More

    ಮೇರಿಹಿಲ್ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಬಹುತೇಕ ಪೂರ್ಣ

    ಮಂಗಳೂರು: ವಿಮಾನ ನಿಲ್ದಾಣ ರಸ್ತೆಯ ಮೇರಿಹಿಲ್ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಶೇ.90ರಷ್ಟು ಪೂರ್ಣಗೊಂಡಿದೆ. 1.40 ಕೋಟಿ ರೂ. ವೆಚ್ಚದಲ್ಲಿ ಪ್ರೀಮಿಯಂ ಎಫ್‌ಎಆರ್ ಅನುದಾನದಡಿ ಯೋಜನೆ ಕಾರ್ಯಗತವಾಗಿದೆ.


    ಪದವಿನಂಗಡಿ ಇನ್‌ಲ್ಯಾಂಡ್ ಕಟ್ಟಡದ ಎದುರಿನಲ್ಲಿ ಮಹಾಲಸಾ ದೇವಳದ ಮೂಲಕ ಮೇರಿಹಿಲ್‌ಗೆ ಸೇರುವ ಒಳ ರಸ್ತೆ ಮೊದಲ ಹಂತದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ 40 ಲಕ್ಷ ರೂ. ಹಾಗೂ ಎರಡನೇ ಹಂತದಲ್ಲಿ ರಾಜೀವ್ ಗಾಂಧಿ ನಗರ ವಿಕಾಸ ಯೋಜನೆಯಡಿ 1.5 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಮಾಡಲಾಗಿತ್ತು. ಮೂರನೇ ಹಂತದಲ್ಲಿ 1.40 ಕೋಟಿ ರೂ. ವೆಚ್ಚದಲ್ಲಿ ವೃತ್ತ ಅಭಿವೃದ್ಧಿ ಮಾಡಲಾಗಿದೆ.


    ಇಂಟರ್‌ಲಾಕ್, ಬಸ್‌ಬೇ, ಪಾದಚಾರಿಗಳಿಗೆ ಫುಟ್‌ಪಾತ್ ನಿರ್ಮಾಣ, ಮಳೆ ನೀರು ಹರಿಯುವ ತೋಡು ರಚನೆ ಮೊದಲಾದ ಪ್ರಮುಖ ಕಾಮಗಾರಿಗಳು ಇನ್ನು ನಡೆಯಬೇಕಿದೆ. ವೃತ್ತದಲ್ಲಿ ಸಣ್ಣ ಪಾರ್ಕ್ ನಿರ್ಮಾಣ ಮಾಡಲಾಗಿದೆ. ಪದವಿನಂಗಡಿಯ ಸಾರ್ವಜನಿಕ ಗಣೇಶೋತ್ಸವದ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ, ಶ್ರೀ ಮಹಾಲಸಾ ನಾರಾಯಣಿ ದೇವಳದ ವಾರ್ಷಿಕ ಜಾತ್ರೋತ್ಸವದ ಕೊನೇ ದಿನ ಓಕುಳಿಯಂದು ದೇವರನ್ನು ಇದೇ ರಸ್ತೆಯಲ್ಲಿ ಕೊಂಡೊಯ್ಯಲಾಗುತ್ತದೆ. ಇಲ್ಲಿರುವ ಖಾಸಗಿ ಶಾಲೆಗೆ ಮಕ್ಕಳನ್ನು ಬಿಡಲು ಹಾಗೂ ಕರೆದೊಯ್ಯಲು ಬೆಳಗ್ಗೆ ಮತ್ತು ಸಾಯಂಕಾಲ ನೂರಾರು ವಾಹನಗಳು ಈ ರಸ್ತೆಯಲ್ಲಿ ಬರುತ್ತವೆ. ಕಾಂಕ್ರಿಟೀಕರಣದಿಂದ ಅನುಕೂಲವಾಗಲಿದೆ.


    ಒಳ ರಸ್ತೆ ಡಾಂಬರೀಕರಣ ಪೂರ್ಣಗೊಳ್ಳಲಿ: ಮೇರಿಹಿಲ್ ಜಂಕ್ಷನ್‌ನಿಂದ ಹೆಲಿಪ್ಯಾಡ್‌ಗೆ ಸಾಗುವ ಒಳರಸ್ತೆ ಕಳೆದ ಮೂರು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿತ್ತು. ಸದ್ಯ ಅರ್ಧದಷ್ಟು ಡಾಂಬರೀಕರಣ ಮಾಡಿ ಬಿಟ್ಟಿದ್ದಾರೆ. ಅದನ್ನು ಪೂರ್ಣಗೊಳಿಸಿದರೆ ಮಳೆಗಾಲದಲ್ಲಿ ಇಲ್ಲಿ ಸಂಚರಿಸಲು ಪೂರಕವಾಗಲಿದೆ. ಪಾಲಿಕೆ ಆಡಳಿತ ತಕ್ಷಣ ಸ್ಪಂದಿಸಬೇಕು ಎಂದು ಈ ರಸ್ತೆಯಲ್ಲಿ ಪ್ರತಿದಿನ ಸಂಚರಿಸುವ ಚಿರಂತ್ ಬೊಲ್ಪುಗುಡ್ಡೆ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts