More

    ನೇಕಾರ ಕೋಟೆಗಿಂದು ಅಮಿತ್ ಷಾ ಎಂಟ್ರಿ

    ಬಾಗಲಕೋಟೆ: ನೇಕಾರ ಕೋಟೆಗಿಂದು ಅಮಿತ್ ಷಾ ಎಂಟ್ರಿ, ಲಿಂಗಾಯತ ಮತ ಸೆಳೆಯಲು ರಾಹುಲ್ ಗಾಂಧಿ ಬಸವ ಕೂಡಲಸಂಗಮದಲ್ಲಿ ನಡೆದ ಜಯಂತಿಯಲ್ಲಿ ಭಾಗವಹಿಸಿ ಹೋದ ಬೆನ್ನಲ್ಲೇ ಜಿಲ್ಲೆಯ ನೇಕಾರ ಮತದಾರರನ್ನು ಸೆಳೆಯಲು ಕೇಂದ್ರ ಗೃಹಮಂತ್ರಿ ಪಕ್ಕಾ ಪ್ಲಾೃನ್ ಮಾಡಿಕೊಂಡೇ ಲಗ್ಗೆ ಹಾಕುತ್ತಿದ್ದಾರೆ.

    ನೇಕಾರ ಮತದಾರರೇ ನಿರ್ಣಾಯಕ ಆಗಿರುವ ತೇರದಾಳ ಕ್ಷೇತ್ರದಲ್ಲಿ ಅಮಿತ್ ಷಾ ಚುನಾವಣಾ ಪ್ರಚಾರ ಬಿಜೆಪಿಗೆ ಆನೆಬಲ ಎಂದರೂ ತಪ್ಪಿಲ್ಲ.

    ಜಿಲ್ಲೆಯ ತೇರದಾಳ, ಬಾಗಲಕೋಟೆ, ಹುನಗುಂದ, ಬಾದಾಮಿ ಕ್ಷೇತ್ರಗಳಲ್ಲಿ ನೇಕಾರ ಮತದಾರರು ಅಧಿಕವಾಗಿದ್ದಾರೆ. ಅದರಲ್ಲೂ ತೇರದಾಳ ಕ್ಷೇತ್ರದಲ್ಲಿ ಯಾರು ಗೆಲ್ಲಬೇಕು, ಯಾರು ಸೋಲಬೇಕು ಎಂದು ನಿರ್ಧಾರ ಆಗುವುದು ನೇಕಾರ ಮತದಾರರಿಂದ. ನೇಕಾರರ ಕೋಟೆಯಲ್ಲಿ ಮತ ಬೇಟೆಯಾಡಲು ಖುದ್ದು ಅಮಿತ್ ಷಾ ಬರುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

    2008ರಲ್ಲಿ ಹೊಸದಾಗಿ ರಚನೆಯಾದ ತೇರದಾಳ ಕ್ಷೇತ್ರ ಬಿಜೆಪಿ ಭದ್ರಕೋಟೆ. ಈ ಹಿಂದಿನ ಮೂರು ಚುನಾವಣೆಯಲ್ಲಿ 2 ಸಲ ಕಮಲ ಅರಳಿದೆ. ಒಮ್ಮೆ ಕೈ ಮೇಲಾಗಿದೆ. ಆದರೆ, ಈ ಸಲ ಕ್ಷೇತ್ರದ ಚುನಾವಣೆ ತುಸು ಚೇಂಜ್ ಆಗಿದೆ. ಬಿಜೆಪಿ ನೇಕಾರರಿಗೆ ಟಿಕೆಟ್ ಕೊಡಬೇಕು ಎನ್ನುವ ಕೂಗು ಜೋರಾಗಿತ್ತು. ಆದರೆ, ಬಿಜೆಪಿ ಹಾಲಿ ಶಾಸಕ ಸಿದ್ದು ಸವದಿ ಅವರಿಗೆ ಅಭ್ಯರ್ಥಿ ಎಂದು ಘೋಷಿಸಿದೆ. ಇದರಿಂದ ಬಿಜೆಪಿ ಟಿಕೆಟ್ ವಂಚಿತರ ಪೈಕಿ ಕೆಲವರು ಪಕ್ಷಕ್ಕೆ ಗುಡ್ ಬೈ ಹೇಳಿದ್ದಾರೆ. ಮತ್ತೆ ಕೆಲವರು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ವಿರೋಧಿಗಳ ಜೊತೆ ಕೈಜೋಡಿಸಿದ್ದಾರೆ.

    ಏತನ್ಮಧ್ಯೆ ಸಿದ್ದು ಸವದಿ ಸೋಲಿಸಲೆಂದು ವಿರೋಧಿ ಬಣ ಸೇರಿಕೊಂಡು ನೇಕಾರ ಸಮುದಾಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು. ಆದರೆ, ಅವರ ಮೇಲೆ ಹಿರಿಯ ಸ್ವಾಮೀಜಿ ಒಬ್ಬರ ಒತ್ತಡ ಹಾಗೂ ಸಮುದಾಯದ ಒತ್ತಡದಿಂದಾಗಿ ಸೋಮವಾರ ಕೊನೇ ಕ್ಷಣದಲ್ಲಿ ತಮ್ಮ ನಾಮಪತ್ರ ಹಿಂಪಡೆದಿದ್ದು, ಬಿಜೆಪಿಗೆ ನಿರಾಳಭಾವ ಮೂಡಿದೆ.

    ಇದೀಗ ಸ್ವತಃ ಅಮಿತ್ ಷಾ ನೇಕಾರರ ಮತಬೇಟೆಗೆ ಅಮಿತ್ ಷಾ ಆಗಮಿಸುತ್ತಿರುವುದು ಬರೀ ತೇರದಾಳ ಕ್ಷೇತ್ರ ಮಾತ್ರವಲ್ಲದೆ, ನೆರೆಹೊರೆ ಕ್ಷೇತ್ರಗಳಲ್ಲೂ ಬಿಜೆಪಿಯಲ್ಲಿ ಹೊಸ ಉತ್ಸಾಹ ಮೂಡಿಸುತ್ತಿದೆ.
    ಮೂವರು ಲಿಂಗಾಯತರು: ಕ್ಷೇತ್ರದಲ್ಲಿ ಲಿಂಗಾಯತ ರಾದಿಯಾಗಿ ಎಲ್ಲ ಸಮುದಾಯಗಳಲ್ಲೂ ನೇಕಾರಿಕೆ ವೃತ್ತಿ ಇದೆ. ಕಳೆದ ಮೂರು ಚುನಾವಣೆಯಲ್ಲಿ ಸಿದ್ದು ಸವದಿ ಹಾಗೂ ಉಮಾಶ್ರೀ ನಡುವೆಯೇ ನೇರ ಹಣಾಹಣಿ ಇರುತ್ತಿತ್ತು. ಈ ಸಲ ಕಾಂಗ್ರೆಸ್ ಪಕ್ಷ ಉಮಾಶ್ರೀ ಬದಲಿಗೆ ಸಿದ್ದು ಕೊಣ್ಣೂರ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಕಾಂಗ್ರೆಸ್ ಪಕ್ಷದಲ್ಲೂ ಬಂಡಾಯದ ಬಾವುಟ ಜೋರಾಗಿಯೇ ಹಾರಾಡುತ್ತಿದೆ. ಇದೀಗ ಅತೃಪ್ತರ ಟೀಂನಿಂದ ಡಾ.ಪದ್ಮಜೀತ್ ನಾಡಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

    ಇತ್ತ ಬಿಜೆಪಿ ಹಾಲಿ ಶಾಸಕ, ಪಂಚಮಸಾಲಿ ಸಮುದಾಯದ ಸಿದ್ದು ಸವದಿ ಅವರನ್ನು ಅಭ್ಯರ್ಥಿ ಮಾಡಿದೆ. ಕಾಂಗ್ರೆಸ್ ಸಹ ಅದೇ ಸಮಾಜದ ಸಿದ್ದು ಕೊಣ್ಣೂರ ಅವರಿಗೆ ಟಿಕೆಟ್ ನೀಡಿದೆ. ಇನ್ನು ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಪ್ರಚಾರ ಅಬ್ಬರ ನಡೆಸಿರುವ ಅರ್ಜುನ ಹಲಗಿಗೌಡರ ಸಹ ಅದೇ ಪಂಚಮಸಾಲಿ ಸಮಾಜಕ್ಕೆ ಸೇರಿದ್ದು , ಅವರು ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಹೀಗೆ ಒಂದೇ ಜಾತಿಯ ಮೂವರು ಅಭ್ಯರ್ಥಿಗಳು ಇದ್ದು, ಹಿರಿತನ, ಅನುಭವ, ಚುನಾವಣೆ ಪಟ್ಟಿನಲ್ಲಿ ಸಿದ್ದು ಸವದಿ ಮೇಲುಗೈ ಸಾಧಿಸುತ್ತಾರೆ. ಆದರೆ, ಪಕ್ಷದಲ್ಲಿನ ಆಂತರಿಕ ಸಂಘರ್ಷ ಸ್ವಲ್ಪಮಟ್ಟಿಗೆ ಅಪಾಯ ತಂದೊಡ್ಡಬಹುದು.

    ಇದೀಗ ಅದೆಲ್ಲವನ್ನು ಮರೆಸಿ, ಬಿಜೆಪಿಗೆ ಬಹುಸಂಖ್ಯೆಯ ಸಾಂಪ್ರದಾಯಿಕ ಮತದಾರರಾಗಿರುವ ನೇಕಾರರನ್ನು ಅತ್ತಿತ್ತ ವಾಲದಂತೆ ಕಮಲ ಪಕ್ಷದೊಳಗೆ ಮತ್ತಷ್ಟು ಭದ್ರಗೊಳಿಸಲು ಅಮಿತ್ ಷಾ ಭೇಟಿ ಯಶಸ್ವಿಯಾಗುತ್ತಾ ಎನ್ನುವುದು ಈಗ ಎದ್ದಿರುವ ಪ್ರಶ್ನೆ.
    ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವ ಅಮಿತ್ ಷಾ : ಇಂದು ತೇರದಾಳ ಕ್ಷೇತ್ರದ ರಬಕವಿಗೆ ಆಗಮಿಸಲಿರುವ ಅಮಿತ್ ಷಾ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸಿದ್ದು ಸವದಿ ಪರವಾಗಿ ಮತಯಾಚನೆ ನಡೆಸಲಿದ್ದಾರೆ.

    ಹುಬ್ಬಳ್ಳಿಯಿಂದ 10.15ಕ್ಕೆ ಹೆಲಿಕಾಪ್ಟರ್ ಮೂಲಕ ರಬಕವಿಯಲ್ಲಿ ನಿರ್ಮಾಣ ಮಾಡಿರುವ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಆಗಮಿಸುವರು. ಅಲ್ಲಿಂದ ಜೈನ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ರಬಕವಿ ಪಟ್ಟಣದ ಎಂ.ವಿ.ಪಟ್ಟಣ ಶಾಲೆಯ ಕ್ರೀಡಾಂಗಣ ವೇದಿಕೆಗೆ ಆಗಮಿಸಿ 11 ರಿಂದ 12 ಗಂಟೆಯವರೆಗೆ ಇರಲಿದ್ದಾರೆ. ಈ ವೇಳೆ ಬಿಜೆಪಿ ಅಭ್ಯರ್ಥಿ ಪರವಾಗಿ ಚುನಾವಣೆ ಭಾಷಣ ಮಾಡಲಿದ್ದಾರೆ. ಕೇಂದ್ರ ಗೃಹ ಸಚಿವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಲಿಪ್ಯಾಡ್, ಮಂದಿರ, ಸಭೆ ನಡೆಯುವ ಸ್ಥಳಗಳಲ್ಲಿ ಬಂದೋಬಸ್ತ್ ಕಲ್ಪಿಸಲಾಗಿದ್ದು, ಎಸ್ಪಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts