More

    ಚರಂಡಿ ಪಕ್ಕವೇ ಅಂಗನವಾಡಿ!

    ಹಿರೇಕೆರೂರ: ಪಟ್ಟಣದ 18ನೇ ವಾರ್ಡ್​ನ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ಒಳಚರಂಡಿ ನೀರು ಸಂಗ್ರಹವಾಗುವ ಜಾಗದ ಪಕ್ಕದಲ್ಲಿ ಅಂಗನವಾಡಿ ಕಟ್ಟಡ ನಿರ್ವಿುಸಲಾಗುತ್ತಿದೆ. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

    ಅಂಗನವಾಡಿ ಕೇಂದ್ರ ಸಂಖ್ಯೆ 21 ಇದಾಗಿದ್ದು, ಪಟ್ಟಣದ ದೇವದಾಸಿ ಕಾಲನಿಯಲ್ಲಿ ಕಾರ್ಯನಿರ್ವಹಿಸಬೇಕಿತ್ತು. ಆದರೆ, ಅಲ್ಲಿ ಸ್ಥಳದ ಕೊರತೆ ಹಾಗೂ ಸುರಕ್ಷತೆ ಇರದ ಕಾರಣ ಈಗ ಹೌಸಿಂಗ್ ಬೋರ್ಡ್ ಕಾಲನಿಯ ಬಾಡಿಗೆ ಮನೆಯೊಂದರಲ್ಲಿ ಕಾರ್ಯನಿರ್ವಹಿಸುತ್ತ ಬಂದಿದೆ. ಈ ಅಂಗನವಾಡಿಯ ಸ್ವಂತ ಕಟ್ಟಡಕ್ಕಾಗಿ ಮೊದಲು ಇದೇ ಕಾಲನಿಯ ಪಂಪ್​ಹೌಸ್ ಬಳಿ ಸ್ಥಳ ನಿಗದಿಪಡಿಸಿ, ಅನುದಾನ ಮಂಜೂರಾಗಿತ್ತು. ಈ ಜಾಗದಲ್ಲಿ ನಿರ್ವಣಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರಿಂದ ಕಟ್ಟಡ ಕಾಮಗಾರಿ ನನೆಗುದಿಗೆ ಬಿದ್ದಿತು. ನಂತರ ಪಟ್ಟಣ ಪಂಚಾಯಿತಿ ಹೌಸಿಂಗ್ ಬೋರ್ಡ್ ಕಾಲನಿಯಲ್ಲಿ ನಿವೇಶನ ನೀಡಿತು. ಇದೀಗ ಈ ಸ್ಥಳದಲ್ಲಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಆರಂಭವಾಗಿದೆ.

    ಆದರೆ, ಈ ನಿವೇಶನದ ಪಕ್ಕದಲ್ಲಿ ಒಳಚರಂಡಿ ನೀರಿನ ತೊಟ್ಟಿಯಿದೆ. ಇದರಿಂದ ದುರ್ನಾತ ಹರಡುತ್ತಿದೆ. ಈ ಜಾಗದ ಪಕ್ಕದಲ್ಲಿ ಓಡಾಡುವವರು ಮೂಗು ಮುಚ್ಚಿಕೊಂಡು ಹೋಗುವ ಅನಿವಾರ್ಯತೆ ಇದೆ. ಜನರು ಸಾಂಕ್ರಾಮಿಕ ರೋಗಗಳ ಭಯದಲ್ಲೇ ವಾಸಿಸುತ್ತಿದ್ದಾರೆ. ಮಳೆಗಾಲದಲ್ಲಿ ಒಳಚರಂಡಿ ತೊಟ್ಟಿ ತುಂಬಿ ನೀರು ಎಲ್ಲೆಂದರಲ್ಲಿ ಹರಿದು ಹೋಗುತ್ತದೆ. ಇಂತಹ ಸ್ಥಳದ ಪಕ್ಕದಲ್ಲಿ ಅಂಗನವಾಡಿ ನಿರ್ವಿುಸಿದರೆ ಮಕ್ಕಳ, ಬಾಣಂತಿಯರ, ಗರ್ಭಿಣಿಯರ ಆರೋಗ್ಯ ಹಾಗೂ ಪ್ರಾಣಕ್ಕೆ ಗಂಡಾಂತರ ತಪ್ಪಿದ್ದಲ್ಲ.

    ಹೀಗಾಗಿ, ಇಂಥ ಜಾಗದಲ್ಲಿ ಅಂಗನವಾಡಿ ಕಟ್ಟಡ ನಿರ್ವಣಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೂ ಗುತ್ತಿಗೆದಾರರು ಕಟ್ಟಡ ನಿರ್ಮಾಣ ಕಾರ್ಯ ನಡೆಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇಲಾಖೆ ಮೇಲಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿ ಸ್ಥಗಿತಗೊಳಿಸಬೇಕು. ಬೇರೆ ಸೂಕ್ತ ಸ್ಥಳದಲ್ಲಿ ಅಂಗನವಾಡಿ ನಿರ್ವಿುಸಬೇಕು ಎಂಬುದು ಇಲ್ಲಿನ ನಿವಾಸಿಗಳ, ಪಾಲಕರ ಒತ್ತಾಸೆಯಾಗಿದೆ.

    ಕಾಲನಿಯಲ್ಲಿ ಸೂಕ್ತ ಸ್ಥಳವಿಲ್ಲದ ಕಾರಣ ತೀವ್ರ ಹುಡುಕಾಟ ನಡೆಸಿ, ಕೊನೆಗೆ ಪಟ್ಟಣ ಪಂಚಾಯಿತಿ ನೀಡಿದ ಈ ಸ್ಥಳದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಜನರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಹಾಗೂ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    | ವಿಜಯಕುಮಾರ ಎಂ. ಸಿಡಿಪಿಒ

    ಈಗ ನಿರ್ವಿುಸುತ್ತಿರುವ ಅಂಗನವಾಡಿ ಕೇಂದ್ರದ ಕಟ್ಟಡದ ಪಕ್ಕದ ಸ್ಥಳದಲ್ಲಿ ಒಳಚರಂಡಿ ನೀರಿನ ತೊಟ್ಟಿ ಇದೆ. ಗರ್ಭಿಣಿಯರ, ಬಾಣಂತಿಯರ, ಮಕ್ಕಳ ಆರೋಗ್ಯ ಮತ್ತು ಪ್ರಾಣದ ಹಿತದೃಷ್ಟಿಯಿಂದ ಈ ಸ್ಥಳ ಸುರಕ್ಷಿತವಾಗಿಲ್ಲ. ಈ ಕಟ್ಟಡ ಕಾಮಗಾರಿಗೆ ನಮ್ಮ ವಿರೋಧವಿದೆ. ಕೂಡಲೆ ಕಟ್ಟಡ ಕಾಮಗಾರಿ ನಿಲ್ಲಿಸಬೇಕು ಹಾಗೂ ಬೇರೆ ಸ್ಥಳದಲ್ಲಿ ಇದನ್ನು ನಿರ್ವಿುಸಬೇಕು.
    | ಕವಿತಾ ಹಾರ್ನಳ್ಳಿ, 18 ನೇ ವಾರ್ಡ್ ಪಪಂ ಸದಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts