More

    ಕಲಾವಿದರಿಗೆ ನೆರವಾಗದ ಕನಕದಾಸ ಕಲಾಭವನ

    ಬ್ಯಾಡಗಿ: ಪಟ್ಟಣದಲ್ಲಿ ಸಾಂಸ್ಕೃತಿಕ ಚಟುವಟಿಕೆ ಆಯೋಜನೆ, ವಿವಿಧ ಕಲಾಮೇಳ, ಸಭೆ, ಸಮಾರಂಭ ನಡೆಸಲು ಹಾಗೂ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ನಿರ್ವಿುಸಿದ್ದ ಕನಕದಾಸ ಕಲಾಭವನ ಮೂರು ವರ್ಷಗಳಿಂದ ಬಳಕೆಯಿಲ್ಲದೆ ಹಾಳುಬಿದ್ದಿದೆ.

    1995-96ನೇ ಸಾಲಿನಲ್ಲಿ ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರದ ಸಂಸದ ಐ.ಜಿ. ಸನದಿಯವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಬೃಹತ್ ಕಟ್ಟಡ ನಿರ್ವಿುಸಲಾಗಿತ್ತು. ನಂತರ ಪುರಸಭೆಗೆ ಆದಾಯ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಾಡಿಗೆ ನೀಡಲು ನಿರ್ಧರಿಸಿ ಪುರಸಭೆ ಮೂಲ ಆಶಯಕ್ಕೆ ಧಕ್ಕೆ ತರುವಲ್ಲಿ ಯಶಸ್ವಿಯಾಯಿತು. ಕೊನೆಗೆ ಖಾಸಗಿ ಶಾಲೆಗೆ ಈ ಕಟ್ಟಡ ನೀಡಿದ್ದನ್ನು ಪ್ರಶ್ನಿಸಿ ಮಾಜಿ ಸೈನಿಕರು ರಾಜ್ಯಪಾಲರು, ಜಿಲ್ಲಾಧಿಕಾರಿಗೆ ಪತ್ರ ಬರೆದು, ನಿಯಮ ಮೀರಿ ಪುರಸಭೆಯಿಂದ ಬಾಡಿಗೆ ನೀಡಲು ಠರಾವು ಮಾಡಲಾಗಿದೆ ಎಂದು ಆರೋಪಿಸಿದ್ದರು. ಬಳಿಕ ಕಟ್ಟಡ ಖಾಲಿ ಮಾಡಿಸಲಾಯಿತು. ಆದರೆ, ಸಾರ್ವಜನಿಕರಿಗೆ ಬಳಕೆಗೆ ನೀಡಲು ಪುರಸಭೆ ಠರಾವು ಮಾಡಲಿಲ್ಲ. ಈ ಗೊಂದಲವೇ ಹಲವು ಸಮಸ್ಯೆಗಳಿಗೆ ಕಾರಣವಾಯಿತು.

    ರಾತ್ರಿ ಹೊತ್ತಲ್ಲಿ ಕುಡುಕರ ಅಡ್ಡೆ:

    ಬ್ಯಾಡಗಿಯಿಂದ ರಟ್ಟಿಹಳ್ಳಿ ರಸ್ತೆಗೆ ಹೊಂದಿಕೊಂಡ ತಾಲೂಕು ಕ್ರೀಡಾಂಗಣದ ಬಳಿಯ ಬೃಹತ್ ಕಟ್ಟಡ ಸಾರ್ವಜನಿಕರಿಗೆ ಹೆಚ್ಚು ಅನುಕೂಲವಾಗಿದೆ. ಪಟ್ಟಣದ ಮಧ್ಯಭಾಗದಲ್ಲಿರುವ ಇದನ್ನು ಸಾರ್ವಜನಿಕ ಗ್ರಂಥಾಲಯ ಹಾಗೂ ಸಭೆ, ಸಮಾರಂಭಗಳಿಗೆ ನೀಡಲು ಸ್ಥಳೀಯರು ಆಗ್ರಹಿಸಿದ್ದರು. ಪುರಸಭೆ ಮುಖ್ಯಾಧಿಕಾರಿ ಈವರೆಗೂ ಮೌನವಹಿಸಿರುವುದು ಕಟ್ಟಡ ಚರ್ಚೆಗೆ ಇನ್ನಷ್ಟು ಪುಷ್ಟಿ ತಂದಿದೆ. ಖಾಲಿಯಿರುವ ಕಟ್ಟಡದ ಗೇಟ್ ತೆರೆಯಲಾಗಿದ್ದು, ಸಂಜೆಯಾಗುತ್ತಿದ್ದಂತೆ ಕುಡುಕರು, ಇತರೆ ಹವ್ಯಾಸಿಗಳು ಬೀಡುಬಿಡುತ್ತಾರೆ. ಪಕ್ಕದಲ್ಲಿ ಕ್ರೀಡಾಂಗಣದ ವಾಯುವಿಹಾರಕ್ಕೆ ಬಂದುಹೋಗಲು ತೊಂದರೆ ನೀಡುತ್ತಿದ್ದಾರೆ. ಸುತ್ತಲೂ ರಕ್ಷಣಾ ಗೋಡೆಯಿದ್ದು, ತೆರೆದ ಕಟ್ಟಡದಲ್ಲಿ ಏನು ನಡೆಯುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಕಾಂಪೌಂಡ್​ಗೆ ಹೊಂದಿಕೊಂಡು ಎಗ್​ರೈಸ್ ಹಾಗೂ ಇತರೆ ತಿಂಡಿತಿನಿಸುಗಳ ಗೂಡಂಗಡಿಗಳಿದ್ದು, ಜನರು ಇಲ್ಲಿಗೆ ಬರಲು ಭಯಪಡುತ್ತಿದ್ದಾರೆ. ಆವರಣದಲ್ಲಿ ಕುಳಿತುಕೊಳ್ಳಲು ಸಿಮೆಂಟ್ ಕಟ್ಟೆಗಳನ್ನು ನಿರ್ವಿುಸಿದ್ದು, ಕುಡುಕರು ಹಾಗೂ ಇತರೆ ಚಟಗಾರರಿಗೆ ಹೇಳಿಮಾಡಿಸಿದ ಜಾಗದಂತಿದೆ.

    ಪುರಸಭೆ ಕಟ್ಟಡದ ದುರಸ್ತಿ ಹಾಗೂ ಸುಣ್ಣಬಣ್ಣವನ್ನೂ ಮಾಡಿಸಿಲ್ಲ. ಕಟ್ಟಡದ ಸುತ್ತಲೂ ಗಿಡಕಂಟಿಗಳು ಬೆಳೆದು ನಿಂತಿವೆ. ಆವರಣದಲ್ಲಿ ಸಿಗರೇಟ್ ತುಣಕುಗಳು, ಕುಡುಕರ ಬಾಟಲ್, ಟೆಟ್ರಾ ಪ್ಯಾಕ್ ಹಾಗೂ ಇತರೆ ಅನೈತಿಕ ಚಟುವಟಿಕೆ ಸಾಮಗ್ರಿಗಳು ಎಲ್ಲೆಡೆ ಬಿದ್ದುಕೊಂಡಿವೆ. ಪುರಸಭೆ ಗೇಟ್​ಗೆ ಬೀಗ ಹಾಕುವುದಾಗಲಿ, ಪೊಲೀಸರಿಗೆ ದೂರು ನೀಡುವುದಾಗಲಿ, ಗೋಡೆಗೆ ಎಚ್ಚರಿಕೆ ನಾಮಫಲಕ ಹಾಕುವುದಾಗಲಿ ಯಾವುದನ್ನೂ ಮಾಡಿಲ್ಲ. ಹೀಗಾಗಿ ಕಲಾಭವನ ಪಾಳು ಬಿದ್ದ ಕಟ್ಟಡದಂತೆ ಗೋಚರಿಸುತ್ತಿದೆ.

    ಪುರಸಭೆಗೆ ಹೊರೆ

    ಕಟ್ಟಡ ಸಾರ್ವಜನಿಕರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಸುತ್ತಲೂ ರಕ್ಷಣಾ ಗೋಡೆ ಹಾಗೂ ವಿದ್ಯುತ್, ಕೊಳವೆ ಬಾವಿ ಕೊರೆಸಲಾಗಿದೆ. ಆದರೆ, ಪುರಸಭೆ ನಿರ್ಲಕ್ಷ್ಯದಿಂದ ಕಳೆದ ಮೂರು ವರ್ಷಗಳಿಂದ ದೊಡ್ಡ ಕಟ್ಟಡ ಬಳಕೆಯಾಗುತ್ತಿಲ್ಲ. ಸಾವಿರಾರು ರೂ. ವಿದ್ಯುತ್ ಬಿಲ್ ಪುರಸಭೆ ಪಾವತಿಸಿದೆ. ಅಲ್ಲದೆ, ನೀರಿನ ಸಮಸ್ಯೆ ಎಲ್ಲೆಡೆ ಉದ್ಭವಿಸಿದ್ದರೂ ಕೊಳವೆಬಾವಿ ಬಳಕೆಯಾಗುತ್ತಿಲ್ಲ. ವಿದ್ಯುತ್ ಬಿಲ್ ಕೂಡ ಹೊರೆಯಾಗಿದೆ. ಮುಖ್ಯಾಧಿಕಾರಿಗಳಿಂದ ಪುರಸಭೆ ತೆರಿಗೆ ಹಣ ದುರ್ಬಳಕೆಗೆ ಆಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

    ಕನಕದಾಸ ಕಲಾಭವನ ಹಾಳುಬಿದ್ದಿರುವುದು ಪಟ್ಟಣದ ಜನತೆಗೆ ಬೇಸರ ಮೂಡಿಸಿದೆ. ಇಂತಹ ದೊಡ್ಡ ಕಟ್ಟಡವನ್ನು ಪುರಸಭೆ ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ. ಕೂಡಲೇ ಸಾರ್ವಜನಿಕ ಗ್ರಂಥಾಲಯ ಹಾಗೂ ಸಭೆ ಸಮಾರಂಭಗಳಿಗೆ ನೀಡುವುದು ಸೂಕ್ತ. ಈಗಲಾದರೂ ಪುರಸಭೆ ಅಧಿಕಾರಿಗಳು ಕ್ರಮ ಜರುಗಿಸಲು ಮುಂದಾಗಲಿ.

    | ಶಿವಾನಂದ ಯಮನಕ್ಕನವರ, ಹಿರಿಯ ನಾಗರಿಕ

    ಕಲಾಭವನ ನಿರ್ವಹಣೆ ಕೊರತೆಯಿಂದ ಯಾರಿಗೂ ನೀಡಿಲ್ಲ. ಮೇಲಾಗಿ ಪುರಸಭೆ ಆಡಳಿತ ಮಂಡಳಿಗೆ ನಿರ್ಧರಿಸಲು ಅವಕಾಶ ಇಲ್ಲದ ಕಾರಣ ಹೊಸ ಠರಾವು ಆಗಿಲ್ಲ. ಈ ಕುರಿತು ಸಾರ್ವಜನಿಕರ ದೂರನ್ನು ಆಲಿಸಿದ್ದೇವೆ. ಶೀಘ್ರದಲ್ಲೇ ಪರಿಹಾರ ಕಂಡುಹಿಡಿದು, ದುರ್ಬಳಕೆ ಆಗದಂತೆ ಸಿಬ್ಬಂದಿಗೆ ಸೂಚಿಸುತ್ತೇನೆ. ಸರ್ಕಾರಿ ಜಾಗದಲ್ಲಿ ಅನೈತಿಕ ಚಟುವಟಿಕೆ ಕಾನೂನು ಬಾಹೀರ. ಇಂಥವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ವಹಿಸಲು ಪೊಲೀಸರಿಗೆ ತಿಳಿಸಲಾಗುವುದು.

    ವಿನಯಕುಮಾರ ಹೊಳೆಯಪ್ಪಗೋಳ, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts