More

    ಜೆಡಿಎಸ್​ನಿಂದ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ

    ಗಿರೀಶ ದೇಶಪಾಂಡೆ ಹಾನಗಲ್ಲ

    ಮಾಜಿ ಸಚಿವ ಮನೋಹರ ತಹಶೀಲ್ದಾರ ಅವರನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲಿ ಜೆಡಿಎಸ್ ಅಸ್ತಿತ್ವ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದೆ.

    ಐದು ದಶಕಗಳಿಂದ ಮಾಜಿ ಸಚಿವ ಮನೋಹರ ತಹಶೀಲ್ದಾರ ಕಾಂಗ್ರೆಸ್​ನ ಶಿಸ್ತಿನ ಸಿಪಾಯಿಯಾಗಿ, ಪಕ್ಷ ಕಟ್ಟಿ ಬೆಳೆಸಿದ್ದರು. ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ಅವರನ್ನು ಪಕ್ಷದ ಹೈಕಮಾಂಡ್ ಕಡೆಗಣಿಸಿ, ಟಿಕೆಟ್ ನಿರಾಕರಿಸಿದೆ. ಇದರಿಂದಾಗಿ ಕಾಂಗ್ರೆಸ್ ತೊರೆದಿರುವ ಅವರು ಜೆಡಿಎಸ್ ಪಕ್ಷ ಅಪ್ಪಿಕೊಂಡಿದ್ದಾರೆ. ಹಾನಗಲ್ಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಚುನಾವಣೆ ಎದುರಿಸುವುದಾಗಿಯೂ ಘೊಷಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಕೆಲವೇ ಕ್ಷೇತ್ರಗಳಲ್ಲಿ ಅಸ್ತಿತ್ವ ಉಳಿಸಿಕೊಂಡಿದ್ದ ಜೆಡಿಎಸ್​ಗೆ, ಮನೋಹರ ತಹಶೀಲ್ದಾರ ಅವರ ಸೇರ್ಪಡೆಯಿಂದ ಹಾನಗಲ್ಲ ಮಾತ್ರವಲ್ಲ, ಹಾವೇರಿ ಜಿಲ್ಲೆಯ ಇತರ ಕಡೆಗೂ ತುಸು ಬಲ ಬಂದಿದೆ.

    ಹಾನಗಲ್ಲ ಕ್ಷೇತ್ರಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದ ನಿಯಾಜ್ ಶೇಖ್ ದಯನೀಯ ಸೋಲು ಕಂಡಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಇದರ ಲಾಭ ಪಡೆಯಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಮಾಜಿ ಸಚಿವ ದಿ. ಸಿ.ಎಂ. ಉದಾಸಿ ಅವರೊಂದಿಗಿನ ಸೌಹಾರ್ದ ಸಂಬಂಧದಿಂದಾಗಿ ಹಾನಗಲ್ಲ ಕ್ಷೇತ್ರದಲ್ಲಿ ಕಾಟಾಚಾರಕ್ಕೆ ಸ್ಪರ್ಧೆ ಕಂಡುಬರುತ್ತಿತ್ತು. ಇಲ್ಲಿಯವರೆಗೆ ಅಂಥ ಪ್ರಬಲ ಸ್ಪರ್ಧೆಯನ್ನೊಡ್ಡಬಲ್ಲ ಅಭ್ಯರ್ಥಿಗಳೂ ಸಿಕ್ಕಿರಲಿಲ್ಲ. ಇದೀಗ ಕಾಂಗ್ರೆಸ್​ನಿಂದ ಸಿಡಿದು ಬಂದಿರುವ ಮನೋಹರ ತಹಶೀಲ್ದಾರರ ಮೂಲಕ ಜೆಡಿಎಸ್ ತನ್ನ ಪ್ರಾಬಲ್ಯ ಸಾಬೀತುಪಡಿಸಿಕೊಳ್ಳಲು ಯತ್ನಿಸುತ್ತಿದೆ. ಅಲ್ಲದೆ, ಇನ್ನುಳಿದ ಕ್ಷೇತ್ರಗಳಲ್ಲಿಯೂ ಅನ್ಯ ಪಕ್ಷದ ಟಿಕೆಟ್ ವಂಚಿತರನ್ನು ಸೆಳೆಯುವ ನಿಟ್ಟಿನಲ್ಲಿ ಮನೋಹರ ತಹಶೀಲ್ದಾರಗೆ ಜವಾಬ್ದಾರಿ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು, ಕ್ಷೇತ್ರವನ್ನು ಮೀರಿ ಜಿಲ್ಲಾ ಮಟ್ಟದಲ್ಲಿ ತಮ್ಮದೇ ಆದ ರೀತಿಯಲ್ಲಿ ಸಂಘಟನಾತ್ಮಕ ಕೆಲಸ ಮಾಡಲು ಯೋಜನೆ ರೂಪಿಸುತ್ತಿದ್ದಾರೆ.

    ಜೆಡಿಎಸ್ ವರಿಷ್ಠರ ಭೇಟಿ: ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ ಬೆನ್ನಲ್ಲೇ ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿರುವ ಮನೋಹರ ತಹಶೀಲ್ದಾರ, ಪಕ್ಷದ ಅಭ್ಯರ್ಥಿಯಾಗುವ ಕುರಿತು ಸಹಮತ ವ್ಯಕ್ತಪಡಿಸಿದ್ದರು. ಏ. 7ರಂದು ಹಾನಗಲ್ಲಿಗೆ ಆಗಮಿಸಲಿರುವ ಪಂಚರತ್ನ ಯಾತ್ರೆ ಸಂದರ್ಭದಲ್ಲಿ ತಮ್ಮ ಬೆಂಬಲಿಗರೊಂದಿಗೆ ಪಕ್ಷ ಸೇರ್ಪಡೆಗೆ ಮುಹೂರ್ತ ನಿಗದಿ ಮಾಡಿದ್ದಾರೆ. ಅಂದು ಆಗಮಿಸುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರೆದುರು ತಮ್ಮ ಶಕ್ತಿ ಪ್ರದರ್ಶಿಸಲು ಮನೋಹರ ತಹಶೀಲ್ದಾರ ಸಿದ್ಧತೆ ಕೈಗೊಂಡಿದ್ದಾರೆ.

    ಮನೋಹರ ತಹಶೀಲ್ದಾರ ತಮ್ಮ 50 ವರ್ಷದ ರಾಜಕೀಯ ಜೀವನದಲ್ಲಿ ತಾಲೂಕಿನ ಜನತೆಯೊಂದಿಗೆ ವೈಯಕ್ತಿಕವಾದ ಬಾಂಧವ್ಯ, ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರೆ. ತಾವು ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ಬೆಂಬಲಿಗರೂ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಳ್ಳುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಮನೋಹರ ತಹಶೀಲ್ದಾರ ಸಭೆಗಳನ್ನು ನಡೆಸುತ್ತಿರುವುದು ಪ್ರಮುಖ ಬೆಳವಣಿಗೆಯಾಗಿದೆ.

    ಅಜೀಮಪೀರ್ ಖಾದ್ರಿಗೆ ಆಹ್ವಾನ

    ಶಿಗ್ಗಾಂವಿ ಮಾಜಿ ಶಾಸಕ ಅಜೀಮಪೀರ್ ಖಾದ್ರಿ ಅವರು ಮನೋಹರ ತಹಶೀಲ್ದಾರ ಅವರನ್ನು ಕಾಂಗ್ರೆಸ್ ತೊರೆಯದಂತೆ ಮನವೊಲಿಸುವ ನಿಟ್ಟಿನಲ್ಲಿ ಭೇಟಿಯಾಗಿ ರ್ಚಚಿಸಿದ್ದರು. ಆದರೆ, ಇದಕ್ಕೊಪ್ಪದ ಮನೋಹರ ತಹಶೀಲ್ದಾರ, ಕಾಂಗ್ರೆಸ್ ಹೈಕಮಾಂಡ್ ಕಳೆದ ಐದು ವರ್ಷಗಳಿಂದ ನಿಮ್ಮನ್ನೂ ನಿರ್ಲಕ್ಷಿಸಿದೆ. ನನಗಾಗಲೀ, ನಿಮಗಾಗಲೀ ಯಾವುದೇ ಸ್ಥಾನಮಾನ ನೀಡಲಿಲ್ಲ. ಮುಂದೆಯೂ ನೀಡುವುದಿಲ್ಲ. ಅದಕ್ಕಾಗಿ ನಾನು ಜೆಡಿಎಸ್ ಪಕ್ಷದತ್ತ ಮುಖ ಮಾಡಿದ್ದೇನೆ. ನೀವು ನನ್ನೊಂದಿಗೆ ಜೆಡಿಎಸ್ ಸೇರ್ಪಡೆಗೊಳ್ಳುವುದು ಉತ್ತಮ ಎಂದು ಖಾದ್ರಿ ಅವರನ್ನು ಆಹ್ವಾನಿಸಿದ್ದಾರೆ ಎನ್ನಲಾಗಿದೆ.

    ಕಾಂಗ್ರೆಸ್ ಪಕ್ಷ ಹಾವೇರಿ ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಂದೇ ಒಂದು ಅಭ್ಯರ್ಥಿಗೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಕಾಂಗ್ರೆಸ್​ನಲ್ಲಿದ್ದರೂ ಅಜೀಮಪೀರ್ ಖಾದ್ರಿಯವರಿಗೆ ಪ್ರಯೋಜನವಿಲ್ಲ. ಅವರನ್ನು ಜೆಡಿಎಸ್​ಗೆ ಕರೆತರುವ ಪ್ರಯತ್ನದಲ್ಲಿದ್ದೇನೆ. ಜಿಲ್ಲೆಯ ಇನ್ನುಳಿದ ತಾಲೂಕಿನ ಕಾಂಗ್ರೆಸ್ ಟಿಕೆಟ್ ವಂಚಿತರನ್ನೂ ಸಂರ್ಪಸುತ್ತಿದ್ದೇನೆ. ನಮ್ಮನ್ನು ನಿರ್ಲಕ್ಷಿಸಿದವರಿಗೆ ಈ ಚುನಾವಣೆ ಮೂಲಕ ವಿಭಿನ್ನ ಸಂದೇಶ ನೀಡುತ್ತೇವೆ.

    | ಮನೋಹರ ತಹಶೀಲ್ದಾರ, ಮಾಜಿ ಸಚಿವ ಹಾನಗಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts