More

    ಹರಿದಾಸರ ಅಷ್ಟಾಂಗಯೋಗ ಸಾಧನೆಯ ಅನುಸಂಧಾನ

    Yogakshemaಶ್ರೀ ಹರಿಯ ಸೇವಕರೆ ಹರಿದಾಸರು. ಭಕ್ತಿ ಇವರ ಪ್ರಾಣ, ಪಾರಮಾರ್ಥಿಕ ಸಾಧನೆ ಇವರ ಗುರಿ. ಇವರ ವೃತ್ತಿ ಮಧುಕರ ವೃತ್ತಿ. ಪ್ರವೃತ್ತಿ ಊರೂರು ಅಲೆಯುವುದು, ಸಮಾಜವನ್ನು ಉದ್ಧರಿಸುವುದು, ಬೋಧಿಸುವುದು. ವೇಷಭೂಷಣ ಬಹು ಸರಳ. ಅವು ಸಾಂಪ್ರದಾಯಿಕ ಬಗೆಯವು. ತಲೆಗೆ ಶಾಟಿ, ಶೇಷವಸ್ತ್ರ ಶಾಲು, ಕಚ್ಚೆಪಂಚೆ, ಕಾಲಿಗೆ ಗೆಜ್ಜೆ, ಕೊರಳಲ್ಲಿ ತುಳಸಿಯ ಮಾಲೆ, ಗೋಪಿಚಂದನ ಮುದ್ರೆ-ನಾಮಗಳೂ ಒಂದು ಕೈಯಲ್ಲಿ ಸಣ್ಣದೊಂದು ಬಡಿಗೆ ಅಥವಾ ತಂಬೂರಿ, ಇನ್ನೊಂದು ಚಿಟಿಕಿ, ಕಂಕುಳಲ್ಲಿ ಇಳಿಬಿದ್ದ ಜೋಳಿಗೆ ಅಥವಾ ಗೋಪಾಲಬುಟ್ಟಿ, ಹಾಡುವುದು ದೇವರ ನಾಮ. ಕೆಲವೊಮ್ಮೆ ಭಾವಪರವಶರಾಗಿ ಕುಣಿಯುವುದು, ಊಂಛ ವೃತ್ತಿಯಿಂದ ಸಿಕ್ಕಿದ್ದರಲ್ಲೇ ತೃಪ್ತಿ. ಕೊಟ್ಟದ್ದನೆಲ್ಲ ‘ಕೃಷ್ಣಾರ್ಪಣ’ ಎಂದು ಸ್ವೀಕಾರ. ಇವು ಹರಿದಾಸರನ್ನು ಹೊರಗಿನಿಂದ ಕಂಡಾಗ ಮೇಲ್ನೋಟದ ವಸ್ತುಸ್ಥಿತಿ.

    ಗುರುವು ನೀಡುವ ಉಪದೇಶವೇ ಹರಿದಾಸ ದೀಕ್ಷೆ. ಅಂಕಿತ ಪ್ರಧಾನವೇ ದಾಸತ್ವದ ಪವಿತ್ರ ಹೆಜ್ಜೆ. ಹರಿದಾಸರೆಲ್ಲ ಒಂದೇ ಕುಟುಂಬ. ಅವರು ಎಲ್ಲೇ ಇರಲಿ ಒಂದು ಕುಟುಂಬಕ್ಕೆ ಸೇರಿದವರು. ‘ಹರಿದಾಸರೆನ್ನ ಬಾಂಧವರು’ ಎಂದು ಪುರಂದರದಾಸರ ಪದವಾಣಿ. ದಾಸಕೂಟದ ಸ್ವರೂಪ, ವ್ಯವಸ್ಥೆ ಹರಿದಾಸರ ಮನಸಿನಲ್ಲಿರುತ್ತದೆ ಅಷ್ಟೆ. ಇದಕ್ಕೆ ಹೊರಗಿನ ಆಕಾರ ಸಂಘಟನೆಯೆಂಬುದಿಲ್ಲ. ತಾವು ಅದಕ್ಕೆ ಚೇತನದಿಂದಲೂ, ಸಂಕಲ್ಪದಿಂದಲೂ, ಸಂಸ್ಕಾರದಿಂದಲೂ ಸೇರಿದವರೆನ್ನುವ ನಿಷ್ಠೆಯಿ ರುತ್ತದೆ. ದಾಸಕೂಟಕ್ಕಿರುವ ನಿಯಮಗಳೂ ಸಾಧಾರಣವಾದುವು, ಸರ್ವಜನೀಯವಾದುದು. ಮೂಲಭೂತವಾದ ಮಾನವ ಧರ್ಮಕ್ಕೆ ಸಂಬಂಧಿಸಿದುವು. ಹರಿಯೇ ಪರನೆಂಬ ನಂಬಿಕೆ, ಮನುಷ್ಯನು ಅವನಿಗೆ ಅಧೀನ ಎನ್ನುವ ಅರಿವು. ಸಂಸಾರವು ಸತ್ಯ ಎಂಬ ಪರಿವೆ, ವೇದ-ಶಾಸ್ತ್ರ-ಪುರಾಣೇತಿಹಾಸಗಳಲ್ಲಿ ನಂಬಿಕೆ, ಸಾಲ ಮಾಡದಿರುವುದು ಸಾಲದೆನದಿರುವುದು, ನಾಳೆಗೆಂದು ಇಡದಿರುವುದು, ಹರಿದಿನ-ವ್ರತಾಚರಣೆ ಬಿಡದಿ

    ರುವುದು, ದೈವನಿಂದೆ ಕೇಳಿದರೆ ಆತ್ಮ ಶುದ್ಧಿ ಮಾಡಿಕೊಳ್ಳುವುದು, ಹರಿಸೇವೆಗೆ ಜೀವನವನ್ನು ಮೀಸಲಾಗಿಡುವುದು, ಅನ್ನಪಾನಕ್ಕೆ ಅವಸರ ಬೀಳದಿರುವುದು, ಇಂದ್ರಿಯಗಳನ್ನೆಲ್ಲ ನಿಗ್ರಹಿಸುವುದು, ಭಾವಶುದ್ಧಿಯಲಿ ನಿತ್ಯ ತಿರುಗುವುದು, ಕಣ್ಣಿದ್ದೂ ಕುರುಡನೆಂದೆನಿಸುವುದು ಇವೆಲ್ಲ ಹರಿದಾಸ್ಯದ ನಿಯಮಾವಳಿಯಲ್ಲಿ ಸೇರುತ್ತವೆ. ದಾಸರು ಪ್ರಾಪಂಚಿಕವಾದ ಯಾವ ಉದ್ಯೋಗವನ್ನೂ ಹಿಡಿಯುವುದಿಲ್ಲ. ಸಾಮಾನ್ಯ ವ್ಯವಹಾರಗಳಲ್ಲಿ ಪಾಲುಗೊಳ್ಳುವುದಿಲ್ಲ. ಗಳಿಸಿ ಕೂಡಿಡುವ ಗೀಳು ಅವರಿಗೆ ಸಲ್ಲದು. ಮುಂದಿನ ವಿಚಾರದಲ್ಲಿ ಅವರು ಆತಂಕ ಪಡುವುದಿಲ್ಲ. ‘ಕೊಡುವ ಕರ್ತೃ ಬೇರೆ ಇರಲಾಗಿ ನಾನೇಕೆ ಬಡವ ? ನನಗೆಲ್ಲಿಯ ಚಿಂತೆ ? ಅಂಜಿಕೆ ಇನ್ನು ಏತಕ್ಕೆ? ಬಂದುದೆಲ್ಲ ಬರಲಿ, ಗೋವಿಂದನ ದಯವೊಂದಿರಲಿ’- ಇದು ಹರಿದಾಸರ ನಿಲುವು. ಈ ನಿಯಮಗಳನ್ನೂ, ಅದಕ್ಕೆ ಮೂಲಭೂತವಾದ ಮನೋಧರ್ಮವನ್ನೂ ಮನಸಾರೆ ಒಪ್ಪಿ ಮನವೊಪು್ಪವಂತೆ ನಡೆಸಿದರೆ ಆಯಿತು. ಅವರು ಈ ನಿಲುವಿಗೆ ಅನುಕೂಲವಾಗತಕ್ಕ ನಿಯಮಗಳನ್ನು ಅವರು ಪಾಲಿಸುತ್ತಾರಷ್ಟೇ.

    ಭಗವತ್ಸಾಕ್ಷಾತ್ಕಾರವಿಲ್ಲದೆ ಈ ಸಂಸಾರದಿಂದ ಬಿಡುಗಡೆ ದೊರಕುವುದಿಲ್ಲ. ಶ್ರವಣ ಮನನಗಳಿಂದ ಭಗವತ್ತತ್ವವನ್ನು ‘ಇದಮಿತ್ಥಂ’ ಎಂದು ನಿರ್ಣಯಪೂರ್ವಕವಾಗಿ ಉಪಾಸನೆ ಮಾಡುವುದರಿಂದಲೇ ಅಪರೋಕ್ಷದರ್ಶನ ಎನ್ನುತ್ತಾರೆ. ಶ್ರೀ ಮಧ್ವಾಚಾರ್ಯರು. ಅಂಥ ಉಪಾಸನೆಯು – ಶಾಸ್ತ್ರ ಶ್ರವಣ ಮನನರೂಪವಾದುದೊಂದು, ಧ್ಯಾನ ರೂಪವಾದುದೊಂದು – ಹೀಗೆ ಎರಡು ವಿಧ. ಮೊದಲನೆಯದೆ ಪಂಡಿತರ-ವ್ಯಾಸಕೂಟದ ಉಪಾಸನ ಕ್ರಮವಾದರೆ, ಎರಡನೆಯ ಧ್ಯಾನರೂಪವು ಸಾಧನ ಪ್ರಧಾನವಾಗಿದ್ದು ಹರಿದಾಸಕೂಟಕ್ಕೆ ಬಹು ಆದರದ ಅನುಷ್ಠಾನ ಯೋಗ್ಯ ರೂಪವಾಗಿದೆ. ಧ್ಯಾನರೂಪವು ಸಾಧನ ಉಪಾಸನೆಯಲ್ಲಿ ಯಮ, ನಿಯಮ, ಆಸನ, ಪ್ರಾಣಾಯಾಮ ಎಂಬ ನಾಲ್ಕು ವಿಧವಾದ ಅಂಗಗಳಿವೆ. ಈ ನಾಲ್ಕೂ ಬಹಿರಂಗ ಸಾಧನೆಯನ್ನು ಅನ್ವಯಿಕ ಹಿನ್ನೆಲೆಯಲ್ಲಿ ವಿಸõತವಾಗಿ ಅನುಸಂಧಾನ ಮಾಡಲಾಗಿದೆ. ಇವೆರಡು ದಾರಿಗಳೂ ಖಂಡ ಸ್ಮೃತಿಗೆ ಸಂಬಂಧಪಟ್ಟವೇ. ಇವನ್ನು ಮೀರಿದ ಭಕ್ತಿ ಅಖಂಡ ಸ್ಕೃತಿಯೆನಿಸಿಕೊಳ್ಳುತ್ತದೆ. ಮಧ್ವಾಚಾರ್ಯರು ತಮ್ಮ ಬೃಹದಾರಣ್ಯಕ ಭಾಷ್ಯದಲ್ಲಿ ಪೈಂಗಿ ಶ್ರುತಿಯನ್ನು ಉದ್ಧರಿಸುತ್ತ ‘ಶ್ರವಣಂ ಮನನಂ ಚೈವ ಧ್ಯಾನಂ ಭಕ್ತಿ ಸ್ತಥಾ ದೃಶಿಃ’ ಎಂದು ಹೇಳಿದ್ದಾರೆ. ಇಲ್ಲಿ ಧ್ಯಾನವೆಂದರೆ ನಿಧಿಧ್ಯಾಸವೇ. ಧಾರಣೆಯೆಂದರೆ ಖಂಡ ಸ್ಮೃತಿ, ಧ್ಯಾನ ಅಖಂಡ ಸ್ಮೃತಿ ಎಂದು ಹೇಳಲಾಗಿದೆ. ಆದರೆ ಪ್ರಯೋಗದಲ್ಲಿ ಧ್ಯಾನವನ್ನು ಮೀರಿದ ಭಕ್ತಿ ಎನ್ನುವುದೇ ದಿಟವಾಗಿ ಅಖಂಡ ಸ್ಮೃತಿಯೆನಿಸಿಕೊಳ್ಳುವುದು. ಹೀಗಿದೆ ಹರಿದಾಸರ ಅಷ್ಟಾಂಗ ಯೋಗ ಸಾಧನೆಯ ಅನುಸಂಧಾನ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts