

ಬೆಂಗಳೂರು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 30-40 ಸ್ಥಾನ ಗಳಿಸುತ್ತದೆ ಅಂತ ಇತ್ತು, ಆದರೆ ಈಗ ಅಷ್ಟೂ ಬರಲ್ಲ ಎಂಬುದು ಖಚಿತವಾಗಿದೆ ಎಂದು ಕರ್ನಾಟಕ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗದಳ ಬ್ಯಾನ್ ವಿಚಾರವಾಗಿ ಅವರು ಈ ಪ್ರತಿಕ್ರಿಯೆ ನೀಡಿದರು.
ನಾವೆಲ್ಲರೂ ಕಾಂಗ್ರೆಸ್ ಪ್ರಣಾಳಿಕೆ ನೋಡಿದ್ದೇವೆ. ಖಾಲಿ ಡಬ್ಬದ ರೀತಿ, ಬಹಳ ಶಬ್ದ ಬರುತ್ತದೆ. ಅವರ ಪ್ರಣಾಳಿಕೆ ಹಳೆಯ ಕಾಲದ ರೀತಿಯಲ್ಲಿ ಇದೆ. ದೇಶ ಹೇಗೆ ಹೋಗುತ್ತಿದೆ ಅಂತ ಅವರಿಗೆ ಗೊತ್ತಿಲ್ಲ. ಬಜರಂಗದಳ ಬ್ಯಾನ್ ಬಗ್ಗೆ ಹೇಳಿದ್ದಾರೆ. ಮೊದಲನೆಯದಾಗಿ ಅವರು ಅಧಿಕಾರಕ್ಕೇ ಬರಲ್ಲ ಎಂದು ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.
ಪಿಎಫ್‌ಐ ಏನು, ಅದು ಯಾವ ಉದ್ದೇಶದ ಸಂಘಟನೆ ಎನ್ನುವುದನ್ನು ತಿಳಿದುಕೊಳ್ಳಿ. ಅವರ ಮೇಲೆ ಯುಎಪಿಎ ಕೇಸ್ ಇದ್ದು, ಎನ್ಐಎ ಕೇಸ್ ವಿಚಾರಣೆ ನಡೆಸುತ್ತಿದೆ. ಮಂಗಳೂರು, ದಕ್ಷಿಣಕನ್ನಡ, ಕೇರಳ, ತಮಿಳುನಾಡಿನಲ್ಲಿ ಅವರು ಹೆಚ್ಚು ಸಕ್ರಿಯರಾಗಿದ್ದರು. ಕೇರಳ, ಕರ್ನಾಟಕದಲ್ಲಿ ಒಂದೇ ಮಾದರಿ ಹತ್ಯೆ ಮಾಡಲಾಗಿದೆ. ಹಾಗಾಗಿ ಅದನ್ನ ಬ್ಯಾನ್ ಮಾಡಲಾಗಿದೆ. ಅಂಥ ಪಿಎಫ್ಐಗೆ ಬಜರಂಗದಳವನ್ನು ಹೋಲಿಸಿದ್ದಾರೆ. ಕಾಂಗ್ರೆಸ್ 30-40 ಸ್ಥಾನ ಗಳಿಸುತ್ತದೆ ಅಂತ ಇತ್ತು, ಈಗ ಅಷ್ಟು ಕೂಡ ಬರಲ್ಲ. ಇಲ್ಲಿರುವ ಜನ ಮೇ 10ರಂದು ಅವರಿಗೆ ದೊಡ್ಡಮಟ್ಟದಲ್ಲಿ ಬುದ್ದಿ ಕಲಿಸುತ್ತಾರೆ ಎಂದರು.
ಪಿಎಫ್‌ಐ ಮನಸ್ಥಿತಿ ಹೇಗಿದೆ ಎಂಬುನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಪಿಎಫ್‌ಐ ಬ್ಯಾನ್ ಯಾಕೆ ಮಾಡಿದ್ದಾರೆ? ಸ್ಲೀಪರ್ ಸೆಲ್, ಭಯೋತ್ಪಾದನಾ ಕೃತ್ಯದ ಬಗ್ಗೆ ಅರ್ಥ ಮಾಡಿಕೊಳ್ಳಿ. ಬಜರಂಗದಳ ಬ್ಯಾನ್ ವಿಚಾರವನ್ನು ಬರೀ ಖಂಡಿಸುವುದಲ್ಲ, ಅತ್ಯುಗ್ರವಾಗಿ ವಿರೋಧ ಮಾಡುತ್ತೇನೆ ಎಂದರು.