More

    ಅನಿಸಿಕೆ| ಮುಕ್ತಿಧಾಮಕ್ಕೊಂದು ಯುಕ್ತ ಸ್ಥಾನ ಅಗತ್ಯ

    ಕನಿಷ್ಠ ಕಂದಾಯ ಗ್ರಾಮಕ್ಕೆ ಒಂದರಂತೆ ಸಾರ್ವಜನಿಕ ಸ್ಮಶಾನ ನಿರ್ವಣಕ್ಕೆ ಬೇಕಾದ ಸ್ಥಳ, ಕಟ್ಟಡ ನಿರ್ವಣ, ವಿದ್ಯುತ್, ನೀರು ಮತ್ತಿತರ ಮೂಲಭೂತ ವ್ಯವಸ್ಥೆಗಳನ್ನು ಸರ್ಕಾರದ ವತಿಯಿಂದ ಮಾಡಿ ನಂತರದ ನಿರ್ವಹಣೆಯ ಜವಾಬ್ದಾರಿಯನ್ನು ರಾಜಕೀಯೇತರ ಸಮಿತಿಗೆ ನೀಡಿದಲ್ಲಿ ಒಂದು ಮಹತ್ವದ ಸಾಮಾಜಿಕ ಸಮಸ್ಯೆ ನಿವಾರಣೆಯಾದೀತು.

    ಅನಿಸಿಕೆ| ಮುಕ್ತಿಧಾಮಕ್ಕೊಂದು ಯುಕ್ತ ಸ್ಥಾನ ಅಗತ್ಯಹುಟ್ಟಿದವರೆಲ್ಲರೂ ಒಂದಿಲ್ಲೊಂದು ದಿನ ಮರಣ ಹೊಂದಲೇ ಬೇಕು. ಮರಣ ಹೊಂದಿದವರು ‘ಸ್ವರ್ಗಸ್ಥರಾಗುತ್ತಾರೆ’; ಹಾಗೆಯೇ ಸ್ವರ್ಗ ಎಂಬುದು ದೇವತೆಗಳ ನಿವಾಸಸ್ಥಾನವೂ ಆಗಿದೆ-ಇವೆಲ್ಲವೂ ಹಿಂದೂ ಧಾರ್ವಿುಕ ನಂಬಿಕೆ, ಸಂಕ್ಷಿಪ್ತವಾಗಿ ಅರ್ಥೈಸುವುದಾದರೆ ನಿಧನಾನಂತರ ಪ್ರತಿಯೊಂದು ಜೀವವೂ ದೇವತೆಗಳನ್ನು ಸೇರುತ್ತದೆ. ಇಂತಹದೊಂದು ಮಹತ್ವದ ಪ್ರಕ್ರಿಯೆಗೆ ಅಗತ್ಯವಾಗಿರುವ ಸ್ಮಶಾನಗಳು ಮಾತ್ರ ತೀರಾ ನಿರ್ಲಕ್ಷ್ಯಕ್ಕೊಳಗಾಗಿವೆ. ಇದಕ್ಕೆ ಸಂಬಂಧಿಸಿದಂತೆ ಒಂದೆರಡು ಉದಾಹರಣೆಗಳು.

    ಒಂದು: ಕೆಲವು ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಪಡುಬಿದ್ರಿಯಲ್ಲಿ ಒಂದು ಶವಸಂಸ್ಕಾರದ ಪ್ರಕರಣಕ್ಕೆ ಜಾತಿಯ ಬಣ್ಣ ಹಚ್ಚಿ, ನಿರ್ದಿಷ್ಟ ಜಾತಿಯ ಕಾರಣಕ್ಕೆ ಶವಸಂಸ್ಕಾರಕ್ಕೆ ನಿರಾಕರಿಸಿದೆ ಎಂದೆಲ್ಲ ಪ್ರಚಾರ ಮಾಡಿ ಗದ್ದಲ ಎಬ್ಬಿಸಲಾಯಿತು. ಕೊನೆಗೆ ಸ್ಮಶಾನಕ್ಕೆ ಮೀಸಲಿಟ್ಟ ಸ್ಥಳದ ವಿವಾದ ನ್ಯಾಯಾಲಯದಲ್ಲಿ ಇರುವ ವಿಷಯವನ್ನು ಕಂದಾಯ ಇಲಾಖಾ ಅಧಿಕಾರಿಗಳು ಸ್ಪಷ್ಟಪಡಿಸಿದ ನಂತರ ಸಮಸ್ಯೆ ತಣ್ಣಗಾಯಿತು.
    ಇನ್ನೊಂದು: ಕರೊನಾ ಪಾಸಿಟಿವ್ ಕಾರಣಕ್ಕೆ ಮರಣ ಹೊಂದಿದವರ ಶವಸಂಸ್ಕಾರಕ್ಕೆ ರುದ್ರಭೂಮಿ ಪರಿಸರದ ಜನರು ಆಕ್ಷೇಪಿಸಿ ಅಧಿಕಾರಿಗಳು ಹಲವಾರು ಕಡೆ ಅಲೆದಾಡಿದ ಘಟನೆಗಳೂ ನಡೆದಿವೆ. ಇದರ ಹಿನ್ನೆಲೆಯಲ್ಲಿ ಒಂದಿಷ್ಟು ರಾಜಕೀಯವೂ ಕೈಯಾಡಿಸಿದ್ದು ಬೇರೆ ವಿಷಯ. ಇಷ್ಟು ಸಾಲದೆಂಬಂತೆ ಕರೊನಾ ಸೋಂಕಿನ ಕಾರಣಕ್ಕೆ ಮೃತಪಟ್ಟವರ ಮೃತದೇಹವನ್ನು ಪಡೆಯಲು ಭಯಪಟ್ಟು ಮನೆಯವರೇ ನಿರಾಕರಿಸಿದ ಪ್ರಕರಣಗಳೂ ನಡೆದಿವೆ!
    ಈ ಘಟನೆಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿರುವುದರ ಉದ್ದೇಶವಿಷ್ಟೇ: ಹಿಂದೂ ಸಂಸ್ಕೃತಿಯಲ್ಲಿ ಶವಸಂಸ್ಕಾರ ಮತ್ತು ಮರಣೋತ್ತರ ಸಂಸ್ಕಾರಗಳಿಗೆ ಇಷ್ಟೊಂದು ಮಹತ್ವದ ಸ್ಥಾನ ಇದ್ದರೂ ಸ್ಮಶಾನಕ್ಕೆ ವ್ಯವಸ್ಥೆ ಮಾಡುವ ಅಗತ್ಯವನ್ನು ಸಂಬಂಧಿಸಿದವರು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಮಾತ್ರವಲ್ಲದೆ ಎಷ್ಟೋ ಪ್ರಕರಣದಲ್ಲಿ ಸಾವಿನ ವಾಸ್ತವ ಕಾರಣವನ್ನು ಅದುಮಿಟ್ಟು ಅಂಕಿಅಂಶಗಳನ್ನು ಮುಚ್ಚಿ ಇಡಲಾಗುತ್ತಿದೆ ಎಂಬ ಆಪಾದನೆಗಳೂ ಇವೆ. ಕೆಲವು ಪ್ರಕರಣಗಳಲ್ಲಂತೂ ಮೃತ್ಯು ಸಂಭವಿಸಿರುವುದನ್ನೇ ಮರೆಮಾಚಿ ಗುಟ್ಟಾಗಿ ಶವಸಂಸ್ಕಾರ ಮಾಡಿದ ಪ್ರಕರಣಗಳು ನಡೆದದ್ದಿದೆ. ಆಸ್ತಿ ವರ್ಗಾವಣೆ, ಆರ್ಥಿಕ ಲಾಭ ಇರುವ ಸಂದರ್ಭಗಳನ್ನು ಹೊರತುಪಡಿಸಿ, ಮರಣ ಪ್ರಮಾಣಪತ್ರದ ಅವಶ್ಯಕತೆ ಇಲ್ಲದಿದ್ದರೆ ಮರಣವನ್ನು ನಿಯಮಾನುಸಾರ ಸೂಕ್ತ ಪ್ರಾಧಿಕಾರದಲ್ಲಿ ನೋಂದಣಿ ಮಾಡದೇ ಉಳಿದ ಉದಾಹರಣೆಗಳೂ ಇವೆ. ಇದೆಲ್ಲವೂ ಒಂದಷ್ಟು ಕಾಲ ಸುದ್ದಿ ಮಾಡಿ ಕ್ರಮೇಣ ಮುಚ್ಚಿಹೋಗುತ್ತದೆ.

    ಇದನ್ನೂ ಓದಿ: ಚೀನಾದ ಟಿಕ್​ಟಾಕ್ ಜಾಗವನ್ನು ನಮ್ಮ ಬೆಂಗಳೂರಿನ ಚಿಂಗಾರಿ ತುಂಬಿತು…

    ಜನನ ಮತ್ತು ಮರಣ ದಾಖಲಾತಿ ಕಡ್ಡಾಯವಾಗಿ ಮಾಡಲೇಬೇಕೆಂಬ ನಿಯಮಗಳಿರುವುದೇನೋ ನಿಜ. ‘ಜನನ ಮರಣಗಳ ನೋಂದಣಿ ಕಾಯಿದೆ 1969’ರಲ್ಲಿ ಜನನ ಮರಣಗಳ ನೋಂದಣಿ ಮಾಡುವ ವಿಧಾನ, ಪ್ರಮಾಣಪತ್ರ ಪಡೆಯುವ ವಿಧಾನ, ನಿಗದಿತ ಅವಧಿಯಲ್ಲಿ ನೋಂದಣಿಯಾಗದ ಪ್ರಕರಣಗಳನ್ನು ನೋಂದಾಯಿಸುವ ವಿಧಾನ, ವಿವಿಧ ಹಂತದ ಪ್ರಾಧಿಕಾರಗಳು ಮುಂತಾದ ಬಹಳಷ್ಟು ವಿಷಯಗಳನ್ನು ವಿವರವಾಗಿ ನಮೂದಿಸಲಾಗಿದೆ. ಈ ನಿಯಮಗಳಲ್ಲಿ ವಿಳಂಬವಾಗಿ ನಮೂದಿಸಿ ಪ್ರಮಾಣಪತ್ರ ಪಡೆಯಲು ಅವಕಾಶವಿದೆಯೇ ಹೊರತು ವರದಿ ಮಾಡದೇ ಉಳಿದ ಲೋಪಗಳಿಗೆ ಉತ್ತರದಾಯಿತ್ವ ಯಾರದು, ಅಂತಹ ಲೋಪಗಳನ್ನು ಕಂಡು ಹಿಡಿದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದವರು ಯಾರು ಎಂಬಂಥ ಪ್ರಶ್ನೆಗಳಿಗೆ ಉತ್ತರವಿಲ್ಲ. ಇದರಿಂದಾಗಿ ಮರಣದ ಸ್ಪಷ್ಟ ಕಾರಣಗಳನ್ನು ಅಡಗಿಸಿಟ್ಟು ಗುಟ್ಟಾಗಿ ಶವಸಂಸ್ಕಾರ ಮಾಡಿದಲ್ಲಿ ಜನಗಣತಿಯೂ ಅಪರಿಪೂರ್ಣ ಎನಿಸದೇ? ಕನಿಷ್ಠ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಮರಣಹೊಂದಿದವರ ಹೆಸರು ಕೈಬಿಡುವ ಪ್ರಕರಣದಲ್ಲಿ ಮರಣಪ್ರಮಾಣ ಪತ್ರ ಹಾಜರುಪಡಿಸುವ ನಿಯಮವಿದ್ದಲ್ಲಿ ಇಂತಹ ಅಧ್ವಾನಗಳನ್ನು ನಿವಾರಿಸಬಹುದೇನೋ. ಇದೆಲ್ಲಕ್ಕೂ ಮಿಗಿಲಾಗಿ ಶವಸಂಸ್ಕಾರ ನಡೆಸಲು ಸಮರ್ಪಕ ವ್ಯವಸ್ಥೆ ಮತ್ತು ಸೂಕ್ತ ನಿಗಾ ವಹಿಸುವ ವ್ಯವಸ್ಥೆ ಮಾಡುವುದು ಪರಿಹಾರವಾಗದೆ?
    ಇದು ವ್ಯವಸ್ಥೆಯ ಒಂದು ಮಗ್ಗುಲಾದರೆ, ಮುಸ್ಲಿಮರಿಗೆ ಮಸೀದಿಯ ಆವರಣದಲ್ಲಿ, ಕ್ರಿಶ್ಚಿಯನ್ನರಿಗೆ ರ್ಚಚಿನ ಆವರಣದಲ್ಲಿ ದಫನಭೂಮಿ ಇರುತ್ತದೆ. ಆದರೆ ಹಿಂದೂ ಧರ್ಮದಲ್ಲಿ? ಮಹಾನಗರಪಾಲಿಕೆ, ನಗರಸಭೆಯ ವ್ಯಾಪ್ತಿಯಲ್ಲಿ ಕೆಲವೆಡೆ ಚಿತಾಗಾರಗಳಿರುವುದೇನೋ ಹೌದು. ಆದರೆ ಗ್ರಾಮೀಣ ಪ್ರದೇಶದಲ್ಲಿ? ಇದಕ್ಕೂ ಹಲವಾರು ಕಾರಣಗಳಿವೆ. ಹಿಂದಿನ ಕಾಲದಲ್ಲಿ ಊರಿಗೊಂದು ಸ್ಮಶಾನಗಳಿದ್ದರೆ ಕಾಲಕ್ರಮೇಣ ಜಾತಿಗೊಂದು, ಒಳಜಾತಿಗೊಂದರಂತೆ ಸ್ಮಶಾನಗಳಾದವು. ಊರು ಬೆಳೆದಂತೆ ಸ್ಥಳದ ಕೊರತೆಯಿಂದ, ಸ್ಥಳದ ಮೇಲಿನ ಹಕ್ಕಿಗಾಗಿ ಜಗಳಗಳು ಹೆಚ್ಚತೊಡಗಿದವು. ತಕರಾರು ನ್ಯಾಯಾಲಯದ ಮೆಟ್ಟಿಲು ಏರಿ ಕೊನೆಗೆ ಯಾರಿಗೂ ಇಲ್ಲದಂಥ ಸ್ಥಿತಿಗೆ ಹೊರಳಿತು. ಹೀಗಾಗಿ ಸಮಾಜಕ್ಕೆ ಅತ್ಯಂತ ಅಗತ್ಯವಿದ್ದರೂ ಹಿಂದೂ ಧರ್ಮದ ಸ್ಮಶಾನ ಅಥವಾ ರುದ್ರಭೂಮಿ ನಿರ್ಲಕ್ಷ್ಯಕ್ಕೊಳಗಾಗಿರುವುದಂತೂ ಸತ್ಯ. ಇದಕ್ಕೆ ಸಂಬಂಧಿಸಿ ಸರ್ಕಾರ ಕಾಲಕಾಲಕ್ಕೆ ಆದೇಶಗಳನ್ನು ಹೊರಡಿಸುತ್ತಿದ್ದರೂ ಅದರ ಪಾಲನೆ ಎಷ್ಟರ ಮಟ್ಟಿಗೆ ಆಗುತ್ತಿದೆ? ಇದನ್ನು ಸಂಬಂಧಪಟ್ಟವರು ಎಷ್ಟು ಗಂಭೀರವಾಗಿ ಪರಿಗಣಿಸಿದ್ದಾರೆಂದು ಕೇಳಿದರೆ ಉತ್ತರ: ಇಲ್ಲವೆಂದೇ ಹೇಳಬಹುದು. ಮಾತ್ರವಲ್ಲದೆ ಇದರಲ್ಲೂ ಕೆಲವೊಂದು ವೈಪರೀತ್ಯಗಳಿವೆ. ಏಕೆಂದರೆ ಸರ್ಕಾರದ ಹೆಚ್ಚಿನ ಯೋಜನೆಗಳು ‘ಬೆಂಕಿ ಬಿದ್ದಾಗ ಬಾವಿ ತೋಡಿದರೆಂಬ’ ಗಾದೆಯಂತೆ. ಸಮಸ್ಯೆ ಬಂದಾಗ ತಲೆಕೆಡಿಸಿಕೊಂಡು ತೇಪೆ ಹಚ್ಚಿ ಮತ್ತೊಮ್ಮೆ ಸಮಸ್ಯೆ ಬರುವವರೆಗೆ ಆ ವಿಷಯವನ್ನು ಮರೆತುಬಿಡುವುದು.

    ಸಾರ್ವಜನಿಕ ಸ್ಮಶಾನಕ್ಕಾಗಿ ಸ್ಥಳ ಕಾದಿರಿಸಲು ಸರ್ಕಾರವು 2002ರಿಂದ ಕಾಲಕಾಲಕ್ಕೆ ಆದೇಶಗಳನ್ನು ಹೊರಡಿಸಿದೆ. ಸಮಾಜ ಕಲ್ಯಾಣ ಇಲಾಖೆ 2015ರಲ್ಲಿ ಹೊರಡಿಸಿದ ಆದೇಶದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಸ್ಮಶಾನವಿಲ್ಲದ ಕಡೆ ಹಂತಹಂತವಾಗಿ ಸರ್ಕಾರಿ ಸ್ಥಳವನ್ನು ಮೀಸಲಿಡಲು, ಸರ್ಕಾರಿ ಸ್ಥಳ ಲಭ್ಯ ಇಲ್ಲದಿದ್ದಲ್ಲಿ ಖಾಸಗಿ ಜಮೀನನ್ನು ಖರೀದಿಸಿ ಒದಗಿಸುವುದಕ್ಕಾಗಿ -ಠಿ; 40 ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಇಷ್ಟೆಲ್ಲ ಆದರೂ ಇದು ಎಷ್ಟರ ಮಟ್ಟಿಗೆ ಪಾಲನೆ ಆಗಿದೆಯೋ ಗೊತ್ತಿಲ್ಲ, ಏಕೆಂದರೆ ಮೇಲೆ ಹೇಳಿದ ಪಡುಬಿದ್ರಿ ಪ್ರಕರಣ, ಕೊಪ್ಪಳ ಜಿಲ್ಲೆಯ ಗ್ರಾಮವೊಂದರಲ್ಲಿ ಅನಾದಿಕಾಲದಿಂದಲೂ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ಶವಸಂಸ್ಕಾರಕ್ಕೆ ಜಮೀನಿನ ಮಾಲೀಕರು ಅನುಮತಿ ನಿರಾಕರಿಸಿದ ಪ್ರಕರಣ ಇವುಗಳು ಸಮಸ್ಯೆಯ ಗಂಭೀರತೆಗೆ ಜ್ವಲಂತ ಉದಾಹರಣೆಗಳು. ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎಂದರೆ, ಈ ಸಮಸ್ಯೆ ನೆನಪಾಗುವುದು ಇನ್ನೊಂದು ಮರಣ ಸಂಭವಿಸಿದಾಗ; ಅಲ್ಲಿಯವರೆಗೆ ಎಲ್ಲವೂ ಸ್ತಬ್ಧ.

    ಪರಿಶಿಷ್ಟ ಜಾತಿ, ಪಂಗಡಗಳಿಗಾಗಿ ಸ್ಮಶಾನ ನಿರ್ವಣಕ್ಕೆ ಸಮಿತಿ ರಚನೆ, ಅನುದಾನ ಬಿಡುಗಡೆ ಮತ್ತು ಮಾರ್ಗಸೂಚಿಗಳನ್ನು ಒಳಗೊಂಡ ಸರ್ಕಾರಿ ಆದೇಶದ ಸ್ಥಿತಿಯೇ ಹೀಗಿದೆ. ಇದಾದ ನಂತರ 2017 ಅಕ್ಟೋಬರ್ 16ರಂದು ಎಲ್ಲ ಜಾತಿ-ಧರ್ಮಗಳಿಗೆ ಅನ್ವಯಿಸುವಂತೆ ಇನ್ನೊಂದು ಆದೇಶ ಹೊರಡಿಸಲಾಗಿದ್ದು ಅದರ ಮುಖ್ಯಾಂಶಗಳು ಹೀಗಿವೆ:

    ಪ್ರತಿಯೊಂದು ಕಂದಾಯ ಗ್ರಾಮದಲ್ಲಿ ಸರ್ಕಾರಿ ಜಮೀನು ಲಭ್ಯ ಇದ್ದಲ್ಲಿ 18 ಸಾವಿರ ಚದರಡಿಯಷ್ಟು ಸ್ಥಳವನ್ನು ಸಾರ್ವಜನಿಕ ಸ್ಮಶಾನಕ್ಕಾಗಿ ಕಾದಿರಿಸಬೇಕೆಂದೂ, ಬೇರೆ ಬೇರೆ ಧರ್ಮದ ಅವಶ್ಯಕತೆಗೆ ಅನುಗುಣವಾಗಿ ರುದ್ರಭೂಮಿ, ಸ್ಮಶಾನ, ಖಬರಸ್ತಾನ, ಕ್ರಿಶ್ಚಿಯನ್ ಸಿಮೆಟ್ರಿಗಳಿಗೂ ಸ್ಥಳ ಕಾದಿರಿಸಬೇಕೆಂದೂ ಸೂಚಿಸಲಾಗಿದೆ. ಸರ್ಕಾರಿ ಜಮೀನು ಲಭ್ಯ ಇಲ್ಲದೆಡೆ ಖಾಸಗಿ ಜಮೀನನ್ನು ಮಾರ್ಗಸೂಚಿ ದರಕ್ಕಿಂತ ಮೂರುಪಟ್ಟು ಹೆಚ್ಚು ಬೆಲೆಗೆ ಖರೀದಿಸಿ ಸ್ಮಶಾನ ನಿರ್ವಿುಸಲೂ ಅವಕಾಶ ನೀಡಲಾಗಿದೆ. ಇದನ್ನು ‘ಸಾರ್ವಜನಿಕ ಸ್ಮಶಾನ’ ಎಂದು ಕರೆಯಬೇಕೆಂದೂ ಇದಕ್ಕಾಗಿ ಅಗತ್ಯ ಇರುವ ನೀರು, ವಿದ್ಯುತ್, ಆಸನ ಮುಂತಾದ ವ್ಯವಸ್ಥೆ ಮಾಡಬೇಕೆಂದೂ ತಿಳಿಸಲಾಗಿದೆ. ಇಷ್ಟು ಸ್ಪಷ್ಟ ಆದೇಶ ಇದ್ದರೂ ಇಂತಹ ವ್ಯವಸ್ಥೆ ಎಷ್ಟು ಕಡೆ ಮಾಡಲಾಗಿದೆ? ಇಂತಹ ವ್ಯವಸ್ಥೆಯನ್ನು ಜಾರಿಗೊಳಿಸುವ ಜವಾಬ್ದಾರಿ ಯಾರದ್ದು? ನಂತರ ನಿರ್ವಹಣೆಯ ಉಸ್ತುವಾರಿ ವಹಿಸಬೇಕಾದವರು ಯಾರು? ಈ ಪ್ರಶ್ನೆಗಳಿಗೆ ಉತ್ತರ ಇಲ್ಲದಿರುವುದೇ ಇದು ಇನ್ನೂ ಸಮಸ್ಯೆಯಾಗಿಯೇ ಉಳಿದಿರಲು ಕಾರಣ ಎಂದರೆ ತಪ್ಪಾಗಲಾರದು.

    ಇದನ್ನೂ ಓದಿ: ಎಲ್ಲೆಂದರಲ್ಲಿ ಪಿಪಿಇ ಕಿಟ್​ ಬಿಸಾಡಿದ್ರೆ ಕಠಿಣ ಕ್ರಮ; ಶ್ರೀರಾಮುಲು

    ಕನಿಷ್ಠ ಕಂದಾಯ ಗ್ರಾಮಕ್ಕೆ ಒಂದರಂತೆ ಸಾರ್ವಜನಿಕ ಸ್ಮಶಾನ ನಿರ್ವಣಕ್ಕೆ ಬೇಕಾದ ಸ್ಥಳ, ಕಟ್ಟಡ ನಿರ್ವಣ, ವಿದ್ಯುತ್, ನೀರು ಮತ್ತಿತರ ಮೂಲಭೂತ ವ್ಯವಸ್ಥೆಗಳನ್ನು ಸರ್ಕಾರದ ವತಿಯಿಂದ ಮಾಡಿ ನಂತರದ ನಿರ್ವಹಣೆಯ ಜವಾಬ್ದಾರಿಯನ್ನು ರಾಜಕೀಯೇತರ ಸಮಿತಿಗೆ ನೀಡಿದಲ್ಲಿ ಒಂದು ಮಹತ್ವದ ಸಾಮಾಜಿಕ ಸಮಸ್ಯೆ ನಿವಾರಣೆಯಾದೀತು. ಹಾಗೆಯೇ ಇತ್ತೀಚೆಗೆ ಹೆಚ್ಚಿನ ಪ್ರಕರಣಗಳಲ್ಲಿ ಮೃತವ್ಯಕ್ತಿಯ ಸಮೀಪದ ಬಂಧುಗಳ ಆಗಮನಕ್ಕೆ ಶವವನ್ನು ಒಂದೆರಡು ದಿನ ಶೀತಲಗೃಹದಲ್ಲಿ ಕಾಯ್ದಿರಿಸುವ ಅಗತ್ಯ ಇರುವುದರಿಂದ ಸ್ಮಶಾನದಲ್ಲೇ ಒಂದೆರಡು ಶವಗಳನ್ನು ಕಾಯ್ದಿರಿಸುವ ವ್ಯವಸ್ಥೆ ಇದ್ದರೆ ಹೆಚ್ಚು ಪರಿಣಾಮಕಾರಿಯಾದೀತೇನೋ. ಇಂತಹ ಜ್ವಲಂತ ಸಮಸ್ಯೆಗೆ ಸರ್ಕಾರಿ ಯಂತ್ರದ ಜೊತೆಗೆ ಸಮಾಜಸೇವಾ ಸಂಸ್ಥೆಗಳು ಕೈಜೋಡಿಸಿ ಅವಶ್ಯಕತೆ ಇರುವಲ್ಲೆಲ್ಲ ಕಾರ್ಯಪ್ರವೃತ್ತರಾದರೆ ಸಾಮಾಜಿಕ ಸಮಸ್ಯೆಯೊಂದಕ್ಕೆ ಪರಿಹಾರ ಸುಲಭ ಸಾಧ್ಯ. ಧಾರ್ವಿುಕ ಸಂಸ್ಥೆಗಳ ಸಹಯೋಗ ಇದ್ದರೆ ಅದು ಇನ್ನಷ್ಟು ಅರ್ಥಪೂರ್ಣ.
    ಇದುವರೆಗೆ ಈ ಎಲ್ಲ ಪ್ರಸ್ತಾವನೆಗಳು ‘ಸ್ಮಶಾನವೈರಾಗ್ಯ’ವಾಗಿಯೇ ಉಳಿದಿದ್ದು ಇನ್ನಾದರೂ ಸರ್ಕಾರ, ಸ್ವಯಂಸೇವಾ ಸಂಘಟನೆಗಳು ಮತ್ತು ಧಾರ್ವಿುಕ ಸಂಸ್ಥೆಗಳು ಜಂಟಿಯಾಗಿ ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡಲಿ. ಹೀಗಾದರೂ ‘ಮುಕ್ತಿಧಾಮಕ್ಕೆ ಯುಕ್ತ ವ್ಯವಸ್ಥೆ’ ಮಾಡುವ ಉದಾತ್ತ ಪ್ರಯತ್ನಗಳಾಗಲಿ.
    (ಲೇಖಕರು ಹವ್ಯಾಸಿ ಬರಹಗಾರರು)

    5,000ದ ಗಡಿ ದಾಟಿತು ಬೆಂಗಳೂರಿನಲ್ಲಿ ಕೋವಿಡ್​ 19 ಕೇಸ್​- ರಾಜ್ಯದಲ್ಲಿಂದು 1272 ಪ್ರಕರಣಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts