More

    ಇಸಂಗಳಿಗೂ ಅಭಿವೃದ್ಧಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

    ಇಸಂಗಳಿಗೂ ಅಭಿವೃದ್ಧಿಗೂ ಎತ್ತಣಿಂದೆತ್ತ ಸಂಬಂಧವಯ್ಯಾ?‘ದೇಶ ಸುತ್ತು, ಕೋಶ ಓದು’ ಎಂಬ ಗಾದೆ ಮಾತಿದೆ. ಅನುಭವ ಮತ್ತು ಜ್ಞಾನ ಸಂಪಾದನೆಗೆ ಈ ಎರಡು ಮಾರ್ಗವೂ ಬೇಕು. ಈ ಎರಡು ವಿಚಾರದಲ್ಲೂ ನಾನು ಅದೃಷ್ಟವಂತ. ಓದುವುದಕ್ಕೆ ಹಾಗೂ ಸುತ್ತುವುದಕ್ಕೆ ಬದುಕಿನಲ್ಲಿ ವಿಪುಲ ಅವಕಾಶಗಳು ಲಭಿಸಿವೆ. ನನ್ನ ಸುತ್ತಾಟ ಭಾರತಕ್ಕೆ ಸೀಮಿತವಾಗಿರದೆ ಬೇರೆ ದೇಶಗಳಿಗೂ ಪ್ರಯಾಣ ಬೆಳೆಸಿ ಅಲ್ಲಿನ ಜನಜೀವನವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಲೇ ಇರುತ್ತೇನೆ.

    ಅಂಥದೊಂದು ವಿಶಿಷ್ಟ ಪ್ರಯಾಣವನ್ನು 2017ರಲ್ಲಿ ಸಮಾನಮನಸ್ಕ ಗೆಳೆಯರ ಜತೆ ಸೇರಿ ರೂಪಿಸಿಕೊಂಡೆವು. ಭಾರತೀಯ ಸಂಸ್ಕೃತಿಯ ವ್ಯಾಪ್ತಿ ಭಾರತಕ್ಕಷ್ಟೇ ಸೀಮಿತವಲ್ಲ. ಅದು ವಿಶ್ವವ್ಯಾಪಿ ಹರಡಿದೆ. ಈ ಹಿನ್ನೆಲೆಯಲ್ಲಿ ಭಾರತದಿಂದ ಲಂಡನ್​ವರೆಗೆ ಹಬ್ಬಿರುವ ‘ಸಿಲ್ಕ್ ರೂಟ್’ ಮೂಲಕ ಭೂಮಾರ್ಗದಲ್ಲಿ ಪ್ರಯಾಣ ಕೈಗೊಳ್ಳಲು ನಿರ್ಧರಿಸಿದೆವು. ಈ ಪರ್ಯಟನೆಯಲ್ಲಿ ನನ್ನ ಪತ್ನಿಯೂ ಭಾಗಿಯಾಗಿದ್ದಳು. ಜತಗೆ ದೇಶದ ನಾನಾ ಭಾಗಗಳಿಂದ ಬಂದ 23 ಜನರು ಸಹಪ್ರಯಾಣಿಕರಾಗಿದ್ದರು. 13 ಕಾರ್​ಗಳಲ್ಲಿ ಭಾರತದಿಂದ ಹೊರಟ ಈ ಪ್ರಯಾಣದಲ್ಲಿ ಫ್ರಾನ್ಸ್ ಹಾಗೂ ಇಂಗ್ಲೆಂಡ್ ಮಧ್ಯದ 3 ಗಂಟೆ ಅವಧಿಯಲ್ಲಿನ ಜಲಮಾರ್ಗ ಬಿಟ್ಟರೆ ಸಿಲ್ಕ್ ರೂಟ್​ನ 20 ಸಾವಿರ ಕಿ.ಮೀ. ಅನ್ನು ರಸ್ತೆಯ ಮೂಲಕವೇ ಸವೆಸಿದೆವು. ಈ ಪ್ರಯಾಣದಲ್ಲಿ 18 ದೇಶಗಳಿಗೆ ಭೇಟಿ ನೀಡುವ ಅವಕಾಶ ಲಭಿಸಿತು. ಈ ಮಾರ್ಗ ಹಾಗೂ ದೇಶದಲ್ಲಿ ಅಡಗಿರುವ ‘ಭಾರತೀಯ ಸಂಸ್ಕೃತಿಯ ಕುರುಹು’ ಹುಡುಕುವುದು ಈ ಪ್ರವಾಸದ ಪ್ರಧಾನ ಉದ್ದೇಶವಾಗಿತ್ತು. ದುರ್ಗಮವಾದ ರಸ್ತೆ, ಕೆಲವೊಮ್ಮೆ ಇಡೀ ಮಾರ್ಗವೇ ಹಿಮದಿಂದ ಆವೃತ್ತ ವಾಗಿ ನಾವೆಲ್ಲಿದ್ದೇವೆ ಎಂಬುದೇ ಅರ್ಥವಾಗದ ಸ್ಥಿತಿ. ಇನ್ನು ಕೆಲವೆಡೆ ಮರುಭೂಮಿಯ ವಾತಾವರಣ, ವಾಹನವನ್ನೇ ಹಿಂದಕ್ಕೆ ನೂಕುವಷ್ಟು ವೇಗದ ಗಾಳಿ. ವಿಭಿನ್ನವಾದ ಜಾಗ, ಭಿನ್ನ-ಭಿನ್ನವಾದ ಜನಜೀವನ. ಒಟ್ಟಾರೆಯಾಗಿ ಈ ಪ್ರವಾಸ ಬದುಕಿನ ಮರೆಯಲಾಗದ ಅನುಭವ.

    ಭಾರತೀಯ ಸಂಸ್ಕೃತಿಯ ಜಾಡನ್ನು ಹುಡುಕುವ ಉದ್ದೇಶದ ಜತೆಗೆ ಇನ್ನು ಹಲವಾರು ಅನುಭವ ಮತ್ತು ಜ್ಞಾನಗಳು ನಮ್ಮ ಮಡಿಲು ಸೇರಿದವು. ಆಗ ಇಸಂಗಳಿಗೂ (ರಾಜಕೀಯ ಸಿದ್ಧಾಂತಗಳಿಗೂ) ಅಭಿವೃದ್ಧಿಗೂ ಪರಸ್ಪರ ಸಂಬಂಧವೇ ಇಲ್ಲ ಎಂಬ ವಿಚಾರ ನನ್ನ ಗಮನಕ್ಕೆ ಬಂತು. ಒಂದು ದೇಶ ಅಭಿವೃದ್ಧಿ ಪಥದಲ್ಲಿ ಸಾಗುವುದಕ್ಕೆ ಯಾವ ರಾಜಕೀಯ ಮಾರ್ಗ ಉತ್ತಮ ಎಂಬ ವಾದಸರಣಿಯನ್ನು ಪ್ರವಾಸ ಸಂದರ್ಭದ ಅನುಭವ ಛಿದ್ರಗೊಳಿಸಿತು. ಪ್ರಜಾಪ್ರಭುತ್ವದಿಂದ ಮಾತ್ರ ವಿಕಾಸ ಎಂದುಕೊಳ್ಳುವವರಿಗೆ ಕಮ್ಯುನಿಷ್ಟ್ ಚೀನಾದ ಪ್ರಗತಿ ನಿಬ್ಬೆರಗಾಗಿಸುತ್ತದೆ. ಇದನ್ನೇ ನಿಜವೆಂದುಕೊಂಡರೆ ಈ ಹಿಂದೆ ಕಮ್ಯುನಿಷ್ಟ್ ರಷ್ಯಾದ ಅಧೀನದಲ್ಲಿದ್ದು ಸ್ವಾತಂತ್ರ್ಯ ಪಡೆದು ಕಮ್ಯುನಿಸಂನ್ನು ಅಪ್ಪಿಕೊಂಡ ರಾಷ್ಟ್ರಗಳ ಪರಿಸ್ಥಿತಿ ಅಯ್ಯೋ ಎಂದೆನಿಸುತ್ತದೆ. ಇನ್ನು ಸೇನಾ ಆಡಳಿತ ಸೂಕ್ತವೇ? ಎಂದರೆ ಅವುಗಳ ಹಣೆಬರಹವೂ ಬದಲಾಗಿಲ್ಲ.

    ಅಂದ ಹಾಗೆ ನಮ್ಮ ಪ್ರಯಾಣ ಆರಂಭವಾಗಿದ್ದು ಮಣಿಪುರದ ಮೌರಿ ಎಂಬ ಪ್ರದೇಶದಿಂದ. ಈ ದೇಶದ ಸರ್ವಶ್ರೇಷ್ಠ ಸ್ವಾತಂತ್ರ್ಯ ಯೋಧರಲ್ಲಿ ಒಬ್ಬರಾದ ಸುಭಾಷ್ ಚಂದ್ರ ಬೋಸ್​ರು ಬರ್ವದಿಂದ ಬಂದು ಈ ಊರಿನಲ್ಲಿ ಮೊದಲ ಬಾರಿಗೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು. ಇಲ್ಲಿ ಬೋಸ್ ಪುತ್ಥಳಿಯನ್ನೂ ಸ್ಥಾಪಿಸಲಾಗಿದೆ. ಇಲ್ಲಿಂದ ಹೊರಟ ನಾವು ಮೊದಲು ಕಾಲಿಟ್ಟಿದ್ದು ಬರ್ವಕ್ಕೆ. ಈ ದೇಶದಲ್ಲಿ ಸೇನಾಡಳಿತ ಹಾಗೂ ಪ್ರಜಾಪ್ರಭುತ್ವ ಬದಲಾಗುತ್ತಲೇ ಇರುತ್ತದೆ. ಇಲ್ಲಿ ಸೂಕಿ ಅವರ ನೇತೃತ್ವದಲ್ಲಿ ಪ್ರಜಾಪ್ರಭುತ್ವ ಸರ್ಕಾರವಿತ್ತು. ಆದರೆ ಅಭಿವೃದ್ಧಿ ಎಂಬ ಶಬ್ದಕ್ಕೆ ಇಲ್ಲಿ ಅರ್ಥವೇ ಇಲ್ಲ. ಹಳ್ಳಿಯ ರಸ್ತೆಗಳು ಟಾರು ಕಾಣದೇ ಅದೆಷ್ಟು ವರ್ಷಗಳು ಕಳೆದಿವೆಯೋ! ನಮ್ಮಲ್ಲಿ ಸಣ್ಣಪುಟ್ಟ ಉಪಕರಣ ತಯಾರು ಮಾಡುವುದಕ್ಕೂ ಬರ್ವ ಟೀಕ್ ಬಳಸೋಣ ಎನ್ನುತ್ತೇವೆ. ನಿಜ ಹೇಳಬೇಕೆಂದರೆ ಬರ್ವಕ್ಕೆ ನಾವು ಭೇಟಿಕೊಟ್ಟ ಸಂದರ್ಭದಲ್ಲಿ ಒಂದೇ ಒಂದು ಟೀಕ್ (ಸಾಗುವಾನಿ) ಮರಗಳೂ ಇರಲಿಲ್ಲ. ಈ ದೇಶದ ವಾಣಿಜ್ಯ ವ್ಯವಹಾರದ ಮೇಲೆ ಬಿಗಿಯಾದ ಹಿಡಿತ ಹೊಂದಿರುವ ಚೀನಿ ಗುತ್ತಿಗೆದಾರರು ಬರ್ವದಲ್ಲಿ ಮರಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ.

    ಅಲ್ಲಿಂದ ಮುಂದೆ ಭೇಟಿ ಕೊಟ್ಟಿದ್ದು ಥೈಲ್ಯಾಂಡ್​ಗೆ. ಇದು ಅಭಿವೃದ್ಧಿ ವಿಚಾರದಲ್ಲಿ ಯುರೋಪ್ ದೇಶಗಳಿಗೆ ಸರಿಸಮಾನವಾಗಿದೆ. ಇಲ್ಲಿ ಸುದೀರ್ಘ ಅವಧಿಗೆ ಮಿಲಿಟರಿ ಆಡಳಿತವಿತ್ತು. ಮಿಲಿಟರಿ ಆಡಳಿತ ಇರುವ ರಾಷ್ಟ್ರಗಳಿಗೆ ಬಡತನ ಶಾಪ ಎಂಬ ಮಾತಿಗೆ ಥೈಲ್ಯಾಂಡ್ ಅಪವಾದ. ಆ ಬಳಿಕ ನಮ್ಮ ರಥ ಸಾಗಿದ್ದು ಲಾವೋ ಎಂಬ ಪುಟ್ಟ ರಾಷ್ಟ್ರದತ್ತ. ಇದು ಕಮ್ಯುನಿಷ್ಟ್ ಸಿದ್ಧಾಂತಕ್ಕೆ ಒಳಪಟ್ಟ ದೇಶ. ಇಲ್ಲಿಯೂ ಅಭಿವೃದ್ಧಿ ಮರೀಚಿಕೆಯಾಗಿದೆ. ರಸ್ತೆಯಲ್ಲಿ ದೊಡ್ಡ ವಾಹನ ಓಡಾಡಿದರೂ ಜನ ಬೆಚ್ಚಿ ಬೀಳುವಂಥ ಸನ್ನಿವೇಶವಿದೆ. ಆದರೆ ಈ ದೇಶದ ಪಕ್ಕದಲ್ಲೇ ಇರುವ ಚೀನಾದಲ್ಲಿ ಕಮ್ಯುನಿಸಂ ಆಡಳಿತವಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಈ ದೇಶಕ್ಕೆ ಯುರೋಪ್, ಅಮೆರಿಕದಂಥ ರಾಷ್ಟ್ರಗಳೇ ಸಾಟಿಯಿಲ್ಲ. ವಿಜ್ಞಾನ, ಮೂಲಸೌಕರ್ಯ, ಮಿಲಿಟರಿ ತಂತ್ರಜ್ಞಾನ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕಮ್ಯುನಿಷ್ಟ್ ಬಿಗಿಮುಷ್ಠಿಯಲ್ಲೂ ಚೀನಾದ ಸಾಧನೆ ಅನನ್ಯ. ಅಂದ ಹಾಗೆ ನಮ್ಮಲ್ಲಿ ಕಮ್ಯುನಿಷ್ಟರು ದೇವರಂತೆ ಪೂಜಿಸುವ ಮಾವೋನ ಕಮ್ಯುನಿಷ್ಟ್ ಆಡಳಿತದಲ್ಲಿ ಚೀನಾ ಅಭಿವೃದ್ಧಿ ಕಾಣಲು ಸಾಧ್ಯವಾಗಲೇ ಇಲ್ಲ. ಆಗ ಚೀನಾದ ಹಲವು ಪ್ರಾಂತ್ಯದಲ್ಲಿ ಊಟಕ್ಕೂ ಗತಿ ಇಲ್ಲದ ಸ್ಥಿತಿ ಇತ್ತು. ಬಡತನ ನಿಮೂಲನೆಗಾಗಿ ಈತ ಆರಂಭಿಸಿದ ‘ಗ್ರೇಟ್ ಲೀಫ್ ಫಾರವರ್ಡ್’ ಈಗಲೂ ಕುಖ್ಯಾತವಾಗಿದೆ. ಕೃಷಿ ಹಾಗೂ ಕೈಗಾರಿಕಾ ಅಭಿವೃದ್ಧಿಗಾಗಿ ಮಾವೋ ದೇಶದ ಬುದ್ಧಿಜೀವಿಗಳು, ಸಾಹಿತಿಗಳು, ವಿಜ್ಞಾನಿಗಳನ್ನು ಅಕ್ಷರಶಃ ಹೊಲದಲ್ಲಿ ದುಡಿಯುವಂತೆ ಮಾಡಿದ. ಈ ಅವಧಿಯಲ್ಲಿ 30ರಿಂದ 55 ಲಕ್ಷ ಜನರು ಹಸಿವಿನಿಂದ ಸತ್ತರು. ಹಸಿವು ನೀಗಿಸಿಕೊಳ್ಳಲು ಜನರು ಇಲಿ-ಹೆಗ್ಗಣ ಸೇರಿದಂತೆ ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವುದನ್ನು ರೂಢಿಸಿಕೊಂಡರು. ಮಾವೋನ ಆಡಳಿತ ಹೆಚ್ಚುಕಡಿಮೆ ತುಘಲಕ್​ನ ರೀತಿಯೇ ಇತ್ತು. ಚೀನಾ ಅಭಿವೃದ್ಧಿ ಕಂಡಿದ್ದು ಡೆಂಗ್ ಕ್ಸಿಪಿಂಗ್ ಕಾಲದಲ್ಲಿ. ಈತನೇ ಆಧುನಿಕ ಚೀನಾದ ನಿರ್ವತೃ. ನಾವು ಚೀನಾದಿಂದ ತಲುಪಿದ್ದು ಖಿರ್ಗಿಸ್ತಾನಕ್ಕೆ. ಹಿಂದಿನ ಯುಎಸ್​ಎಸ್​ಆರ್ ಆಡಳಿತಕ್ಕೆ ಒಳಪಟ್ಟ ಖಿರ್ಗಿಸ್ತಾನ್ ರಷ್ಯಾ ಕುಸಿದು ಬಿದ್ದ ನಂತರ ಪ್ರತ್ಯೇಕ ರಾಷ್ಟ್ರವಾಯಿತು. ಈ ದೇಶದಲ್ಲಿ ಈಗ ಪ್ರಜಾಪ್ರಭುತ್ವವಿದೆ. ಆದರೆ ಅಭಿವೃದ್ಧಿಯಿಲ್ಲ. ಕೆಲವೊಮ್ಮೆ ತುತ್ತು ಊಟಕ್ಕೂ ಇಲ್ಲಿನ ಜನ ಪರದಾಡುವಂಥ ಸ್ಥಿತಿ ಇದೆ. ಆದರೆ ಈ ದೇಶದ ಮ್ಯೂಸಿಯಂನಲ್ಲಿ ಕೆಲ ಭಾರತೀಯ ಮೂಲಸೆಲೆಯ ವಸ್ತುಗಳಿವೆ. ಈ ದೇಶದಲ್ಲಿ ಅಗ್ನಿಪೂಜೆ ಇಂದಿಗೂ ಜೀವಂತವಾಗಿದೆ. ಅದರ ಪಕ್ಕದ ದೇಶ ಉಜ್ಬೇಕಿಸ್ತಾನ. ಇಲ್ಲಿಯೂ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯಾದರೂ ಅಭಿವೃದ್ಧಿ ಪದಕ್ಕೆ ಅರ್ಥವಿಲ್ಲ. ಆದರೆ ಖಿರ್ಗಿಸ್ತಾನಕ್ಕಿಂತ ಪರವಾಗಿಲ್ಲ. ಮುಂದೆ ಸಿಕ್ಕಿದ್ದು ಕಜಿಕಿಸ್ತಾನ. ಇದು ಕೂಡ ಪ್ರಜಾಪ್ರಭುತ್ವ ದೇಶ. ರ್ಕಿಗಿಸ್ತಾನ, ಉಜ್ಬೇಕಿಸ್ತಾನಕ್ಕಿಂತ ಉತ್ತಮ ಸ್ತಿತಿಯಲ್ಲಿದೆ. ಈ ಮೂರು ರಾಷ್ಟ್ರಗಳು ಹಿಂದೆ ಕಮ್ಯುನಿಷ್ಟ್ ರಷ್ಯಾದ ಅಧಿಪತ್ಯಕ್ಕೆ ಒಳಪಟ್ಟಿದ್ದವು.

    ಕುತೂಹಲಕಾರಿ ವಿಚಾರಗಳೆಂದರೆ ಈ ಎಲ್ಲ ರಾಷ್ಟ್ರಗಳಲ್ಲೂ ಭಾರತೀಯ ಸಂಸ್ಕೃತಿಯ ಕುರುಹು ಗಾಢವಾಗಿದೆ. ಮುಂದೆ ನಾವು ಭೇಟಿಕೊಟ್ಟಿದ್ದು ರಷ್ಯಾಕ್ಕೆ. ಈಗಲೂ ಕಮ್ಯುನಿಷ್ಟ್ ಅಧಿಪತ್ಯವಿರುವ ಈ ದೇಶದಲ್ಲಿ ಸಂಪತ್ತಿಗೇನೂ ಕೊರತೆ ಇಲ್ಲ. ರಷ್ಯಾ ಭಾಷೆಯ ಮೇಲೆ ಸಂಸ್ಕೃತದ ಪ್ರಭಾವ ತುಂಬ ಗಾಢವಾಗಿದೆ. ಸೋದರ ಎಂಬ ಶಬ್ದಕ್ಕೆ ಅಲ್ಲಿ ಭ್ರಾತೃ ಎಂಬ ಪದ ಬಳಸುತ್ತಾರೆ. ಇದು ಸಂಸ್ಕೃತ ಮೂಲ. ಬಾಗಿಲಿಗೆ ದ್ವಾರಾ ಎನ್ನುತ್ತಾರೆ. ರಷ್ಯಾ ಭಾಷೆಯ ಶೇಕಡ 25 ಕ್ಕಿಂತ ಹೆಚ್ಚು ಪದ ಸಂಸ್ಕೃತ ಮೂಲದ್ದಾಗಿದೆ.

    ಒಂದು ರಾಷ್ಟ್ರದ ಅಭಿವೃದ್ಧಿಗೆ ಕಾರಣವಾದ ರಾಜಕೀಯ ಸಿದ್ಧಾಂತ ಇನ್ನೊಂದು ರಾಷ್ಟ್ರದಲ್ಲಿ ಬಡತನದ ಬೇಗೆಯನ್ನೇ ಸೃಷ್ಟಿಸುತ್ತದೆ. ಚೀನಾ ಹಾಗೂ ರಷ್ಯಾದಲ್ಲಿ ವಿಕಾಸ ಮೂಡಿಸಿದ ಕಮ್ಯುನಿಸಂ ಲಾವೋದಲ್ಲಿ ಬಡತನಕ್ಕೆ ಮೂಲವಾಗಿದೆ. ಯುರೋಪ್​ನಲ್ಲಿ ಅಭಿವೃದ್ಧಿ ತಂದ ಪ್ರಜಾಪ್ರಭುತ್ವ ರಷ್ಯಾದಿಂದ ಸಿಡಿದು ಸ್ವತಂತ್ರವಾದ ದೇಶಗಳಲ್ಲಿ ಇನ್ನೂ ಕನಿಷ್ಠ ಮೂಲಸೌಕರ್ಯಗಳನ್ನೂ ಸೃಷ್ಟಿಸಿಲ್ಲ. ಥೈಲ್ಯಾಂಡ್​ನ ಪ್ರಗತಿಗೆ ಸೇನಾಡಳಿತ ಕಾರಣವಾದರೆ ಬರ್ವದಲ್ಲಿ ವ್ಯತಿರಿಕ್ತ ಸ್ಥಿತಿ. ಹೀಗಾಗಿ ಯಾವುದೇ ದೇಶದ ಅಭಿವೃದ್ಧಿಗೆ ಇಸಂಗಳಿಗಿಂತಲೂ, ಅದರ ಪ್ರತಿಪಾದನೆಯ ಮೇಲೆ ಅಧಿಕಾರಕ್ಕೆ ಬರುವ ವ್ಯಕ್ತಿಗಳು ಹೇಗೆ ನಡೆದುಕೊಳ್ಳುತ್ತಾರೆಂಬುದು ಮುಖ್ಯವಾಗುತ್ತದೆ. ಜನಹಿತ ಮರೆತ ಇಸಂಗಳಿಂದ ಅಭಿವೃದ್ಧಿ ಶೂನ್ಯ. ಇದು ಭಾರತದ ಮಟ್ಟಿಗೂ ಅನ್ವಯ. ಸ್ವಾತಂತ್ರ್ಯ ಬಂದಾಗಿನಿಂದಲೂ ಪ್ರಜಾಪ್ರಭುತ್ವ ದೇಶವಾಗಿದ್ದರೂ ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ನಿರೀಕ್ಷಿಸಿದಷ್ಟು ಪ್ರಗತಿ ಸಾಧಿಸಲು ಸಾಧ್ಯವಾಗಲಿಲ್ಲ. ಪ್ರಜಾಪ್ರಭುತ್ವದ ಹೆಸರಿನಲ್ಲಿ ವಂಶಾಡಳಿತ ಮೆರೆದಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಭಾರತಕ್ಕೆ ಸಿಕ್ಕ ಅಂತಾರಾಷ್ಟ್ರೀಯ ಮಾನ್ಯತೆ ಅನನ್ಯ. ವಿಶ್ವವೇ ಆರ್ಥಿಕ ಹಿಂಜರಿತಕ್ಕೆ ಒಳಪಟ್ಟಿದ್ದರೂ ‘ಆತ್ಮನಿರ್ಭರತೆ’ಯ ಹಾದಿಯಲ್ಲಿ ಭಾರತ ಬಹುದೂರ ಸಾಗಿದೆ. ಇದು ಮೋದಿ ಹಾದಿ.

    (ಲೇಖಕರು ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts