More

    ಆಲ್ಕೋಹಾಲ್​ನಿಂದ ಕೈಯಲ್ಲಿರುವ ವೈರಸ್​ ಹೋಗೋದಾದರೆ, ಗಂಟಲಲ್ಲಿ ಇರುವ ವೈರಸ್ಸೂ ಹೋಗತ್ತೆ ಬಿಡಿ, ಮದ್ಯದ ಅಂಗಡಿ ತೆರೀರಿ ಎಂದು ಸಲಹೆ ಇತ್ತ ಕಾಂಗ್ರೆಸ್​ ಶಾಸಕ!

    ಸಾಂಗೋದ್​ (ರಾಜಸ್ಥಾನ): ಮದ್ಯ ಪ್ರಿಯರಿಗಂತೂ ಲಾಕ್​ಡೌನ್​ ದೊಡ್ಡ ಸಂಕಷ್ಟ ತಂದಿಟ್ಟುಬಿಟ್ಟಿದೆ. ಮದ್ಯ ಸಿಗದೇ ಒದ್ದಾಡುತ್ತಿರುವ ಅದೆಷ್ಟೋ ಮಂದಿ, ಮದ್ಯದಂಗಡಿ ತೆರೆಯುವುದನ್ನೇ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

    ಅದೇ ಇನ್ನೊಂದೆಡೆ, ಒಳಗೊಳಗೆ ಮದ್ಯ ತಯಾರಿಕೆ ಹಾಗೂ ಮಾರಾಟದ ಕಳ್ಳವ್ಯವಹಾರಗಳೂ ನಡೆಯುತ್ತಿವೆ. ಪೊಲೀಸರು ಎಷ್ಟೇ ಹದ್ದಿನ ಕಣ್ಣು ಇಟ್ಟಿದ್ದರೂ, ಅವರ ಕಣ್ಣು ತಪ್ಪಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ, ಕೆಲವರು ಸಿಕ್ಕಿಬೀಳುತ್ತಿದ್ದಾರೆ, ಇನ್ನು ಕೆಲವರು ಸಾಯುತ್ತಿದ್ದಾರೆ. ಅದೇನೇ ಆದರೂ ಕರೊನಾ ವೈರಸ್​ ಹೆಚ್ಚಿಗೆ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಮದ್ಯದಂಗಡಿಯನ್ನು ಮಾತ್ರ ಸದ್ಯ ತೆಗೆಯುವ ಮಾತೇ ಇಲ್ಲ ಎಂದು ಬಹುತೇಕ ರಾಜ್ಯ ಸರ್ಕಾರಗಳು ಹೇಳಿಬಿಟ್ಟಿವೆ.

    ಅದೇ ಇನ್ನೊಂದೆಡೆ, ಕರೊನಾ ವೈರಸ್​ ತೊಲಗಬೇಕು ಎಂದರೆ ಆಲ್ಕೋಹಾಲ್​ಯುಕ್ತ ಸೋಪ್​, ಸ್ಯಾನಿಟೈಸರ್​ ಬಳಸಿ ಎಂಬ ಜಾಹೀರಾತು. ಇದೇ ಜಾಹೀತಾರನ್ನು ನಂಬಿ ಅದೆಷ್ಟೋ ಮದ್ಯಪ್ರಿಯರು ಸ್ಯಾನಿಟೈಸರ್​ ಕುಡಿದು ಇಹಲೋಕ ತ್ಯಜಿಸಿದ್ದಾರೆ!

    ಇದನ್ನೂ ಓದಿ: ಸುಳ್ಳು ಹೇಳಿ ಬಾಯ್​ಫ್ರೆಂಡ್​ ನೋಡಲು ಹೋದ ಕೇರಳ ಬ್ಯೂಟಿಷಿಯನ್ ದುರಂತ ಅಂತ್ಯವಾಗಿದ್ದು ಹೇಗೆ?​

    ಅಕ್ರಮ ಮದ್ಯ ಮಾರಾಟ, ಸ್ಯಾನಿಟೈಸರ್​ ಸೇವನೆ ಇವೆಲ್ಲವುಗಳ ಬದಲು ಮದ್ಯದಂಗಡಿ ತೆರೆದರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ಬಂದಿರುವ ರಾಜಸ್ಥಾನದ ಸಾಂಗೋದ್​ ಶಾಸಕ ಹಾಗೂ ಮಾಜಿ ಸಚಿವ ಕಾಂಗ್ರೆಸ್​ನ ಭರತ್ ಸಿಂಗ್ ಆಕ್ರೋಶದಿಂದ ಮುಖ್ಯಮಂತ್ರಿಗಳಿಗೊಂದು ಪತ್ರ ಬರೆದಿದ್ದು, ಅದೀಗ ವಿವಾದಕ್ಕೆ ಕಾರಣವಾಗಿದೆ. ಅವರು ಪತ್ರದಲ್ಲಿ ಹೇಳಿದ್ದೆನೆಂದರೆ, ‘ಆಲ್ಕೋಹಾಲ್​ಯುಕ್ತ ಸೋಪು, ಸ್ಯಾನಿಟೈಸರ್​ಗಳನ್ನು ಕೈಗೆ ಉಜ್ಜುವುದರಿಂದ ಕರೊನಾ ವೈರಸ್ ಸತ್ತುಹೋಗುತ್ತದೆ ಎಂದು ಹೇಳುವುದಾದರೆ ಅದನ್ನು ಕುಡಿದರೆ ವೈರಸ್​ಗಳು ಗಂಟಲಲ್ಲೇ ನಾಶವಾಗಬಹುದು. ಆದ್ದರಿಂದ ಮದ್ಯದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿ ಎಂದಿದ್ದಾರೆ!

    ಒಂದೆಡೆ, ಮದ್ಯಪ್ರಿಯರಿಗೆ ಇದು ತುಂಬಲಾಗದ ಸಂಕಷ್ಟವಾಗಿದ್ದರೆ, ಇನ್ನೊಂದೆಡೆ ಸರ್ಕಾರದ ಆದಾಯದ ಬೆನ್ನೆಲುಬೇ ಮುರಿದಂತಾಗಿದೆ. ಅಕ್ರಮ ಮದ್ಯ ಸೇವನೆಗಿಂತ ಅಂಗಡಿಯಿಂದಲೇ ಖರೀದಿಸಿ ಕುಡಿಯುವುದೇ ಉತ್ತಮ. ಮದ್ಯದಂಡಿಗಳ ತೆರೆಯುವಿಕೆಗೆ ಅವಕಾಶ ನೀಡದೇ ಇರುವುದರಿಂದ ಅಕ್ರಮ ಮದ್ಯ ತಯಾರಿಕೆ, ಮಾರಾಟಕ್ಕೆ ಅವಕಾಶ ನೀಡಿದಂತಾಗುತ್ತದೆ. ಅಕ್ರಮ ಮದ್ಯವು ಜನರನ್ನು ಸಾಯಿಸುವುದು ಮಾತ್ರವಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟುಮಾಡುತ್ತಿದೆ ಎಂದಿದ್ದಾರೆ. ಭರತ್‌ಪುರದಲ್ಲಿ ಅಕ್ರಮ ಮದ್ಯ ಸೇವನೆಯಿಂದ ಇಬ್ಬರು ಮೃತಪಟ್ಟಿದ್ದು, ಇದೇ ಮುಂದುವರಿಯಬಾರದು ಎಂದಿದ್ದಾರೆ.

    ಮದ್ಯದ ಮೇಲಿನ ಅಬಕಾರಿ ಸುಂಕ ಹೆಚ್ಚಿಸಲಾಗಿದೆ. 2020–21ನೇ ಹಣಕಾಸು ವರ್ಷದಲ್ಲಿ ಮದ್ಯ ಮಾರಾಟದಿಂದ ಹೆಚ್ಚಿನ ಆದಾಯ ಸಂಗ್ರಹಿಸಲು ಗುರಿ ನಿಗದಿಪಡಿಸಲಾಗಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಇದು ಸಾಧ್ಯವಾಗದು. ಹೀಗಾಗಿ ರಾಜ್ಯ ಸರ್ಕಾರವು ಮದ್ಯದಂಗಡಿಗಳ ತೆರವಿಗೆ ಅನುಮತಿ ನೀಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts