ನೋಟಿಸ್ ನೀಡಲು ಸಿದ್ಧತೆ

    ರಾಮನಗರ: ಮಲಿನಗೊಳ್ಳುತ್ತಿರುವ ಅರ್ಕಾವತಿ ನದಿಯನ್ನು ಶುದ್ಧೀಕರಿಸಲು ಹೆಜ್ಜೆ ಇಟ್ಟಿರುವ ರಾಮನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ಗ್ರೇಟರ್ ಬೆಂಗಳೂರು – ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರಗಳು ಇದೀಗ ಸ್ಥಳೀಯವಾಗಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಮುಂದಾಗಿದೆ.

    ಯಾವುದೇ ಯೋಜನೆ ಜಾರಿಗೆ ತಂದರೂ ಸ್ಥಳೀಯವಾಗಿ ಜನರಲ್ಲಿ ಜಾಗೃತಿ ಮೂಡದ ಹೊರತು, ಯೋಜನೆ ಸಫಲವಾಗುವುದಿಲ್ಲ ಎನ್ನುವುದನ್ನು ಅರಿತಿರುವ ಪ್ರಾಧಿಕಾರಗಳ ಅಧ್ಯಕ್ಷರಾದ ಮುರಳೀಧರ್ ಮತ್ತು ವರದರಾಜುಗೌಡ, ತಮ್ಮ ಪ್ರಾಧಿಕಾರಗಳ ವ್ಯಾಪ್ತಿಗೆ ಒಳಪಡುವ ಗ್ರಾಮ ಪಂಚಾಯಿತಿಗಳಿಗೆ ನೊಟೀಸ್ ಜಾರಿ ಮಾಡುವ ಸಿದ್ಧತೆಯಲ್ಲಿದ್ದಾರೆ.

    ಕೊಳಚೆ ತಡೆಗೆ ಕ್ರಮ: ಮಂಚನೆಬೆಲೆ ಜಲಾಶಯದಿಂದ ಆರಂಭಗೊಂಡು ರಾಮನಗರ – ಕನಕಪುರ ತಾಲೂಕಿನ ಗಡಿವರೆಗೂ ಎರಡೂ ಪ್ರಾಧಿಕಾರಗಳ ವ್ಯಾಪ್ತಿಗೆ ಒಳಪಡಬಹುದಾದ ಗ್ರಾಮಗಳ ವ್ಯಾಪ್ತಿಯ ಕೊಳಚೆ ನೀರನ್ನು ಅರ್ಕಾವತಿ ನದಿಗೆ ಹರಿಯ ಬಿಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಕೊಳಚೆ ಪ್ರದೇಶವನ್ನು ಸ್ವಚ್ಛಗೊಳಿಸುವ ಜತೆಗೆ, ನದಿಯನ್ನು ಮಲಿನ ಮಾಡುತ್ತಿರುವ ಗ್ರಾಪಂಗಳಿಗೆ ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಸುಗ್ಗನಹಳ್ಳಿ ಮತ್ತು ಹರೀಸಂದ್ರ ಗ್ರಾಪಂಗಳಿಗೆ ಹಾಗೂ ರಾಮನಗರ ನಗರಸಭೆಗೂ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಜಾಗೃತಿ ಕಾರ್ಯಕ್ರಮ: ಇದರ ಜತೆಗೆ ನದಿ ಪಾತ್ರದ ಪ್ರತಿ ಹಳ್ಳಿಗಳಿಗೆ ಸ್ವಯಂಸೇವಕರ ನೆರವಿನೊಂದಿಗೆ ಭೇಟಿ ನೀಡಿ, ನದಿ ಏಕೆ ಉಳಿಸಿಕೊಳ್ಳಬೇಕು, ಮಲಿನಕ್ಕೆ ಕಾರಣಗಳೇನು, ಮಲಿನ ತಡೆಯದಿದ್ದರೆ ಮುಂದಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು. ಜತೆಗೆ ಆಕರ್ಷಕ ಬರಹಗಳುಳ್ಳ ಮಾಹಿತಿ ಫಲಕಗಳನ್ನು ನದಿಯ ಇಕ್ಕೆಲಗಳಲ್ಲಿ ಅಳವಡಿಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುವುದು.

    ಸಿದ್ಧವಾಗಿದೆ ಯೋಜನೆ: ಗುಜರಾತ್‌ನ ಸಬರಮತಿ ನದಿ ದಂಡೆ ಮೇಲಿರುವ ಅಹಮದಾಬಾದ್ ನಗರವನ್ನು ಮಾದರಿಯಾಗಿಸಿಕೊಂಡು ಅರ್ಕಾವತಿ ನದಿ ಶುದ್ಧೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸುಮಾರು 106 ಕೋಟಿ ರೂ. ವೆಚ್ಚದ ಈ ಯೋಜನೆಯಲ್ಲಿ ರಾಮನಗರ ನಗರ ಪ್ರದೇಶ ವ್ಯಾಪ್ತಿಯ ಸುಮಾರು 2 ಕಿ.ಮೀ. ಉದ್ದದ ನದಿ ಸ್ವಚ್ಛಗೊಳ್ಳಲಿದೆ.

    ನದಿಯ ಎರಡೂ ಬದಿ ತಡೆಗೋಡೆ ನಿರ್ಮಾಣವಾಗಲಿದೆ. ಇದಕ್ಕೆ ಕಾವೇರಿ ನೀರಾವರಿ ನಿಗಮ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಿದೆ. ಪ್ರಮುಖವಾಗಿ ಮಕ್ಕಳು ಮತ್ತು ವೃದ್ಧರನ್ನು ಗುರಿ ಯಾಗಿಸಿಕೊಂಡು ನದಿ ಪಾತ್ರದಲ್ಲಿ ಪಾರ್ಕ್ ಮತ್ತು ಆಟದ ಮೈದಾನಗಳ ನಿರ್ಮಾಣ ಯೋಜನೆ ಸಿದ್ಧವಾಗಿದೆ. ಇದರಲ್ಲಿ ಪ್ರಮುಖವಾಗಿ ಸೈಕಲ್ ಮತ್ತು ವಾಕಿಂಗ್ ಪಾತ್ ನಿರ್ಮಾಣ ವಾಗಿದೆ. ಇದರ ಜತೆಗೆ ಬಾಸ್ಕೆಟ್ ಬಾಲ್, ಬ್ಯಾಡ್ಮಿಂಟನ್, ಮಿನಿ ಫುಟ್‌ಬಾಲ್ ಕೋರ್ಟ್, ಇದರ ಜತೆಗೆ, ಸುಗಂಧ ಸೂಸುವ ಗಿಡ, ಪಕ್ಷಿಗಳಿಗೆ ಪೂರಕವಾಗಿ ಹಣ್ಣಿನ ಗಿಡಗಳನ್ನು ಸಹ ಬೆಳೆಸಲಾಗುತ್ತದೆ. ಅಲ್ಲದೆ, ಯೋಗ ಮತ್ತು ಮೆಡಿಟೇಷನ್ ಕೇಂದ್ರವೂ ತಲೆ ಎತ್ತಲಿದೆ.

    ರಕ್ಷಣೆಗಾಗಿ ಸಮಿತಿ: ಸಾರ್ವಜನಿಕರ ಸಹಭಾಗಿತ್ವ ಇಲ್ಲದೆ ಯಾವುದೇ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ ಎನ್ನುವುದನ್ನು ಮನಗಂಡು ಈಗಾಗಲೇ ಅರ್ಕಾವತಿ ನದಿ ರಕ್ಷಣಾ ಸಮಿತಿ ರಚಿಸುವ ಬಗ್ಗೆ ಎರಡೂ ಪ್ರಾಧಿಕಾರಗಳ ಅಧ್ಯಕ್ಷರು ಚಿಂತಿಸಿದ್ದಾರೆ. ರಾಮನಗರದ ಪ್ರಮುಖರು, ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ಈ ಸಮಿತಿ ಮೂಲಕ ಆಗ್ಗಾಗ್ಗೆ ನದಿಯ ಸ್ವಚ್ಛತೆ ಹಾಗೂ ಅಭಿವೃದ್ಧಿ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ಸಲಹೆ ಸೂಚನೆ ನೀಡುವ ಜತೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗಿದೆ.

    ಅರ್ಕಾವತಿ ನದಿ ಉಳಿಸಿಕೊಳ್ಳಬೇಕಾದರೆ ಸಾರ್ವಜನಿಕರ ಸಹಕಾರವೂ ಅಗತ್ಯ. ಈ ನಿಟ್ಟಿನಲ್ಲಿ ಪ್ರಾಧಿಕಾರಗಳು ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದು, ಇದಕ್ಕೆ ರಾಮನಗರ ಪ್ರತಿಯೊಬ್ಬರೂ ಕೈ ಜೋಡಿಸಬೇಕಿದೆ.
    -ವರದರಾಜುಗೌಡ, ಗ್ರೇಟರ್ ಬೆಂಗಳೂರು-ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts