More

    ಅಂತರಂಗ: ಸವಿಯನೀ ಬಾಳ್ಕೆಳೆಯೊಳರಸದನೆ ಹೆಳವ

    ಅಂತರಂಗ: ಸವಿಯನೀ ಬಾಳ್ಕೆಳೆಯೊಳರಸದನೆ ಹೆಳವಬದುಕನ್ನು ಸ್ನೇಹಿತರೊಡನೆ ಜೀವಿಸಲು ಕಿಂಚಿತ್ತೂ ಪ್ರಯತ್ನ ಮಾಡದವನು ಹೆಳವ. ಡಿ.ವಿ.ಜಿ.ಯವರು ಕುಂಟನು ಯಾರು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ. ಸ್ನೇಹಿತ ಪ್ರತಿಯೊಬ್ಬರ ಬದುಕಿನಲ್ಲಿರಬೇಕು. ತಂದೆ, ತಾಯಿ, ಬಂಧು, ಬಳಗದವರೊಡನೆ ಹಂಚಿಕೊಳ್ಳಲಾಗದ್ದನ್ನು ಸ್ನೇಹಿತರೊಡನೆ ಹಂಚಿಕೊಳ್ಳಬಹುದು. ಸ್ನೇಹ ಎಂಬ ಶಬ್ದಕ್ಕೆ ಜಿಡ್ಡು ಎಂಬ ಅರ್ಥವೂ ಇದೆ. ಚರ್ಮಕ್ಕೆ ಜಿಡ್ಡಿನ ಪದಾರ್ಥ ಮೆತ್ತಿಕೊಂಡರೆ ಅದು ಚರ್ಮದೊಂದಿಗೆ ಒಂದಾಗಿರುವಂತೆ ಕಾಣುತ್ತದೆ. ಆ ಜಿಡ್ಡನ್ನು ತೆಗೆಯಲು ಸೀಗೆಕಾಯಿಯೆಂಬ ಮೂರನೆ ಪದಾರ್ಥ ಬೇಕಾಗುತ್ತದೆ. ಹೀಗಾಗಿ ಸ್ನೇಹದಲ್ಲಿ ಬೇರ್ಪಡಿಸಲಾಗದ ಬಾಂಧವ್ಯವಿರುತ್ತದೆ.

    ಸದಭಿರುಚಿಯ ಸ್ನೇಹಿತನನ್ನು ಹುಡುಕಲು ಮು ನ್ನಡೆಯದವನನ್ನು ಖಂಡಿತವಾಗಿ ಹೆಳವನೆಂದು ತಿಳಿಯಬೇಕು. ಮನುಷ್ಯನ ಗುಣವನ್ನು ಆತನ ಸ್ನೇಹಿತರಾರು ಎಂಬುದನ್ನು ತಿಳಿದುಕೊಂಡು ಅಳೆಯೆಂದು ಹಿಂದಿನವರು ಹೇಳುತ್ತಿದ್ದರು. ಸಂಸ್ಕೃತದ ಸುಭಾಷಿತಕಾರನೊಬ್ಬ “ತಂದೆಯಾದವನು ತನ್ನ ಮಗನನ್ನು ಐದು ವರ್ಷಗಳ ಕಾಲ ಲಾಲಿಸಬೇಕು. ನಂತರ ಹತ್ತು ವರ್ಷಗಳು ಅವನನ್ನು ಹೊಡೆದು ಬುದ್ಧಿ ಕಲಿಸಬೇಕು. ಮಗನು ಹದಿನಾರನೆ ವಯಸ್ಸನ್ನು ತಲುಪಲು ಆತನನ್ನು ಮಿತ್ರನಂತೆ ಕಾಣಬೇಕು’ ಎಂದಿದ್ದಾನೆ. ಡಿ.ವಿ.ಜಿ.ಯವರು “ಮಂಕುತಿಮ್ಮನ ಕಗ್ಗ’ದಲ್ಲಿ ಸ್ನೇಹವನ್ನು ಈ ರೀತಿ ಬಳಸಿದ್ದಾರೆ.

    ದೇಹವೆಂಬುದು ಕುದುರೆಯಾತ್ಮನದರಾರೋಹಿ
    ವಾಹನವನುಪವಾಸವಿರಿಸೆ ನಡೆದೀತೆ?
    ರೋಹಿ ಜಾಗ್ರತೆ ತಪ್ಪೆ ಯಾತ್ರೆ ಸುಖ ಸಾಗೀತೆ?
    ಸ್ನೇಹವೆರಡಕಮುಚಿತ ಮಂಕುತಿಮ್ಮ >> 397 >>

    ನಮ್ಮ ಶರೀರ ಹಾಗೂ ನಮ್ಮ ಆತ್ಮ ಇವೆರಡು ಸ್ನೇಹಿತರಂತೆ ಇವೆೆ. ದೇಹವು ಕುದುರೆಯಾದರೆ ಆತ್ಮ ಆ ಕುದುರೆಯನ್ನು ಏರಿರುವ ಸವಾರ. ದೇಹವೆಂಬ ಕುದುರೆಯನ್ನು ಹೆಚ್ಚು ದಂಡಿಸಬಾರದು. ಸವಾರನಾದ ಆತ್ಮನೂ ಸದಾ ಜಾಗ್ರತನಾಗಿರಬೇಕು. ಹೀಗಾಗಿ ನಾವು ನಮ್ಮೊಡನೆ ಸ್ನೇಹದಿಂದ ಇದ್ದು, ಪ್ರಪಂಚದ ಪ್ರತಿಯೊಂದು ಜೀವಿಯೊಡನೆ ನಮ್ಮ ಆತ್ಮನಂತೆ ಸ್ನೇಹ ಭಾವದಿಂದಿದ್ದರೆ, ಬದುಕು ತುಂಬ ಸೊಗಸಾಗಿರುತ್ತದೆ. ಹೀಗೆ ಜೀವಿಸದಿದ್ದರೆ ನಾವು “ಹೆಳವ’ರಾಗಿಯೇ ಉಳಿಯುತ್ತೇವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts