More

    ಅಕ್ಕ-ತಂಗಿ ಆತ್ಮಹತ್ಯೆ ಪ್ರಕರಣದಲ್ಲಿ ಕೇಳಿಬಂತು ಯುವಕನ ಹೆಸರು: ಬೆಂಬಿಡದೆ ಕಾಟ ಕೊಟ್ಟನಾ ಆರೋಪಿ?

    ಕಲಬುರಗಿ: ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಅಕ್ಕ-ತಂಗಿ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಹಿಂದೆ ಯುವಕನೊಬ್ಬನ ಹೆಸರು ಕೇಳಿಬಂದಿದೆ.

    ಗ್ರಾಮದ ವಿಶ್ವನಾಥ ಸುತಾರ ಎಂಬುವರ ಪುತ್ರಿಯರಾದ ಐಶ್ವರ್ಯ ಸುತಾರ(20) ಹಾಗೂ ಸಾರಿಕಾ ಸುತಾರ(17) ಮಂಗಳವಾರ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಶ್ವರ್ಯ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿಯಾಗಿದ್ದಳು. ಸಾರಿಕಾ ಪಿಯುಸಿಗೆ ಪ್ರವೇಶ ಪಡೆದಿದ್ದಳು. ‌ಲಾಕ್​ಡೌನ್​ನಿಂದ ಕಾಲೇಜುಗಳು ಮುಚ್ಚಿದ್ದು, ಇಬ್ಬರು ಸಹ ಮನೆಯಲ್ಲೇ ಇದ್ದರು. ಅವರ ತಂದೆ ಗ್ರಾಮದಲ್ಲಿಯೇ ಹೋಟೆಲ್ ನಡೆಸಿಕೊಂಡು ಜೀವನ ನಡೆಸುತ್ತಿದ್ದರು.

    ಇದನ್ನೂ ಓದಿ: ರಾತ್ರಿ ಶೂಟಿಂಗ್ ಮುಗಿಸಿ ಹೋಟೆಲ್​ಗೆ ಬಂದ ಖ್ಯಾತ ಕಿರುತೆರೆ ಕಲಾವಿದೆ ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ..!

    ವಿಶ್ವನಾಥ್​ಗೆ ಐವರು ಪುತ್ರಿಯರು. ಮೂರು ಜನ ಪುತ್ರಿಯರನ್ನು ಚೆನ್ನಾಗಿ ಓದಿಸಿ, ಮದುವೆ ಮಾಡಿಕೊಟ್ಟಿದ್ದಾರೆ. ಐದು ಮಕ್ಕಳು ಕೂಡ ಚೆನ್ನಾಗಿರಬೇಕು. ಅವರಿಗೆ ಯಾವುದೇ ಕಷ್ಟಗಳು ಬರದಿರಲಿ ಅಂತ ಹಗಲಿರುಳು ದುಡಿಯುತ್ತಿದ್ದರು. ಮನೆಯಲ್ಲಿದ್ದ ಇಬ್ಬರು ಪುತ್ರಿಯರನ್ನು ಸಹ ವಿದ್ಯಾವಂತರನ್ನಾಗಿ ಮಾಡಬೇಕೆಂದು ಗುಣಮಟ್ಟದ ಶಿಕ್ಷಣ ಕೊಡಿಸಿದ್ದರು. ಆದರೆ, ಮಂಗಳವಾರ (ಡಿ.8) ಸಂಜೆ ನಾಲ್ಕು ಗಂಟೆ ಸಮಯದಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಸಾರಿಕಾ ಮತ್ತು ಐಶ್ವರ್ಯ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ತಾಯಿ ಜಮೀನಿಗೆ ಹೋಗಿದ್ದರು. ತಂದೆ ಹೋಟೆಲ್​ನಲ್ಲಿದ್ದರು. ಸಂಜೆ ಆರು ಗಂಟೆಗೆ ಮನೆಗೆ ಬಂದ ತಾಯಿ ಮಕ್ಕಳನ್ನು ನೋಡಿ ಕುಸಿದುಬಿದ್ದಿದ್ದಾರೆ. ಇಬ್ಬರು ಮಕ್ಕಳು ನೇಣುಬಿಗಿದ ಸ್ಥಿತಿಯಲ್ಲಿ ಇರೋದನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತ್ತು.

    ಐಶ್ವರ್ಯ ಮತ್ತು ಸಾರಿಕಾ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ಅಚ್ಚರಿಯಾಗಿದೆ. ಏಕೆಂದರೆ ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಯುವಕನೊಬ್ಬನ ಕಿರುಕಳು ಮಾತ್ರ ಸಾರಿಕಾಗೆ ಇತ್ತಂತೆ. ಸಾರಿಕಾ ಮನೆ ಸಮೀಪವೇ ಇದ್ದ ನಾಗು ಹೆಸರಿನ ಯುವಕ ಸಾರಿಕಾಳನ್ನು ಪ್ರೀತಿಸುತ್ತಿದ್ದನಂತೆ. ಬೆಂಗಳೂರಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯಲ್ಲಿ ಕೆಲಸ ಮಾಡ್ತಿದ್ದ ನಾಗು, ಲಾಕ್​ಡೌನ್ ಸಮಯದಲ್ಲಿ ಅನೇಕ ತಿಂಗಳ ಕಾಲ ಗ್ರಾಮದಲ್ಲೇ ಉಳಿದಿದ್ದಾನೆ. ಒಮ್ಮೆ ಸಾರಿಕಾಳನ್ನು ಮದುವೆಯಾಗುವುದಾಗಿಯೂ ಹೇಳಿದ್ದನಂತೆ. ಆದರೆ, ಆಕೆಯ ಕುಟುಂಬ ಒಪ್ಪಿರಲಿಲ್ಲವಂತೆ. ಇಬ್ಬರದ್ದು ಬೇರೆ ಬೇರೆ ಜಾತಿ. ಹೀಗಾಗಿ ತಮ್ಮ ಮಗಳ ತಂಟೆಗೆ ಬರದಂತೆ ನಾಗುಗೆ ಎಚ್ಚರಿಕೆ ಸಹ ನೀಡಿದ್ದರಂತೆ. ನಂತರ ಬೆಂಗಳೂರಿಗೆ ಹೋಗಿದ್ದ ನಾಗು ಪೋನ್ ಮಾಡಿ ತೊಂದರೆ ಕೊಡಲು ಪ್ರಾರಂಭಿಸಿದ ಆರೋಪವು ಕೇಳಿಬಂದಿದೆ.

    ಇದನ್ನೂ ಓದಿ: ಅಡುಗೆ ಮನೆಯಲ್ಲಿ ಕೇಳಿಬಂತು ವಿಚಿತ್ರ ಶಬ್ದ: ಫೋಟೋ ಕ್ಲಿಕ್ಕಿಸಿ ನೋಡಿದವ ಮನೆ ಬಿಟ್ಟು ಪರಾರಿ!

    ಇದರ ನಡುವೆ ನಾಲ್ಕನೇ ಪುತ್ರಿ ಇದ್ದರೂ ಐದನೇ ಪುತ್ರಿ ಸಾರಿಕಾಳಿಗೆ ಹೆತ್ತವರು ತಮ್ಮದೇ ಸಮುದಾಯದ ಬೇರೊಂದು ಹುಡುಗನ ಜತೆ ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿದ್ದರಂತೆ. ಸಾರಿಕಾಳನ್ನು ಬೇರೆಯವರ ಜತೆ ಮದುವೆ ಮಾಡಿದ್ರೆ ಆಕೆ ಜತೆ ಇರೋ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ನಾಗು ಬೆದರಿಕೆ ಹಾಕಿದ್ದನಂತೆ. ಆತನ ಕಿರುಕುಳ ಹೆಚ್ಚಾಗಿದ್ದರಿಂದ ತಮ್ಮಿಂದ ತಂದೆ ತಾಯಿ ಗೌರವ ಹಾಳಾಗುತ್ತದೆ ಎಂದು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಸಂಬಂಧಿಗಳು ಆರೋಪಿಸುತ್ತಿದ್ದಾರೆ.

    ಮಕ್ಕಳ ಆತ್ಮಹತ್ಯೆಗೆ ನಾಗು ಕಿರುಕುಳವೇ ಕಾರಣ ಎಂದು ಆರೋಪಿಸಿ ಯುವತಿಯರ ತಂದೆ ವಿಶ್ವನಾಥ್, ಚಿಂಚೋಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts