More

    ವರದಾನವಾಯಿತು ಎಪಿಎಂಸಿ

    ಮನೋಹರ್ ಬಳಂಜ ಬೆಳ್ತಂಗಡಿ
    ಎರಡು ದಶಕಗಳಿಂದ ಉಪಯೋಗವಾಗದೇ ಪಾಳುಬಿದ್ದಿದ್ದ ಬೆಳ್ತಂಗಡಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೊಸರೂಪ ಬಂದಿದ್ದು, ಸರ್ಕಾರದ ಕೋಟಿಗಟ್ಟಲೆ ಅನುದಾನ ಸದ್ಬಳಕೆಗೆ ಹಾದಿ ಸುಗಮಗೊಂಡಿದೆ.
    1999ರಲ್ಲಿ ಹಳೆಕೋಟೆ ಸಮೀಪ ಪ್ರಾರಂಭವಾದ ಕೃಷಿ ಉತ್ಪನ್ನ ಮಾರುಕಟ್ಟೆ ಕೇವಲ ಕಟ್ಟಡ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿತ್ತು. ಇತ್ತೀಚೆಗೆ ಕರೊನಾ ಹಿನ್ನೆಲೆ ದೈಹಿಕ ಅಂತರ ಕಾಯ್ದುಕೊಳ್ಳಲು ಹಾಗೂ ವ್ಯಾಪಾರಿಗಳ, ಗ್ರಾಹಕರ, ರೈತರ ಆರೋಗ್ಯದ ದೃಷ್ಟಿಯಿಂದ ಬೆಳ್ತಂಗಡಿಯ ಅತಿ ದೊಡ್ಡ ಸಂತೆ ವ್ಯವಹಾರವನ್ನು ಎಪಿಎಂಸಿ ಆವರಣಕ್ಕೆ ತಾತ್ಕಾಲಿಕವಾಗಿ ಶಾಸಕ ಹರೀಶ್ ಪೂಂಜ ಸ್ಥಳಾಂತರಿಸಿದರು. ಇದಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿರುವುದರಿಂದ ಗ್ರಾಹಕರು, ಖರೀದಿದಾರರು, ರೈತರು ಇದರಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಶಾಸಕರ ಪ್ರಯತ್ನಕ್ಕೆ ಎಪಿಎಂಸಿ ಆಡಳಿತ ಮಂಡಳಿ, ಅಧಿಕಾರಿವರ್ಗ, ನಪಂ ಬೆಂಬಲಕ್ಕೆ ನಿಂತಿದ್ದು, ಈಗ ಶಾಶ್ವತವಾಗಿ ಎಪಿಎಂಸಿ ಆವರಣದಲ್ಲೇ ಸಂತೆ ಮಾರುಕಟ್ಟೆ ನಡೆಯುತ್ತಿದೆ. ವಿಶಾಲ ಪ್ರಾಂಗಣದಲ್ಲಿ ಸುಸಜ್ಜಿತವಾಗಿ ವ್ಯಾಪಾರ ವ್ಯವಹಾರ ನಡೆಯುತ್ತಿದೆ. ಎಪಿಎಂಸಿ ನಿರ್ಣಯದಂತೆ ರೈತರಿಗೆ ಉತ್ಪನ್ನಗಳನ್ನು ಮಾರಾಟ ಮಾಡಲು ಉಚಿತ ಅವಕಾಶ ನೀಡಿರುವುದರಿಂದ ರೈತರು ಹರ್ಷಗೊಂಡಿದ್ದಾರೆ.

    ಅನುದಾನ ಸದ್ಬಳಕೆಗೆ ಹಾದಿ
    ಸುಮಾರು 10 ಎಕರೆ ಪ್ರದೇಶದಲ್ಲಿ ಎಪಿಎಂಸಿ ಮಾರುಕಟ್ಟೆಯಿದ್ದು, ರೈತರ ಅನುಕೂಲಕ್ಕಾಗಿ ಕೋಟಿಗಟ್ಟಲೆ ಅನುದಾನದಿಂದ ಮೂಲಸೌಕರ್ಯ ಕಲ್ಪಿಸಿದೆ. ವರ್ತಕರಿಗೆ ವ್ಯವಹಾರ ಮಾಡಲು 16 ಸೈಟ್, 40 ಮೆಟ್ರಿಕ್ ಟನ್‌ನ ಎರಡು ಗೋದಾಮು, 250 ಮೆಟ್ರಿಕ್ ಟನ್‌ನ ಒಂದು ಗೋದಾಮು, ರೈತ ಭವನ, ಪೋಸ್ಟ್ ಕಚೇರಿಗೆ ಕಟ್ಟಡ, ಬ್ಯಾಂಕ್ ವ್ಯವಸ್ಥೆಗೆ ಕಟ್ಟಡ, ಕ್ಯಾಂಟೀನ್ ವ್ಯವಸ್ಥೆ, ವ್ಯಾಪಾರ, ವ್ಯವಹಾರಕ್ಕೆ ನಾಲ್ಕು ಸಭಾಂಗಣ, ಹರಾಜು ರೂಮು, ವಸತಿಗೃಹ, ಆಡಳಿತ ಕಚೇರಿ, ಮುಂತಾದ ಕಟ್ಟಡಗಳು ಇದ್ದು, ಇವೆಲ್ಲವೂ ಬಳಕೆಯಾದೆ ಅನುದಾನ ಸದ್ಬಳಕೆಯಾಗುತ್ತಿರಲಿಲ್ಲ. ಈಗ ಸಂತೆ ಮಾರುಕಟ್ಟೆ ಬಂದಿದ್ದರಿಂದ ಸರ್ಕಾರದ ಅನುದಾನ ಸದ್ಬಳಕೆಯಾಗುತ್ತಿದೆ.

    ಕ್ಯಾಂಪ್ಕೊ, ಆಹಾರ ನಿಗಮ ಇದೇ ಆವರಣದಲ್ಲಿ
    ಕ್ಯಾಂಪ್ಕೊ ಖರೀದಿ ಕೇಂದ್ರ ಈಗ ಇದೇ ಆವರಣದಲ್ಲಿ ನಡೆಯುತ್ತಿದ್ದು ರೈತರು ಅಡಕೆ, ಕೊಕ್ಕೊ, ಕಾಳುಮೆಣಸು ಇನ್ನಿತರ ಉತ್ಪನ್ನಗಳನ್ನು ಮಾರಾಟ ಮಾಡಲು ಬರುತ್ತಿದ್ದು, ಇದರೊಂದಿಗೆ ಇತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗಿದೆ. ಕರ್ನಾಟಕ ಆಹಾರ ನಿಮಗದ ಗೋದಾಮು ಕೂಡ ಇಲ್ಲೇ ಕಾರ್ಯಾಚರಣೆ ಪ್ರಾರಂಭಿಸಿದೆ.

    ರೈತರ ಹಿತದೃಷ್ಟಿಯಿಂದ ಮತ್ತು ಕೊರೊನಾ ತಡೆಗಟ್ಟುವ ಉದ್ದೇಶದಿಂದ ಎಪಿಎಂಸಿ ಆವರಣಕ್ಕೆ ಸಂತೆ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡಿದ್ದು, ಬಳಿಕ ರೈತರಿಂದ, ವ್ಯಾಪಾರಸ್ಥರಿಂದ ವ್ಯಾಪಕ ಬೆಂಬಲ ವ್ಯಕ್ತವಾದ್ದರಿಂದ ಎಪಿಎಂಸಿ ಸದಸ್ಯರ ಮತ್ತು ನ.ಪಂ ನ ಸಹಕಾರ ಇದ್ದುದರಿಂದ ಶಾಶ್ವತವಾಗಿ ಎಪಿಎಂಸಿ ಆವರಣದಲ್ಲಿ ಶಾಶ್ವತ ಸಂತೆ ಮಾರುಕಟ್ಟೆ ಮಾಡಲು ಚಿಂತಿಸಲಾಗಿದೆ.
    ಹರೀಶ್ ಪೂಂಜ, ಶಾಸಕ

    ಬೆಳ್ತಂಗಡಿ ಎಪಿಎಂಸಿ ಮಾರುಕಟ್ಟೆ ಅತೀದೊಡ್ಡ ಪ್ರಾಂಗಣ ಹೊಂದಿದ್ದು, ಮಾರುಕಟ್ಟೆಗೆ ಬೇಕಾದ ಸೂಕ್ತ ವ್ಯವಸ್ಥೆ ಇತ್ತು. ಈಗ ಸಂತೆ ಮಾರುಕಟ್ಟೆ ಇಲ್ಲಿ ಬಂದುದರಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹೊಸರೂಪ ಬಂದಿದ್ದು ರೈತರಿಗೆ, ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಎಪಿಎಂಸಿ ಸಂಪೂರ್ಣ ಸಹಕಾರ ನೀಡಲಿದೆ.
    ಕೇಶವ ಗೌಡ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷ

    ಶಾಸಕರ ಮುತುವರ್ಜಿಯಿಂದ ಎಪಿಎಂಸಿ ಆವರಣಕ್ಕೆ ಸಂತೆ ಮಾರುಕಟ್ಟೆ ಸ್ಥಳಾಂತರಗೊಂಡಿದ್ದು, ಇದಕ್ಕೆ ಎಪಿಎಂಸಿ ಆಡಳಿತ ಮಂಡಳಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ನ.ಪಂ ಇಲ್ಲಿನ ವ್ಯವಹಾರಕ್ಕೆ ಪರವಾನಗಿ ನೀಡುತ್ತದೆ ಮತ್ತು ತ್ಯಾಜ್ಯ ವಿಲೇವಾರಿಗೂ ಆದ್ಯತೆ ನೀಡುತ್ತದೆ.
    ಸುಧಾಕರ್ ಬೆಳ್ತಂಗಡಿ ನಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts