More

    ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ; ಕಾಂಗ್ರೆಸ್ ಸೇರಿದ ಸಚಿವ ಆನಂದ್ ಸಿಂಗ್ ಸಹೋದರಿ

    ಬೆಂಗಳೂರು: ಹೊಸಪೇಟೆಯ ಟಿಕೆಟ್ ಆಕಾಂಕ್ಷಿಯಾಗಿದ್ದ ಸಚಿವ ಆನಂದ್ ಸಿಂಗ್ ಸಹೋದರಿ ರಾಣಿ ಸಂಯುಕ್ತ ಇದೀಗ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ. ಕುಟುಂಬ ರಾಜಕಾರಣವನ್ನು ವಿರೋಧಿಸುವ ಬಿಜೆಪಿ ವಿಜಯನಗರ ಕ್ಷೇತ್ರದಲ್ಲಿ ಕುಟುಂಬಕ್ಕೆ ಮಣೆ ಹಾಕಿದೆ. ಸಚಿವ ಆನಂದ ಸಿಂಗ್ ಅವರ ಪುತ್ರ ಕಿರಿ ವಯಸ್ಸಿನ ಸಿದ್ಧಾರ್ಥ ಸಿಂಗ್‌ಗೆ ಟಿಕೆಟ್ ಘೋಷಿಸುವ ಮೂಲಕ ನನಗೆ ವಂಚಿಸಿದ್ದಾರೆ ಎಂದು ರಾಣಿ ಸಂಯುಕ್ತ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ರಾಣಿ ಸಂಯುಕ್ತ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ಸದಸ್ಯೆಯಾಗಿದ್ದರು. ಇದೀಗ ಅಸಮಾಧಾನದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಾಯಕರು ಪಕ್ಷದ ಬಾವುಟ ನೀಡಿ ರಾಣಿ ಸಂಯುಕ್ತ ಅವರನ್ನು ಸ್ವಾಗತಿಸಿದರು.

    ಇದನ್ನೂ ಓದಿ: ಕಾಂಗ್ರೆಸ್​ನ ಗುಂಡಿಯೊಳಗೆ ನೀರಿಲ್ಲ! ಡಿಕೆಶಿ ಟೀಕೆಗೆ ಟಾಂಗ್ ನೀಡಿದ ಸಿಎಂ

    ನಿಷ್ಠೆಯಿಂದ ಕೆಲಸ ಮಾಡುತ್ತೇನೆ

    ಕಾಂಗ್ರೆಸ್ ಸೇರ್ಪಡೆಗೊಂಡ ಬಳಿಕ ರಾಣಿ ಸಂಯುಕ್ತಾ ಮಾತನಾಡುತ್ತಾ, ಬಹಳ ನೋವಿನಿಂದಾಗಿ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ. ಕಾಂಗ್ರೆಸ್ ತುಂಬ ಚೆನ್ನಾಗಿ ಟಿಕೆಟ್​ ಹಂಚಿಕೆ ಮಾಡಿದ್ದು, ಹಳೆಯ ಕಾರ್ಯಕರ್ತರನ್ನು ಗುರುತಿಸಿದೆ. ಆದರೆ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆ ಸರಿಯಾಗಿ ನಡೆದಿಲ್ಲ. ಹೀಗಾಗಿ ಕಾಂಗ್ರೆಸ್ ಸೇರುತ್ತಿದ್ದು, ಇಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಎಲೆ ಮರೆಕಾಯಿಯಂತೆ ದುಡಿದಿದ್ದೇವೆ…

    ಕಳೆದ ಏಪ್ರಿಲ್ 19ರಂದು ಸಂಯುಕ್ತಾ ರಾಣಿ ಸುದ್ದಿಗೋಷ್ಠಿ ನಡೆಸಿ, 30 ವರ್ಷಗಳಿಂದ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿ ನಾನು ಮತ್ತು ನನ್ನ ಮನೆಯವರು ಸೇವೆ ಸಲ್ಲಿಸುತ್ತಿದ್ದೇವೆ. ಬೇರು ಮಟ್ಟದಿಂದ ಪಕ್ಷ ಸಂಘಟನೆ ಜೊತೆಗೆ ವಿಧಾನ ಪರಿಷತ್ ಸೇರಿದಂತೆ ವಿವಿಧ ಚುನಾವಣೆಗಳಲ್ಲಿ ಎಲೆ ಮರೆಕಾಯಿಯಂತೆ ಹಗಲಿರುಳು ದುಡಿದಿದ್ದೇವೆ. ಆದರೆ, ಆರು ತಿಂಗಳಿಂದೀಚೆಗೆ ವೈಯಕ್ತಿಕವಾಗಿ ಸಾಮಾಜಿಕ ಸೇವೆ, ಕುಸ್ತಿ, ಖೋ ಖೋ ಆಯೋಜಿಸುವ ಮೂಲಕ ಸಾರ್ವಜನಿಕವಾಗಿ ಗುರುತಿಸಿಕೊಂಡಿರುವ ಸಿದ್ಧಾರ್ಥ ಸಿಂಗ್‌ಗೆ ಬಿಜೆಪಿ ನಾಯಕರು ಮಣೆ ಹಾಕಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಸಿದ್ದರಾಮಯ್ಯ ಅಸಮಾಧಾನದ ಬೆನ್ನಲ್ಲೆ ಎಚ್ಚೆತ್ತ ಡಿಕೆಶಿ: ಖಾಸಗಿ ಕಾರ್ಯಕ್ರಮದಲ್ಲಿ ಒಗ್ಗಟ್ಟು ಪ್ರದರ್ಶನ

    ಬಾವುಟ ಕಟ್ಟುವುದೇ ಕೆಲಸ

    ದಶಕಗಳಿಂದ ದುಡಿಯುತ್ತಿರುವ ತಳ ಮಟ್ಟದ ಪ್ರಾಮಾಣಿಕ ಕಾರ್ಯಕರ್ತನಿಗೆ ಟಿಕೆಟ್ ನೀಡಿದ್ದರೂ, ಆನಂದ ಸಿಂಗ್ ನಾನೂ ಜೊತೆ ಗೂಡಿ ಪಕ್ಷವನ್ನು ಗೆಲ್ಲಿಸುತ್ತಿದ್ದೆವು. ಆದರೆ, ಪಕ್ಷದಲ್ಲೇ ಗುರುತಿಸಿಕೊಳ್ಳದ ಸಿದ್ಧಾರ್ಥ ಸಿಂಗ್‌ಗೆ ಅವಕಾಶ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಸಿದ್ಧಾರ್ಥ ಸಿಂಗ್ ಆಯ್ಕೆಯಿಂದ ಸಚಿವರು, ಶಾಸಕರ ಮಕ್ಕಳಿಗೆ ಮಾತ್ರ ಅವಕಾಶ. ಸಾಮಾನ್ಯ ಕಾರ್ಯಕರ್ತರಿಗೆ ಬಾವುಟ ಕಟ್ಟುವುದೇ ಕೆಲಸ ಎಂಬ ಸಂದೇಶ ರವಾನಿಸಿದಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts