More

    ಕ್ರೈಸ್ತ ಮನೆಯಂಗಳದಲ್ಲಿ ಸರ್ವಧರ್ಮೀಯರ ಸಮ್ಮಿಲನ

    ಮಜಿಕಟ್ಟ ಕ್ರೈಸ್ತ ಮನೆಯಂಗಳದಲ್ಲಿ ಸರ್ವಧರ್ಮೀಯರ ಸಮ್ಮಿಲನ ನಡೆದಿದ್ದು, ಈ ಬಗ್ಗೆ ವಿಸ್ತ್ರತ ವರದಿ ಇಲ್ಲಿದೆ.

    ವಿಜಯವಾಣಿ ಸುದ್ದಿಜಾಲ ಉಳ್ಳಾಲ

    ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆ ಕಾಡಿದಾಗ ತುರ್ತಾಗಿ ಬೇಕಾದ ಆಂಬುಲೆನ್ಸ್ ಕೊಡುಗೆಯಾಗಿ ನೀಡಿದ ಕ್ರೈಸ್ತ ಕುಟುಂಬ, ಸೌಹಾರ್ದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇನೋಳಿ ಮಜಿಕಟ್ಟದಲ್ಲಿ ಬುಧವಾರ ಸಾಯಂಕಾಲ ಆಯೋಜಿಸಿದ ಇಫ್ತಾರ್ ಕೂಟದಲ್ಲಿ ಸರ್ವ ಧರ್ಮೀಯರ ಸಮ್ಮಿಲನಕ್ಕೆ ಸಾಕ್ಷಿಯಾಯಿತು.

    ಪಾವೂರು ಗ್ರಾಮ ಪಂಚಾಯಿತಿಯ ಹಿರಿಯ ಸದಸ್ಯೆಯಾಗಿದ್ದ ರುಫಿನ್ ಲೂವಿಸ್ ಪಂಚಾಯಿತಿಗೆ ಆಯ್ಕೆಯಾದ ಎರಡು ವರ್ಷಗಳಲ್ಲೇ ಮೃತಪಟ್ಟಿದ್ದರು. ಅವರ ಸ್ಮರಣಾರ್ಥ ಪುತ್ರರಾದ ವಲೇರಿಯನ್ ಡಿಸೋಜ ಮತ್ತು ರೊನಾಲ್ಡ್ ಡಿಸೋಜ ಹಾಗೂ ಕುಟುಂಬಸ್ಥರು ಮದರ್ ಗ್ರೂಪ್ ಮಜಿಕಟ್ಟ ಇನೋಳಿ ಹೆಸರಲ್ಲಿ ಗ್ರಾಮಸ್ಥರ ಆರೋಗ್ಯ ಕಾಳಜಿಯ ನಿಟ್ಟಿನಲ್ಲಿ ಆಂಬುಲೆನ್ಸ್ ಕೊಡುಗೆ ನೀಡಿದ್ದಾರೆ. ಈ ಕಾರ್ಯಕ್ರಮ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದು, ಸರ್ವಧರ್ಮೀಯರು ಭಾಗವಹಿಸಿ ಗ್ರಾಮದಲ್ಲಿ ಸೌಹಾರ್ದ ಬಲಗೊಳಿಸಿದರು.

    ಕ್ರೈಸ್ತ ಮನೆಯಂಗಳದಲ್ಲಿ ಸರ್ವಧರ್ಮೀಯರ ಸಮ್ಮಿಲನ

    ಫಾದರ್ ಮುಲ್ಲರ್ ಸಂಸ್ಥೆಯ ಆಡಳಿತಾಧಿಕಾರಿ ಫಾ.ರೋಶನ್ ಕ್ರಾಸ್ತಾ ಉದ್ಘಾಟಿಸಿದರು. ಮದರ್ ಗ್ರೂಪ್ ನಿರ್ದೇಶಕ ವಲೇರಿಯನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಪಜೀರ್ ಚರ್ಚ್ ಧರ್ಮಗುರು ಅನಿಲ್ ಜೋಯಲ್ ಡಿಸೋಜ ಆಶೀರ್ವಚನ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀಮೋಹನ್ ಚೂಂತಾರು, ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಯೇನೆಪೊಯ ಆಸ್ಪತ್ರೆಯ ಮಾರುಕಟ್ಟೆ ವಿಭಾಗ ಮುಖ್ಯಸ್ಥ ವಿಜಯಾನಂದ, ಸಮುದಾಯ ವಿಭಾಗದ ಅಬ್ದುಲ್ ರಜಾಕ್, ಇನೋಳಿ ಜಾಮಿಯಾ ಮುಬಾರಕ್ ಮಸೀದಿಯ ಮುಖ್ಯಗುರು ಅಝೀಝ್ ಹಿಶಾಮಿ, ಕೆಥೊಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಸ್ಟ್ಯಾನಿ ಲೋಬೋ, ಮಲಾರ್ ಹೆಲ್ಪ್‌ಲೈನ್ ಅಧ್ಯಕ್ಷ ಕಬೀರ್ ಮಲಾರ್, ಮಲಾರ್ ಅಲ್-ಮುಬಾರಕ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ, ಹಿರಿಯ ಪತ್ರಕರ್ತರಾದ ಗುರುವಪ್ಪ ಬಾಳೆಪುಣಿ, ಪಾವೂರು ಗ್ರಾಪಂ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್, ಮಾಜಿ ಅಧ್ಯಕ್ಷ ಎಂ.ಟಿ.ಫಿರೋಝ್, ಸದಸ್ಯ ಮಜೀದ್ ಸಾತ್ಕೋ, ಮಾಜಿ ಸದಸ್ಯರಾದ ವಿವೇಕ್ ರೈ, ಮಹಮ್ಮದ್ ಮಲಾರ್, ಇನೋಳಿ ಮಸೀದಿ ಕಾರ್ಯದರ್ಶಿ ಟಿ.ಎಚ್.ಅಬ್ಬಾಸ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾಪ್ರತಿನಿಧಿಗಳಾದ ನೌಷಾದ್ ಕೊಣಾಜೆ, ಚಿತ್ತರಂಜನ್ ಪಾವೂರು, ಬೋಳಿಯಾರ್ ಗ್ರಾಪಂ ಮಾಜಿ ಸದಸ್ಯ ವಿನ್ಸೆಂಟ್ ಡಿಸೋಜ, ಮದರ್ ಗ್ರೂಪ್ ನಿರ್ದೇಶಕ ರೊನಾಲ್ಡ್ ಡಿಸೋಜ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

    ಪ್ರೇರಣೆ ನೀಡಿದ ಕೃತಿ ಬಿಡುಗಡೆ

    ರುಫಿನ್ ಲೂವೀಸ್ ಅವರು ತಮ್ಮ ಜೀವಿತಾವಧಿಯಲ್ಲಿ ಸಮಾಜಸೇವೆಯಲ್ಲಿ ಮುಂಚೂಣಿಯಲ್ಲಿದ್ದರು. ಪಜೀರ್ ಗ್ರಾಮದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾದಾಗ ಪುತ್ರ ರೊನಾಲ್ಡ್ ಡಿಸೋಜ ಅವರ ಮನೆಯ ಕೊಳವೆಬಾವಿಯಿಂದ ಮೂರು ವರ್ಷ ನೀರು ಪೂರೈಸಿದ್ದರು. ಅವರ ಜನಪರ ಕಾಳಜಿ ಮುಂದುವರಿಸಲು ಮುಂದಾದ ಪುತ್ರರು, ಫೆಬ್ರವರಿ 26ರಂದು ‘ನಮ್ಮ ಪಾವೂರು’ ಕೃತಿ ಬಿಡುಗಡೆ ಹಾಗೂ ಲೀಗ್ ಹಂತದ ವಾಲಿಬಾಲ್ ಟೂರ್ನಿ ಮದರ್ ಗ್ರೂಪ್ ಸಂಘಟಿಸಿದ್ದರು. ಈ ಕಾರ್ಯಕ್ರಮದಲ್ಲೇ ಗ್ರಾಮಸ್ಥರ ಸೇವೆಗೆ ಆಂಬುಲೆನ್ಸ್ ನೀಡುವುದಾಗಿ ಘೋಷಿಸಿದ್ದರು.

    ಅಪಘಾತ, ಅನಾರೋಗ್ಯ ಸಂದರ್ಭ ತುರ್ತಾಗಿ ಆಂಬುಲೆನ್ಸ್ ಸಿಗದಿದ್ದರೆ ಜೀವ ಹೋಗುವ ಅಪಾಯ ಇರುತ್ತದೆ. ಕೋವಿಡ್ ಸಂದರ್ಭ ಇಂಥ ಪರಿಸ್ಥಿತಿ ಎದುರಾಗಿತ್ತು. ಅದರಲ್ಲೂ ಗ್ರಾಮೀಣ ಭಾಗದಲ್ಲಿ ತಾಯಿ ಹೆಸರಿನಲ್ಲಿ ಆಂಬುಲೆನ್ಸ್ ಸೇವೆ ಪ್ರತಿಯೊಬ್ಬರಿಗೂ ಮಾದರಿ.
    – ರೋಶನ್ ಕ್ರಾಸ್ತ ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಸಂಸ್ಥೆ

    ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದ್ದು, ಈಗಿನ ಕಾಲದಲ್ಲಿ ಆರೋಗ್ಯವಂತರು ಸಿಗುವುದು ವಿರಳ. ಕೇವಲ ವೈದ್ಯರು ಕೊಡುವ ಮದ್ದಿನಿಂದ ಆರೋಗ್ಯ ಕಾಪಾಡಲು ಅಸಾಧ್ಯ, ತಾಯಿ ದೇವರ ಸ್ವರೂಪವಾಗಿದ್ದು, ಅವರ ನೆನಪಿಗಾಗಿ ನೀಡುವ ಸೇವೆಗಿಂತ ಇನ್ನೊಂದು ಸೇವೆಯಿಲ್ಲ.
    – ಡಾ.ಮುರಲೀ ಮೋಹನ್ ಚೂಂತಾರು ಜಿಲ್ಲಾ ಸಮಾದೇಷ್ಟ, ಗೃಹರಕ್ಷಕ ದಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts