

ಬೆಂಗಳೂರು: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸುವ ಪಿಪಿಇ ಕಿಟ್ಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಚ್ಚರಿಸಿದ್ದಾರೆ.
ಇತ್ತೀಚಿಗೆ ಬಳಸಿದ ಪಿಪಿಇ ಕಿಟ್ಗಳು ರಸ್ತೆಬದಿ, ಸ್ಮಶಾನದಲ್ಲಿ ಕಂಡು ಬಂದಿತ್ತು. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಈ ಕಿಟ್ಗಳು ಎಲ್ಲೆಂದರಲ್ಲಿ ಕಾಣಸಿಗುತ್ತಿರುವುದು ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ. ಬೆಂಗಳೂರಿನ ಜೆ.ಸಿ.ನಗರದಲ್ಲಿ ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಿದ ಸಿಬ್ಬಂದಿ ಪಿಪಿಇ ಕಿಟ್ ಅನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿ ಸೋಂಕಿತರ ಅಂತ್ಯ ಸಂಸ್ಕಾರದ ವೇಳೆ ಸಿಬ್ಬಂದಿಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿತ್ತು. ಇದನ್ನೂ ಓದಿರಿ ಸ್ಮಶಾನದಲ್ಲೇ ಎಸೆದರು ಪಿಪಿಇ ಕಿಟ್, ಸ್ಥಳೀಯರಲ್ಲಿ ಆತಂಕ
ಎಚ್ಚೆತ್ತ ಆರೋಗ್ಯ ಸಚಿವ ಶ್ರೀರಾಮುಲು, ಪಿಪಿಇ ಕಿಟ್ಅನ್ನು ವೈಜ್ಞಾನಿಕವಾಗಿ ವಿಲೇ ಮಾಡದವರ ವಿರುದ್ಧ ಮುಲಾಜಿಲ್ಲದೇ ಅತ್ಯಂತ ಕಠಿಣ ಕ್ರಮ ಜರುಗಿಸಲಾಗುವುದು. ಯಾರೋ ಕೆಲವರ ನಿರ್ಲಕ್ಷ್ಯ ಜನಸಾಮಾನ್ಯರ ಪ್ರಾಣಕ್ಕೆ ಕಂಟಕ ತರಬಾರದು. ಸಂಬಂಧಿಸಿದ ಅಧಿಕಾರಿಗಳೇ ಇದಕ್ಕೆ ನೇರ ಹೊಣೆಗಾರರು ಎಂದು ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.
ಇನ್ನಾದರೂ ಕರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ನಿಯಮದಂತೆಯೇ ಮಾಡಬೇಕು. ಈ ವೇಳೆ ಸ್ಥಳೀಯರಿಗೆ ತೊಂದರೆ ಆಗದಂತೆ, ಆತಂಕ ತಂದೊಡ್ಡುವ ಘಟನೆ ಸಂಭವಿಸದಂತೆ ಸಿಬ್ಬಂದಿ ಜಾಗ್ರತೆ ವಹಿಸಬೇಕಿದೆ.