More

    ಮೋದಿ ಸರ್ಕಾರದಲ್ಲಿ ಮಿತ್ರಪಕ್ಷಗಳ ಸಂಖ್ಯೆ ಇಳಿಕೆ!: ಅಠವಳೆ ಬಿಟ್ಟು ಉಳಿದೆಲ್ಲ ಸಚಿವರು ಬಿಜೆಪಿಯವರು

    ನವದೆಹಲಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎನ್​ಡಿಎ)ದಲ್ಲಿ ಮಿತ್ರಪಕ್ಷಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್​ಪಿಐ) ರಾಮದಾಸ್ ಅಠಾವಳೆ ಹೊರತಾಗಿ ಉಳಿದೆಲ್ಲ ಸಚಿವರೂ ಬಿಜೆಪಿಯವರಾಗಿದ್ದಾರೆ.

    ಲೋಕ ಜನತಾಂತ್ರಿಕ ಪಕ್ಷ (ಎಲ್​ಜೆಪಿ) ಸಂಸ್ಥಾಪಕ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮೂರು ದಿನಗಳ ಹಿಂದೆ ನಿಧನರಾಗಿದ್ದಾರೆ. ಈಗ ಅಠಾವಳೆ ಬಿಟ್ಟರೆ ಎನ್​ಡಿಎ ಕೂಟದ ಯಾವುದೇ ಅಂಗ ಪಕ್ಷ ಕೇಂದ್ರ ಸರ್ಕಾರದಲ್ಲಿ ಪ್ರಾತಿನಿಧ್ಯ ಹೊಂದಿಲ್ಲ. ವಿವಿಧ ಕಾರಣಗಳಿಗಾಗಿ ಒಂದೊಂದೇ ಪಕ್ಷ ಮುನಿಸಿಕೊಂಡು ದೂರ ಸರಿಯುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

    2019ರಲ್ಲಿ ನಡೆದ ಲೋಕಸಭೆ ಚುನಾವಣೆಗಳಲ್ಲಿ ಭಾರಿ ಬಹುಮತದಿಂದ ಎನ್​ಡಿಎ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿತ್ತು. ಮೇ 30ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಹಿತ 57 ಸಚಿವರು ಅಧಿಕಾರದ ಸ್ವೀಕರಿಸಿದ್ದರು. ಅವರಲ್ಲಿ 24 ಸಂಪುಟ ದರ್ಜೆ ಸಚಿವರು, ಸ್ವತಂತ್ರ ಹೊಣೆಯ ಒಂಬತ್ತು ರಾಜ್ಯ ಸಚಿವರು ಹಾಗೂ 24 ಸಹಾಯಕ ಸಚಿವರಿದ್ದರು. ಸಂಪುಟದಲ್ಲಿದ್ದ ಶಿವಸೇನೆಯ ಅರವಿಂದ್ ಸಾವಂತ್, ಶಿರೋಮಣಿ ಅಕಾಲಿ ದಳದ (ಎಸ್​ಎಡಿ) ಹರ್​ಸಿಮ್ರತ್ ಕೌರ್ ಮತ್ತು ಎಲ್​ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಎನ್​ಡಿಎ ಕೂಟದ ಮಿತ್ರ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದರು.

    ಸಾವಂತ್, ಹರ್​ಸಿಮ್ರತ್ ರಾಜೀನಾಮೆ ಹಾಗೂ ಪಾಸ್ವಾನ್ ನಿಧನದಿಂದಾಗಿ ಈಗ 21 ಸಂಪುಟ ಸಚಿವರಿದ್ದಾರೆ. ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿಯವರ ನಿಧನದಿಂದಾಗಿ ರಾಜ್ಯ ಸಚಿವರ ಸಂಖ್ಯೆ ಕೂಡ 23ಕ್ಕೆ ಇಳಿದಿದೆ. ಮಹಾರಾಷ್ಟ್ರದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ, ಶಿವಸೇನೆ 2019ರ ಕೊನೆಯಲ್ಲಿ ಎನ್​ಡಿಎ ಸಖ್ಯ ತೊರೆದಿತ್ತು. ಹೊಸ ಕೃಷಿ ಕಾನೂನು ವಿರೋಧಿಸಿ ಅಕಾಲಿ ದಳ ಇತ್ತೀಚೆಗೆ ಕೂಟದಿಂದ ಹೊರ ಬಂದಿದೆ.

    ಜೆಡಿಯು ಸಚಿವರಿಲ್ಲ
    ಸಂಯುಕ್ತ ಜನತಾ ದಳ (ಜೆಡಿಯು), ಎನ್​ಡಿಎ ಸದಸ್ಯ ಪಕ್ಷವಾದರೂ ಕೇಂದ್ರದಲ್ಲಿ ಈ ಪಕ್ಷದ ಯಾವುದೇ ಸಚಿವರಿಲ್ಲ. ಸರ್ಕಾರಕ್ಕೆ ಬೆಂಬಲವಿದ್ದರೂ, ಅದರಲ್ಲಿ ನೇರವಾಗಿ ಭಾಗವಹಿಸುವುದಿಲ್ಲ ಎಂಬ ನಿಲವನ್ನು ಪಕ್ಷ ಹೊಂದಿದೆ. ಹೀಗಾಗಿ ಜೆಡಿಯು ಸರ್ಕಾರದ ಭಾಗವಾಗಿಲ್ಲ.

    ಸಾಂವಿಧಾನಿಕ ನಿಯಮವೇನು?
    ಪ್ರಧಾನಿ ಸಹಿತ ಕೇಂದ್ರ ಸಚಿವರ ಸಂಖ್ಯೆ, ಲೋಕಸಭೆಯ ಒಟ್ಟು ಸದಸ್ಯರ ಶೇಕಡ 15 ಮೀರುವಂತಿಲ್ಲ ಎನ್ನುವುದು ಸಂವಿಧಾನದ ನಿಯಮವಾಗಿದೆ. 543 ಲೋಕಸಭೆ ಸದಸ್ಯರಿರುವುದರಿಂದ ಕೇಂದ್ರ ಸಂಪುಟ 80 ಸಚಿವರನ್ನು ಹೊಂದಿರಬಹುದಾಗಿದೆ.

    ಮೈತ್ರಿಕೂಟ ಧರ್ಮ ಪಾಲನೆ
    ಕಳೆದ ಚುನಾವಣೆಯಲ್ಲಿ ಬಿಜೆಪಿಯೊಂದೇ 303 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಸ್ವತಂತ್ರವಾಗಿಯೇ ಸರ್ಕಾರ ರಚಿಸುವ ಸಾಮರ್ಥ್ಯ ಹೊಂದಿತ್ತು. ಆದರೆ ಮೈತ್ರಿಕೂಟ ಧರ್ಮ ಪಾಲನೆಗಾಗಿ ಮಿತ್ರಪಕ್ಷಗಳಿಗೂ ಸಂಪುಟದಲ್ಲಿ ಅವಕಾಶ ಕಲ್ಪಿಸಿತ್ತು. ಸಣ್ಣಪುಟ್ಟ ಹಾಗೂ ಪ್ರಾದೇಶಿಕ ಪಕ್ಷಗಳ ಸಹಿತ ಈಗ ಸುಮಾರು 30 ಪಕ್ಷಗಳು ಎನ್​ಡಿಎಯಲ್ಲಿವೆ.

    ದಸರಾ ಉದ್ಘಾಟನೆಗೆ ಜನ ಏಕೆ ಬೇಕು? ಜಂಬೂಸವಾರಿಗೆ ಮಾವುತರಿದ್ದರೆ ಸಾಕು: ಎಸ್.ಎಲ್. ಭೈರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts