More

    ಅನ್ನಭಾಗ್ಯ ಯೋಜನೆ | ಬ್ಯಾಂಕ್‌ನಲ್ಲಿ ಜನವೋ ಜನ

    ಕಲಾದಗಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆ ಲಾಭ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಫಲಾನುಭವಿಗಳು ಕಳೆದೊಂದು ವಾರದಿಂದ ದಾಂಗುಡಿ ಇಡುತ್ತಿದ್ದು, ಇದರಿಂದ ಬ್ಯಾಂಕ್ ಸಿಬ್ಬಂದಿ ಹೈರಾಣಾಗುತ್ತಿರುವುದು ಕಂಡು ಬಂದಿದೆ.

    ರಾಜ್ಯ ಸರ್ಕಾರ ಐದು ಕೆಜಿ ಅಕ್ಕಿ ಬದಲಿಗೆ ಪ್ರತಿ ಫಲಾನುಭವಿ ಬ್ಯಾಂಕ್ ಖಾತೆಗೆ ತಿಂಗಳಿಗೆ 170 ರೂ. ಹಣ ಜಮೆ ಮಾಡಿರುವುದಾಗಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಫಲಾನುಭವಿಗಳು ಬ್ಯಾಂಕ್‌ಗಳಿಗೆ ತೆರಳಿ ತಮ್ಮ ಖಾತೆಯಲ್ಲಿ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದು, ಇದರಿಂದ ಎಲ್ಲ ಬ್ಯಾಂಕ್‌ಗಳು ಜನರಿಂದ ತುಂಬಿಕೊಂಡಿವೆ.

    ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ರೇಶನ್ ಕಾರ್ಡ್‌ಗಳೊಂದಿಗೆ ಆಗಮಿಸುವ ಫಲಾನುಭವಿಗಳು, ಬ್ಯಾಂಕ್ ಸಿಬ್ಬಂದಿಗೆ ತಮ್ಮ ಬಳಿಯ ದಾಖಲೆ ನೀಡಿ ಹಣ ಜಮೆ ಆಗಿರುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಆಧಾರ್ ಕಾರ್ಡ್ ಲಿಂಕ್ ಮಾಡುವುದು, ಸ್ಥಗಿತಗೊಂಡಿದ್ದ ಖಾತೆಗಳನ್ನು ಚಾಲ್ತಿಗೊಳಿಸಲು ಫಲಾನುಭವಿಗಳು ಮುಗಿಬಿದ್ದಿದ್ದಾರೆ.

    ಬೆಳಗ್ಗೆ 9 ಗಂಟೆಯಿಂದಲೇ ಬ್ಯಾಂಕ್ ಆಫ್ ಬರೋಡಾ ಶಾಖೆ ಮುಂದೆ ಫಲಾನುಭವಿಗಳು ಆಗಮಿಸಿ ಬ್ಯಾಂಕ್ ಅವಧಿ ಮುಗಿಯುವವರೆಗೂ ಸೇವೆ ಪಡೆಯಲು ನಿಲ್ಲುತ್ತಿದ್ದು, ಇನ್ನುಳಿದ ಗ್ರಾಹಕರಿಗೆ ಬ್ಯಾಂಕ್ ಸೇವೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ಸಿಬ್ಬಂದಿ ವ್ಯಕ್ತಪಡಿಸಿದರು.

    ಗ್ರಾಮದಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆ ಒಂದೇ ಏಕೈಕ ರಾಷ್ಟ್ರೀಕೃತ ಬ್ಯಾಂಕ್ ಆಗಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಅಷ್ಟು ಜನಸಂದಣಿ ಕಂಡುಬರುತ್ತಿಲ್ಲ. ಇಲ್ಲಿ ಇನ್ನೊಂದು ರಾಷ್ಟ್ರಿಕೃತ ಬ್ಯಾಂಕ್ ಬೇಕೆಂಬುದು ಜನರ ಅಪೇಕ್ಷೆಯಾಗಿದೆ.

    ಸದ್ಯದ ಒತ್ತಡ ಮಧ್ಯೆ ಸರ್ಕಾರದ ಇನ್ನೊಂದು ಗ್ಯಾರಂಟಿ ಯೋಜನೆ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳು ಶೀಘ್ರ ಬ್ಯಾಂಕಿಗೆ ಆಗಮಿಸುವ ಆತಂಕವೂ ಸಿಬ್ಬಂದಿ ಚಿಂತೆಗೆ ಕಾರಣವಾಗಿದೆ.

    • ಒಂದು ವಾರದಿಂದ ಅನ್ನಭಾಗ್ಯ ಫಲಾನುಭವಿಗಳಿಂದ ಬ್ಯಾಂಕ್ ತುಂಬಿಕೊಂಡಿದೆ. ಇವರಿಗೆಲ್ಲ ಸೇವೆ ನೀಡುವಲ್ಲಿ ಸಿಬ್ಬಂದಿ ಹೈರಾಣಾಗುತ್ತಿದ್ದಾರೆ. ಬೇರೆ ಕೆಲಸ ಮಾಡುವುದೇ ಕಷ್ಟವಾಗಿದೆ. ಮೂರ‌್ನಾಲ್ಕು ಜನ ಬ್ಯಾಂಕ್ ಕರೆಸ್ಪಾಂಡೆನ್ಸ್‌ಗಳನ್ನು ತೆಗೆದುಕೊಳ್ಳುವ ಚಿಂತನೆಯೂ ಇದೆ. ಆದರೆ ಯಾರೂ ಬರುತ್ತಿಲ್ಲ.
    • ಬೀ. ಭಾಗ್ಯ, ಶಾಖಾಧಿಕಾರಿಗಳು, ಬ್ಯಾಂಕ್ ಆಫ್ ಬರೋಡಾ, ಕಲಾದಗಿ ಶಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts