More

    ನೇಹಾ ಕೊಲೆಗೆ ಸಿಡಿದೆದ್ದ ಸಂಘಟನೆಗಳು

    ಕಲಬುರಗಿ: ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆ ಖಂಡಿಸಿ ಮತ್ತು ಹಂತಕ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ನಗರದಲ್ಲಿ ಶನಿವಾರ ನಾಗರಿಕ ಹಿತರಕ್ಷಣಾ ಸಮಿತಿ, ಜಿಲ್ಲಾ ಜಂಗಮ ಸಮಾಜ, ಎಐಡಿಎಸ್‌ಒ, ಎಬಿವಿಪಿ ಸೇರಿ ವಿವಿಧ ಸಂಘಟನೆಗಳಿಂದ ಸರಣಿ ಪ್ರತಿಭಟನೆಗಳು ನಡೆದವು.

    ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪೊಲೀಸ್ ಪೇದೆಯೊಬ್ಬರು ಪ್ರತಿಭಟನಾನಿರತ ಯುವಕನಿಗೆ ಥಳಿಸಿದರು. ಇದರಿಂದ ಹೋರಾಟದ ಸ್ವರೂಪ ಬದಲಾಗಿ ಹಿಂದುಗಳನ್ನು ಕಟ್ಟಿ ಹಾಕುವ ಕೆಲಸ ಪೊಲೀಸರು ಪರೋಕ್ಷವಾಗಿ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ತಿರುಗಿಬಿದ್ದರು. ಇದರಿಂದಾಗಿ ಸುಮಾರು ಎರಡು ತಾಸು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    ಎಸ್‌ವಿಪಿ ವೃತ್ತದಲ್ಲಿ ವಿವಿಧ ಸಂಘಟನೆಗಳ ಜತೆ ನಾಗರಿಕ ಹಿತರಕ್ಷಣಾ ಸಮಿತಿ ಮತ್ತು ಜಿಲ್ಲಾ ಜಂಗಮ ಸಮಾಜದವರು ನೇಹಾ ಹತ್ಯೆ ಮಾಡಿದ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬೈಕ್ ಸವಾರನೊಬ್ಬ ಪ್ರತಿಭಟನೆಯೊಳಗೆ ಬಂದಿದ್ದೇ ಇಷ್ಟೆಲ್ಲಕ್ಕೂ ಕಾರಣವಾಯಿತು. ಟೈರ್‌ಗಳಿಗೆ ಬೆಂಕಿ ಇಟ್ಟಿದ್ದರಿಂದ ಕೆಲಹೊತ್ತು ವಾತಾವರಣ ಗರಂ ಆಗಿತ್ತು.

    ಬೈಕ್ ಸವಾರ ಪ್ರತಿಭಟನೆಯೊಳಗೆ ಬಂದಿದ್ದರಿಂದ ಸಿಟ್ಟಿಗೆದ್ದ ಪ್ರತಿಭಟನಾನಿರತ ಯುವಕನೊಬ್ಬ ಬೈಕ್ ಅಡ್ಡಗಟ್ಟಿ ಹೋರಾಟ ನಡೆದಿದೆ. ಹೀಗೆ ಬಂದರೆ ಹೇಗೆ ಎಂದು ಪ್ರಶ್ನಿಸಿದ. ಈ ವೇಳೆ ಬಂದ ಪೇದೆ ಮೋಹಸಿನ್ ಎಂಬ ಬೈಕ್ ಸವಾರನನ್ನು ಕಳುಹಿಸಿದರು. ತಡೆದಿದ್ದ ಯುವಕನಿಗೆ ಥಳಿಸಿ ನಾಳೆ ನೋಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ. ಇದು ಗೊತ್ತಾಗುತ್ತಲೇ ಪ್ರತಿಭಟನೆ ಮುಗಿಸುವ ಹಂತದಲ್ಲಿದ್ದ ಹೋರಾಟಗಾರರು ಪೊಲೀಸರ ವಿರುದ್ಧವೇ ಘೋಷಣೆ ಕೂಗಲು ಶುರುವಿಟ್ಟರು. ಪೊಲೀಸರು ದಬ್ಬಾಳಿಕೆ ಮೂಲಕ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮತ್ತೆ ಮಿಂಚಿನ ಪ್ರತಿಭಟನೆ ನಡೆಸಿದರು.

    ಇದೇ ಮಾರ್ಗವಾಗಿ ನಾಮಪತ್ರ ಪರಿಶೀಲನೆ ಕಾರ್ಯಕ್ಕೆ ಹಾಜರಾಗಲು ಡಿಸಿ ಕಚೇರಿಗೆ ತೆರಳುತ್ತಿದ್ದ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಕಾರು ನಿಲ್ಲಿಸಿ ತಮ್ಮೊಂದಿಗೆ ಸೇರಿಸಿಕೊಂಡರು. ಶಾಸಕ ಬಸವರಾಜ ಮತ್ತಿಮಡು, ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಬಿಜೆಪಿ ಪ್ರಕೋಷ್ಠ ಸಂಚಾಲಕಿ ಡಾ.ಸುಧಾ ಹಾಲಕಾಯಿ ಇತರರು ಸಾಥ್ ನೀಡಿದ್ದರಿಂದ ಹೋರಾಟದ ಸ್ವರೂಪವೇ ಬದಲಾಯಿತು. ಹೋರಾಟಗಾರನಿಗೆ ಹೃದಯ ಸಂಬAಧಿ ರೋಗವಿದೆ. ಬೆದರಿಕೆ ಹಾಕಿ ಹಲ್ಲೆ ಮಾಡಿದರೆ ಹೇಗೆ ಎಂದು ಖಾರವಾಗಿ ಪ್ರಶ್ನಿಸಿದರು. ಪೊಲೀಸ್ ಪೇದೆ ಮೋಹಸಿನ್‌ನನ್ನು ಸ್ಥಳಕ್ಕೆ ಕರೆಸಿ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು.

    ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಎಸಿಪಿ ಭೂತೇಗೌಡ ಸ್ಥಳಕ್ಕೆ ದೌಡಾಯಿಸಿ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸಿ ಸಮಾಧಾನಪಡಿಸುವ ಪ್ರಯತ್ನ ತಕ್ಷಣಕ್ಕೆ ಕೈಗೂಡಲಿಲ್ಲ. ಎರಡು ಗಂಟೆಗೂ ಹೆಚ್ಚು ಪ್ರತಿಭಟನೆ ಮುಂದುವರಿಯಿತು. ಇದರಿಂದಗಿ ಬಸ್ ನಿಲ್ದಾಣ, ಜಗತ್ ವೃತ್ತ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿತು. ವಾಹನ ಚಾಲಕರು ಮತ್ತು ಜನರು ಪರದಾಡುವಂತಾಯಿತು. ಕೊನೆಗೆ ಮನವೊಲಿಸಿ ಹಲ್ಲೆ ಮಾಡಿದ ಪೇದೆ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಪ್ರತಿಭಟನೆ ಕೈಬಿಡಲಾಯಿತು.

    ಪ್ರತಿಭಟನೆಯಲ್ಲಿ ರಾಜು ನವಲದಿ, ಅಶ್ವಿನ್‌ಕುಮಾರ್, ಶಿವಕುಮಾರ ಪಾಟೀಲ್ ಜಂಬಗಾ, ಶಿವರಾಜ ಸಂಗೋಳಗಿ, ನಾಗಲಿಂಗಯ್ಯ ಮಠಪತಿ, ಸಾಗರ ರಾಠೋಡ್, ಮಂಜು ಬಿರಾದಾರ, ಪ್ರಶಾಂತ ಗುಡ್ಡಾ, ಸತೀಶಕುಮಾರ, ರವಿ ಪೂಜಾರಿ ಮೊದಲಾದವರು ಪಾಲ್ಗೊಂಡಿದ್ದರು.

    ಎನ್‌ಕೌಂಟರ್ ಕಾಯ್ದೆ ಜಾರಿಗೆ ಜಂಗಮರ ಆಗ್ರಹ: ನೇಹಾ ಹಿರೇಮಠ ಹತ್ಯೆಗೈದವನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಮತ್ತು ಇಂತಹ ದುಷ್ಕರ್ಮಿಗಳಿಗೆ ಎನ್‌ಕೌಂಟರ್ ಮಾಡುವಂತಹ ಕಾಯ್ದೆ ರೂಪಿಸಿ ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಜಂಗಮ ಸಮಾಜದಿಂದ ಬೃಹತ್ ಪ್ರತಿಭಟನೆ ನಡೆಯಿತು. ಸಮಾಜದ ಅಧ್ಯಕ್ಷ ಶಂಭುಲಿಂಗಯ್ಯ ಮಠಪತಿ, ಪ್ರಮುಖರಾದ ನಾಗಲಿಂಗಯ್ಯ ಮಠಪತಿ, ಎಂ.ಬಿ. ಕಳ್ಳಿ, ಸತೀಶ ಸ್ವಾಮಿ ಪಿಂಟು, ವಿರುಪಯ್ಯ ಮಠಪತಿ, ಅಮರೇಶ ರಾವೂರಮಠ, ಗುರುಸ್ವಾಮಿ ಹಿರೇಮಠ, ಪವನ ಮಠಪತಿ, ಅನ್ನಪೂರ್ಣ ಹಿರೇಮಠ, ಕವಿತಾ ಶೆಟಗಾರಮಠ, ವಿದ್ಯಾಸಾಗರ ಪಾಟೀಲ್, ಸಿದ್ದುಗೌಡ ಅಫಜಲಪುರಕರ್, ಜಿ.ಕೆ. ಪಾಟೀಲ್ ಹರಸೂರ, ವೀರಭದ್ರಯ್ಯ ಮಠ, ಸತೀಶ ಡಿಗ್ಗಾವಿಕರ್, ರಮೇಶ ಬೀದರಕರ್, ಗಂಗಾಧರ ಹಿರೇಮಠ, ಮಲ್ಲಯ್ಯ ಹಿರೇಮಠ, ಪ್ರಶಾಂತ ಮಠಪತಿ, ಚನ್ನವೀರಯ್ಯ ಹಿರೇಮಠ, ಮಂಜುನಾಥ ಸ್ವಾಮಿ, ಬಸವರಾಜ ಮಠಪತಿ ಕಮಲಾಪುರ, ಶಾಂತಯ್ಯ ಮಠಪತಿ, ಡಾ.ಸಂಪತ್ ಹಿರೇಮಠ, ನಂದಿನಿ ಪಂಚಾಳ, ವೀರೇಶ ಚಿಂಚನಸೂರ ಇತರರು ಭಾಗವಹಿಸಿದ್ದರು.

    ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಅತ್ಯಂತ ಅಮಾನುಷ ಕೃತ್ಯ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸುವ ಬದಲಿಗೆ ಲಘು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಹಂತಕನಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು.
    | ಈರಣ್ಣ ಗುಳೇದ ವೀರಶೈವ ಬಂಧು ಸಮಾಜ ಉಪಾಧ್ಯಕ್ಷ

    ನೇಹಾ ಹಿರೇಮಠ ಕೊಲೆಗೈದವನನ್ನು ಗಲ್ಲಿಗೇರಿಸಬೇಕು. ರಾಜ್ಯದಲ್ಲಿ ಅಮಾಯಕರ ಕೊಲೆ ಮುಂದುವರಿದಿದ್ದು, ಕಡಿವಾಣ ಹಾಕಲು ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.
    | ಅರುಣಕುಮಾರ ಪಾಟೀಲ್ಜಿ ಲ್ಲಾ ವೀರಶೈವ ಸಮಾಜ ಅಧ್ಯಕ್ಷ

    ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಸಾಂಸ್ಕೃತಿಕ ಅಧಃಪತನ ಇಂತಹ ಘಟನೆಗಳಿಗೆ ಕಾರಣ. ವಿದ್ಯಾರ್ಥಿಗಳಲ್ಲಿ ಚಿಂತಕರು, ಕ್ರಾಂತಿಕಾರಿಗಳ ವಿಚಾರಗಳಿಲ್ಲ. ಪ್ರೀತಿ-ಪ್ರೇಮದ ಮಾರ್ಗದರ್ಶನವಿಲ್ಲ. ಸಾಮಾಜಿಕ ಮನೋಭಾವ ಕುಂಠಿತವಾಗಿದ್ದರಿಂದ ಆಮೂಲಾಗ್ರ ಬೆಳವಣಿಗೆಗೆ ಅಡ್ಡಿಯಾಗಿದೆ. ಇದಕ್ಕೆ ಕಡಿವಾಣ ಹಾಕಿ ಕೊಲೆಗಡುಕನಿಗೆ ಕಠಿಣ ಶಿಕ್ಷೆ ವಿಧಿಸಬೇಕು.
    | ಸ್ನೇಹಾ ಕಟ್ಟಿಮನಿ ಜಿಲ್ಲಾಧ್ಯಕ್ಷೆ, ಎಐಡಿಎಸ್‌ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts