ಸಿನಿಮಾ

ಜಲ್ಲಿ ತಂದು ಹಾಕಿ ಕಳೆಯಿತು ತಿಂಗಳು ಎರಡು, ಮುಂದುವರಿದಲ್ಲ ಅರಳ್ತಡ್ಕ-ದೇಲಂತ್ತಡ್ಕ ಪರಿಶಿಷ್ಟ ಜಾತಿ ಕಾಲನಿಯ ರಸ್ತೆ ಕೆಲಸ

ವಿಜಯವಾಣಿ ಸುದ್ದಿಜಾಲ ವಿಟ್ಲ

ಕೋಟ್ಯಂತರ ರೂ. ಅನುದಾನ ತಂದು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಿದ್ದೇವೆ ಎನ್ನುವ ನಿಟ್ಟಿನಲ್ಲಿ ಚುನಾವಣೆ ಘೋಷಣೆಯ ಮೊದಲು ತರಾತುರಿಯಲ್ಲಿ ಕಾಮಗಾರಿ ನಡೆಸಬೇಕೆಂಬ ನಿಟ್ಟಿನಲ್ಲಿ ಎರಡು ತಿಂಗಳ ಹಿಂದೆ ಜಲ್ಲಿ ಹಾಕಿ ಹೋದ ಗುತ್ತಿಗೆದಾರರನ್ನು ಹುಡುಕಿ ಕೊಡಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಾಣಿಲ ಗ್ರಾಮದ ಅರಳ್ತಡ್ಕ-ದೇಲಂತ್ತಡ್ಕ ಪರಿಶಿಷ್ಟ ಜಾತಿ ಕಾಲನಿಯ ರಸ್ತೆ ಅಭಿವೃದ್ಧಿಗಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 20 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಎರಡು ತಿಂಗಳ ಹಿಂದೆ ರಸ್ತೆಗೆ ಜಲ್ಲಿ ಹಾಕಿ ಹೋಗಲಾಗಿದೆ. ಹಾಗೆಂದು ಆ ಬಳಿಕ ಅದನ್ನು ಮುಂದುವರಿಸುವ ಕಾರ್ಯ ಗುತ್ತಿಗೆದಾರ ಮಾಡಿಲ್ಲ.

ಸುಮಾರು 50 ಮನೆಗಳಿಗೆ ಇದುವೇ ಸಂಪರ್ಕ ರಸ್ತೆಯಾಗಿದ್ದು, ಜಲ್ಲಿ ಹಾಕಿ ಹೋದ ಕಾರಣ ಜನರಿಗೆ ದ್ವಿಚಕ್ರ ವಾಹನದಲ್ಲಿ ಓಡಾಡಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಓಡಾಡಲು ನಿರಾಕರಿಸುವ ಹಂತಕ್ಕೂ ತಲುಪಿದೆ. ಪರ್ಯಾಯ ರಸ್ತೆ ಇಲ್ಲದೆ ಕೃಷಿಕರು, ಅನಾರೋಗ್ಯ ಪೀಡಿತರಿಗೆ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ.

330 ಮೀಟರ್‌ಗೆ ಎರಡು ತಿಂಗಳು

ಅರಳ್ತಡ್ಕ -ದೇಲಂತ್ತಡ್ಕ ರಸ್ತೆ ಸುಮಾರು 330 ಮೀಟರ್ ಅಭಿವೃದ್ಧಿಗೆ ಮುಂದಾಗಿದೆ. ಹಾಗೆಂದು ಕಾಮಗಾರಿ ನಡೆಸಲು ಸುಮಾರು ಎರಡು ತಿಂಗಳಿಂದ ಸಾಧ್ಯವಾಗದೆ ಕೆಲಸ ಹಾಗೆಯೇ ಉಳಿದುಕೊಂಡಿದೆ.

ಕಾರ್ಯಕ್ರಮ ನಿಮಿತ್ತ ತಡೆದಿದ್ದರು!

ಕಾಮಗಾರಿ ಪ್ರಾರಂಭಿಸುವ ಸಮಯ ಅದೇ ರಸ್ತೆಯನ್ನು ಬಳಸುವ ಮನೆಯೊಂದರಲ್ಲಿ ಶುಭ ಕಾರ್ಯಕ್ರಮ ನಿಶ್ಚಯವಾಗಿತ್ತು. ಮನೆಗೆ ವಾಹನಗಳು ಹೆಚ್ಚಾಗಿ ಆಗಮಿಸುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸದಂತೆ ಆವಾಗ ಕೇಳಿಕೊಂಡಿದ್ದರು. ಕಾರ್ಯಕ್ರಮ ನಿಮಿತ್ತ ತಡೆದಿದ್ದರಿಂದ ಬಳಿಕ ಕೆಲಸ ಮುಂದುವರಿಸಲು ಆಗಿಲ್ಲ ಎಂಬ ಮಾತು ಇಲಾಖೆಯಿಂದ ಕೇಳಿಬರುತ್ತಿದೆ.

ಟೆಂಡರ್ ಆಗಿ ಕಾಮಗಾರಿ ಆರಂಭಿಸಿದಾಗ ಸಾರ್ವಜನಿಕರು ವಿವಿಧ ಕಾರ್ಯಕ್ರಮಗಳ ಬಗ್ಗೆ ಉಲ್ಲೇಖಿಸಿದ ಹಿನ್ನೆಲೆ ಕೆಲಸ ನಡೆಸಿರಲಿಲ್ಲ. ಕಾಮಗಾರಿಯನ್ನು ನಡೆಸಲು ಬೇರೆ ಯಾವುದೇ ಸಮಸ್ಯೆಗಳಿಲ್ಲ. ಸೋಮವಾರದಿಂದ ಕೆಲಸ ಪ್ರಾರಂಭಿಸಲಾಗುವುದು.

ಹರೀಶ್, ಇಂಜಿನಿಯರ್, ನಿರ್ಮಿತಿ ಕೇಂದ್ರ ಪುತ್ತೂರು

Latest Posts

ಲೈಫ್‌ಸ್ಟೈಲ್