More

    ಮದುವೆ ಸಮಾರಂಭದಲ್ಲಿ ಚೆನ್ನೈ ಟೆಸ್ಟ್ ಪಂದ್ಯ ನೇರಪ್ರಸಾರ, ಫೋಟೋ ವೈರಲ್!

    ಬೆಂಗಳೂರು: ಭಾರತದಲ್ಲಿ ಅತಿ ಹೆಚ್ಚು ಪ್ರೀತಿ ಸಂಪಾದಿಸಿರುವ ಕ್ರೀಡೆ ಕ್ರಿಕೆಟ್. ಹಿಂದೆಲ್ಲ ಏಕದಿನ, ಟಿ20 ವಿಶ್ವಕಪ್ ಪಂದ್ಯಗಳಿದ್ದರೆ ಭಾರತದ ಬಹುತೇಕ ನಗರಗಳ ರಸ್ತೆಗಳು ಬಿಕೋ ಎನ್ನುತ್ತಿದ್ದುದು ಸಾಮಾನ್ಯವಾಗಿತ್ತು. ಭಾರತೀಯರ ಈ ಕ್ರಿಕೆಟ್ ಪ್ರೀತಿ ಏಕದಿನ ಮತ್ತು ಟಿ20ಯಂಥ ಸೀಮಿತ ಓವರ್ ಕ್ರಿಕೆಟ್ ಮೇಲೆ ಮಾತ್ರವಲ್ಲ, ಕ್ರಿಕೆಟ್‌ನ ಮೂಲ ಪ್ರಕಾರವಾದ ಟೆಸ್ಟ್ ಕ್ರಿಕೆಟ್ ಮೇಲೂ ಇದೆ ಎಂಬುದು ಸೋಮವಾರ ಚೆನ್ನೈನಲ್ಲಿ ಸಾಬೀತಾಗಿದೆ!

    ಚೆನ್ನೈನ ಮದುವೆ ಸಮಾರಂಭವೊಂದರಲ್ಲಿ ಇಡಲಾಗಿದ್ದ ಟಿವಿಯಲ್ಲಿ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ನೇರಪ್ರಸಾರವನ್ನು ಮಾಡಲಾಗಿದೆ. ಅತ್ತ ಮಂಟಪದಲ್ಲಿ ಮದುವೆಯ ವಿಧಿವಿಧಾನಗಳು ನಡೆಯುತ್ತಿದ್ದರೆ, ಮದುವೆಗೆ ಬಂದಿದ್ದ ಅತಿಥಿಗಳು ಟೆಸ್ಟ್ ಪಂದ್ಯವನ್ನು ವೀಕ್ಷಿಸುವಲ್ಲಿ ಮಗ್ನರಾಗಿದ್ದರು. ಈ ಕ್ಷಣದ ಚಿತ್ರವೊಂದು ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

    ಇದನ್ನೂ ಓದಿ: VIDEO | ಡ್ರೆಸ್ಸಿಂಗ್ ರೂಂನಲ್ಲಿ ಕುಲದೀಪ್ ಕೊರಳು ಹಿಡಿದೆಳೆದ ಸಿರಾಜ್!

    ಇತ್ತೀಚೆಗೆ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಬ್ರಿಸ್ಬೇನ್ ಟೆಸ್ಟ್ ಪಂದ್ಯ ಯಾವ ಏಕದಿನ, ಟಿ20 ಪಂದ್ಯಗಳಿಗೂ ಕಡಿಮೆ ಇಲ್ಲದ ರೋಚಕತೆ ಮೂಡಿಸಿತ್ತು. ಇದರ ಬೆನ್ನಲ್ಲೇ ತವರಿನಲ್ಲಿ ಇಂಗ್ಲೆಂಡ್ ತಂಡದಿಂದ ಎದುರಾಗಿರುವ ಕಠಿಣ ಸವಾಲು ಕೂಡ ಕ್ರಿಕೆಟ್ ಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಭಾರತ-ಇಂಗ್ಲೆಂಡ್ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟವಾದ ಸೋಮವಾರ ಬೆಳಗ್ಗೆ ಚೆನ್ನೈನ ಆಟಗಾರರೇ ಆದ ಆರ್. ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಕ್ರೀಸ್‌ನಲ್ಲಿದ್ದರು. ಹೀಗಾಗಿ ಸಹಜವಾಗಿಯೇ ಚೆನ್ನೈನಲ್ಲಿ ಪಂದ್ಯದ ಬಗ್ಗೆ ಜನರಿಗೆ ಹೆಚ್ಚಿನ ಕುತೂಹಲ ಮೂಡಿತ್ತು.

    ಟೆಸ್ಟ್ ಪಂದ್ಯವನ್ನು ವೀಕ್ಷಿಸುವ ಸಲುವಾಗಿ ಅತಿಥಿಗಳು ಮದುವೆ ಸಮಾರಂಭವನ್ನು ತಪ್ಪಿಸಿಕೊಳ್ಳಬಾರದು ಎಂಬ ಕಾರಣಕ್ಕಾಗಿ ಟಿವಿಯಲ್ಲಿ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿತ್ತು ಎಂಬುದು ವಿಶೇಷವಾಗಿದೆ. ಆರ್. ಅಶ್ವಿನ್ ಬೌಲಿಂಗ್‌ನಲ್ಲೂ ಮಿಂಚಿ 6 ವಿಕೆಟ್ ಕಬಳಿಸುವ ಮೂಲಕ ಮದುವೆ ಮನೆಯಲ್ಲಿ ನೆರೆದಿದ್ದ ಚೆನ್ನೈನ ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ರಸದೌತಣವನ್ನೇ ನೀಡಿದರು.

    ಕರೊನಾ ಹಾವಳಿಯಿಂದಾಗಿ ಭಾರತ-ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿಲ್ಲ. ಆದರೆ ಚೆನ್ನೈನಲ್ಲೇ ನಡೆಯಲಿರುವ 2ನೇ ಟೆಸ್ಟ್‌ಗೆ ಶೇ. 50 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts