More

    ಸರ್ವರೋಗಗಳಿಗೂ ಅಂಬಲಿಯೇ ಮದ್ದು !

    ಬಾಗಲಕೋಟೆ: ಇದನ್ನು ಜನಮರಳೋ ಜಾತ್ರೆ ಮರಳೋ ಎನ್ನಬೇಕೋ ಗೊತ್ತಿಲ್ಲ. ಆದರೆ, ಸರ್ವರೋಗಗಳಿಗೆ ಈ ಕ್ಷೇತ್ರದಲ್ಲಿ ಅಂಬಲಿಯೇ ಮದ್ದು ! ಹೀಗಾಗಿ ಅಂಬಲಿ ಪಡೆಯಲು ವಿವಿಧ ಕಾಯಿಲೆಗಳಿಂದ ಬಳಲುವ ಜನರು, ಬೇರೆ ಬೇರೆ ಹರಕೆ ಹೊತ್ತ ಭಕ್ತರು ಸಾಗರೋಪಾದಿಯಲ್ಲಿ ಇಲ್ಲಿ ಹರಿದು ಬರುತ್ತಾರೆ.

    ಹೌದು, ಇದು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುರಗಿರಿ ಬೆಟ್ಟದಲ್ಲಿ ಪ್ರತಿ ಶುಕ್ರವಾರ ನಡೆಯುವ ಜನಜಾತ್ರೆಗೆ ಸಾಕ್ಷಿ ಆಗಿರುವಂತದ್ದು. ಇದು ತಾಯಿ ಭುವನೇಶ್ವರಿ ದೇವಿ ನೆಲೆಸಿದ್ದು, ಆಕೆಯ ಮಹಿಮೆಯಿಂದಲೇ ಪ್ರಸಾದ ರೂಪವಾಗಿ ಕೊಡುವ ಅಂಬಲಿ ತಮ್ಮೆಲ್ಲ ಕಾಯಿಲೆಗಳನ್ನು ವಾಸಿ ಮಾಡುತ್ತದೆ. ಹಾಗೆಯೇ ನಮ್ಮ ಹರಕೆಗಳು ಈಡೇರುತ್ತವೆ ಎನ್ನುವ ನಂಬಿಕೆ ಜನರಲ್ಲಿ ಮನೆ ಮಾಡಿದೆ. ಹೀಗಾಗಿ ಲಕ್ಷಾಂತರ ಜನರು ಅಂಬಲಿ ಪ್ರಸಾದಕ್ಕಾಗಿ ಮುಗಿಬೀಳುತ್ತಾರೆ.

    ಶುಕ್ರವಾರ ಮಾತ್ರ ಅಂಬಲಿ ಪ್ರಸಾದ

    ಬೀಳಗಿ ತಾಲೂಕಿನ ಕುಂದರಗಿ ಗ್ರಾಮದ ಹತ್ತಿರ ಬರುವ ಈ ಸುರಗಿರಿ ಬೆಟ್ಟದಲ್ಲಿ ಇರುವ ಭುವನೇಶ್ವರಿ ದೇವಸ್ಥಾನದಲ್ಲಿ ಪ್ರತಿ ಶುಕ್ರವಾರ ಅಂಬಲಿ ಪ್ರಸಾದ ಕೊಡಲಾಗುತ್ತಿದೆ. 2019ರಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಲಾಗಿದೆ. ಅದಕ್ಕೂ ಮೊದಲು ಬೆಟ್ಟದ ಒಂದು ಭಾಗದಲ್ಲಿ ಭುವನೇಶ್ವರಿ ನೆಲೆಸಿದ್ದಳು ಎನ್ನುವ ನಂಬಿಕೆ. ಆ ತಾಯಿಯ ಅನುಗ್ರಹದಂತೆ ಹೊಸದಾಗಿ ದೇವಾಲಯ ಕಟ್ಟಿ ಅಲ್ಲಿ ಭುವನೇಶ್ವರಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಅಂಬಲಿ ಕೊಡುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ. ಆದರೆ, ಕಳೆದ ವರ್ಷದ ದೀಪಾವಳಿ ಹಬ್ಬದ ಬಳಿಕ ದಿಢೀರನೇ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮೊದಲೆಲ್ಲ ಪ್ರತಿ ಶುಕ್ರವಾರ ಎರಡು, ಮೂರು ಸಾವಿರದಲ್ಲಿ ಇರುತ್ತಿದ್ದ ಭಕ್ತರು ಕಳೆದ ಮೂರ‌್ನಾಲ್ಕು ತಿಂಗಳಿಂದ ಪ್ರತಿ ಶುಕ್ರವಾರ ಹೆಚ್ಚು ಕಡಿಮೆ ಒಂದು ಲಕ್ಷದಷ್ಟು ಜನರು ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿ ಶುಕ್ರವಾರ ಮಾತ್ರ ಅಂಬಲಿ ಪ್ರಸಾದ ಕೊಡಲಾಗುತ್ತಿದೆ. ಹೀಗಾಗಿ ಅದೇ ದಿನ ಭಕ್ತ ಸಾಗರ ಬರುತ್ತದೆ. ಈಗೀಗ ಜಿಲ್ಲೆ, ಹೊರಜಿಲ್ಲೆಗಳ ಜೊತೆ ಮಹಾರಾಷ್ಟ್ರದಿಂದಲೂ ಭಕ್ತರು ಬರತೊಡಗಿದ್ದಾರೆ. ಯಾವುದೇ ಪ್ರಚಾರ ಇಲ್ಲದೆ ಬಾಯಿಂದ ಬಾಯಿಗೆ ಹರಡಿ ಸಾಗರೋಪಾದಿಯಲ್ಲಿ ಜನರು ಬರಲು ಆರಂಭಿಸಿದ್ದಾರೆ. ಬಂದವರೆಲ್ಲ ಇಲ್ಲಿಗೆ ಬಂದ ಮೇಲೆ, ಅಂಬಲಿ ಪ್ರಸಾದ ಪಡೆದ ಮೇಲೆ ತಮಗೆ ಒಳ್ಳೆಯದಾಗುತ್ತಿದೆ ಎನ್ನುವ ಧ್ವನಿಯನ್ನು ಸೇರಿಸುತ್ತಾರೆ.

    ಧಾನ್ಯಗಳ ರಾಶಿ

    ಭಕ್ತರಿಗೆ ಅಂಬಲಿ ಪ್ರಸಾದ ಕೊಡಲು ಇಲ್ಲಿ ಯಾವುದೇ ಕಾಣಿಕೆ ಪಡೆಯುವುದಿಲ್ಲ. ಪೂಜೆಗೆಂದು ಭಕ್ತರು ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ ಹೀಗೆ ಅರ್ಧ ಕೆಜಿ, ಒಂದು ಕೆಜಿ ಕೆಲವರು ಹೆಚ್ಚಿನ ಪ್ರಮಾಣದಲ್ಲಿ ದೇವಸ್ಥಾನಕ್ಕೆ ಸಲ್ಲಿಸಿ ಹೋಗುತ್ತಾರೆ. ಅದರಿಂದಲೇ ಅಲ್ಲಿ ಉಚಿತ ಪ್ರಸಾದ ಸೇವೆ ನಡೆಯುತ್ತಿದೆ. ಈಗ ಭಕ್ತರ ಸಂಖ್ಯೆ ಜಾಸ್ತಿ ಆಗಿದ್ದರಿಂದ ಪ್ರತಿ ಶುಕ್ರವಾರ 35 ರಿಂದ 40 ಕ್ವಿಂಟಾಲ್ ಅನ್ನ, ಸಾಂಬರ್ ಅನ್ನಸಂತರ್ಪಣೆ ಮಾಡಲಾಗುತ್ತದೆ. ಪ್ರತಿವಾರ ಅದೇ ಪ್ರಮಾಣದಲ್ಲಿ ದಿನಸಿ ವಸ್ತು, ಹಣ ಸಂಗ್ರಹವಾಗುತ್ತದೆ. ಅಂಬಲಿಯಿಂದ ತಮ್ಮ ಇಷ್ಟಾರ್ಥ ಈಡೇರುತ್ತದೆ, ಕಾಯಿಲೆ ವಾಸಿ ಆಗುತ್ತದೆ ಎಂದು ಬಂದವರು ಹೇಳುತ್ತಾರೆ ಅಷ್ಟೆ ಎನ್ನುತ್ತಾರೆ ದೇವಸ್ಥಾನದ ಧರ್ಮದರ್ಶಿ ಲಕ್ಷ್ಮಣ ಶರಣರು.

    ದೀಪಾವಳಿಯಲ್ಲಿ ಅಂಬಾರಿ ಉತ್ಸವ

    ದೀಪಾವಳಿ ಸಂದರ್ಭದಲ್ಲಿ ಇಲ್ಲಿ ಅಂಬಾರಿ ಉತ್ಸವ ಮಾಡಲಾಗುತ್ತದೆ. ಕಟ್ಟಿಗೆಯಿಂದ ಅಂಬಾರಿ ನಿರ್ಮಾಣ ಮಾಡಿಸಿದ್ದು, ಆನೆಯ ಮೇಲೆ ಅಂಬಾರಿ ಇಟ್ಟು ಅದರಲ್ಲಿ ಭುವನೇಶ್ವರಿ ಉತ್ಸವ ಮೂರ್ತಿಯನ್ನು ಇಟ್ಟು ಸಕಲ ವಾದ್ಯವೈಭವಗಳ ಜತೆ ಅದ್ದೂರಿ ಉತ್ಸವ ಆಚರಣೆ ಮಾಡಲಾಗುತ್ತಿದೆ. ಕಳೆದ ವರ್ಷ ಅಂಬಾರಿ ಉತ್ಸವ ಆದ ಬಳಿಕ ಕ್ಷೇತ್ರದ ಮಹಿಮೆ ಎಲ್ಲೆಡೆ ವ್ಯಾಪಿಸಿ, ಜನಸಾಗರ ಹರಿದು ಬರುತ್ತಿದೆ.

    ಮುದಕಣ್ಣವರ ಮನೆಯಿಂದ ಅಂಬಲಿ

    ಸುರಗಿರಿ ಬೆಟ್ಟದಲ್ಲಿ ಕೊಡುವ ಅಂಬಲಿಯನ್ನು ಸಿದ್ಧಪಡಿಸುವುದು ಮುದಕಣ್ಣವರ ಕುಟುಂಬದವರು. ಇವರು ಪ್ರತಿ ಗುರುವಾರ ಸಂಜೆ ನದಿಗೆ ಹೋಗಿ ಸ್ನಾನ ಮಾಡಿ ಮಡಿಯಿಂದ ನೀರು ತರುತ್ತಾರೆ. ಆ ನೀರಿನಲ್ಲೆ ಶುಕ್ರವಾರ ನಸುಕಿನ ಜಾವ ಪೂಜೆ ಗಡಿಗೆಗೆ ಹಾಕಿ ಅಂಬಲಿ ತಯಾರಿಸಿ ದೇವಸ್ಥಾನಕ್ಕೆ ತಂದು ದೇವಿಮೂರ್ತಿಯ ಮುಂದಿಟ್ಟು ಲಕ್ಷ್ಮಣ ಶರಣರು ಪೂಜೆ ಮಾಡಿ ಕೊಡುತ್ತಾರೆ. ಅಲ್ಲಿಂದ ಭಕ್ತರಿಗೆ ಅಂಬಲಿ ವಿತರಣೆ ಮಾಡಲಾಗುತ್ತಿದೆ.

    ನೂತನ ದೇವಾಲಯವನ್ನು ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಲೋಕಾರ್ಪಣೆ ಮಾಡಿದ್ದರು. ನಂತರದ ದಿನಗಳಲ್ಲಿ ಕೊಪ್ಪಳದ ಗವಿಸಿದ್ಧೇಶ್ವರ ಮಠದ ಶ್ರೀಗಳು ಇಲ್ಲಿನ ಶಿಲಾಶಾಸನ ಉದ್ಘಾಟಿಸಿದ್ದಾರೆ. ಇಲ್ಲಿ ದೇವರಿಗೆ ಕೊಡುವುದು ಏನೂ ಇಲ್ಲ. ಭಕ್ತಿಯನ್ನು ತರುತ್ತಾರೆ. ಅವರ ನಂಬಿಕೆ ಇಲ್ಲಿ ಕೆಲಸ ಮಾಡುತ್ತಿದೆ. ಇದಕ್ಕೆ ತಾಯಿಯ ಆಶೀರ್ವಾದ ಇರುತ್ತದೆ.
    ಲಕ್ಷ್ಮಣ ಶರಣರು ಧರ್ಮದರ್ಶಿಗಳು, ಸುರಗಿರಿ ಬೆಟ್ಟ ಭುವನೇಶ್ವರಿ ದೇವಾಲಯ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts