More

    ಅನಿಸಿಕೆ|ಆಕಳ ಹೊಟ್ಟೆಯಲ್ಲಿ ಅಚ್ಚೇರು ಬಂಗಾರ…

    ಹೆಚ್ಚೆಚ್ಚು ಹಾಲು ಉತ್ಪಾದನೆಯ ಮೇಲೆ ಗಮನ ಕೇಂದ್ರೀಕರಿಸಿದ ನಾವು, ಹಾಲಿನ ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ದೇಸಿ ಆಕಳ ಹಾಲಿನ ಔಷಧೀಯ ಗುಣ ನಮಗೆ ಮುಖ್ಯವೆಂದು ಅನ್ನಿಸಲಿಲ್ಲ. ದೇಸಿ ಆಕಳ ಹಾಲಿನ ಉತ್ಪನ್ನಗಳು ಹೇಗೆ ನಮ್ಮ ಪಾರಂಪರಿಕ ವೈದ್ಯ ಪದ್ಧತಿಯ ಮೂಲ ದ್ರವ್ಯಗಳು ಎಂಬುದನ್ನು ಯೋಚಿಸಲೇ ಇಲ್ಲ.

    ಅನಿಸಿಕೆ|ಆಕಳ ಹೊಟ್ಟೆಯಲ್ಲಿ ಅಚ್ಚೇರು ಬಂಗಾರ...ಸಾವಯವ ಕೃಷಿ, ಸಹಜ ಕೃಷಿ, ನೈಸರ್ಗಿಕ ಕೃಷಿ, ಜೂಮ್ ಕೃಷಿ, ಅಗ್ರೊ ಫಾರೆಸ್ಟ್ರಿ ಮುಂತಾದ ಹೊಸ ಹೊಸ ಶಬ್ದಗಳು, ಕಲ್ಪನೆಗಳು ಒಕ್ಕಲುತನ ಕುರಿತು ದೇಶದಲ್ಲಿ ಚಾಲ್ತಿಗೆ ಬಂದಿವೆ. ಹೊಸ ಪೀಳಿಗೆಯವರು ಗಂಭೀರವಾಗಿ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದ್ದಾರೆ. ನಮ್ಮ ಒಕ್ಕಲುತನ ಮಳೆಯನ್ನು ಅವಲಂಬಿಸಿದ ಉದ್ಯೋಗ. ಯಾವುದೇ ನಿಯಮ ಇಲ್ಲದ ಮಳೆಗಾಲ. ನೀರಾವರಿ ಇದ್ದಲ್ಲಿ ಉತ್ತಮ ಬೆಳೆ ಬಂದರೂ ಯಾವುದೇ ನಿಯಮವಿಲ್ಲದ ಬೆಲೆಯ ಜೂಜಾಟ. ಈ ಅನಿಯಮಿತತೆಯನ್ನು ಸರಿದೂಗಿಸಲೆಂದೇ ನಮ್ಮ ಪೂರ್ವಜರು ಒಕ್ಕಲುತನಕ್ಕೆ ಪೂರಕವಾದ ಉಪ ಉದ್ಯೋಗಗಳನ್ನು ರೂಢಿಸಿಕೊಂಡಿದ್ದರು. ಹೈನುಗಾರಿಕೆ, ಕುರಿ-ಆಡು, ಕೋಳಿ ಸಾಕಾಣಿಕೆ, ಹಣ್ಣಿನ ಮರಗಳ ಬೆಳವಣಿಗೆ, ಹಗ್ಗ ಹೊಸೆಯುವುದು, ಬುಟ್ಟಿ ಹೆಣೆಯುವುದು ಮುಂತಾದ ಉಪ ಕಸಬುಗಳ ಮೂಲಕ ಕುಟುಂಬದ ನಿರ್ವಹಣೆ ಸರಿದೂಗಿಸಿಕೊಳ್ಳುತ್ತಿದ್ದರು.

    ಕೈಗಾರಿಕರಣದ ಹೊಡೆತಕ್ಕೆ ಸಿಲುಕಿ ಅನೇಕ ಗ್ರಾಮೀಣ ಉದ್ಯೋಗಗಳು ಕಣ್ಮರೆಯಾದವು. ಮುಕ್ತ ಮಾರುಕಟ್ಟೆ ಗ್ರಾಮೀಣ ಉದ್ಯೋಗಗಳನ್ನು ಗುಡಿಸಿ ಹಾಕಿತು. ಆದರೆ ಗಟ್ಟಿಯಾಗಿ ಉಳಿದದ್ದು- ಹೈನುಗಾರಿಕೆ ಮಾತ್ರ. ಆಕಳು-ಎಮ್ಮೆ-ಎತ್ತು ನಮ್ಮ ಒಕ್ಕಲುತನದಲ್ಲಿ ಒಂದಕ್ಕೊಂದು ಪೂರಕ ಜೀವಿಗಳು. ಆಕಳು ಹೆಣ್ಣುಗರು ಹಾಕಿದರೆ, ಬೆಳೆದು ಆಕಳಾಗುತ್ತದೆ, ಗಂಡುಗರು ಹಾಕಿದರೆ ಬೆಳೆದು ಹೋರಿಯಾಗುತ್ತದೆ, ಎತ್ತಾಗುತ್ತದೆ. ಆಕಳು ಮೇವು ತಿನ್ನುವುದು ಕಡಿಮೆ, ಆದರೆ ಅದರ ಕೊಡುಗೆ ಲೆಕ್ಕವಿಲ್ಲದಷ್ಟು. ಜವಾರಿ ಆಕಳಿನ ಹಾಲಿನಲ್ಲಿ ಅನೇಕ ಔಷಧೀಯ ಗುಣಗಳಿವೆಯೆಂದು ಆಯುರ್ವೆದ ಹೇಳುತ್ತದೆ.

    ಒಂದೇ ಆಕಳಿನಿಂದ ಗೋ ಹಿಂಡು ಆದ, ಹೋರಿ ಕರುಗಳಿಂದ ಎತ್ತಾಗಿ ಕುಂಟೆ, ಕೂರಿಗಿ ನಡೆಯುವುದು ನಮ್ಮ ಪರಂಪರೆಯೇ ಆಗಿದೆ. ಹಳ್ಳಿಕಾರ್ ತಳಿಯ ಆಕಳಿನಷ್ಟೇ ಎತ್ತು ಕೂಡ ಕೃಷಿಗೆ ಪ್ರಸಿದ್ಧವಾಗಿವೆ. ಖಿಲಾರಿ ತಳಿಯ ಎತ್ತು ಒಣಬೇಸಾಯಕ್ಕೆ ಹೇಳಿಮಾಡಿಸಿದ್ದು. ದೇವಣಿ ಮತ್ತು ಖಿಲಾರಿ ಎತ್ತು ಬರಗಾಲದ ಹೊಡೆತವನ್ನೂ ತಾಳಿ ಬೇಸಾಯ ಮಾಡಬಲ್ಲ, ಉರಿಬಿಸಿಲು ತಡೆದುಕೊಳ್ಳಬಲ್ಲ, ಉಪ ಜೀವಿಗಳ ಕಾಟ ತಡೆಯುವ ಶಕ್ತಿ ಹೊಂದಿದ ಎತ್ತುಗಳು. ದೇವಣಿ, ಖಿಲಾರಿ, ಕೃಷ್ಣ ಕೊಲಾರಿ ತಳಿಯ ಆಕಳು ಹಾಲು ಹೆಚ್ಚಿಗೆ ಕೊಡುವುದಿಲ್ಲ. ಹೈನುಗಾರಿಕೆಯ ದೃಷ್ಟಿಯಿಂದ ದೇವಣಿ, ಖಿಲಾರಿ, ಕೃಷ್ಣ ಕೊಲಾರಿ ಆಕಳು ಲಾಭದಾಯಕ ಅಲ್ಲದಿದ್ದರೂ ಬೇಸಾಯಕ್ಕೆ ಬೇಕಾದ ಉತ್ತಮ ತಳಿಯ ಗಟ್ಟಿಮುಟ್ಟಾದ ಎತ್ತುಗಳನ್ನು ನೀಡುವ ಮೂಲಕ ತಮ್ಮ ಲಾಭದಾಯಕತೆಯನ್ನು ಸಿದ್ಧಪಡಿಸುತ್ತವೆ.

    ಅಮೃತ ಮಹಲ್ ಮತ್ತು ಹಳ್ಳಿಕಾರ್ ಆಕಳು ನಮ್ಮ ನಾಡಿನ ಹೆಮ್ಮೆಯ ತಳಿ. ಸುಂದರತೆ, ಆಕರ್ಷಕ ಮೈಕಟ್ಟು ಹಾಗೂ ನಯನಮನೋಹರ ನಡಿಗೆಯಲ್ಲಿ ಈ ತಳಿಯ ಆಕಳು ಮತ್ತು ಹೋರಿ ಪ್ರಸಿದ್ಧವಾಗಿವೆ. ಅಮೃತ ಮಹಲ್ ಮತ್ತು ಹಳ್ಳಿಕಾರ್ ಹೋರಿ ಬೆಲೆ ದುಬಾರಿ ಕೂಡ. ಮೈಸೂರು ಸಂಸ್ಥಾನ ಈ ತಳಿಗಳಿಗೆ ರಾಜಾಶ್ರಯವಿತ್ತು, ಹುಲ್ಲುಗಾವಲುಗಳನ್ನು ಮೀಸಲಿಟ್ಟು ಅಭಿವೃದ್ಧಿ ಪಡಿಸಿದ್ದು ಈಗ ಇತಿಹಾಸ. ಜವಾರಿ ಆಕಳ ಹಾಲು, ಬೆಣ್ಣೆ, ತುಪ್ಪಕ್ಕೆ ವಿಶೇಷ ಮಹತ್ವವಿದೆ. ದೇಸಿ ಆಕಳ ಹಾಲು ಕಫರಹಿತವಾಗಿದ್ದು, ಮನುಷ್ಯನ ಕಫನಾಶಕಾರಿಯಾಗಿದೆ. ಅನೇಕ ಆಯುರ್ವೆದ ಔಷಧಗಳನ್ನು ದೇಸೀ ಆಕಳ ಹಾಲಿನಲ್ಲಿ ತೆಗೆದುಕೊಳ್ಳುವುದರಿಂದ ಔಷಧ ಹೆಚ್ಚು ಪರಿಣಾಮಕಾರಿ ಆಗಬಲ್ಲದೆಂದು ವೈದ್ಯರು ಹೇಳುತ್ತಾರೆ.

    ಕರಿ ಆಕಳ ಬೆಣ್ಣೆಯನ್ನು ತ್ವಚೆರೋಗ ನಿವಾರಕ ಎಂದು ನೇರವಾಗಿ ಬಳಸಲಾಗುತ್ತಿದೆ. ಜವಾರಿ ಆಕಳ ತುಪ್ಪ ಒಂದು ಔಷಧೀಯ ಭಂಡಾರ. ತುಪ್ಪ ಹಳೆಯದಾದಷ್ಟು ಅದರ ಪರಿಣಾತ್ಮಕ ಗುಣ ವೃದ್ಧಿಯಾಗುತ್ತದೆ. ಭಾರತೀಯ ವೈದ್ಯ ಪದ್ಧತಿಯಲ್ಲಿ ಹಳೇ ತುಪ್ಪಕ್ಕೆ ಮಹತ್ವವಿದೆ. ದೇಸಿ ಆಕಳಿನ ಸಗಣಿಯಿಂದ ತಯಾರಿಸಿದ ಕುಳ್ಳಿನ ಭಸ್ಮವನ್ನು ಹಲ್ಲು ಉಜ್ಜುವುದಕ್ಕೆ ಬಳಸಲಾಗುತ್ತಿದೆ. ತುಂಬ ನಯವಾದ ಈ ಗೋ ದಂತಮಂಜನ ಹಲ್ಲುಗಳ ಕ್ರಿಮಿನಾಶಕ ಎಂಬ ನಂಬಿಕೆಯಿದೆ. ಗೋಮೂತ್ರ ಅನೇಕ ರೋಗಗಳಿಗೆ ರಾಮಬಾಣ ಎಂಬುದು ನಮಗೆಲ್ಲ ಗೊತ್ತು. ಹೀಗೆ ಜವಾರಿ ಆಕಳದ ಪ್ರತಿಯೊಂದು ಉತ್ಪಾದನೆಯೂ ಒಂದಿಲ್ಲೊಂದು ವಿಶೇಷ ಗುಣವನ್ನು ಹೊಂದಿದೆ.

    1970ರ ದಶಕದಲ್ಲಿ ದೇಶದಲ್ಲಿ ‘ಶ್ವೇತಕ್ರಾಂತಿ’ ಘೊಷಣೆಯೊಂದಿಗೆ ಆನಂದದ ಅಮುಲ್ ತನ್ನ ಗಜಜಿಠಿಛಿ ್ಕಡಟ್ಝ್ಠಜಿಟ್ಞ ಆರಂಭಿಸಿತು. ಈ ‘ಹಾಲುಕ್ರಾಂತಿ’ ದೇಶದ ಹಳ್ಳಿಗಾಡಿನಲ್ಲಿ ಹೊಸ ಸಂಚಲನವನ್ನೇ ಆರಂಭಿಸಿತು. ಮಾಮೂಲಿಯಂತೆ ಹೆಣ್ಣುಮಕ್ಕಳು ಈ ಶ್ವೇತಕ್ರಾಂತಿಯ ಮುಂಚೂಣಿಯಲ್ಲಿ ಕಾಣಿಸಿಕೊಂಡರು. ಜಾನುವಾರುಗಳ ತಳಿ ಅಭಿವೃದ್ಧಿಯ ಕಡೆಗೆ ಪಶುವೈದ್ಯರು ಜಾಗರೂಕರಾದರು. ಹೆಚ್ಚು ಹಾಲು ಕರೆವ ವಿದೇಶಿ ತಳಿಯ ಹೋರಿ, ಆಕಳುಗಳನ್ನು ಆಯಾತ ಮಾಡಿಕೊಳ್ಳಲಾಯಿತು. ವಿದೇಶಿ ತಳಿಯ ಹೋರಿಗಳ ಸಮ್ಮಿಶ್ರಣದಿಂದ ‘ಕ್ರಾಸ್ ಬ್ರೀಡ್’ ಆಕಳುಗಳ ಜನನ, ಹೆಚ್ಚಿನ ಹಾಲಿನ ಉತ್ಪಾದನೆ ಆರಂಭವಾಯಿತು. ಆನಂದ ಮಾದರಿಯ ಹಾಲು ಉತ್ಪಾದನಾ ಸಹಕಾರಿ ಸಂಘಗಳು, ಹಾಲು ಸಂಸ್ಕರಣ ಘಟಕಗಳು ಹುಟ್ಟಿಕೊಂಡವು. ಬಳಕೆದಾರರಿಗೆ ಶುದ್ಧ ಹಾಲಿನ ಪೂರೈಕೆಯ ಯುಗ ಆರಂಭವಾಯಿತು. ಹಾಲು ಉತ್ಪಾದನೆಯ ಮೂಲಕ ರೈತರ ಆದಾಯದ ಮೂಲಗಳು ಸ್ಥಿರವಾಗತೊಡಗಿದವು. ದೇಶದ ಮಹಿಳೆಯರು ಅತ್ಯುತ್ಸಾಹದಿಂದ ಈ ಕ್ಷೀರಕ್ರಾಂತಿಯಲ್ಲಿ ತಮ್ಮ ಭಾಗೀದಾರಿಕೆಯನ್ನು ನೀಡಿದರು. ದೇಶ ಹೆಚ್ಚುವರಿ ಹಾಲು ಉತ್ಪಾದನೆಯಲ್ಲಿ ತೊಡಗಿತು. ಖೋವಾ, ತುಪ್ಪ, ಪೇಢೆ, ಸುವಾಸಿತ ಹಾಲು ಮುಂತಾದ ಉತ್ಪನ್ನಗಳು ಉತ್ಪಾದನೆಯಾಗತೊಡಗಿದವು. ಮಿಲ್ಕ್ ಪೌಡರ್ ಮಾಡಿ ನಮ್ಮ ಸೇನೆಗೆ, ವಿದೇಶಗಳಿಗೆ ರಫ್ತಾಗತೊಡಗಿತು.

    ದೊಡ್ಡ ಪ್ರಮಾಣದಲ್ಲಿ ಹಾಲು ಉತ್ಪಾದನೆಯೇನೋ ಆಗತೊಡಗಿತು. ಆದರೆ ಅದೇ ಉತ್ಸಾಹದಲ್ಲಿ ನಾವು ದೇಸಿ ತಳಿಯ ಆಕಳು, ಎಮ್ಮೆ, ಕುರಿ, ಆಡುಗಳ ಬಗ್ಗೆ ತಾತ್ಸಾರ ಮನೋಭಾವನೆ ತಳೆದೆವು. ಎಂಟು-ಹತ್ತು ಲೀಟರ ಹಾಲು ಕೊಡುವ ಜರ್ಸಿ ಆಕಳ ಮುಂದೆ- ಗಿಂಡಿ ಹಾಲು ಕೊಡುವ ‘ಮಲೆನಾಡು ಗಿಡ್ಡ’ ಕಳಾಹೀನವಾಯಿತು. ಕಿಲಾರಿ, ಗಿರ್, ವೆಚುರ್, ಅಮೃತ ಮಹಲ್, ಕಾಸರಗೋಡು ತಳಿ, ಓಂಗೋಲ್, ಸಾಹಿವಾಲ್, ಕಾಂಕ್ರೇಜ್, ನಾಗೋರಿ, ದೇವಣಿ, ಖಿಲಾರಿ ಮುಂತಾದ ದೇಸಿ ತಳಿಯ ಆಕಳುಗಳ ಬಗ್ಗೆ ನಮ್ಮ ಜಾನುವಾರು ಸಂಶೋಧನಾ ಕೇಂದ್ರಗಳು ಉದಾಸೀನ ತಾಳತೊಡಗಿದವು. ದನಗಳ ಜಾತ್ರೆ ಕಳಾಹೀನವಾದವು. ಹೆಚ್ಚೆಚ್ಚು ಹಾಲು ಉತ್ಪಾದನೆಯ ಮೇಲೆ ಗಮನ ಕೇಂದ್ರೀಕರಿಸಿದ ನಾವು, ಹಾಲಿನ ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ದೇಸಿ ಆಕಳ ಹಾಲಿನ ಔಷಧೀಯ ಗುಣ ನಮಗೆ ಮುಖ್ಯವೆಂದು ಅನ್ನಿಸಲಿಲ್ಲ. ದೇಸಿ ಆಕಳ ಹಾಲಿನ ಉತ್ಪನ್ನಗಳು ಹೇಗೆ ನಮ್ಮ ಪಾರಂಪರಿಕ ವೈದ್ಯ ಪದ್ಧತಿಯ ಮೂಲ ದ್ರವ್ಯಗಳು ಎಂಬುದನ್ನು ನಾವು ಯೋಚಿಸಲೇ ಇಲ್ಲ.

    ಇದನ್ನೂ ಓದಿ:  ನವೆಂಬರ್‌ ಅಂತ್ಯದವರೆಗೂ ಉಚಿತ ಪಡಿತರ- ಸಚಿವ ಸಂಪುಟ ಅನುಮೋದನೆ

    ಕರೊನಾದ ತಾಂಡವ ನೃತ್ಯದ ತುಳಿತಕ್ಕೆ ಸಿಕ್ಕ ಮೇಲೆ ನಮಗೀಗ ನಾವು ಬಳಸುವ ಹಾಲಿನ ಗುಣಮಟ್ಟದ ಚಿಂತೆ ಹೆಚ್ಚಾಗಿದೆ. ನಮ್ಮ ಮನೆಗೂಸು ಕುಡಿಯುವ ಹಾಲಿನ ಗುಣಮಟ್ಟ ನಮ್ಮನ್ನು ಭಯಭೀತಗೊಳಿಸಿದೆ. ರೊಕ್ಕ ಗಳಿಸುವ ಆಪಾಧಾಪಿಯಲ್ಲಿ ನಾವೇನನ್ನು ಕಳೆದುಕೊಂಡಿದ್ದೇವೆ ಎಂಬ ಲೆಕ್ಕಾಚಾರ ಹಾಕತೊಡಗಿದ್ದೇವೆ. ಹೆಚ್ಚು ಬೆಳೆ ಬೆಳೆಯಬೇಕೆಂಬ ಉಮೇದಿಯಲ್ಲಿ ಟ್ರಾಕ್ಟರ್ ತಂದ ನಾವು ಎತ್ತುಗಳನ್ನು ಕಸಾಯಿಖಾನೆಗೆ ಮಾರಿದೆವು. ರೆಂಟೆ, ಕುಂಟೆ, ಕೂರಿಗಿ, ದಿಂಡು, ಎಡೆಕುಂಟೆ, ಗಡ್ಡಿಕುಂಟೆ, ಬ್ಯಾಕೋಲು, ಬಾರಕೋಲು, ನೊಗ, ಚಕ್ಕಡಿ ಎಂಬ ಒಂದು ದೊಡ್ಡ ಸಂಸ್ಕೃತಿ ಹೇಳ ಹೆಸರಿಲ್ಲದಂತಾಯಿತು. ಬಡಿಗನಿಗೆ ಕೆಲಸವಿಲ್ಲದಂತಾಯಿತು. ಗುದ್ದಲಿ, ಬಾಗುದ್ದಲಿ, ಮುಂಜಣ, ಕುಡ, ಕುಡಗೋಲು, ಕುರ್ಚಿಗಿ, ಕೊಡಲಿ ಹಣಿಸಲು ಯಾರು ಹೋಗಬೇಕು ಕಮ್ಮಾರನ ಕುಲುಮೆಗೆ? ಕುಲುಮೆಯಲ್ಲಿ ಬೆಕ್ಕು ಮಲಗಿತು. ಬಡಿಗ, ಕಮ್ಮಾರರು ಪೇಟೆ ದಾರಿ ಹಿಡಿದರು ಹೊಟ್ಟೆಪಾಡಿಗೆ. ಸಲಿಕೆ, ಕೊಡಲಿ, ಕುರ್ಚಗಿ, ಗುದ್ದಲಿ, ಬಾಗುದ್ದಲಿಗಳನ್ನು ಬಹುರಾಷ್ಟ್ರೀಯ ಕಂಪನಿಗಳು ಮಾರತೊಡಗಿದವು ಡಬಲ್ ಬೆಲೆಗೆ. ಗುದ್ದಲಿಯ ಕಾವು ಕೂಡ ಪ್ಲಾಸ್ಟಿಕ್ಕಿನದು ಬಂತು ಚೀನಾದಿಂದ. ಈಚಲ ಗಿಡ ಮಾಯವಾದವು ನಮ್ಮ ಹಳ್ಳದ ದಂಡೆಗಳಿಂದ; ಈಚಲು ಬುಟ್ಟಿ, ಸಗಣಿ ಬುಟ್ಟಿ, ಹೊಟ್ಟಿನ ಜಲಿ, ತೂರುವ ಬುಟ್ಟಿ ಮಾಯವಾದವು. ನಮ್ಮೂರಿಂದ ಕುಲುಮೆ ಸಂಸ್ಕೃತಿ ಮಾಯವಾತು, ಈಚಲ ಸಂಸ್ಕೃತಿ ಮಾಯವಾತು; ಕಮ್ಮಾರರು, ಭಜಂತ್ರಿಗಳು ಪೇಟೆಯ ದಾರಿ ಹಿಡಿದರು ಉಪ ಜೀವನಕ್ಕಾಗಿ. ನಮ್ಮೂರಿಗೆ ಸಿಲಾವರ ಬಂತು, ಸ್ಟೀಲ್ ಬಂತು- ಹರವಿ, ಗಡಗಿ, ಬಿಂದಿಗೆ, ತತ್ರಾಣಿ, ಮಗಿಯನ್ನು ನಮ್ಮ ಕುಂಬಾರ ತಯಾರಿಸಿ ಕಾದದ್ದೇ ಬಂತು ಗಿರಾಕಿಗಳಿಗೆ. ಯಾರೂ ಕುಂಬಾರ ಸಾಲಿಯ ಕಡೆ ಸುಳಿಯಲಿಲ್ಲ. ನಮ್ಮೂರಿಂದ ಚಕ್ಕಡಿಯೂ ಮಾಯವಾದವು, ಟ್ರಾಕ್ಟರ್ ಭರಗುಡತೊಡಗಿದವು ಹಳ್ಳಿಗಳಲ್ಲಿ, ಡೀಸೆಲ್ ದಿನಂಪ್ರತಿ ಮೇಲೇರತೊಡಗಿತು. ಕರೊನಾ ಬಂತು ಬೆಂಗಳೂರಿಗೆ, ನಮ್ಮೂರನ್ನು ಶಪಿಸಿ ಶಹರ ಸೇರಿದವರು ಓಡೋಡಿ ವಾಪಸು ಬಂದರು ಹಳ್ಳಿಗೆ.

    ನಮ್ಮೂರ ಕುರಿಗಾರರು ‘ಕುರಿಮಂದೆ’ ಮಾರಿದರು. ಆಡು, ಹೋತ ಸಪ್ಪು ಸೆದೆ ಇಲ್ಲದೆ ಬಡವಾದವು. ಪಶುಪಾಲನೆ ಮಾಡಿಕೊಂಡೇ ಬದುಕುವ ಕಾಡುಗೊಲ್ಲರು, ಮ್ಯಾಸನಾಯಕರು ಮಟಾಮಾಯವಾದ ಗೋಮಾಳ ಮರೆತು, ಗುಡ್ಡದ ಕಡೆ ತಮ್ಮ ಆಕಳ ಹಿಂಡು ಹೊಡೆದುಕೊಂಡು ಹೋದರೆ, ಗರುಕೆ ಬೆಳೆಯದ ನೀಲಗಿರಿ ತೋಪಿನಲ್ಲಿ ಆಕಳ ಹಿಂಡು ಮೆಲುಕು ಹಾಕುವುದನ್ನು ಮರೆತು ನಿಂತವು. ಹುಲ್ಲು ಬೆಳೆದುಕೊಂಡಿದ್ದ ಹೊಲದ ಬದುವು, ಹಳ್ಳದ ದಂಡೆ, ಸರುವು, ಕೆರೆದಂಡೆ, ಕಾಲುವೆ ಬದುವು, ಹೊಳೆದಂಡೆಗಳಲ್ಲಿ ತೇಗ ಎಂಬ ರೊಕ್ಕ ತರುವ ಮಾಂತ್ರಿಕ ಮರ ಬೆಳೆದು ನಿಂತಿವೆ, ಹುಲ್ಲು ಮಾಯವಾಗಿದೆ, ಹಕ್ಕಿ ಪಕ್ಷಿಗಳಿಗೂ ಕಾಯಿಯೂ ಇಲ್ಲ, ಹಣ್ಣೂ ಇಲ್ಲ.

    ಇದನ್ನೂ ಓದಿ: ಚೀನಾ ಆಮದು ದ್ವಾರ ಬಂದ್?: ವಾಣಿಜ್ಯ ಸಚಿವಾಲಯದ ಸಲಹೆ ಕೋರಿದ ಪಿಎಂಒ

    ಜವಾರಿ ಆಕಳಿನ ಬಗ್ಗೆ ಕೇವಲ ಕೆಲವೇ ಜನ ಚಿಂತಿಸ ತೊಡಗಿರುವುದು, ಕುರಿಮಂದೆಯ ಬಗ್ಗೆ ಕೇವಲ ಕುರಿಗಾರರು ಯೋಚಿಸುವುದು ಸಾಲದು. ದೇಸಿ ಆಕಳಿನ ಹಾಲಿನ ಹಾಗೆಯೇ ಕುರಿ ಮತ್ತು ಆಡಿನ ಹಾಲಿನ ಪೌಷ್ಟಿಕತೆಯ ಬಗ್ಗೆ ನಾವು ಮರುಚಿಂತನೆ ನಡೆಸಬೇಕು. ಬಾಪೂಜಿ ತಮ್ಮ ಉಪವಾಸಗಳಲ್ಲಿ ಆಡಿನ ಹಾಲನ್ನೇ ಏಕೆ ಕುಡಿಯುತ್ತಿದ್ದರು? ಎಂಬುದು ನಮ್ಮ ಶಾಲಾ ಪಠ್ಯಗಳಲ್ಲಿ ಜಾಗೆ ಪಡೆಯಬೇಕು. ಕುರಿ ಉಣ್ಣೆಯಿಂದ ಮಾಡಿದ ಕಂಬಳಿ, ಟೊಪ್ಪಿಗೆ, ಮಫ್ಲರು, ಜಾಡಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಬೆಚ್ಚಗಿನ ಹಚ್ಚಡಗಳೆಂಬುದನ್ನು ಕುರಿತು ನಾವು ಮಾತನಾಡಬೇಕು, ಕುರಿ ಉಣ್ಣಿಯ ಉಪಯೋಗ ಕುರಿತು ಹೊಸ ಪ್ರಯೋಗಗಳನ್ನು ನಮ್ಮ ಫ್ಯಾಶನ್ ಶಾಲೆಗಳು ನಡೆಸಬೇಕು. ಕುರಿ ಉಣ್ಣಿಯಿಂದ ತಯಾರಾದ ಉಡುಪುಗಳು ನಮ್ಮ ಪ್ರತಿಷ್ಠಿತ ಫ್ಯಾಶನ್ ಪರೇಡಗಳಲ್ಲಿ ಪ್ರದರ್ಶಿತವಾಗಬೇಕು.

    ಈ ನಮ್ಮ ದೇಸಿ ಸಂಸ್ಕೃತಿ ಉಳಿಯಬೇಕಾದರೆ ಕುರಿಗಾರರ ಆರ್ಥಿಕ ಪಾಲುದಾರಿಕೆಯನ್ನು ಗಂಭೀರ ಅಧ್ಯಯನಕ್ಕೆ ನಾವು ಒಳಪಡಿಸಬೇಕು. ಗಾಂಧೀಜಿ ಹೇಳಿದ ಹಾಗೆ ನಮ್ಮ ಆರ್ಥಿಕತೆಯ ಬುನಾದಿ ಹಳ್ಳಿಗಳೇ ಹೊರತು ಶಹರಗಳಲ್ಲ.

    (ಲೇಖಕರು ಮಧ್ಯಪ್ರದೇಶ ಅಮರಕಂಟಕದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ)

    31ರ ತನಕ ಶಿಕ್ಷಕರಿಗೆ ವರ್ಕ್​ ಫ್ರಂ ಹೋಮ್ ಕೊಡಿ- ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts