More

    ಹೇರಳ ನೇರಳೆ, ಲಾಭದ ಸುರಿಮಳೆ

    ಮಂಜು ಪತ್ತಾರ ಗದಗ
    ಕೃಷಿ ಎಂದರೆ ನಷ್ಟ ಎನ್ನುವ ಮಾತು ಬಹುತೇಕರದ್ದು. ಇದಕ್ಕೆ ಅಪವಾದ ಎಂಬಂತೆ ಸಹೋದರರಿಬ್ಬರು ಮಿಶ್ರ ಬೇಸಾಯ ಹಾಗೂ ವಿವಿಧ ತೋಟಗಾರಿಕೆ ಬೆಳೆಗಳ ಮೂಲಕ ಭರ್ಜರಿ ಆದಾಯ ಗಳಿಸಿದ್ದಾರೆ.
    ಗದಗ ತಾಲೂಕಿನ ಕುರ್ತಕೋಟಿ ಗ್ರಾಮದ ಅರುಣ ಹಾಳಕೇರಿ ಹಾಗೂ ಅಶೋಕ ಹಾಳಕೇರಿ ಸಹೋದರರೇ ತೋಟಗಾರಿಕೆಯಲ್ಲಿ ಯಶಸ್ಸು ಕಂಡವರು. ಕಳೆದ ವರ್ಷದ ಲಾಕ್​ಡೌನ್ ಸಮಯದಲ್ಲಿ ನಷ್ಟ ಅನುಭವಿಸಿದ್ದ ರೈತರು ಈ ವರ್ಷ ಸ್ವಂತ ಮಾರುಕಟ್ಟೆ ಸ್ಥಾಪಿಸಿ ಹೊಲದಲ್ಲೇ ನೇರಳೆ ಹಣ್ಣುಗಳನ್ನು ಪ್ಯಾಕ್ ಮಾಡಿ ಮಾರಾಟ ಮಾಡಿದ್ದಾರೆ. ಇದರಿಂದ ಲಕ್ಷ ಲಕ್ಷ ಆದಾಯ ಗಳಿಸಿ ಸೈ ಎನಿಸಿಕೊಂಡಿದ್ದಾರೆ.
    50 ಎಕರೆ ಜಮೀನು ಹೊಂದಿರುವ ಸಹೋದರರು, ಒಣ ಬೇಸಾಯ ಮಾಡಿಕೊಂಡು ಬಂದಿದ್ದರು. ಕಳೆದ 7 ವರ್ಷಗಳ ಹಿಂದೆ ತೋಟಗಾರಿಕೆ ಇಲಾಖೆ ಸಹಾಯದಿಂದ ತೋಟಗಾರಿಕೆ ಕೃಷಿ ಆರಂಭಿಸಿದರು. 5 ಎಕರೆಯಲ್ಲಿ ಮಿಶ್ರ ಬೇಸಾಯ ಪದ್ಧತಿ ಅನುಸರಿಸಿ 80 ನೇರಳೆ ಗಿಡ, 250 ತೆಂಗು, 125 ಚಿಕ್ಕು , 25 ಹುಣಸೆಮರ , 200 ಹೆಬ್ಬೇವು , 5 ಮಾವು , 100 ಕರಿಬೇವು ಗಿಡ ಬೆಳೆಸಿದ್ದಾರೆ. ಸಾಲಿನಿಂದ ಸಾಲಿಗೆ 30 ಅಡಿ ಹಾಗೂ ಗಿಡದಿಂದ ಗಿಡಕ್ಕೆ 30 ಅಡಿ ಅಂತರದಲ್ಲಿ ತೆಂಗಿನ ಮರ ಬೆಳೆಸಿದ್ದಾರೆ. ಈ ಮರಗಳ ಮಧ್ಯೆ ನೇರಳೆ, ಚಿಕ್ಕು ಹಣ್ಣಿನ ಗಿಡ ಬೆಳೆಸಿದ್ದು, ಇದರ ಮಧ್ಯೆ ಖಾಲಿಯಿರುವ ಜಾಗದಲ್ಲಿ ಹೆಸರು, ಶೇಂಗಾ ಬೆಳೆ ಬೆಳೆಯುತ್ತಾರೆ. ಇದೀಗ ಎಲ್ಲ ಗಿಡಗಳು ಫಸಲು ನೀಡುತ್ತಿದ್ದು, ಉತ್ತಮ ಆದಾಯ ಕೈಸೇರುತ್ತಿದೆ.
    ಸಾವಯವ ಕೃಷಿ: ಸಾವಯವ ಕೃಷಿ ಪದ್ಧತಿ ಅನುಸರಿಸುವ ಸಹೋದರರು, ತೋಟಗಾರಿಕೆ ಬೆಳೆಗಳಿಗೆ ಕೊಟ್ಟಿಗೆ ಗೊಬ್ಬರ ಹಾಗೂ ಆಕಳುಗಳ ಮೂತ್ರ ಹಾಕಿ ಸಮೃದ್ಧವಾಗಿ ಗಿಡ-ಮರ ಬೆಳೆಸಿದ್ದಾರೆ. ಬೆಳೆಗೆ ರೋಗ- ರೋಜಿನ ಬಂದರೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು, ಸಾವಯವ ಪದ್ಧತಿ ಮೂಲಕ ನಿಯಂತ್ರಣ ಮಾಡುತ್ತಾರೆ. ಬೆಳೆಗಳಿಗೆ ಜಲಮೂಲವಾಗಿ ಕೊಳವೆ ಬಾವಿ ಕೊರೆಸಿದ್ದು, ಇಡೀ ಐದು ಎಕರೆ ಜಮೀನಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ.
    ನೇರ ಮಾರಾಟ: ಕಳೆದ ವರ್ಷ ನೇರಳೆ ಹಣ್ಣಿನ ಗಿಡಗಳಿಂದ 40-50 ಕ್ವಿಂಟಾಲ್​ನಷ್ಟು ಫಸಲು ಬಂದಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಉತ್ಪನ್ನ ಮಾರಾಟ ಮಾಡಲು ಸಂಕಷ್ಟ ಎದುರಾಗಿ, ಕೇವಲ 35 ಸಾವಿರ ರೂಪಾಯಿಗೆ ತೋಟ ಗುತ್ತಿಗೆ ನೀಡಿದ್ದರು. ಕಳೆದ ವರ್ಷದ ನಷ್ಟದಿಂದ ಎಚ್ಚೆತ್ತುಕೊಂಡ ಸಹೋದರರು, ಈ ಬಾರಿ 50 ರಿಂದ 60 ಕ್ವಿಂಟಾಲ್​ನಷ್ಟು ನೇರಳೆ ಹಣ್ಣುಗಳನ್ನು ನೇರ ಮಾರಾಟ ಮಾಡಿದ್ದಾರೆ. ತಮ್ಮ ತೋಟದಲ್ಲೇ ನೇರಳೆ ಹಣ್ಣುಗಳನ್ನು ಪ್ಯಾಕ್ ಮಾಡಿ, ಉಡುಪಿ, ಮಂಗಳೂರು, ಮಣಿಪಾಲದ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿದ್ದಾರೆ. ಒಂದು ಕೆಜಿ ನೇರಳೆ ಹಣ್ಣಿಗೆ ತೋಟದಲ್ಲೇ 125 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದಾರೆ. ಖರೀದಿದಾರರು ತೋಟಕ್ಕೆ ಬಂದು ಹಣ ನೀಡಿ ಹಣ್ಣು ಖರೀದಿ ಮಾಡುತ್ತಿದ್ದಾರೆ. ಈ ಬಾರಿ 80 ನೇರಳೆ ಹಣ್ಣಿನ ಗಿಡಗಳಿಂದ 5 ಲಕ್ಷ ರೂಪಾಯಿ ಆದಾಯ ಸಂಪಾದಿಸಿದ್ದಾರೆ.

    ಕಳೆದ ಬಾರಿ ನೇರಳೆ ತೋಟ ಗುತ್ತಿಗೆ ನೀಡಿದ್ದೇವು. ಆದರೆ, ಈ ಬಾರಿ ನಾವೇ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಿರುವುದರಿಂದ 5 ಲಕ್ಷ ರೂಪಾಯಿ ಆದಾಯ ಬಂದಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಮಾರಾಟ ಮಾಡಿದರೆ ಉತ್ತಮ ಲಾಭ ಬರುತ್ತದೆ.
    | ಅಶೋಕ ಹಾಳಕೇರಿ, ರೈತ
    ಅರುಣ ಹಾಗೂ ಅಶೋಕ ಸಹೋದರರು ತೋಟಗಾರಿಕೆ ಇಲಾಖೆಯ ಮಾರ್ಗದರ್ಶನಲ್ಲಿ ಐದು ಎಕರೆ ತೋಟ ಮಾಡಿದ್ದಾರೆ. ಬೋರ್​ವೆಲ್, ಹನಿ ನೀರಾವರಿ ವ್ಯವಸ್ಥೆ ಸೇರಿ ಸಸಿ ನಾಟಿ ಮಾಡುವಾಗ ಇಲಾಖೆಯಿಂದ ಸಹಾಯಧನ ಪಡೆದುಕೊಂಡಿದ್ದಾರೆ. ಕಳೆದ ಬಾರಿ ಸರಿಯಾದ ಮಾರ್ಗದರ್ಶನ ಹಾಗೂ ಲಾಕ್​ಡೌನ್​ನಿಂದ ಕಡಿಮೆ ದರಕ್ಕೆ ನೇರಳೆ ಹಣ್ಣಿನ ತೋಟವನ್ನು ಗುತ್ತಿಗೆ ನೀಡಿದ್ದರು. ಆದರೆ, ಈ ಬಾರಿ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸಿದ್ದಾರೆ.
    | ಶೈಲೇಂದ್ರ ಬಿರಾದಾರ, ಕಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts