More

    ಸಂಸಾರದಲ್ಲಿ ಪ್ರಧಾನವಾಗಿ ಇರಲಿ ಸಾಮರಸ್ಯ


    ಚಿತ್ರದುರ್ಗ: ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಹಿಂದಿನ ಪೀಠಾಧಿಪತಿಗಳೆಲ್ಲರೂ ಸಮಾಜಕ್ಕೆ ತಮ್ಮದೇ ಆದರ್ಶದ ಪಥವನ್ನು ಬಿಟ್ಟು ಹೋಗಿದ್ದಾರೆ ಎಂದು ಶ್ರೀಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀ ಬಸವಕುಮಾರ ಸ್ವಾಮೀಜಿ ಹೇಳಿದರು.
    ಬೃಹನ್ಮಠದ ಅನುಭವ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ 34ನೇ ವರ್ಷದ 5ನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಪೀಠಾಧಿಪತಿಗಳು ನಿರಹಂಕಾರ, ನಿಸ್ವಾರ್ಥ, ಸರಳತೆ, ಸಮಾನತೆ ಎಂಬ ಸದಾಶಯಗಳನ್ನು ಹೊಂದಿದ್ದವರು. ಈಗಲೂ ಅಂತಹವರ ದಾರಿಯನ್ನಾಧರಿಸಿ ಶ್ರೀಮಠ ನಡೆಯುತ್ತಿದೆ ಎಂಬುದಕ್ಕೆ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವವೇ ಸಾಕ್ಷಿ ಎಂದರು.
    ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀಮಠದ ಸಾಮಾಜಿಕ ಕಾರ್ಯಗಳಲ್ಲಿ ಸಾಮೂಹಿಕ ವಿವಾಹವೂ ಒಂದಾಗಿದೆ. ಇದು ಅನೇಕ ಬಡವರಿಗೆ ಆಶಾಕಿರಣವಾಗಿದೆ. ಸಾರ್ವಜನಿಕರು ಇಂತಹ ಜನಪರ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಮೂಲಕ ದುಂದುವೆಚ್ಚಕ್ಕೆ ಕಡಿವಾಣ ಹಾಕುವ ಕ್ರಮ ಶ್ಲಾಘನೀಯ ಎಂದು ಹೇಳಿದರು.
    ಸರಳ, ಸರ್ವಸಮಾನತೆ ತತ್ವದಡಿ ಸಾಗುತ್ತಿರುವ ಈ ಕಾರ್ಯಕ್ರಮ ಜಾತಿ, ಮತ ಭೇದವಿಲ್ಲದೆ ಒಂದೇ ವೇದಿಕೆಯಲ್ಲಿ ಭವಿಷ್ಯದ ಬದುಕಿಗೆ ಮುಂದಡಿ ಇಡುತ್ತಿರುವುದು ಸಂತಸದ ಸಂಗತಿಯಾಗಿದೆ. ದಂಪತಿ ಬದುಕಿನಲ್ಲಿ ಸಾಮರಸ್ಯವೇ ಪ್ರಧಾನವಾಗಿರಬೇಕು ಎಂದು ಕಿವಿಮಾತು ಹೇಳಿದರು.
    ಮೇ 8ರಿಂದ 3 ದಿನಗಳ ಕಾಲ ಶ್ರೀಮಠದಲ್ಲಿ ಬಸವ ಜಯಂತಿ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು.
    ಸಾನ್ನಿಧ್ಯ ವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜೀವನ ಸುಖವಾಗಿರಲು ಎಲ್ಲರಲ್ಲೂ ನಂಬಿಕೆ ಅಗತ್ಯ. ನಂಬಿಕೆ ಇಲ್ಲವಾದಲ್ಲಿ ಸಂಸಾರ ವಿಘಟನೆಯ ಹಾದಿ ಹಿಡಿಯುತ್ತದೆ. ಕುಟುಂಬ ಎಂದ ಮೇಲೆ ತೊಂದರೆ, ತಾಪತ್ರಯ, ಸಮಸ್ಯೆ ಸಹಜ. ಅವುಗಳನ್ನು ತಾಳ್ಮೆಯಿಂದ ಪರಿಹರಿಸಿಕೊಂಡು ಸಾಗಬೇಕು. ಈ ವೇದಿಕೆಯಲ್ಲಿ ಬಡವರು ಮಾತ್ರ ಮದುವೆ ಮಾಡಿಕೊಂಡಿಲ್ಲ. ಸಿರಿವಂತರೂ ಮದುವೆಯಾಗಿದ್ದಾರೆ. ಎಂತಹದ್ದೇ ಸಂದರ್ಭದಲ್ಲೂ ಕಲ್ಯಾಣ ಮಹೋತ್ಸವ ನಿಂತಿಲ್ಲ ಎಂದರು.
    ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಬೃಹನ್ಮಠದ ಖಾಸಾಮಠ ಗುರುಮಠಕಲ್ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾವುದಕ್ಕೆ ಕೊರತೆಯಾದರೂ ವಿಶ್ವಾಸಕ್ಕೆ ಭಂಗ ಬರಬಾರದು. ಪರಸ್ಪರ ಪ್ರೀತಿ-ವಿಶ್ವಾಸ ಸಹ ಬಾಳ್ವೆಯಿಂದ ಬದುಕು ಹಸನಾಗಲು ಸಾಧ್ಯವಿದ್ದು, ಅಂತಹ ದಾರಿಯಲ್ಲಿ ಸಾಗಬೇಕಿದೆ ಎಂದು ತಿಳಿಸಿದರು.
    ಜಮುರಾ ಕಲಾವಿದ ಉಮೇಶ ಪತ್ತಾರ್ ಮತ್ತು ಸಂಗಡಿಗರು ವಚನ ಗಾಯನ, ಗಂಜಿಗಟ್ಟೆ ಕೃಷ್ಣಮೂರ್ತಿ ಲಾವಣಿ ಪದಗಳನ್ನು ಹಾಡಿದರು. 16 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts