More

    ಅಂತರಂಗ- ಸತ್ಯವಂತಿಕೆ

    ಅಂತರಂಗ- ಸತ್ಯವಂತಿಕೆಬೆಳಕು ಎಂಬುದು ಮನುಷ್ಯ, ಪಶು ಪಕ್ಷಿ, ತರುಲತೆಗಳಿಗೆ ಎಷ್ಟು ಅವಶ್ಯವೋ ಅಷ್ಟೇ ಸತ್ಯಕ್ಕೂ ಇದೆ. ಎಲ್ಲೆಡೆ ಅಸತ್ಯ ಆವರಿಸಿದಾಗ ಚಿತ್ತ, ಮನ, ಬುದ್ಧಿಗಳೆಲ್ಲವಕ್ಕೂ ಬರೀ ಕತ್ತಲೆ ಕಾಣುತ್ತದೆ. ಅಸತ್ಯವೆಂಬ ಕತ್ತಲೆಯ ಬಾಗಿಲು ತೆರೆದಾಗ ಜ್ಯೋತಿಯ ಪ್ರಕಾಶವು ತಾನೇ ಕಾಣುತ್ತದೆ. ಸತ್ಯ ಎಲ್ಲರಲ್ಲಿಯೂ ಇದ್ದರೂ ಅದನ್ನು ಅರಿತವರು ವಿರಳ. ಅನುಭವಿಸಿದರಂತೂ ಇನ್ನೂ ವಿರಳ. ವಿಷಯಗಳಿಗೆ ಸೋತವರಿಗೆ ಸತ್ಯವೆಂದೂ ತೋರದು.

    ಈಶೋಪನಿಷತ್​ ಹೀಗೆ ಹೇಳುವುದು… “ಹಿರಣ್ಯಯೇನ ಪಾತ್ರೇಣ ಸತ್ಯಸ್ಯಾಪಿ ಹಿತಂ ಮುಖಂ’. ಸತ್ಯದ ಮುಖವು ಸುವರ್ಣದ ಪಾತ್ರೆಯಿಂದ ಮುಚ್ಚಲ್ಪಟ್ಟಿದೆ. ಎಲ್ಲರ ಲಕ್ಷ್ಯವು ಸುವರ್ಣ ಪಾತ್ರೆಯತ್ತಲೇ ಇರುತ್ತದೆ. ಒಳಗಿನ ಸತ್ಯದತ್ತ ಇಲ್ಲ. ಈ ಬಂಗಾರದ ಪಾತ್ರೆಯನ್ನು ಸರಿಸದೆ ಸತ್ಯ ಸಿಗದು. ಬಸವಣ್ಣನವರು “ಸತ್ಯ ನುಡಿವುದೇ ದೇವಲೋಕ, ಮಿಥ್ಯ ನುಡಿಯುವುದೇ ಮರ್ತ್ಯಲೋಕ, ದೇವಲೋಕ ಮೇಲಿಲ್ಲ ನಮ್ಮಲ್ಲೆ ಇದೆ’ ಎಂದಿದ್ದಾರೆ.

    ಹೇಳುವುದು ಸುಲಭ ಅಳವಡಿಸಿಕೊಳ್ಳುವುದು ಸುಲಭವಲ್ಲ. ಅಸತ್ಯ ನುಡಿದವರು ಜೀವಂತವಿದ್ದರೂ ಸತ್ತಂತೆ. ಸತ್ಯವ ನುಡಿಯುವವರಿಗೆ ಸಾವಿಲ್ಲ. ಅವರಿಗೆ ಭೂಲೋಕವೆ ದೇವಲೋಕವಾಗುತ್ತದೆ. ಸತ್ಯ ಯಾರಲ್ಲಿದೆಯೋ ಅಲ್ಲಿ ಕಪಿಲಸಿದ್ಧ ಮಲ್ಲಿಕಾರ್ಜುನ ಇರುತ್ತಾನೆ ಎನ್ನುತ್ತಾರೆ ಸೋಲ್ಲಾಪುರದ ಶ್ರೀ ಸಿದ್ಧಾರಾಮೇಶ್ವರರು.

    ನದಿಗೆ ಸತ್ಯ ಮತ್ತು ಸುಳ್ಳು ಇಬ್ಬರೂ ಕೂಡಿ ಸ್ನಾನಕ್ಕೆ ಹೋಗಿದ್ದರು. ಬಟ್ಟೆಯನ್ನು ಬಿಚ್ಚಿ ಸ್ನಾನಕ್ಕೆ ಇಳಿದರು. ಸುಳ್ಳು ಸ್ನಾನವನ್ನು ಬೇಗ ಮಾಡಿ ಬಂದು ಸತ್ಯನ ಬಟ್ಟೆ ಹಾಕಿಕೊಂಡು ಊರಲ್ಲಿ ಬಂದ. ಎಲ್ಲರೂ ಸುಳ್ಳನ್ನು ಸತ್ಯ ಎಂದು ತಿಳಿದರು. ಸತ್ಯವಂತನಿಗೆ ಬಟ್ಟೆ ಇರಲಿಲ್ಲ. ಅವನು ಬರಿಮೈಯಲ್ಲೇ ಊರೊಳಗೆ ಬಂದ. ಇಲ್ಲಿ ಸತ್ಯಕ್ಕೆ ಬೆಲೆ ದೊರಕದೆ, ಸುಳ್ಳಿಗೆ ಬೆಲೆ ಬಂದಿತು. ಸುಳ್ಳು ಸತ್ಯದ ವೇಷ ಹಾಕಿಕೊಂಡಿದ್ದು, ಯಾರೊಬ್ಬರೂ ಅರಿಯದೆ ಅದರ ಬೆನ್ನು ಹತ್ತಿದ್ದಾರೆ. ಅದಕ್ಕೆ ಧರ್ಮದ ಹತ್ತು ಲಣಗಳಲ್ಲಿ ಸತ್ಯ ಅನ್ನುವುದು ಏಳನೆಯದಾಗಿದೆ. ಅದನ್ನು ಅಳವಡಿಸಿಕೊಂಡಾಗ ನೆಮ್ಮದಿ ಕಾಣುತ್ತೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts